ಗ್ರಾಹಕರು ಪಾಲಿಸಿ ಮುಂದುವರಿಸದೇ ಹೋಗುವ ಭಯ; ಸರೆಂಡರ್ ವ್ಯಾಲ್ಯು ಹೆಚ್ಚಳ ಪ್ರಸ್ತಾಪ ಕೈಬಿಟ್ಟ ಐಆರ್​ಡಿಎಐ

|

Updated on: Mar 27, 2024 | 4:29 PM

No Rise in insurance surrender value: ಲೈಫ್ ಇನ್ಷೂರೆನ್ಸ್​ನ ಪಾಲಿಸಿಗಳನ್ನು ಮೆಚ್ಯೂರಿಟಿಗೆ ಮುನ್ನವೇ ಮರಳಿಸಿದರೆ ಅದಕ್ಕೆ ಸಿಗುವ ಸರೆಂಡರ್ ವ್ಯಾಲ್ಯೂ ಮೊತ್ತವನ್ನು ಹೆಚ್ಚಿಸುವ ಪ್ರಸ್ತಾಪವನ್ನು ಐಆರ್​ಡಿಎಐ ಹಿಂಪಡೆದುಕೊಂಡಿದೆ. ಸರೆಂಡರ್ ವ್ಯಾಲ್ಯೂ ಹೆಚ್ಚಿಸಿದರೆ ಗ್ರಾಹಕರು ಪಾಲಿಸಿಯಿಂದ ಬೇಗನೇ ನಿರ್ಗಮಿಸಲು ಉತ್ತೇಜನ ಸಿಕ್ಕಂತಾಗುತ್ತದೆ ಎಂದು ಇನ್ಷೂರೆನ್ಸ್ ಕಂಪನಿಗಳು ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಐಆರ್​ಡಿಎಐ ತನ್ನ ಪ್ರಸ್ತಾಪ ಕೈಬಿಟ್ಟಿದೆ. ಸದ್ಯ ಪಾಲಿಸಿಯನ್ನು ಮೆಚ್ಯೂರಿಟಿಗೆ ಮುನ್ನ ಸರೆಂಡರ್ ಮಾಡಿದರೆ ವಾಪಸ್ ಬರುವ ಪ್ರೀಮಿಯಮ್ ಹಣ ಶೇ. 30ರಿಂದ 90ರಷ್ಟಿದೆ.

ಗ್ರಾಹಕರು ಪಾಲಿಸಿ ಮುಂದುವರಿಸದೇ ಹೋಗುವ ಭಯ; ಸರೆಂಡರ್ ವ್ಯಾಲ್ಯು ಹೆಚ್ಚಳ ಪ್ರಸ್ತಾಪ ಕೈಬಿಟ್ಟ ಐಆರ್​ಡಿಎಐ
ಇನ್ಷೂರೆನ್ಸ್ ಪಾಲಿಸಿ
Follow us on

ನವದೆಹಲಿ, ಮಾರ್ಚ್ 27: ಜೀವ ವಿಮೆ ಪಾಲಿಸಿಗಳನ್ನು ಅವಧಿಗೆ ಮುನ್ನ ರದ್ದು ಮಾಡಿದರೆ ಮರಳಿಸಲಾಗುವ ಹಣದ ಮೊತ್ತವನ್ನು ಹೆಚ್ಚಿಸಲು ಐಆರ್​ಡಿಎಐ (IRDAI) ಯೋಜಿಸಿತ್ತು. ಇದೀಗ ಇನ್ಷೂರೆನ್ಸ್ ಕಂಪನಿಗಳಿಂದ ವಿರೋಧ ಬಂದ ಹಿನ್ನೆಲೆಯಲ್ಲಿ ಈ ಪ್ರಸ್ತಾಪವನ್ನು ಐಆರ್​ಡಿಎಐ ಹಿಂಪಡೆದುಕೊಂಡಿದೆ. ಹಿಂದೆ ಇದ್ದ ನಿಯಮಗಳೇ ಈಗ ಅನ್ವಯ ಆಗುತ್ತವೆ. ಪಾಲಿಸಿ ಸರೆಂಡರ್ ವ್ಯಾಲ್ಯೂ (Policy Surrender value) ಹೆಚ್ಚಿಸಿದರೆ ಇನ್ಷೂರೆನ್ಸ್ ಪಾಲಿಸಿದಾರರು ಪಾಲಿಸಿ ಅವಧಿ ಪೂರ್ಣಗೊಳಿಸದೇ ಮಧ್ಯದಲ್ಲೇ ನಿರ್ಗಮಿಸಲು ಉತ್ತೇಜನ ಸಿಕ್ಕಂತಾಗುತ್ತದೆ ಎಂಬುದು ವಿಮಾ ಸಂಸ್ಥೆಗಳ ಆಕ್ಷೇಪ. ಹೀಗಾಗಿ, ಐಆರ್​ಡಿಎಐ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿದಿದೆ.

ಇನ್ಷೂರೆನ್ಸ್ ಪಾಲಿಸಿ ಮೆಚ್ಯೂರಿಟಿಗೆ ಬರುವ ಮುನ್ನವೇ ಹಿಂದಿರುಗಿಸುವ ಅವಕಾಶ ಇದೆಯಾದರೂ ನಿರ್ದಿಷ್ಟ ಪ್ರೀಮಿಯಮ್ ಅನ್ನು ಮುರಿದುಕೊಂಡು ಉಳಿದ ಹಣವನ್ನು ಮರಳಿಸಲಾಗುತ್ತದೆ. ಉದಾಹರಣೆಗೆ, ರೆಗ್ಯುಲರ್ ವಿಮಾ ಪಾಲಿಸಿ ಮಾಡಿಸಿ ಎರಡನೇ ವರ್ಷದಲ್ಲಿ ನೀವು ಮರಳಿಸಿದರೆ ಶೇ. 30ರಷ್ಟು ಪ್ರೀಮಿಯಮ್ ನಿಮಗೆ ವಾಪಸ್ಸು ಬರುತ್ತದೆ. ಮೂರನೇ ವರ್ಷದಲ್ಲಿ ಶೇ. 35, 4-7 ವರ್ಷದಲ್ಲಿ ಪಾಲಿಸಿ ಸರೆಂಡರ್ ಮಾಡಿದರೆ ಶೇ. 50ರಷ್ಟು ಹಣ ನಿಮಗೆ ಮರಳಿ ಬರುತ್ತದೆ. ಮೆಚ್ಯೂರಿಟಿಗೆ ಎರಡು ವರ್ಷ ಇರುವಾಗ ನೀವು ಸರೆಂಡರ್ ಮಾಡಿದರೆ ಶೇ. 90ರಷ್ಟು ಪ್ರೀಮಿಯಮ್ ಹಣ ನಿಮ್ಮ ಕೈಸೇರುತ್ತದೆ.

ಸಿಂಗಲ್ ಪ್ರೀಮಿಯಮ್ ಆದರೆ ಮೂರು ವರ್ಷದೊಳಗೆ ನೀವು ಪಾಲಿಸಿ ಸರೆಂಡರ್ ಮಾಡಿದರೆ ಶೇ. 75ರಷ್ಟು ಪ್ರೀಮಿಯಮ್ ನಿಮಗೆ ವಾಪಸ್ ಬರುತ್ತದೆ. ಕೊನೆಯ ಎರಡು ವರ್ಷ ಇರುವಾಗ ಸರೆಂಡರ್ ಮಾಡಿದರೆ ಶೇ. 90ರಷ್ಟು ಪ್ರೀಮಿಯಮ್ ಹಣ ಮರಳುತ್ತದೆ. ಆದರೆ, ಇನ್ಷೂರೆನ್ಸ್ ಪಾಲಿಸಿಯ ಇತರ ಬೆನಿಫಿಟ್​ಗಳ್ಯಾವುವೂ ಸಿಗುವುದಿಲ್ಲ.

ಇದನ್ನೂ ಓದಿ: ಎಫ್​ಡಿ, ಪಿಪಿಎಫ್ ಇತ್ಯಾದಿಯಲ್ಲಿ ಹಣ ಹಾಕಿದರೆ ಎಷ್ಟು ವರ್ಷಕ್ಕೆ ಡಬಲ್ ಆಗುತ್ತೆ? ಇಲ್ಲಿದೆ ನೋಡಿ ರೂಲ್ 72

ಪಾಲಿಸಿ ಸರೆಂಡರ್ ಮಾಡಿದಾಗ ಸಿಗುವ ರಿಟರ್ನ್​ನ ಮೊತ್ತವನ್ನು ಹೆಚ್ಚಿಸುವ ಪ್ರಸ್ತಾಪವನ್ನು ಐಆರ್​ಡಿಎಐ ಮಾಡಿತ್ತು. ಈಗ ಈ ವಲಯದಿಂದ ಆಕ್ಷೇಪ ಬಂದು, ಐಆರ್​ಡಿಎಐ ತನ್ನ ನಿರ್ಧಾರ ಬದಲಿಸಿ ಮೊದಲಿದ್ದ ನಿಯಮವನ್ನೇ ಮುಂದುವರಿಸಿದೆ.

ಮಾರುಕಟ್ಟೆ ಜೋಡಿತ ಪಾಲಿಸಿಗಳು..

ಇದೇ ವೇಳೆ, ಇಂಡೆಕ್ಸ್ ಫಂಡ್​ಗಳಿಗೆ ಜೋಡಿತವಾದ ಇನ್ಷೂರೆನ್ಸ್ ಪಾಲಿಸಿಗಳ ಮಾರಾಟಕ್ಕೆ ಐಆರ್​​ಡಿಎಐ ಸಮ್ಮತಿ ನೀಡಿದೆ. ನಾನ್-ಲಿಂಕ್ಡ್ ಇನ್ಷೂರೆನ್ಸ್ ಪಾಲಿಸಿಗಳನ್ನು ನೀಡುವಾಗ ಗ್ರಾಹಕರಿಗೆ ಆರಂಭದಲ್ಲೇ ಎಷ್ಟು ಹಣ ರಿಟರ್ನ್ ಸಿಗುತ್ತದೆ, ಯಾವ್ಯಾವ ಲಾಭ ನಿಶ್ಚಿತವಾಗಿ ಸಿಗುತ್ತದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು ಎಂದು ಐಆರ್​ಡಿಎಐ ನಿರ್ದೇಶನ ನೀಡಿದೆ.

ಇದನ್ನೂ ಓದಿ: ಸರ್ಕಾರದಿಂದ ಹೊಸ ವೇತನ ಕ್ರಮಕ್ಕೆ ಆಲೋಚನೆ; ಜಾರಿಯಾದರೆ ಬಹಳ ಹೆಚ್ಚಾಗಲಿದೆ ಕನಿಷ್ಠ ಸಂಬಳ

ಇನ್ನು, ಎಲ್ಲಾ ಲೈಫ್ ಇನ್ಷೂರೆನ್ಸ್ ಉತ್ಪನ್ನಗಳನ್ನು ಲಿಂಕ್ಡ್ ಇನ್ಷೂರೆನ್ಸ್ ಅಥವಾ ನಾನ್-ಲಿಂಕ್ಡ್ ಇನ್ಷೂರೆನ್ಸ್ ಉತ್ಪನ್ನಗಳ ಅಡಿಯಲ್ಲಿ ವರ್ಗೀಕರಿಸಬೇಕು. ಲಿಂಕ್ಡ್ ಇನ್ಷೂರೆನ್ಸ್ ಉತ್ಪನ್ನಗಳನ್ನು ಯೂನಿಟ್ ಲಿಂಕ್ಡ್ ಇನ್ಷೂರೆನ್ಸ್ ಮತ್ತು ಇಂಡೆಕ್ಸ್ ಲಿಂಕ್ಡ್ ಇನ್ಷೂರೆನ್ಸ್ ಉತ್ಪನ್ನಗಳ ಅಡಿಯಲ್ಲಿ ವರ್ಗೀಕರಿಸಬೇಕು.

ನಾನ್ ಲಿಂಕ್ಡ್ ಇನ್ಷೂರೆನ್ಸ್ ಉತ್ಪನ್ನಗಳಾದರೆ ಪಾರ್ಟಿಸಿಪೇಟಿಂಗ್ ಇನ್ಷೂರೆನ್ಸ್ ಮತ್ತು ನಾನ್ ಪಾರ್ಟಿಸಿಪೇಟಿಂಗ್ ಇನ್ಷೂರೆನ್ಸ್ ಎಂಬ ವರ್ಗೀಕರಣ ಮಾಡಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ