Aadhaar Linking: ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾ? ಲಿಂಕ್ ಅಗಿರುವುದನ್ನು ಖಾತ್ರಿಪಡಿಸಿಕೊಳ್ಳುವುದು ಹೇಗೆ?
Bank Account and Aadhaar: ಆಧಾರ್ ಅನ್ನು ಎಲ್ಲಾ ಸೇವೆಗಳಿಗೂ ಅಗತ್ಯ ದಾಖಲೆ ಎಂದು ಕಡ್ಡಾಯಪಡಿಸುವಂತಿಲ್ಲ. ಆಧಾರ್ ಕಾರ್ಡ್ ಎಲ್ಲೆಲ್ಲಿ ಕಡ್ಡಾಯ ಇದೆ? ಬ್ಯಾಂಕ್ ಖಾತೆ ತೆರೆಯಲು ಆಧಾರ್ ದಾಖಲೆ ನೀಡಲೇಬೇಕಾ? ಕೆಲ ಸಂದೇಹಗಳಿಗೆ ಇಲ್ಲಿದೆ ಉತ್ತರ.
ಆಧಾರ್ ಕಾರ್ಡ್ ವಿಚಾರದಲ್ಲಿ ಜನಸಾಮಾನ್ಯರಿಗೆ ಕೆಲವೊಂದಿಷ್ಟು ಗೊಂದಲಗಳಿವೆ. ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ (Aadhaar and PAN Linking) ಮಾಡುವುದು ಕಡ್ಡಾಯಪಡಿಸಿದ ಬಳಿಕ ಗೊಂದಲ ಹೆಚ್ಚಾಗಿರಬಹುದು. ಆದರೆ, ಆಧಾರ್ ಅನ್ನು ಎಲ್ಲಾ ಸೇವೆಗಳಿಗೂ ಅಗತ್ಯ ದಾಖಲೆ ಎಂದು ಕಡ್ಡಾಯಪಡಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ನಿಂದಲೇ ನಿರ್ದೇಶನ ಬಂದಿದೆ. ಆದಾಗ್ಯೂ ಆಧಾರ್ ಕಾರ್ಡ್ ನಾಗರಿಕರ ಗುರುತಿಸಿ ಚೀಟಿ ಜೊತೆಗೆ ಹಲವು ಸೇವೆಗಳಿಗೆ ಅಗತ್ಯ ದಾಖಲೆಗಳಲ್ಲಿ ಒಂದಾಗಿದೆ. ಆದಾಯ ತೆರಿಗೆ ಪಾವತಿ ಮಾಡಲು ಆಧಾರ್ ಮತ್ತು ಪ್ಯಾನ್ ಲಿಂಕ್ ಅಗುವುದು ಕಡ್ಡಾಯವೇ. ಆಧಾರ್ ಕಾರ್ಡ್ ಎಲ್ಲೆಲ್ಲಿ ಕಡ್ಡಾಯ ಇದೆ? ಬ್ಯಾಂಕ್ ಖಾತೆ (Bank Account) ತೆರೆಯಲು ಆಧಾರ್ ದಾಖಲೆ ನೀಡಲೇಬೇಕಾ? ಕೆಲ ಸಂದೇಹಗಳಿಗೆ ಇಲ್ಲಿದೆ ಉತ್ತರ:
ಆಧಾರ್ ಸಲ್ಲಿಸುವುದು ಎಲ್ಲೆಲ್ಲಿ ಕಡ್ಡಾಯ?
ಸರ್ಕಾರದಿಂದ ಸಬ್ಸಿಡಿ ಇತ್ಯಾದಿ ಸೌಲಭ್ಯ ಸಿಗುವ ಸ್ಕೀಮ್ಗಳಲ್ಲಿ ಆಧಾರ್ ದಾಖಲೆ ನೀಡುವುದು ಮತ್ತು ಲಿಂಕ್ ಮಾಡುವುದು ಕಡ್ಡಾಯ ಇದೆ. 2019ರ ಹಣ ದುರುಪಯೋಗ ನಿಯಂತ್ರಣ ಕಾಯ್ದೆಯ ಮೂರನೇ ತಿದ್ದುಪಡಿ ನಿಯಮಗಳ ಪ್ರಕಾರ ಸರ್ಕಾರೀ ಸಬ್ಸಿಡಿ ಮತ್ತಿತರ ನೆರವು ಬರುವ ನಿರ್ದಿಷ್ಟ ಯೋಜನೆಗಳಿಗೆ ಆಧಾರ್ ಕಾರ್ಡ್ ದಾಖಲೆ ಸಲ್ಲಿಸುವುದು ಕಡ್ಡಾ ಇದೆ.
ಪಿಎಂ ಕಿಸಾನ್ ಯೋಜನೆ, ಗ್ಯಾಸ್ ಏಜೆನ್ಸಿ ಇತ್ಯಾದಿ ಕಡೆ ಆಧಾರ್ ಕಾರ್ಡ್ ದಾಖಲೆ ಸಲ್ಲಿಸುವುದು ಕಡ್ಡಾಯ. ಪಿಎಂ ಜನ್ ಧನ್ ಯೋಜನೆ ಅಡಿ ಬ್ಯಾಂಕ್ ಖಾತೆ ತೆರೆಯಲೂ ಆಧಾರ್ ಕಾರ್ಡ್ ಕಡ್ಡಾಯ ಇದೆ.
ಇದನ್ನೂ ಓದಿ: EPFO E-Passbook Website: ಇಪಿಎಫ್ನ ಪಾಸ್ಬುಕ್ ಸರ್ವಿಸ್ಗೆ ಲಾಗಿನ್ ಅಗಲು ತೊಡಕು, ಸದಸ್ಯರ ಅಳಲು
ಸರ್ಕಾರದ ಕೆಲ ಸಮಾಜ ಕಲ್ಯಾಣ ಯೋಜನೆಗಳಾದ ವೃದ್ಧಾಪ್ಯ ಪಿಂಚಣಿ, ವಿಧವಾ ಪಿಂಚಣಿ ಇತ್ಯಾದಿಗೆ ಆಧಾರ್ ಕಾರ್ಡ್ ಕಡ್ಡಾಯ ಇಲ್ಲ. ಈ ಎರಡು ಪಿಂಚಣಿ ಯೋಜನೆಗಳಲ್ಲಿ ಸರ್ಕಾರ ತಿಂಗಳಿಗೆ ನಿರ್ದಿಷ್ಟ ಮೊತ್ತದ ಹಣವನ್ನು ಪಿಂಚಣಿಯಾಗಿ ಫಲಾನುಭವಿಗಳಿಗೆ ನೀಡುತ್ತದೆ.
ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾ?
ಬ್ಯಾಂಕುಗಳಲ್ಲಿ ಖಾತೆ ತೆರೆಯಲು ಅಥವಾ ಕೆವೈಸಿ ಅಪ್ಡೇಟ್ ಮಾಡಲು ಆಧಾರ್ ದಾಖಲೆಗೆ ಪ್ರಾಮುಖ್ಯತೆ ನೀಡಲಾಗುತ್ತದಾದರೂ ಅದನ್ನು ಕಡ್ಡಾಯಪಡಿಸುವಂತಿಲ್ಲ. ಸರ್ಕಾರದ ಸಬ್ಸಿಡಿ ಹಣ ಬರುವ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿದರೆ ಸಾಕು. ಬೇರೆ ಬ್ಯಾಂಕುಗಳಲ್ಲಿ ನೀವು ಆಧಾರ್ ಸಲ್ಲಿಸುವುದು ಐಚ್ಛಿಕ ಮಾತ್ರ. ವೋಟರ್ ಐಡಿ, ಪಾಸ್ಪೋರ್ಟ್, ಡಿಎಲ್, ರೇಷನ್ ಕಾರ್ಡ್ ಇತ್ಯಾದಿ ಬೇರೆ ದಾಖಲೆಗಳನ್ನು ಕೆವೈಸಿಗೆ ಒದಗಿಸಬಹುದು.
ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆಯಾ ಎಂದು ಆನ್ಲೈನ್ನಲ್ಲೇ ತಿಳಿದುಕೊಳ್ಳುವುದು ಹೇಗೆ?
ಸರ್ಕಾರದ ಸಬ್ಸಿಡಿಗಳು ಬರುವ ಬ್ಯಾಂಕ್ ಖಾತೆಗೆ ಆಧಾರ್ ನಂಬರ್ ಲಿಂಕ್ ಆಗಿದೆಯಾ ಇಲ್ಲವಾ ಎಂಬುದನ್ನು ಸುಲಭವಾಗಿ ಖಾತ್ರಿಪಡಿಸಿಕೊಳ್ಳಬಹುದು. ನಿಮ್ಮ ಬ್ಯಾಂಕ್ ಕಚೇರಿಗೆ ಹೋಗಿ ವಿಚಾರಿಸಿದರೆ ಮಾಹಿತಿ ಸಿಗುತ್ತದೆ. ಅಥವಾ ಆನ್ಲೈನ್ನಲ್ಲಿ ಈ ಕೆಳಗಿನ ವಿಧಾನದ ಮೂಲಕ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರುವುದನ್ನು ಪರಿಶೀಲಿಸಬಹುದು:
- ಆಧಾರ್ ಸಂಸ್ಥೆಯ ಅಧಿಕೃತ ವೆಬ್ಸೈಟ್ uidai.gov.in ಇಲ್ಲಿಗೆ ಭೇಟಿ ನೀಡಿ
- ಇಲ್ಲಿ ‘ಮೈ ಆಧಾರ್’ ಟ್ಯಾಬ್ ಕ್ಲಿಕ್ ಮಾಡಿ ಡ್ರಾಪ್ ಡೌನ್ ಮೆನುನಿಂದ ‘ಆಧಾರ್ ಸರ್ವಿಸಸ್’ ಆಯ್ಕೆ ಮಾಡಿ
- ಆಧಾರ್ ಸರ್ವಿಸಸ್ ಸೆಕ್ಷನ್ ಅಡಿಯಲ್ಲಿ ‘ಚೆಕ್ ಆಧಾರ್ ಅಂಡ್ ಬ್ಯಾಂಕ್ ಅಕೌಂಟ್ ಲಿಂಕಿಂಗ್ ಸ್ಟೇಟಸ್’ ಮೇಲೆ ಕ್ಲಿಕ್ ಮಾಡಿ
- ಈಗ ಹೊಸ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ಆಧಾರ್ ಸಂಖ್ಯೆ ಹಾಕಿ ಸೆಕ್ಯೂರಿಟಿ ಕೋಡ್ ಕೇಳಿದ್ದರೆ ಅದನ್ನು ಟೈಪ್ ಮಾಡಬೇಕು
- ಓಟಿಪಿ ಸ್ವೀಕರಿಸಿ ಅದನ್ನು ಎಂಟ್ರಿ ಮಾಡಿ ಲಾಗಿನ್ ಆಗಬೇಕು.
- ಈಗ ನಿಮ್ಮ ಆಧಾರ್ ಜೊತೆ ಯಾವ ಬ್ಯಾಂಕ್ ಅಕೌಂಟ್ ಲಿಂಕ್ ಆಗಿದೆ ಎಂಬ ಮಾಹಿತಿ ಸಿಗುತ್ತದೆ.