ನವದೆಹಲಿ: ಐಟಿಸಿ ಕಂಪನಿಯ ಷೇರಿನ ಓಟ ಅಡೆತಡೆ ಇಲ್ಲದೇ ಸಾಗಿದೆ. ಸಿಗರೇಟು ಉತ್ಪನ್ನಗಳಿಗಷ್ಟೇ ಸೀಮಿತವಾಗದೇ ಜನಬಳಕೆಯ ಎಫ್ಎಂಸಿಜಿ ವಲಯದಲ್ಲಿ ಬೇರೂರಿರುವ ಐಟಿಸಿ ಸಂಸ್ಥೆ (ITC) ಒಳ್ಳೆಯ ಲಾಭದಲ್ಲಿದೆ. ಹಾಗೆಯೇ ಷೇರುಪೇಟೆಯಲ್ಲಿ ಉತ್ತಮ ಬೆಲೆಹೆಚ್ಚಳ ಕಾಣುತ್ತಿದೆ. ಇದರ ಪರಿಣಾಮವಾಗಿ ಷೇರುಮಾರುಕಟ್ಟೆಯಲ್ಲಿ ಅತಿಹೆಚ್ಚು ಷೇರುಮೊತ್ತ (Market Capitalization) ಇರುವ ಕಂಪನಿಗಳ ಪಟ್ಟಿಯಲ್ಲಿ ಐಟಿಸಿ 6ನೇ ಸ್ಥಾನಕ್ಕೇರಿದೆ. ಭಾರತದ ಐಟಿ ದೈತ್ಯ ಇನ್ಫೋಸಿಸ್ ಅನ್ನು ಹಿಂದಿಕ್ಕಿ ಅದು ಮೇಲೇರಿದೆ. ಒಂದು ಸಮಯದಲ್ಲಿ 4ನೇ ಅತಿ ಹೆಚ್ಚು ಮಾರ್ಕೆಟ್ ಕ್ಯಾಪ್ ಹೊಂದಿದ್ದ ಇನ್ಫೋಸಿಸ್ (Infosys) ಇದೀಗ 9ನೇ ಸ್ಥಾನಕ್ಕೆ ಕುಸಿದಿದೆ. ಇನ್ಫೋಸಿಸ್ನ ಒಟ್ಟು ಷೇರುಮೊತ್ತ 5 ಲಕ್ಷ ಕೋಟಿ ರುಪಾಯಿ ಇದೆ. ಐಟಿಸಿ ಸಂಸ್ಥೆ 5.16 ಲಕ್ಷ ಕೋಟಿ ರೂ ಮಾರ್ಕೆಟ್ ಕ್ಯಾಪ್ವೊಂದಿಗೆ 6ನೇ ಸ್ಥಾನದಲ್ಲಿದೆ.
ಐಂಡಿಯನ್ ಟೊಬ್ಯಾಕೋ ಕಂಪನಿ ಎಂದು ಹಿಂದೆ ಹೆಸರು ಹೊಂದಿದ್ದ ಐಟಿಸಿ ಷೇರು ಬೆಲೆ ಇಂದು ಏಪ್ರಿಲ್ 26 ಸಂಜೆ 411.75 ರೂ ಇತ್ತು. ಇವತ್ತಿನ ಟ್ರೇಡಿಂಗ್ನ ಒಂದು ಹಂತದಲ್ಲಿ ಐಟಿಸಿ ಷೇರು ಬೆಲೆ 413.45 ರುಪಾಯಿ ಗರಿಷ್ಠ ಮಟ್ಟಕ್ಕೆ ಹೋಗಿತ್ತು. ಇದು ಐಟಿಸಿಯ ಸಾರ್ವಕಾಲಿಕ ದಾಖಲೆ ಬೆಲೆ. ಕೋವಿಡ್ ಬಳಿಕ ಐಟಿಸಿ ಒಂದು ರೀತಿಯಲ್ಲಿ ಮಲ್ಟಿಬ್ಯಾಗರ್ ಸ್ಟಾಕ್ ಆಗಿ ಬೆಳೆದುಹೋಗಿದೆ. 2020 ಮೇ ತಿಂಗಳಲ್ಲಿ ಐಟಿಸಿ ಷೇರು ಬೆಲೆ ಕೇವಲ 155 ರೂ ಇತ್ತು. ಹತ್ತಿರಹತ್ತಿರ 3 ವರ್ಷದಲ್ಲಿ ಎರಡೂವರೆ ಪಟ್ಟು ಹೆಚ್ಚು ಬೆಳೆದಿದೆ. ಈ ವರ್ಷವೇ ಐಟಿಸಿ ಷೇರು ಬೆಲೆ ಶೇ. 25ರಷ್ಟು ಹೆಚ್ಚಾಗಿದೆ. ಕಳೆದ 12 ತಿಂಗಳನ್ನು ಪರಿಗಣಿಸಿದರೆ ಬೆಲೆ ಶೇ. 60ರಷ್ಟು ಉಬ್ಬಿದೆ.
ಐಟಿಸಿಯ ಹಣಕಾಸು ವರದಿ ಇನ್ನೂ ಪ್ರಕಟವಾಗಿಲ್ಲ. ಆದರೆ, ನಿರೀಕ್ಷೆಗಳು ಬಹಳ ಇವೆ. ಕಳೆದ ಹಣಕಾಸು ವರ್ಷದಲ್ಲಿ ಐಟಿಸಿ ವ್ಯವಹಾರ 17 ಸಾವಿರ ಕೋಟಿ ರೂ ಇದ್ದಿರಬಹುದು. ನಿವ್ವಳ ಲಾಭ 5 ಸಾವಿರ ಕೋಟಿ ರೂ ತೋರಿಸಬಹುದು ಎಂದು ಪ್ರಭುದಾಸ್ ಲೀಲಾಧರ್ ಎಂಬ ಬ್ರೋಕರೇಜ್ ಸಂಸ್ಥೆ ಅಂದಾಜು ಮಾಡಿದೆ. ಎಚ್ಡಿಎಫ್ಸಿ ಸೆಕ್ಯೂರಿಟೀಸ್, ಮೋತಿಲಾಲ್ ಓಸ್ವಾಲ್ ಮೊದಲಾದ ಬ್ರೋಕರೇಜ್ ಕಂಪನಿಗಳೂ ಕೂಡ ಐಟಿಸಿ ಲಾಭದ ಬಗ್ಗೆ ಮಾಡಿರುವ ಅಂದಾಜು ಸಕಾರಾತ್ಮಕವಾಗಿ ಇದೆ.