ನವದೆಹಲಿ: ಉದ್ದಿಮೆಗಳ ಆದಾಯ ತೆರಿಗೆ ವಿವರ (ITR) ಸಲ್ಲಿಕೆಗೆ ನಿಗದಿಪಡಿಸಲಾಗಿದ್ದ ಗಡುವನ್ನು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) 7 ದಿನಗಳ ಕಾಲ ವಿಸ್ತರಣೆ ಮಾಡಿದೆ. ಈ ಕುರಿತು ಮಂಡಳಿ ಬುಧವಾರ ಮಾಹಿತಿ ನೀಡಿದೆ. ಇದರಿಂದ ಉದ್ದಿಮೆಗಳಿಗೆ ಐಟಿಆರ್ ಸಲ್ಲಿಸಲು ನವೆಂಬರ್ 7ರ ವರೆಗೂ ಕಾಲಾವಕಾಶ ದೊರೆಯಲಿದೆ.
ಉದ್ದಿಮೆಗಳ ಐಟಿಆರ್ ಸಲ್ಲಿಕೆಗೆ ಈ ಹಿಂದೆ ಅಕ್ಟೋಬರ್ 30ರ ಗಡುವು ವಿಧಿಸಲಾಗಿತ್ತು. ಈ ಗಡುವಿನ ಒಳಗಾಗಿ ಆಡಿಟ್ ಪೂರ್ಣಗೊಳಿಸಿ ವಿವರ ಸಲ್ಲಿಸುವಂತೆ ಉದ್ದಿಮೆಗಳಿಗೆ ಮಂಡಳಿ ಸೂಚನೆ ನೀಡಿತ್ತು.
ವಿವಿಧ ಆಡಿಟ್ ವರದಿಗಳ ಸಲ್ಲಿಸುವಿಕೆ ದಿನಾಂಕವನ್ನು ಅಕ್ಟೋಬರ್ 7ಕ್ಕೆ ವಿಸ್ತರಿಸಿದ ಪರಿಣಾಮವಾಗಿ ಐಟಿಆರ್ ಸಲ್ಲಿಕೆ ಗಡುವನ್ನೂ ವಿಸ್ತರಿಸಲಾಗಿದೆ. ಅಸೆಸ್ಮೆಂಟ್ ಇಯರ್ 2022-23ರ 139ನೇ ಸೆಕ್ಷನ್ನ ಉಪ ಸೆಕ್ಷನ್ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. 139ನೇ ಸೆಕ್ಷನ್ನ ಸಬ್ ಸೆಕ್ಷನ್ (1) ರ ಅಡಿ ಎಕ್ಸ್ಪ್ಲಾನೇಷನ್ 2ರ ಉಪ ಸೆಕ್ಷನ್ (ಎ) ಅಡಿಯಲ್ಲಿ ಐಟಿಆರ್ ಸಲ್ಲಿಕೆ ಗಡುವನ್ನು ನವೆಂಬರ್ 7ರ ವರೆಗೆ ವಿಸ್ತರಿಸಲಾಗಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಅಧಿಸೂಚನೆ ಹೊರಡಿಸಿದೆ.
ಇದನ್ನೂ ಓದಿ: ITR Filing: ಐಟಿಆರ್ ಸಲ್ಲಿಸುವ ಅವಕಾಶವನ್ನು ನೀವು ಮಿಸ್ ಮಾಡಿಕೊಂಡಿದ್ದೀರಾ? ಕ್ಲೇಮ್ ಮಾಡುವುದು ಹೇಗೆ?
ಆಡಿಟ್ ವಿವರ ಸಲ್ಲಿಕೆ ಗಡುವನ್ನು ಕಳೆದ ತಿಂಗಳು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ 7 ದಿನಗಳ ಕಾಲ ವಿಸ್ತರಿಸಿತ್ತು. ಸೆಪ್ಟೆಂಬರ್ 30ಕ್ಕೆ ವಿಧಿಸಲಾಗಿದ್ದ ಗಡುವನ್ನು ಅಕ್ಟೋಬರ್ 7ಕ್ಕೆ ವಿಸ್ತರಣೆ ಮಾಡಿತ್ತು.
ದೇಶೀಯ ಕಂಪನಿಗಳು 2021-22ನೇ ಸಾಲಿನ ಐಟಿಆರ್ ಅನ್ನು ನಿಗದಿತ ಗಡುವಿನ ಒಳಗೆ ಸಲ್ಲಿಸಬೇಕು. ಆದಾಗ್ಯೂ, ಕಂಪನಿಗಳು ಅಂತಾರಾಷ್ಟ್ರೀಯ ವ್ಯವಹಾರ ಹೊಂದಿದ್ದಲ್ಲಿ ನವೆಂಬರ್ 30ರ ಒಳಗೆ ಐಟಿಆರ್ ಸಲ್ಲಿಸಿದರೆ ಸಾಕು ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ತಿಳಿಸಿದೆ.
2021-22ನೇ ಸಾಲಿನ ವೈಯಕ್ತಿಕ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ದಿನಾಂಕ ಜುಲೈ 31ಕ್ಕೆ ಕೊನೆಗೊಂಡಿದೆ. ಈ ಸಾಲಿನಲ್ಲಿ ಒಟ್ಟಾರೆಯಾಗಿ 5.83 ಕೋಟಿ ಐಟಿಆರ್ ಸಲ್ಲಿಕೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಐಟಿಆರ್ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಜುಲೈ 31ರಂದು ಕೇವಲ ಒಂದೇ ದಿನ 72.42 ಮಂದಿ ಆದಾಯ ತೆರಿಗೆ ವಿವರಗಳನ್ನು ಸಲ್ಲಿಸಿದ್ದಾರೆ ಎಂದು ಇಲಾಖೆ ಮಾಹಿತಿ ನೀಡಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ