ಕರ್ನಾಟಕದ ಕಾಫಿ ಬೆಳೆಗಾರರಿಗೆ ಡಬಲ್ ಶಾಕ್; ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಬೆಲೆ ಕುಸಿತ; ಇಳುವರಿಯೂ ಕಡಿಮೆ, ಬೆಲೆಯೂ ಕಡಿಮೆ
Coffee Price Down: ಮಳೆ ಕೊರತೆಯಿಂದಾಗಿ ಕರ್ನಾಟಕದಲ್ಲಿ ಕಾಫಿ ಇಳುವರಿ ಕಡಿಮೆ ಆಗಿದೆ. ಈಗ ಅದರ ಜೊತೆಗೆ ಕಾಫಿ ಬೆಲೆ ಕುಸಿತ ಕಂಡಿರುವುದು ದೊಡ್ಡ ಆಘಾತ ಬಿದ್ದಂತಾಗಿದೆ. ಬ್ರಜಿಲ್, ವಿಯೆಟ್ನಾಂ ಮತ್ತು ಇಂಡೋನೇಷ್ಯಾದಲ್ಲಿ ಈ ವರ್ಷ ಬಂಪರ್ ಕಾಫಿ ಬೆಳೆ ಬಂದಿರುವುದು ಬೆಲೆ ಕುಸಿತಕ್ಕೆ ಕಾರಣವಾಗಿದೆ.
ಬೆಂಗಳೂರು, ನವೆಂಬರ್ 10: ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಾಫಿ ಬೆಲೆ (coffee price) ಬಹಳ ಕಡಿಮೆ ಆಗಿದೆ. ಬರದಿಂದ ಕಂಗೆಟ್ಟಿರುವ ರಾಜ್ಯದ ಕಾಫಿ ಬೆಳೆಗಾರರಿಗೆ ಡಬಲ್ ಶಾಕ್ ಆಗಿದೆ. ಮಳೆ ಕೊರತೆಯಿಂದಾಗಿ ಕರ್ನಾಟಕದಲ್ಲಿ ಕಾಫಿ ಇಳುವರಿ (coffee production) ಕಡಿಮೆ ಆಗಿದೆ. ಈಗ ಅದರ ಜೊತೆಗೆ ಕಾಫಿ ಬೆಲೆ ಕುಸಿತ ಕಂಡಿರುವುದು ದೊಡ್ಡ ಆಘಾತ ಬಿದ್ದಂತಾಗಿದೆ. ಬ್ರಜಿಲ್, ವಿಯೆಟ್ನಾಂ ಮತ್ತು ಇಂಡೋನೇಷ್ಯಾದಲ್ಲಿ ಈ ವರ್ಷ ಬಂಪರ್ ಕಾಫಿ ಬೆಳೆ ಬಂದಿರುವುದು ಬೆಲೆ ಕುಸಿತಕ್ಕೆ ಕಾರಣವಾಗಿದೆ.
ಕಾಫಿ ರಫ್ತಿನಲ್ಲಿ ಭಾರತ ವಿಶ್ವದ 7ನೇ ದೇಶವಾಗಿದೆ. ಬ್ರೆಜಿಲ್, ವಿಯೆಟ್ನಾಂ, ಕೊಲಂಬಿಯಾ ಮತ್ತು ಇಂಡೋನೇಷ್ಯಾ ಅತಿಹೆಚ್ಚು ಕಾಫಿ ಬೆಳೆಯುವ ದೇಶಗಳು. ಭಾರತದ ಶೇ. 70ರಷ್ಟು ಕಾಫಿ ಉತ್ಪಾದನೆ ಕರ್ನಾಟಕದಲ್ಲಿ ಆಗುತ್ತದೆ. ರಾಜ್ಯದಲ್ಲಿ ಬಹುತೇಕ ಕಾಫಿ ಚಿಕ್ಕಮಗಳೂರು ಮತ್ತು ಕೊಡಗಿನಲ್ಲಿ ಬೆಳೆಯುತ್ತದೆ. ಈ ವರ್ಷ ಮಳೆ ಅಭಾವದಿಂದ ಭಾರತದಲ್ಲಿ ಶೇ. 30ರಷ್ಟು ಕಾಫಿ ಇಳುವರಿ ಕಡಿಮೆ ಆಗಲಿದೆ ಎಂದು ಅಂದಾಜು ಮಾಡಲಾಗಿದೆ.
ಇದನ್ನೂ ಓದಿ: ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸಾರ್ವಕಾಲಿಕ ದಾಖಲೆ; 110 ಕೋಟಿ ವಿಸಿಟ್; ಸ್ಮಾರ್ಟ್ಫೋನ್ ಭರಾಟೆ
ಭಾರತದಲ್ಲಿ ವರ್ಷಕ್ಕೆ 3.5 ಲಕ್ಷ ಮೆಟ್ರಿಕ್ ಟನ್ ಕಾಫಿ ಉತ್ಪಾದನೆ ಆಗುತ್ತದೆ. ಈ ವರ್ಷ 3.74 ಲಕ್ಷ ಮೆಟ್ರಿಕ್ ಟನ್ ಕಾಫಿ ಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈಗ ಕಾಫಿ ಇಳುವರಿ 3 ಲಕ್ಷ ಟನ್ಗಿಂತ ಕಡಿಮೆ ಇರುವ ಸಾಧ್ಯತೆ ಇದೆ ಎನ್ನಲಾಗಿದೆ.
ವಿಪರ್ಯಾಸವೆಂದರೆ ಬ್ರೆಜಿಲ್, ವಿಯೆಟ್ನಾಂ ಮತ್ತು ಇಂಡೋನೇಷ್ಯಾದಲ್ಲಿ ಕಳೆದ 3 ವರ್ಷದಲ್ಲೇ ಅತಿಹೆಚ್ಚು ಕಾಫಿ ಉತ್ಪಾದನೆ ಈ ಬಾರಿ ಆಗಿದೆ. ಗೋಲ್ಡ್ಮ್ಯಾನ್ ಸ್ಯಾಕ್ಸ್, ರಾಬೋಬ್ಯಾಂಕ್ ಮತ್ತು ಫಿಚ್ ಸಂಸ್ಥೆಗಳು ಕೆಲ ತಿಂಗಳ ಹಿಂದೆಯೇ ಕಾಫಿ ಬೆಲೆ ಕುಸಿತದ ಬಗ್ಗೆ ಭವಿಷ್ಯ ನುಡಿದಿದ್ದವು. ಬ್ರೆಜಿಲ್, ವಿಯೆಟ್ನಾಂ ಮತ್ತು ಕೊಲಂಬಿಯಾದಲ್ಲಿ ಕಾಫಿ ಉತ್ಪಾದನೆ ಹೆಚ್ಚಾಗಿ ಅದರ ಪರಿಣಾಮವಾಗಿ ಕಾಫಿ ಬೆಲೆ ಕುಸಿತ ಕಾಣಬಹುದು ಎಂದು ಅಂದಾಜಿಸಿದ್ದವು. ಆ ಭಯವೀಗ ನಿಜವಾಗಿದೆ.
ಇದನ್ನೂ ಓದಿ: ಪಿಎಫ್ ಖಾತೆಗಳಿಗೆ ಬಡ್ಡಿ ಹಣ ವರ್ಗಾವಣೆ ಶುರು; ನಿಮ್ಮ ಖಾತೆಗೆ ಬಂದಿದೆಯಾ ಬಡ್ಡಿ?
ಕಾಫಿ ಬೆಳೆಗಾರರಿಗೆ ಬಹುಸ್ತರದಲ್ಲಿ ಕಷ್ಟ
ರಾಜ್ಯದಲ್ಲಿ ಹೆಚ್ಚಿನ ಕಾಫಿ ಬೆಳೆ ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತದೆ. ಕಾಫಿ ಬೆಳೆಯುವ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಕೂಲಿಗಳ ಲಭ್ಯತೆ, ರಸಗೊಬ್ಬರ ಬೆಲೆ ಹೆಚ್ಚಳ ಹೀಗೆ ಸಾಕಷ್ಟು ವೆಚ್ಚವಾಗುತ್ತದೆ. ಈ ಪರಿಸ್ಥಿತಿಯಲ್ಲಿ ಈ ಬಾರಿ ಮಳೆ ಕೊರತೆಯಿಂದಾಗಿ ಕಾಫಿ ಇಳುವರಿಯೂ ಕಡಿಮೆ ಆಗಿದೆ. ಈ ಗಾಯದ ಮೇಲೆ ಬರೆ ಎಳೆದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಬೆಲೆಯೂ ಕಡಿಮೆ ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ