ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಪಾರ್ಟ್ನರ್ ಆಗಲು ಪೋಲೆಂಡ್ಗೆ ಸಿಎಂ ಆಹ್ವಾನ
2027ರ ಕರ್ನಾಟಕ ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ಗೆ ಪಾರ್ಟ್ನರ್ ಆಗಿ ಪಾಲ್ಗೊಳ್ಳುವಂತೆ ಪೋಲೆಂಡ್ ದೇಶಕ್ಕೆ ಆಹ್ವಾನ ನೀಡಲಾಗಿದೆ. ಬೆಂಗಳೂರಿನಲ್ಲಿ ಇಂದು ಭೇಟಿಯಾದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಅವರಿಗೆ ಕರ್ನಾಟಕ ಸಿಎಂ ಡಿಕೆ ಶಿವಕುಮಾರ್ ಈ ಆಹ್ವಾನ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವಂತೆ ಪೋಲೆಂಡ್ನ ಟೆಕ್ನಾಲಜಿ ಕಂಪನಿಗಳಿಗೆ ಡಿಕೆಶಿ ಕರೆ ಕೂಡ ನೀಡಿದ್ದಾರೆ.

ಬೆಂಗಳೂರು, ಅಕ್ಟೋಬರ್ 23: ಮುಂದಿನ ವರ್ಷ ನಡೆಯಲಿರುವ ಕರ್ನಾಟಕದ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ರಾಷ್ಟ್ರ ಸಹಭಾಗಿಯಾಗಿ ಪಾಲ್ಗೊಳ್ಳುವಂತೆ ಪೋಲೆಂಡ್ಗೆ ಆಹ್ವಾನ ನೀಡಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಪೋಲೆಂಡ್ ಪ್ರಧಾನಿಗೆ ಈ ಆಹ್ವಾನ ನೀಡಿದ್ದಾರೆ.
ಬೆಂಗಳೂರಿನ ತಾಜ್ ವೆಸ್ಟ್ ಎಂಡ್ನಲ್ಲಿ ಮುಖ್ಯಂತ್ರಿ ಡಿಕೆ ಶಿವಕುಮಾರ್ ಮತ್ತು ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಅವರು ಭೇಟಿಯಾಗಿದ್ದಾರೆ. ‘ತಂತ್ರಜ್ಞಾನ, ನಾವೀನ್ಯತೆ ಮತ್ತು ಉದ್ಯಮಶೀಲತೆಯಲ್ಲಿ ಕರ್ನಾಟಕದ ಗ್ಲೋಬಲ್ ಹಬ್ ಆಗಿರುವ ಬೆಂಗಳೂರಿನಲ್ಲಿ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಮತ್ತು ಅವರ ದೇಶದ ನಿಯೋಗವನ್ನು ಸ್ವಾಗತಿಸುತ್ತೇನೆ’ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ಪೋಲೆಂಡ್ ಸಂಸ್ಥೆಯೊಂದರಿಂದ ಕರ್ನಾಟಕದಲ್ಲಿ ಹೂಡಿಕೆ
ಇದೇ ವೇಳೆ, ಪೋಲೆಂಡ್ ದೇಶದ TZMO ಗ್ರೂಪ್ನಿಂದ ಕೋಲಾರದಲ್ಲಿ ಹೂಡಿಕೆ ಮಾಡುವ ಪ್ರಸ್ತಾಪವನ್ನು ಡಿಕೆ ಶಿವಕುಮಾರ್ ಸ್ವಾಗತಿಸಿದ್ದಾರೆ. ಕೋಲಾರದ ಕೆಐಎಡಿಬಿ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ TZMO ಗ್ರೂಪ್ ಸುಮಾರು 5 ಎಕರೆ ಜಾಗದಲ್ಲಿ ಘಟಕ ಸ್ಥಾಪಿಸುತ್ತಿದೆ. ಇದಕ್ಕೆ ಸದ್ಯ 80 ಕೋಟಿ ರೂ ಹೂಡಿಕೆ ಆಗಲಿದ್ದು, ಒಂದು ಸಾವಿರ ಉದ್ಯೋಗ ಸೃಷ್ಟಿ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಹವಾಮಾನ ವಿಚಾರದಲ್ಲಿ ಡಬಲ್ ಸ್ಟ್ಯಾಂಡರ್ಡ್; ಪಾಶ್ಚಿಮಾತ್ಯರಿಗೆ ಸಖತ್ ಪಾಠ ಮಾಡಿದ ಸಚಿವ ಪಿಯೂಶ್ ಗೋಯಲ್
TZMO (Toruńskie Zakłady Materiałów Opatrunkowych) ಸಂಸ್ಥೆ ಸ್ಯಾನಿಟರಿ ನ್ಯಾಪ್ಕಿನ್, ಸ್ಕಿನ್ ಕೇರ್, ಡಯಾಪರ್, ಕಾಟನ್ ಪ್ಯಾಡ್, ಕಾಸ್ಮೆಟಿಕ್ಸ್ ಇತ್ಯಾದಿ ವಿವಿಧ ವೈಯಕ್ತಿಕ ಶೌಚ ವಸ್ತುಗಳನ್ನು ತಯಾರಿಸುತ್ತದೆ.
ಇದೇ ವೇಳೆ, ಡಿಕೆ ಶಿವಕುಮಾರ್ ಅವರು ಕರ್ನಾಟಕ ಹಾಗೂ ಪೋಲೆಂಡ್ ನಡುವಿನ ಇನ್ನೂ ಹಲವು ಬ್ಯುಸಿನೆಸ್ ವ್ಯವಹಾರಗಳು ಮತ್ತು ಸಂಬಂಧಗಳನ್ನು ಪ್ರಸ್ತಾಪಿಸಿದ್ದಾರೆ. ಪೋಲೆಂಡ್ನ ಕೆಟೋವೈಸ್ ನಗರದ ವಾಣಿಜ್ಯ ಮಂಡಳಿ ಹಾಗೂ ಅಲ್ಲಿಯ ಕೆಟೋ ಡಾಟ್ ಹಬ್ ಎನ್ನುವ ಗೇಮಿಂಗ್ ಟೆಕ್ನಾಲಜಿ ಸಂಸ್ಥೆ ಜೊತೆ ಕರ್ನಾಟಕ ಒಪ್ಪಂದ ಮಾಡಿಕೊಂಡಿದೆ. ಪ್ರಸ್ತಾಪಿತ ಕರ್ನಾಟಕ ಹಾಗು ಕೆಟೋವೈಸ್ ಡಿಜಿಟಲ್ ಮತ್ತು ಗೇಮಿಂಗ್ ಕಾರಿಡಾರ್ ಸೇರಿದಂತೆ ಎಐ, ಗೇಮಿಂಗ್, ಡೀಪ್ ಟೆಕ್ ಕ್ಷೇತ್ರದಲ್ಲಿ ಸಹಕಾರ ಹೊಂದುವುದು ಈ ಒಪ್ಪಂದದ ಉದ್ದೇಶವಾಗಿದೆ ಎಂದು ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಗ್ಲೋಬಲ್ ವೆಬ್‌ಸೈಟ್ ಸೆಕ್ಯುರಿಟಿ ಸರ್ಟಿಫಿಕೇಟ್ ವ್ಯವಹಾರದಿಂದ ಹಿಂದೆ ಸರಿಯಲು eMudhra ನಿರ್ಧಾರ
ಇನ್ನು, ಬೆಂಗಳೂರಿನಲ್ಲಿ ಎಐ, ಸಾಫ್ಟ್ವೇರ್, ಗೇಮಿಂಗ್, ರೋಬೋಟಿಕ್ಸ್, ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್, ಸ್ಟಾರ್ಟಪ್ ಇನ್ನೋವೇಶನ್, ರಿಸರ್ಚ್, ಶಿಕ್ಷಣ, ಟೆಕ್ನಾಲಜಿ ಟ್ರಾನ್ಸ್ಫರ್ ಕ್ಷೇತ್ರದಲ್ಲಿ ಪೋಲೆಂಡ್ ತಂತ್ರಜ್ಞಾನ ಕಂಪನಿಗಳು ಹೂಡಿಕೆ ಮಾಡುವಂತೆ ಇದೇ ವೇಳೆ ಡಿಕೆ ಶಿವಕುಮಾರ್ ಕರೆ ನೀಡಿದ್ದಾರೆ.
2027ರ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶವು 2027ರ ಏಪ್ರಿಲ್ 20ರಿಂದ 23ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಹಿಂದಿನ ಆವೃತ್ತಿಯು 2025ರ ಫೆಬ್ರುವರಿ 11ರಿಂದ 14ರವರೆಗೆ ನಡೆದಿತ್ತು. ಆಗಲೂ ಕೂಡ ಪೋಲೆಂಡ್ ಸೇರಿದಂತೆ 19 ದೇಶಗಳು ಪಾರ್ಟ್ನರ್ ಆಗಿ ಪಾಲ್ಗೊಂಡಿದ್ದವು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




