Milk Price: ಮೇ 1ರಿಂದಲೇ ಹಾಲಿನ ದರ ಹೆಚ್ಚಳ ಸಾಧ್ಯತೆ: ಲೀಟರ್‌ಗೆ 3 ರೂಪಾಯಿ ಹೆಚ್ಚಿಸಲು ಕೆಎಂಎಫ್ ಮನವಿ
ಹಾಲಿನ ದರ: KMF Nandini Milk Price Hike: ಪ್ರತಿ ಲೀಟರ್ ಹಾಲಿಗೆ ₹ 3 ಹೆಚ್ಚಿಸಬೇಕು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರು: ಕರ್ನಾಟಕ ಹಾಲು ಮಾರಾಟ ಮಹಾಮಂಡಲವು (Karnataka Milk Federation – KMF) ಹಾಲಿನ ದರ ಹೆಚ್ಚಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದೆ. ಪ್ರತಿ ಲೀಟರ್ ಹಾಲಿಗೆ ₹ 3 ಹೆಚ್ಚಿಸಬೇಕು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮನವಿ ಸಲ್ಲಿಸಿದ್ದಾರೆ. ಮೇ 1ರಿಂದಲೇ ಪರಿಷ್ಕೃತ ದರ ಜಾರಿ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಅಮೂಲ್ ಸೇರಿದಂತೆ ವಿವಿಧ ಖಾಸಗಿ ಸಂಸ್ಥೆಗಳು ಈಗಾಗಲೇ ಹಾಲಿನ ದರ ಹೆಚ್ಚಿಸಿವೆ. ನಂದಿನಿ ಹಾಲಿನ ದರಕ್ಕೆ ಹೋಲಿಸಿದರೆ ಇತರ ಸಂಸ್ಥೆಗಳ ಹಾಲಿನ ದರವು ಲೀಟರ್‌ಗೆ 8ರಿಂದ 10 ರೂಪಾಯಿ ಹೆಚ್ಚಿದೆ. ಹಾಗಾಗಿ ಹಾಲಿನ ದರವನ್ನು ಲೀಟರ್‌ಗೆ ಕನಿಷ್ಠ ₹ 3 ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ಕರ್ನಾಟಕದ 14 ಹಾಲು ಒಕ್ಕೂಟಗಳು ಪ್ರತಿ ಲೀಟರ್‌ಗೆ ₹ 5 ಹೆಚ್ಚಿಸಬೇಕೆಂದು ಮನವಿ ಮಾಡಿದ್ದವು. ಒಮ್ಮೆಲೆ ಇಷ್ಟೊಂದು ಹೆಚ್ಚಿಸಿದರೆ ಗ್ರಾಹಕರಿಗೆ ಹೊರೆಯಾಗಬಹುದು ಎನ್ನುವ ಕಾರಣಕ್ಕೆ ಮೂರು ರೂಪಾಯಿ ಹೆಚ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದ್ದಾರೆ.
ಹಾಲಿನ ದರ ಹೆಚ್ಚಿಸಬೇಕೆಂದು ಹಲವು ತಿಂಗಳುಗಳಿಂದ ಕೆಎಂಎಫ್ ಮನವಿ ಮಾಡುತ್ತಲೇ ಇತ್ತು. ಹಾಲಿನ ಸಂಸ್ಕರಣೆ, ಕಚ್ಚಾ ಸಾಮಾಗ್ರಿ, ವಿದ್ಯುತ್, ಸಾಗಾಣಿಕಾ ವೆಚ್ಚ ಸೇರಿದಂತೆ ಎಲ್ಲ ವೆಚ್ಚಗಳೂ ಶೇ 30ರಷ್ಟು ಹೆಚ್ಚಾಗಿವೆ. ರೈತರಿಗೆ ಹೆಚ್ಚುವರಿ ದರ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ನಂದಿನಿ ಹಾಲಿನ ದರ ಹೆಚ್ಚಳ ಮಾಡುವಂತೆ ಮನವಿ ಮಾಡಲಾಗಿದೆ. ಮೂರು ರೂಪಾಯಿ ದರ ಹೆಚ್ಚಿಸಿದರೆ ಅದರಲ್ಲಿ ಎರಡು ರೂಪಾಯಿಯನ್ನು ರೈತರಿಗೆ ಮತ್ತು ಒಂದು ರೂಪಾಯಿಯನ್ನು ಹಾಲು ಒಕ್ಕೂಟಗಳಿಗೆ ನೀಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ.
ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೀಡಿರುವ ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಧಿಕಾರಿಗಳು ಹಾಗೂ ಸಂಬಂಧಿಸಿದವರ ಜೊತೆ ಚರ್ಚಿಸಿ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಹಲವು ತಿಂಗಳುಗಳಿಂದ ಕೇಳಿಬರುತ್ತಿರುವ ಈ ಬೇಡಿಕೆಗೆ ಈ ಬಾರಿ ಮುಖ್ಯಮಂತ್ರಿ ಬೊಮ್ಮಾಯಿ ಸಹಮತ ಸೂಚಿಸುವ ಸಾಧ್ಯತೆಯಿರುವುದರಿಂದ ಹಾಲಿನ ದರ ಏರಿಕೆ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಹಣದುಬ್ಬರ, ಇಂಧನ ಬೆಲೆ ಏರಿಕೆ, ಅಡುಗೆ ತೈಲ ಬೆಲೆ ಏರಿಕೆಗಳಿಂದ ಕಂಗಾಲಾಗಿರುವ ಜನರ ಆರ್ಥಿಕ ಹೊರೆಯನ್ನು ಇದು ಮತ್ತಷ್ಟು ಹೆಚ್ಚಿಸಬಹುದು. ಹೊಟೆಲ್ಗಳಲ್ಲಿ ಕಾಫಿ, ಟೀ ಬೆಲೆಯೂ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.
ಕರ್ನಾಟಕ ಹಾಲು ಮಾರಾಟ ಮಹಾಮಂಡಲವು (Karnataka Milk Federation – KMF) ಹಾಲಿನ ದರ ಹೆಚ್ಚಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದೆ. #KMF #NandiniMilkPrice #MilkPriceHike pic.twitter.com/8EslRAL4Rf
— TV9 Kannada (@tv9kannada) April 27, 2022
ಇದನ್ನೂ ಓದಿ: ಶೀಘ್ರವೇ ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆ; ಇನ್ನೆರೆಡು ದಿನಗಳಲ್ಲಿ ಸಿಎಂ ಬೊಮ್ಮಾಯಿ ಜತೆ ಚರ್ಚೆ
ಇದನ್ನೂ ಓದಿ: ನಷ್ಟದ ಭೀತಿ ತಪ್ಪಿಸಲು ಕೆಎಂಎಫ್ನಿಂದ ಹೊಸ ಪ್ಲಾನ್; ರಾಬಕೋ ಒಕ್ಕೂಟದಿಂದ ಸಿಬ್ಬಂದಿಗಳಿಗೆ ತುಪ್ಪದ ಟಾರ್ಗೆಟ್
Published On - 9:47 am, Wed, 27 April 22