ಶ್ರೀಮಂತರ ಸಂಪತ್ತು ಕರಗಿಸಿ ಬಡವರಿಗೆ ಹಂಚುವ ಕೆಲಸ ಸಾಧ್ಯವಾ? ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಭರವಸೆಯತ್ತ ಒಂದು ನೋಟ

|

Updated on: Apr 08, 2024 | 6:33 PM

Wealth Redistribution from Rich to Poor: ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಬಡವರು ಬಡವರಾಗಿಯೇ ಇದ್ದಾರೆ. ಶ್ರೀಮಂತರ ಶ್ರೀಮಂತಿಕೆ ಹೆಚ್ಚಾಗುತ್ತಲೇ ಇದೆ. 300 ಕೋಟಿ ಜನರ ಬಳಿ ಇರುವುದಕ್ಕಿಂತ ಹೆಚ್ಚಿನ ಸಂಪತ್ತು ಕೇವಲ 10 ಉದ್ಯಮಿಗಳ ಬಳಿ ಇದೆ. ಈ ಆರ್ಥಿಕ ಅಸಮಾನತೆ ನೀಗಿಸಲು ತೆರಿಗೆ ಕ್ರಮ ಮುಖ್ಯವಾದ ಮಾರ್ಗ. ವೆಲ್ತ್ ಟ್ಯಾಕ್ಸ್, ಇನ್​ಹೆರಿಟೆನ್ಸ್ ಟ್ಯಾಕ್ಸ್ ಜಾರಿಗೆ ತರಬಹುದು. ಇನ್ಕಮ್ ಟ್ಯಾಕ್ಸ್, ಕಾರ್ಪೊರೇಟ್ ಟ್ಯಾಕ್ಸ್ ದರ ಹೆಚ್ಚಿಸಬಹುದು. ಇವು ಸದ್ಯಕ್ಕೆ ಪರಿಣಾಮಕಾರಿ ಎನಿಸಬಹುದಾದ ಸಂಪತ್ತು ಮರುಹಂಚಿಕೆ ಮಾರ್ಗವಾಗಿವೆ.

ಶ್ರೀಮಂತರ ಸಂಪತ್ತು ಕರಗಿಸಿ ಬಡವರಿಗೆ ಹಂಚುವ ಕೆಲಸ ಸಾಧ್ಯವಾ? ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಭರವಸೆಯತ್ತ ಒಂದು ನೋಟ
ಶ್ರೀಮಂತ, ಬಡವರ ನಡುವಿನ ಅಸಮಾನತೆ
Follow us on

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹಲವು ಗ್ಯಾರಂಟಿಗಳನ್ನು ತನ್ನ ಪ್ರಣಾಳಿಕೆಯಲ್ಲಿ ಒದಗಿಸಿದೆ. ಈ ಮೆನಿಫೆಸ್ಟೋದಲ್ಲಿರುವ ಒಂದು ಪ್ರಮುಖ ಅಂಶ ವೆಲ್ತ್ ರೀಡಿಸ್ಟ್ರಿಬ್ಯೂಶನ್​ನದ್ದು. ಸಂಪತ್ತು ಮರುಹಂಚಿಕೆ ಮಾಡುವ ಬಹಳ ದೊಡ್ಡ ಆಶ್ವಾಸನೆ ಇದು. ಶ್ರೀಮಂತರು ಹೆಚ್ಚೆಚ್ಚು ಶ್ರೀಮಂತರಾಗುತ್ತಿದ್ದಾರೆ, ಬಡವರು ಮತ್ತಷ್ಟು ಬಡತನಕ್ಕೆ ಸಿಲುಕುತ್ತಿದ್ದಾರೆ. ಈ ಟ್ರೆಂಡ್ ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿ ಹರಡುತ್ತಿದೆ.

ಆಕ್ಸ್​ಫ್ಯಾಮ್ ವರದಿಯೊಂದರ ಪ್ರಕಾರ ಶ್ರೀಮಂತಿಕೆಯಲ್ಲಿ ಮೇಲಿನ ಹಂತದಲ್ಲಿರುವ ಶೇ. 10ರಷ್ಟು ಮಂದಿ ಬಳಿ ವಿಶ್ವದ ಶೇ. 85ರಷ್ಟು ಸಂಪತ್ತು ಕೇಂದ್ರಿತವಾಗಿದೆ. ಶೇ. 1 ಶ್ರೀಮಂತರ ಬಳಿ ಶೇ. 40ರಷ್ಟು ಸಂಪತ್ತು ಇದೆ. ಇನ್ನೂ ಕುತೂಹಲ ಎಂದರೆ ಜಗತ್ತಿನ 10 ಅತಿ ಶ್ರೀಮಂತರ ಬಳಿ ಇರುವ ಸಂಪತ್ತು ಕೆಳಗಿನ ಸ್ತರದಲ್ಲಿರುವ 310 ಕೋಟಿ ಜನರ ಬಳಿ ಇರುವ ಸಂಪತ್ತಿಗಿಂತಲೂ ಹೆಚ್ಚು. ಜಾಗತಿಕವಾಗಿ ಈ ಪರಿ ಆರ್ಥಿಕ ಅಸಮಾನತೆ ಇದೆ. ಭಾರತದಲ್ಲೂ ಬಹುತೇಕ ಇಷ್ಟೇ ಮಟ್ಟದ ಅಸಮಾನತೆ ಇದೆ. ಭಾರತದ ವಿಶ್ವದಲ್ಲೇ ಐದನೇ ಅತಿದೊಡ್ಡ ಆರ್ಥಿಕತೆಯ ದೇಶವಾದರೂ ಸರಾಸರಿ ತಲಾದಾಯ ಬಹಳ ಕಡಿಮೆ ಮಟ್ಟದಲ್ಲೇ ಇದೆ.

ಇಷ್ಟು ತೀವ್ರ ಮಟ್ಟದ ಆರ್ಥಿಕ ಅಂತರವನ್ನು ನಿವಾರಿಸುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಆದರೆ, ಹೇಗೆ ಮಾಡಬಹುದು ಎಂದು ಸ್ಪಷ್ಟಪಡಿಸಲಾಗಿಲ್ಲ. ಸರ್ವಾಧಿಕಾರಿ ಆಡಳಿತ ಇರುವ ದೇಶಗಳಲ್ಲಿ ಕಠಿಣ ಆರ್ಥಿಕ ನೀತಿಗಳನ್ನು ತಂದು ಸಂಪತ್ತು ಮರುಹಂಚಿಕೆ ಮಾಡಬಹುದು. ಇವೇ ನೀತಿಗಳನ್ನು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜಾರಿ ಮಾಡುವುದು ಸಾಧ್ಯವಾ? ಉಳುವವನೇ ಭೂಮಿಯ ಒಡೆಯ ಎನ್ನುವಂತಹ ಕಠಿಣಾತಿಕಠಿಣ ಕಾನೂನನ್ನು ಯಶಸ್ವಿಯಾಗಿ ಜಾರಿಗೆ ತಂದ ಭಾರತದಲ್ಲಿ ಇದು ಅಸಾಧ್ಯವೇನಲ್ಲ. ಆದರೆ, ಸಂಪತ್ತು ಮರುಹಂಚಿಕೆ ಹೇಗೆ ಮಾಡಬಹುದು? ಶ್ರೀಮಂತರಿಂದ ಹಣ ಕಿತ್ತು ಬಡವರಿಗೆ ಹಾಗೇ ಸುಮ್ಮನೆ ಹಂಚಲು ಆಗುತ್ತದೆಯೇ?

ಇದನ್ನೂ ಓದಿ: ಗ್ವಾದರ್ ಪಟ್ಟಣ ಭಾರತದ ಬದಲು ಪಾಕಿಸ್ತಾನ ಪಾಲಾದ ಕಥೆ; ನೆಹರೂ ಒಲ್ಲೆ ಎಂದಿದ್ದು ಯಾಕೆ? ಕೈತಪ್ಪಿದ ಇತಿಹಾಸ

ಆರ್ಥಿಕ ಅಸಮಾನತೆ ನೀಗಿಸುವ ಮತ್ತು ಸಂಪತ್ತು ಮರುಹಂಚಿಕೆ ಮಾಡುವ ಒಂದಷ್ಟು ಉಪಾಯಗಳು

  • ಆದಾಯ ತೆರಿಗೆ: ಹೆಚ್ಚಿನ ಆದಾಯ ಇರುವ ವ್ಯಕ್ತಿಗಳಿಗೆ ತೆರಿಗೆ ದರ ಇನ್ನಷ್ಟು ಹೆಚ್ಚಿಸುವುದು.
  • ವೆಲ್ತ್ ಟ್ಯಾಕ್ಸ್: ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಹೊಂದಿರುವ ಒಟ್ಟಾರೆ ಆಸ್ತಿಯ ಮೊತ್ತದ ಅನುಗುಣವಾಗಿ ವಿಧಿಸುವ ಸಂಪತ್ತು ತೆರಿಗೆ ಇದು.
  • ಇನ್​ಹೆರಿಟೆನ್ಸ್ ಟ್ಯಾಕ್ಸ್: ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಆಸ್ತಿ ವರ್ಗಾವಣೆ ಆಗುತ್ತಿರುತ್ತದೆ. ಅನಾಯಾಸವಾಗಿ ಸಿಗುವ ಈ ಸಂಪತ್ತಿಗೆ ಪಿತ್ರಾರ್ಜಿತ ಆಸ್ತಿ ತೆರಿಗೆ ವಿಧಿಸಬಹುದು.
  • ಕಾರ್ಪೊರೇಟ್ ಟ್ಯಾಕ್ಸ್: ಕಾರ್ಪೊರೇಟ್ ಸಂಸ್ಥೆಗಳ ಆದಾಯಕ್ಕೆ ಅನುಗುಣವಾಗಿ ತೆರಿಗೆ ವಿಧಿಸಬಹುದು.
  • ಕನಿಷ್ಠ ವೇತನ: ಕಾರ್ಮಿಕರು ಮತ್ತು ಉದ್ಯೋಗಿಗಳ ಕನಿಷ್ಠ ವೇತನವನ್ನು ಹೆಚ್ಚಿಸುವುದು ಮತ್ತೊಂದು ಕ್ರಮ.

ಮೇಲೆ ತಿಳಿಸಿದ ಮೊದಲ ಮೊದಲ ನಾಲ್ಕು ಅಂಶಗಳು ಶ್ರೀಮಂತರಿಂದ ಹೆಚ್ಚಿನ ತೆರಿಗೆ ಸಂಗ್ರಹಿಸಲು ಸಾಧ್ಯವಾಗುತ್ತದೆ. ಆದರೆ, ವೆಲ್ತ್ ಟ್ಯಾಕ್ಸ್ ಮತ್ತು ಇನ್​ಹೆರಿಟೆನ್ಸ್ ಟ್ಯಾಕ್ಸ್ ಜಾರಿ ಕಷ್ಟಕರ. ಜಗತ್ತಿನ ಕೆಲವೇ ದೇಶಗಳು ಮಾತ್ರವೇ ವೆಲ್ತ್ ಟ್ಯಾಕ್ಸ್ ಜಾರಿ ತಂದಿರುವುದು. ಒಂದು ವೇಳೆ ಈ ಕ್ರಮಗಳನ್ನು ಅನುಷ್ಠಾನಕ್ಕೆ ತಂದರೆ ಪರಿವರ್ತನೆ ಸಾಧ್ಯವಾ ಎಂಬುದು ಬಹಳ ಮುಖ್ಯ ಪ್ರಶ್ನೆ.

ಐಐಎಂನ ನಿವೃತ್ತ ಪ್ರೊಫೆಸರ್​ವೊಬ್ಬರು ಟಿವಿ9 ಕನ್ನಡದ ಜೊತೆ ಮಾತನಾಡಿ, ವೆಲ್ತ್ ಟ್ಯಾಕ್ಸ್ ಇತ್ಯಾದಿ ಕ್ರಮಗಳ ಮೂಲಕ ಆರ್ಥಿಕ ಅಸಮಾನತೆಯನ್ನು ನೀಗಿಸಲು ಸಾಧ್ಯವಾದರೂ ದೀರ್ಘಾವಧಿಯಲ್ಲಿ ಇದು ಪರಿಣಾಮಕಾರಿಯಾಗದೇ ಹೋಗಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿಶ್ಲೇಷಣೆ: ವೇತನ ತಾರತಮ್ಯ; ಭಾರತದ ಕಾರ್ಮಿಕ ಮಾರುಕಟ್ಟೆಯಲ್ಲಿ ಮಹಿಳೆಯರ ಸ್ಥಿತಿ

ಬೇರೆ ಅಭಿವೃದ್ಧಿ ಕ್ರಮಗಳೂ ಬೇಕು

ತೆರಿಗೆಗಳ ಮೂಲಕ ಶ್ರೀಮಂತರಿಂದ ಹಣ ಸಂಗ್ರಹಿಸಿದರೂ ಅದು ಬಡವರನ್ನು ತಲುಪಿಸುವುದು ಮತ್ತೊಂದು ಮುಖ್ಯ ಸವಾಲಿನ ಕೆಲಸ.

  • ಸರ್ವರಿಗೂ ಶಿಕ್ಷಣ ಮತ್ತು ಔದ್ಯಮಿಕ ತರಬೇತಿ ಸಿಗಬೇಕು. ವೆಚ್ಚ ಕೈಗೆಟುಕುವಂತಿರಬೇಕು
  • ಶ್ರೀಮಂತರಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ಬಡವರಿಗೆ ಸಬ್ಸಿಡಿ ಕೊಡಲು ಬಳಸಬಹುದು.
  • ಸರ್ವರಿಗೂ ಉದ್ಯೋಗ ದೊರಕಬೇಕು, ಎಲ್ಲರ ಜೀವನಮಟ್ಟ ಸುಧಾರಣೆ ಆಗಬೇಕು.
  • ಉದ್ಯಮಿಗಳು ತೆರಿಗೆ ಕಾರಣಕ್ಕೆ ದೇಶ ಬಿಟ್ಟು ಹೋಗದಂತೆ ಎಚ್ಚರವಹಿಸಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ