ಗ್ವಾದರ್ ಪಟ್ಟಣ ಭಾರತದ ಬದಲು ಪಾಕಿಸ್ತಾನ ಪಾಲಾದ ಕಥೆ; ನೆಹರೂ ಒಲ್ಲೆ ಎಂದಿದ್ದು ಯಾಕೆ? ಕೈತಪ್ಪಿದ ಇತಿಹಾಸ
When Nehru Rejected Offer to Buy Gwadar: ಪಾಕಿಸ್ತಾನದಲ್ಲಿ ಈಗ ಚೀನಾದ ಒನ್ ಬೆಲ್ಟ್ ಒನ್ ರೋಡ್ ಯೋಜನೆಯಲ್ಲಿ ಪ್ರಮುಖ ಕೊಂಡಿಯಾಗಿರುವ ಗ್ವಾದರ್ ಬಂದರು ಪ್ರದೇಶ ಹಿಂದೊಮ್ಮೆ ಭಾರತಕ್ಕೆ ಸೇರುವ ಅವಕಾಶ ಇತ್ತು. 18ನೇ ಶತಮಾನದಿಂದಲೂ ಓಮನ್ ಸುಲ್ತಾನ್ ಸುಪರ್ದಿಯಲ್ಲಿದ್ದ ಗ್ವಾದರ್ ಅನ್ನು 1956ರಲ್ಲಿ ಭಾರತಕ್ಕೆ ಮಾರಾಟ ಮಾಡಲು ಸುಲ್ತಾನರು ಮೌಖಿಕವಾಗಿ ಆಫರ್ ಮಾಡಿದ್ದರು. ಆದರೆ, ನೆಹರೂ ಇದಕ್ಕೆ ಒಲ್ಲೆ ಎಂದರು. ಎರಡು ವರ್ಷದ ಬಳಿಕ ಸುಲ್ತಾನರು ಗ್ವಾದರ್ ಅನ್ನು ಪಾಕಿಸ್ತಾನಕ್ಕೆ ಮಾರಿದರು. ಬ್ರಿಗೇಡಿಯರ್ ಗುರ್ಮೀತ್ ಕನ್ವಲ್ ಈ ವಿಚಾರವನ್ನು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.
ರಾಮೇಶ್ವರಂನ ಆಚೆ ಇರುವ ಕಚ್ಚತೀವು (Kachchatheevu island) ಎಂಬ ಪುಟ್ಟ ದ್ವೀಪವನ್ನು ಭಾರತ ಶ್ರೀಲಂಕಾಗೆ ಬಿಟ್ಟುಕೊಟ್ಟಿದ್ದ ವಿಚಾರ ಸದ್ದು ಮಾಡಿದೆ. ಕಚ್ಚತೀವು ಮಾತ್ರವಲ್ಲ, ಹಲವು ಪ್ರದೇಶಗಳನ್ನು ಭಾರತ ಕಳೆದುಕೊಂಡಿದೆ. ಮತ್ತೆ ಹಲವು ಪ್ರದೇಶಗಳನ್ನು ಉಳಿಸಿಕೊಳ್ಳಲೂ ಯಶಸ್ವಿಯಾಗಿದೆ. ಪಾಕಿಸ್ತಾನದ ಅತಿದೊಡ್ಡ ಭಾಗವಾಗಿರುವ ಬಲೂಚಿಸ್ತಾನವನ್ನು (Balochistan) ಭಾರತ ಪಡೆಯಬಹುದಿತ್ತು. ವಿಭಜನೆಯ ವೇಳೆ ಪಾಕಿಸ್ತಾನದ ಬದಲು ಭಾರತವನ್ನು ಸೇರುತ್ತೇವೆಂದು ಬಲೂಚಿಸ್ತಾನದ ಅರಸರು ಮಾಡಿದ ಆಫರ್ ಅನ್ನು ಭಾರತ ತಿರಸ್ಕರಿಸಿತು. ಪಾಕಿಸ್ತಾನದಲ್ಲಿ ವ್ಯಾಪಾರ ವಹಿವಾಟಿಗೆ ಬಹಳ ಆಯಕಟ್ಟಿನ ಪ್ರದೇಶವಾಗಿರುವ ಬಂದರು ನಗರಿ ಗ್ವಾದರ್ ಪಟ್ಟಣವನ್ನು (Gwadar town) ಭಾರತ ಮನಸು ಮಾಡಿದ್ದರೆ ಪಡೆಯಬಹುದಿತ್ತು. 1956ರಲ್ಲಿ ಗ್ವಾದರ್ ಅನ್ನು ಭಾರತ ಖರೀದಿಸುವ ಅವಕಾಶ ಹೊಂದಿತ್ತು. ಆದರೆ, ಬೇಡ ಎಂದು ಕೈಚೆಲ್ಲಿತು. ಎರಡು ವರ್ಷದ ಬಳಿಕ ಪಾಕಿಸ್ತಾನ ಆ ನಗರವನ್ನು ಓಮನ್ ಸುಲ್ತಾನರಿಂದ ಖರೀದಿಸಿತು ಎಂದು ಹೇಳಲಾಗುತ್ತಿದೆ. ಬ್ರಿಗೇಡಿಯರ್ ಗುರ್ಮೀತ್ ಕನ್ವಲ್ ಅವರು 2016ರಲ್ಲಿ ಈ ವಿಚಾರದ ಬಗ್ಗೆ ಒಂದು ಲೇಖನ ಬರೆದಿದ್ದರು. ಅದರಲ್ಲಿ ಅವರು ಗ್ವಾದರ್ ಅನ್ನು ಪಡೆಯುವ ಅವಕಾಶ ಹೇಗೆ ತಪ್ಪಿತು ಎಂದು ವಿವರಿಸಿದ್ದಾರೆ. ಇಂಡಿಯಾ ಟುಡೇ ಜಾಲತಾಣದಲ್ಲಿ ಈ ಬಗ್ಗೆ ವಿಶೇಷ ಸ್ಟೋರಿ ಪ್ರಕಟವಾಗಿದೆ.
ಸ್ವಾತಂತ್ರ್ಯೋತ್ತರದಲ್ಲಿ ಭಾರತ ಮಾಡಿದ ಹಲವು ಕಾರ್ಯತಂತ್ರಾತ್ಮಕ ಪ್ರಮಾದಗಳ ದೊಡ್ಡ ಪಟ್ಟಿಯಲ್ಲಿ ಗ್ವಾದರ್ ವಿಚಾರವೂ ಒಂದು ಎಂದು ನಿವೃತ್ತ ಬ್ರಿಗೇಡಿಯರ್ ಗುರ್ವೀತ್ ಕನ್ವಾಲ್ ತಮ್ಮ ಲೇಖನದಲ್ಲಿ ಬರೆದಿದ್ದಾರೆ.
ಓಮನ್ ಹಿಡಿತದಲ್ಲಿದ್ದ ಗ್ವಾದರ್
ಗ್ವಾದರ್ ನಗರವು ಈಗಿನ ಪಾಕಿಸ್ತಾನದ ಪ್ರಾಂತ್ಯವಾದ ಬಲೂಚಿಸ್ತಾನದಲ್ಲಿದೆ. ಗಲ್ಫ್ ಆಫ್ ಓಮನ್ಗೆ ಹತ್ತಿರವೇ ಇದೆ. 18ನೇ ಶತಮಾನದ ಕೊನೆಯಿಂದಲೂ ಇದು ಓಮನ್ ಹಿಡಿತದಲ್ಲಿದೆ. ಅಂದಹಾಗೆ, ಬಲೂಚಿಸ್ತಾನ ಅಳ್ವಿಕೆ ನಡೆಸುತ್ತಿದ್ದ ಕಲತ್ ಖಾನ್ ಮೀರ್ ನೂರಿ ನಸೀರ್ ಖಾನ್ ಬಲೂಚ್ ಅವರು ಮಸ್ಕಟ್ನ ರಾಜಕುಮಾರ ಸುಲ್ತಾನ್ ಬಿನ್ ಅಹ್ಮದ್ ಅವರಿಗೆ ಉಡುಗೊರೆಯಾಗಿ ಈ ಪುಟ್ಟ ಪಟ್ಟಣವನ್ನು ನೀಡಿದ್ದರು. ಓಮನ್ ಸಾಮ್ರಾಜ್ಯವನ್ನು ಪಡೆಯಲು ಹವಣಿಸುತ್ತಿದ್ದ ಮಸ್ಕತ್ ಸುಲ್ತಾನ್ಗೆ ಈ ಪಟ್ಟಣ ಅಗತ್ಯ ಇತ್ತು. ಒಮ್ಮೆ ಓಮನ್ ಅಧಿಕಾರ ಸಿಕ್ಕಿದರೆ ಇದನ್ನು ಕಲತ್ ರಾಜನಿಗೆ ಮರಳಿಸಬೇಕೆಂಬ ಒಪ್ಪಂದ ಆಗಿತ್ತು. ಆದರೆ, ಸುಲ್ತಾನ್ ಬಿನ್ ಅಹ್ಮದ್ ಓಮನ್ ಗದ್ದುಗೆ ಪಡೆದ ಬಳಿಕ ಒಪ್ಪಂದದಂತೆ ಗ್ವಾದರ್ ಅನ್ನು ಕಲತ್ ರಾಜನಿಗೆ ವರ್ಗಾಯಿಸದೇ ತನ್ನಲ್ಲೇ ಇಟ್ಟುಕೊಂಡಿದ್ದರು.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ನಡೆಯುತ್ತಿರುವ ಉಗ್ರರ ಹತ್ಯೆಗೂ ಮೋದಿಗೂ ಸಂಬಂಧವಿದೆ ಎಂದ ಬ್ರಿಟಿಷ್ ಪತ್ರಿಕೆ, ಭಾರತ ಪ್ರತಿಕ್ರಿಯಿಸಿದ್ದು ಹೀಗೆ
1947ರಲ್ಲಿ ಭಾರತದ ವಿಭಜನೆಯಾದಾಗ ಗ್ವಾದರ್ ಸುತ್ತಮುತ್ತಲ ಒಂದಷ್ಟು ಪ್ರದೇಶ ಬಿಟ್ಟು ಉಳಿದವು ಪಾಕಿಸ್ತಾನದ ಪಾಲಾದವು. ಬಲೂಚಿಸ್ತಾನವನ್ನು ಪಡೆಯುವ ಅವಕಾಶವನ್ನು ಭಾರತ ಕೈಚೆಲ್ಲಿತು ಎನ್ನಲಾಗುತ್ತಿದೆ. ಅದೇ ಹೊತ್ತಿನಲ್ಲಿ ಓಮನ್ ಸುಲ್ತಾನರು ಗ್ವಾದರ್ ಅನ್ನು ಕೊಟ್ಟುಬಿಡುವ ನಿರ್ಧಾರಕ್ಕೆ ಬಂದಿದ್ದರು. ಕುತೂಹಲದ ಸಂಗತಿ ಎಂದರೆ 1947ರ ನತರ ಓಮನ್ ಸುಲ್ತಾನರ ಪರವಾಗಿ ಭಾರತವು ಗ್ವಾದರ್ನಲ್ಲಿ ಆಡಳಿತ ನಡೆಸುತ್ತಿತ್ತು. ಹೀಗಾಗಿ, ಗ್ವಾದರ್ ಅನ್ನು ಭಾರತಕ್ಕೇ ಕೊಟ್ಟುಬಿಡಲು ಓಮನ್ ಸುಲ್ತಾನ ಆಸಕ್ತರಾಗಿದ್ದರು.
ನೆಹರೂಗೆ ಗ್ವಾದರ್ ಆಫರ್ ಮಾಡಿದ್ದ ಓಮನ್ ಸುಲ್ತಾನ
ಬ್ರಿಗೇಡಿಯರ್ ಬರೆದ ಪುಸ್ತಕದಲ್ಲಿರುವ ಮಾಹಿತಿ ಪ್ರಕಾರ 1956ರಲ್ಲಿ ಓಮನ್ ಸುಲ್ತಾನರು ಗ್ವಾದರ್ ಅನ್ನು ಅಂದಿನ ಭಾರತ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಮೌಖಿಕವಾಗಿ ಆಫರ್ ಮಾಡಿದ್ದರಂತೆ. ನೆಹರೂ ಈ ಆಫರ್ ಅನ್ನು ತಿರಸ್ಕರಿಸಿದರಂತೆ.
ಅದೇ ಹೊತ್ತಿನಲ್ಲಿ ಭಾರತದ ಜೈನ ಸಮುದಾಯಕ್ಕೆ ಸೇರಿದ ಉದ್ಯಮಿಗಳು ಗ್ವಾದರ್ ಅನ್ನು ಓಮನ್ ಸುಲ್ತಾನರಿಂದ ಖರೀದಿಸಲು ಆಸಕ್ತಿ ತೋರಿದ್ದರು. ಭಾರತೀಯರು ಗ್ವಾದರ್ನತ್ತ ಚಿತ್ತ ನೆಟ್ಟಿರುವ ವಿಚಾರ ಗೊತ್ತಾಗುತ್ತಲೇ ಪಾಕಿಸ್ತಾನದ ಆಡಳಿತವರ್ಗ ಚುರುಕುಗೊಂಡು ಬ್ರಿಟಿಷರ ಮಧ್ಯಸ್ತಿಕೆ ಮೂಲಕ ಓಮನ್ ದೊರೆಯಿಂದ ಗ್ವಾದರ್ ಅನ್ನು 3 ಮಿಲಿಯನ್ ಪೌಂಡ್ಗಳಿಗೆ ಖರೀದಿಸಿತು ಎನ್ನಲಾಗಿದೆ.
ಇದನ್ನೂ ಓದಿ: 2024ರ ಬಾಬಾ ವಂಗಾ ಭವಿಷ್ಯವಾಣಿ: ಜಗತ್ತಿನ ಅಂತ್ಯ ಯಾವಾಗ, ಈ ವರ್ಷ ಸಂಭವಿಸಲಿದೆ ಮಹತ್ವದ ಘಟನೆ
ನೆಹರೂ ಆಫರ್ ತಿರಸ್ಕರಿಸಿದ್ದು ಯಾಕೆ?
ರಾಜಕೀಯ ತಜ್ಞರ ಪ್ರಕಾರ ಗ್ವಾದರ್ ಪಡೆಯುವ ಆಫರ್ ಅನ್ನು ನೆಹರೂ ತಿರಸ್ಕರಿಸಲು ಭೌಗೋಳಿಕ ಕಾರಣ. ಗ್ವಾದರ್ ಅನ್ನು ಪಡೆದರೂ ಅದನ್ನು ಪಾಕಿಸ್ತಾನದ ಆಕ್ರಮಣದಿಂದ ಬಚಾವ್ ಮಾಡಿಕೊಂಡು ಇಟ್ಟುಕೊಳ್ಳುವುದು ಅಂದಿನ ಕಾಲದ ಮಟ್ಟಿಗೆ ಸಾಧ್ಯವಾಗುತ್ತಿರಲಿಲ್ಲ. ಇದನ್ನು ಯೋಚಿಸಿ ನೆಹರೂ ಗ್ವಾದರ್ ಗೋಜಿಗೆ ಹೋಗಲಿಲ್ಲ.
ಭಾರತ ಕೈಬಿಟ್ಟ ಗ್ವಾದರ್ ಈಗ ಚೀನಾಗೆ ವರವಾಗಿ ಪರಿಣಮಿಸಿದೆ. ಚೀನಾದ ಒನ್ ರೋಡ್ ಒನ್ ಬೆಲ್ಟ್ ಯೋಜನೆಯಲ್ಲಿ ಗ್ವಾದರ್ ಪ್ರಮುಖ ಲಿಂಕ್ ಆಗಿದೆ. ಚೀನಾದ ರಫ್ತು ರಹದಾರಿಯಲ್ಲಿ ಗ್ವಾದರ್ ಬಂದರು ಬಹಳ ಮುಖ್ಯ ಎನಿಸುತ್ತದೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:03 am, Mon, 8 April 24