ಚಲಾವಣೆಯಿಂದ ಹಿಂಪಡೆಯಲಾದ 2,000 ರೂ ನೋಟುಗಳಲ್ಲಿ ಈವರೆಗೆ ಮರಳಿರುವುದು ಎಷ್ಟು? ಆರ್​ಬಿಐ ನೀಡಿದ ಮಾಹಿತಿ ಇದು

|

Updated on: Oct 06, 2023 | 5:49 PM

Rs 2,000 Notes: ನಾಲ್ಕು ತಿಂಗಳ ಹಿಂದೆ ಚಲಾವಣೆಯಿಂದ ಹಿಂಪಡೆಯಲಾದ 2,000 ರೂ ನೋಟುಗಳಲ್ಲಿ ಹೆಚ್ಚಿನವು ಬ್ಯಾಂಕುಗಳಿಗೆ ಮರಳಿವೆ. 3.56 ಲಕ್ಷ ಕೋಟಿ ರೂ ಮೊತ್ತದ ನೋಟುಗಳಲ್ಲಿ 12,000 ಕೋಟಿ ರೂ ಮೊತ್ತದ ನೋಟುಗಳು ಮಾತ್ರವೇ ಇನ್ನೂ ಮರಳಿಲ್ಲ ಎಂದು ಆರ್​ಬಿಐ ಮಾಹಿತಿ ನೀಡಿದೆ. ಇದು ಸೆಪ್ಟೆಂಬರ್ 29ರವರೆಗಿನ ಡಾಟಾ. ಅಕ್ಟೋಬರ್ 7ರವರೆಗೂ ನೋಟುಗಳನ್ನು ವಿನಿಮಯ ಮಾಡಲು ಅವಕಾಶ ಇದೆ.

ಚಲಾವಣೆಯಿಂದ ಹಿಂಪಡೆಯಲಾದ 2,000 ರೂ ನೋಟುಗಳಲ್ಲಿ ಈವರೆಗೆ ಮರಳಿರುವುದು ಎಷ್ಟು? ಆರ್​ಬಿಐ ನೀಡಿದ ಮಾಹಿತಿ ಇದು
2,000 ರೂ ನೋಟು
Follow us on

ನವದೆಹಲಿ, ಅಕ್ಟೋಬರ್ 6: ಚಲಾವಣೆಯಿಂದ ಹಿಂಪಡೆಯಲಾಗಿರುವ 2,000 ರೂ ಮುಖಬೆಲೆಯ ನೋಟುಗಳು ಬಹುತೇಕವು ಬ್ಯಾಂಕುಗಳಿಗೆ ಮರಳಿವೆ. ಇಂದು ಎಂಪಿಸಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್​ಬಿಐ ಗವರ್ನರ್ ಶಕ್ತಿಕಾಂತದಾಸ್, ಸದ್ಯ 12,000 ಕೋಟಿ ರೂ ಮೊತ್ತದ 2,000 ರೂ ನೋಟುಗಳಷ್ಟೇ ಹಿಂದಿರುಗಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಮೇ 19ರಂದು 2,000 ರೂ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು (taken back from circulation) ಆರ್​ಬಿಐ ನಿರ್ಧರಿಸಿದಾಗ 3.56 ಲಕ್ಷ ಕೋಟಿ ರೂ ಮೊತ್ತದ ನೋಟುಗಳು ಚಲಾವಣೆಯಲ್ಲಿದ್ದವು. ಈ ಪೈಕಿ ಸೆಪ್ಟೆಂಬರ್ 29ರವರೆಗೂ ಒಟ್ಟು 3.42 ಲಕ್ಷಕೋಟಿ ರೂ ಮೊತ್ತದ ನೋಟುಗಳು ಬಂದಿವೆ. 12,000 ಕೋಟಿ ರೂ ಮೊತ್ತದ ನೋಟುಗಳಷ್ಟೇ ಬರಬೇಕಿರುವುದು.

ಕುತೂಹಲ ಎಂದರೆ, ಬ್ಯಾಂಕಿಗೆ ಮರಳಿರುವ ನೋಟುಗಳ ಪೈಕಿ ಶೇ. 87ರಷ್ಟು ನೋಟುಗಳು ಬ್ಯಾಂಕ್ ಖಾತೆಗಳಿಗೆ ಜಮೆ ಆಗಿವೆ. ಇನ್ನುಳಿದವು ಕೌಂಟರುಗಳಲ್ಲಿ ವಿನಿಮಯಗೊಂಡಿವೆ. ಸೆಪ್ಟೆಂಬರ್ 30ರವರೆಗೆ ನೋಟುಗಳ ವಿನಿಮಯಕ್ಕೆ ಅವಕಾಶ ಕೊಡಲಾಗಿತ್ತು. ಈ ಗಡುವನ್ನು ಒಂದು ವಾರ ಹೆಚ್ಚಿಸಲಾಗಿತ್ತು. ಅಕ್ಟೋಬರ್ 7ಕ್ಕೆ ಕೊನೆಯ ದಿನ ಇದೆ.

ಇದನ್ನೂ ಓದಿ: ಪಿಐಡಿ ಫಂಡ್ ಸ್ಕೀಮ್ ಅಡಿಯಲ್ಲಿ ಪಿಎಂ ವಿಶ್ವಕರ್ಮ ಯೋಜನೆ ಒಳಗೊಳ್ಳಲು ಆರ್​ಬಿಐ ನಿರ್ಧಾರ; ಸ್ಕೀಮ್ ಅವಧಿ 2 ವರ್ಷ ವಿಸ್ತರಣೆ

ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು ಹೊಂದಿರುವವರು ತಮ್ಮ ಖಾತೆ ಇರುವ ಬ್ಯಾಂಕ್​ಗೆ ಹೋಗಿ ಅದನ್ನು ಜಮೆ ಮಾಡಬಹುದು. ಇಲ್ಲವಾದರೆ ಯಾವುದೇ ಬ್ಯಾಂಕಿಗೆ ಹೋಗಿ ಕೌಂಟರ್​ನಲ್ಲಿ ಬೇರೆ ನೋಟುಗಳೊಂದಿಗೆ ಅದಲುಬದಲು ಮಾಡಿಕೊಳ್ಳಬಹುದು.

ಅಕ್ಟೋಬರ್ 7ರ ನಂತರ 2,000 ರೂ ನೋಟು ಏನಾಗುತ್ತೆ?

2,000 ರೂ ನೋಟುಗಳ ವಿನಿಮಯಕ್ಕೆ ಅಕ್ಟೋಬರ್ 7ರವರೆಗೂ ಅವಕಾಶ ಇದೆ. ಅದಾದ ಬಳಿಕ 2,000 ರೂ ನೋಟು ಅಮಾನ್ಯಗೊಳ್ಳುವುದಿಲ್ಲ. ಆರ್​ಬಿಐ ನಿರ್ದಿಷ್ಟಪಡಿಸಿದ 19 ಬ್ಯಾಂಕ್ ಕಚೇರಿಗಳಲ್ಲಿ ನಿರ್ಬಂಧಿತ ಪ್ರಮಾಣದಲ್ಲಿ 2,000 ರೂ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು ಎಂದು ಇತ್ತೀಚೆಗೆ ಆರ್​ಬಿಐ ತಿಳಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ