ವಿದೇಶಗಳಿಗೆ ರಫ್ತಾಗುತ್ತಿದ್ದ ಕೆಮ್ಮಿನ ಸಿರಪ್ಗಳಲ್ಲಿ ಅಪಾಯಕಾರಿ ರಾಸಾಯನಿಕಗಳು ಪತ್ತೆ; ಗುಜರಾತ್, ತಮಿಳುನಾಡಿನ ಔಷಧ ಘಟಕಗಳು ಸ್ಥಗಿತ
Substandard Cough Syrup Found In Gujarat and Tamil Nadu: ತಮಿಳುನಾಡು ಮತ್ತು ಗುಜರಾತ್‌ನ ಎರಡು ಔಷಧ ಕಂಪನಿಗಳ ಕೆಮ್ಮಿನ ಸಿರಪ್ ಮತ್ತು ಅಲರ್ಜಿ ನಿವಾರಕ ಸಿರಪ್ಗಳಲ್ಲಿ ಅಪಾಯಕಾರಿ ರಾಸಾಯನಿಕ ಅಂಶಗಳು ಕಂಡುಬಂದಿವೆ. ಸರ್ಕಾರದ ವರದಿಯಲ್ಲಿ ಈ ಬೆಚ್ಚಿಬೀಳಿಸುವ ಅಂಶ ಹೊರಬಿದ್ದಿದೆ. ಗುಜರಾತ್‌ನ ಅಂಕಲೇಶ್ವರದಲ್ಲಿರುವ ನಾರಿಸ್ ಮೆಡಿಸಿನ್ಸ್ನ ಘಟಕ ಹಾಗು ತಮಿಳುನಾಡಿನ ಫೋರ್ಟೆಸ್ ಲ್ಯಾಬ್ನ ಘಟಕಗಳನ್ನು ಮುಚ್ಚಲು ತಿಳಿಸಲಾಗಿದೆ.
ಅಹ್ಮದಾಬಾದ್, ಅಕ್ಟೋಬರ್ 6: ತಮಿಳುನಾಡು ಮತ್ತು ಗುಜರಾತ್‌ನ ಪ್ರಸಿದ್ಧ ಔಷಧ ಕಂಪನಿಗಳು ತಯಾರಿಸಿದ ಕೆಲ ಕೆಮ್ಮಿನ ಸಿರಪ್ಗಳಲ್ಲಿ ಅಪಾಯಕಾರಿ ರಾಸಾಯನಿಕ ಅಂಶಗಳು (ವಿಷಕಾರಿ) ಕಂಡುಬಂದಿವೆ. ಸರ್ಕಾರಿ ವರದಿಯಲ್ಲಿ ಈ ಆಘಾತಕಾರಿ ಅಂಶ ಹೊರಬಿದ್ದಿದೆ. ಗುಜರಾತ್‌ನ ಅಂಕಲೇಶ್ವರದಲ್ಲಿರುವ ನಾರಿಸ್ ಮೆಡಿಸಿನ್ಸ್ ಕಂಪನಿಯ ಘಟಕ ಹಾಗು ತಮಿಳುನಾಡಿನಲ್ಲಿ ಮತ್ತೊಂದು ಕಂಪನಿಯ ಘಟಕದಲ್ಲಿ ತಯಾರಾದ ಕೆಮ್ಮಿನ ಸಿರಪ್ಗಳು ಕಳಪೆಯಾಗಿರುವುದು ದೃಢಪಟ್ಟಿದೆ. ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ಈ ಬಗ್ಗೆ ಮಾಹಿತಿ ಇದೆ.
ನಾರಿಸ್ ಮೆಡಿಸಿನ್ಸ್ ಕಂಪನಿಯ 1,166 ಕೆಮ್ಮಿನ ಸಿರಪ್ಗಳನ್ನು ಆಯ್ದುಕೊಂಡು ಆಗಸ್ಟ್ನಲ್ಲಿ ಸಿಡಿಎಸ್ಸಿಒ ಪರೀಕ್ಷೆ ನಡೆಸಿತ್ತು. ಈ ಪೈಕಿ 48 ಸ್ಯಾಂಪಲ್ಗಳಲ್ಲಿ ಡೈ ಎಥಿಲಿನ್ ಗ್ಲೈಕೋಲ್ (Diethylene glycol) ಮತ್ತು ಎಥಿಲಿನ್ ಗ್ಲೈಕೋಲ್ (ethylene glycol) ರಾಸಾಯನಿಕಗಳು ಅಪಾಯಕಾರಿ ಪ್ರಮಾಣದಲ್ಲಿ ಇರುವುದು ಪತ್ತೆಯಾಗಿದೆ.
ಗುಜರಾತ್‌ನ ಭರೂಚ್ ಜಿಲ್ಲೆಯ ಅಂಕಲೇಶ್ವರದಲ್ಲಿರುವ ನಾರಿಸ್ ಮೆಡಿಸಿನ್ಸ್ನ (Norris Medicines) ಘಟಕದಲ್ಲಿ ಸಿರಪ್ ಉತ್ಪಾದನೆ ನಿಲ್ಲಿಸಲು ಸೆಪ್ಟೆಂಬರ್ ತಿಂಗಳಲ್ಲೇ ತಿಳಿಸಲಾಗಿತ್ತು. ಇದೀಗ ಅಲ್ಲಿ ಉತ್ಪಾದನೆ ನಿಂತಿದೆ.
ಇದನ್ನೂ ಓದಿ: ಪಿಐಡಿ ಫಂಡ್ ಸ್ಕೀಮ್ ಅಡಿಯಲ್ಲಿ ಪಿಎಂ ವಿಶ್ವಕರ್ಮ ಯೋಜನೆ ಒಳಗೊಳ್ಳಲು ಆರ್ಬಿಐ ನಿರ್ಧಾರ; ಸ್ಕೀಮ್ ಅವಧಿ 2 ವರ್ಷ ವಿಸ್ತರಣೆ
ಇನ್ನು, ತಮಿಳುನಾಡಿನ ಔಷಧ ಕಂಪನಿಯೊಂದರ ಕೋಲ್ಡ್ ಸಿರಪ್‌ನ ಮೂರು ಬ್ಯಾಚ್‌ಗಳ ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲೂ ಡೈ ಎಥಿಲಿನ್ ಗ್ಲೈಕೋಲ್ ಮತ್ತು ಎಥಿಲಿನ್ ಗ್ಲೈಕೋಲ್ ರಾಸಾಯನಿಕಗಳು ಇರುವುದು ಬೆಳಕಿಗೆ ಬಂದಿತ್ತು.
ಕಳೆದ ತಿಂಗಳು ನಾರಿಸ್ ಮೆಡಿಸಿನ್ಸ್ ಲಿಮಿಟೆಡ್ನ ಔಷಧ ತಪಾಸಣೆ ವೇಳೆ ವಿಷಕಾರಿ ರಾಸಾಯನಿಕಗಳು ಪತ್ತೆಯಾಗಿವೆ. ನಾರ್ರಿಸ್ ಕಾರ್ಖಾನೆಯನ್ನು ಪರಿಶೀಲಿಸಿ ಉತ್ಪಾದನೆಯನ್ನು ಸ್ಥಗಿತಗೊಳಿಸುವಂತೆ ಮತ್ತು ಔಷಧಗಳನ್ನು ಹಿಂಪಡೆಯುವಂತೆ ಆದೇಶ ನೀಡಿರುವುದಾಗಿ ಗುಜರಾತ್ ರಾಜ್ಯ ಆಹಾರ ಮತ್ತು ಔಷಧ ನಿಯಂತ್ರಣ ಆಡಳಿತ ಆಯುಕ್ತ ಎಚ್.ಜಿ.ಕೋಶಿಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗುಣಮಟ್ಟದ ಪರೀಕ್ಷೆಯಲ್ಲಿ 48 ಔಷಧಿಗಳು ವಿಫಲ
ಗ್ಯಾಂಬಿಯಾ, ಉಜ್ಬೇಕಿಸ್ತಾನ್ ಮತ್ತು ಕ್ಯಾಮರೂನ್‌ನಲ್ಲಿ ಎಥಿಲೀನ್ ಗ್ಲೈಕೋಲ್ ಮತ್ತು ಡೈಎಥಿಲೀನ್ ಗ್ಲೈಕೋಲ್ ಅಂಶಗಳಿರುವ ಸಿರಪ್ ಸೇವನೆಯಿಂದ ಮಕ್ಕಳು ಸಾಯುತ್ತಿರುವ ಬಗ್ಗೆ ಹಿಂದೆ ವರದಿಗಳು ಬಂದಿರುವುದುಂಟು. ಇದರ ಬೆನ್ನಲ್ಲೇ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ (CDSCO) ಆಗಸ್ಟ್ ನಲ್ಲಿ ಒಟ್ಟು 1,166 ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ 48 ಔಷಧ ಮಾದರಿಗಳು ಗುಣಮಟ್ಟದಿಂದ ಕೂಡಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಸಹಕಾರಿ ಬ್ಯಾಂಕುಗಳಲ್ಲಿ ಚಿನ್ನದ ಮೇಲಿನ ಸಾಲದ ಮಿತಿ 4 ಲಕ್ಷಕ್ಕೆ ಹೆಚ್ಚಳ; ಆರ್ಬಿಐ ಮಹತ್ವದ ನಿರ್ಧಾರ
ತಮಿಳುನಾಡಿನ ಫೋರ್ಟೆಸ್ ಲ್ಯಾಬ್ನ ಕೆಮ್ಮಿನ ಸಿರಪ್
ಇದಲ್ಲದೆ, CDSCO ತಮಿಳುನಾಡಿನ ಫೋರ್ಟೆಸ್ ಲ್ಯಾಬೋರೇಟರೀಸ್ ತಯಾರಿಸಿದ ಕೋಲ್ಡ್ ಸಿರಪ್‌ನ ಮೂರು ಬ್ಯಾಚ್‌ಗಳ ವಿರುದ್ಧವೂ ಕ್ರಮ ಕೈಗೊಂಡಿದೆ. ಇರಾಕ್‌ನಲ್ಲಿ ಮಾರಾಟವಾಗುವ ಕೋಲ್ಡ್ ಔಟ್‌ಗಳ ಬ್ಯಾಚ್‌ಗಳು ಸ್ವೀಕಾರಾರ್ಹವಲ್ಲದ ಮಟ್ಟದ DEG ಮತ್ತು EG ಅನ್ನು ಒಳಗೊಂಡಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ