Pay without Internet: ಮೊಬೈಲ್ಗೆ *99# ಸೆಟಪ್ ಮಾಡಿ; ಇಂಟರ್ನೆಟ್ ಇಲ್ಲದೇ ಹಣ ಪಾವತಿಸಿ; ಇದನ್ನು ಬಳಸುವುದು ಹೇಗೆ? ಇಲ್ಲಿದೆ ವಿವರ
*99# Offline Feature For UPI Payment: ಇಂಟರ್ನೆಟ್ ಇಲ್ಲದೇ ಹಣ ಪಾವತಿಸಲು ಸಾಧ್ಯವಾಗಿಸುವ ಯುಪಿಐ ವ್ಯಾಲಟ್, ಯುಪಿಐ ಲೈಟ್ ಫೀಚರ್ಗಳು ಬಂದಿವೆ. ಹಾಗೆಯೇ, *99# ಅನ್ನು ಮೊಬೈಲ್ಗೆ ಸೆಟಪ್ ಮಾಡುವ ಮೂಲಕ ಆಫ್ಲೈನ್ನಲ್ಲೂ ಯುಪಿಐ ಪೇಮೆಂಟ್ ಮಾಡಲು ಸಾಧ್ಯವಾಗುತ್ತದೆ.
ಈಗಂತೂ ಭಾರತದಲ್ಲಿ ಪೇಮೆಂಟ್ ಕ್ರಾಂತಿ ಅಗಿದೆ. ಯುಪಿಐ ವ್ಯವಸ್ಥೆ ಬಂದ ಬಳಿಕ ಪಾವತಿ ಪ್ರಕ್ರಿಯೆ ಬಹಳ ಯೂಸರ್ ಫ್ರೆಂಡ್ಲಿ ಮತ್ತು ವೇಗಗೊಂಡಿದೆ. ಜನರು ಕೈಯಲ್ಲಿ ಕ್ಯಾಷ್ ಇಲ್ಲದೇ ವಹಿವಾಟು ನಡೆಸುವುದು ಸುಲಭವಾಗಿದೆ. ಆದರೆ, ಪೇಮೆಂಟ್ ಆ್ಯಪ್ಗಳ ಮೂಲಕ ಹಣ ಪಾವತಿ ಮಾಡುವುದಕ್ಕೆ ಇಂಟರ್ನೆಟ್ ಬೇಕಾಗುತ್ತದೆ. ಪೇಟಿಎಂ, ಫೋನ್ ಪೇ ಮೊದಲಾದ ಯುಪಿಐ ಆ್ಯಪ್ಗಳಲ್ಲಿ ವ್ಯಾಲಟ್ ಸೌಲಭ್ಯ (UPI Wallet) ಇರುತ್ತದೆ. ಈ ವ್ಯಾಲಟ್ಗಳಿಂದ ಆಫ್ಲೈನ್ನಲ್ಲೂ ಪೇಮೆಂಟ್ ಮಾಡಬಹುದು. ಅಂದರೆ ಇಂಟರ್ನೆಟ್ ಇಲ್ಲದೆಯೂ ಈ ವ್ಯಾಲಟ್ಗಳು ಕೆಲಸ ಮಾಡುತ್ತವೆ. ಇದರ ಜೊತೆಗೆ ಯುಪಿಐ ಲೈಟ್ (UPI Lite) ಎಂಬ ಕಿರುಮೊತ್ತದ ಪಾವತಿ ಫೀಚರ್ ಬಂದಿದೆ. ಇದು ಬಹುತೇಕ ವ್ಯಾಲಟ್ ರೀತಿಯದ್ದೇ ಆಗಿದೆ. ಒಂದು ಪಾವತಿಗೆ ಗರಿಷ್ಠಮಿತಿ 200 ರೂ. ಇದು ಎರಡು ತಿಂಗಳ ಹಿಂದೆ ಬಿಡುಗಡೆ ಆದ ಫೀಚರ್. ಇದರ ಜೊತೆಗೆ ಆಫ್ಲೈನ್ನಲ್ಲಿ ಹಣ ಪಾವತಿ ಮಾಡಲು *99# ಸರ್ವಿಸ್ ಕೂಡ ಇದೆ. ಈ ಬಗ್ಗೆ ಒಂದು ಮಾಹಿತಿ ಇಲ್ಲಿದೆ.
*99# ಎಂಬುದು ಯುಎಸ್ಎಸ್ಡಿ ತಂತ್ರಜ್ಞಾನ ಆಧಾರಿತ ಮೊಬೈಲ್ ಬ್ಯಾಂಕಿಂಗ್ (USSD Based Mobile Banking) ಸೇವೆಯಾಗಿದೆ. ಇದರ ಮೂಲಕ ಇಂಟರ್ನೆಟ್ ಇಲ್ಲದೇ ಕೇವಲ ಮೊಬೈಲ್ ನೆಟ್ವರ್ಕ್ ಬಳಸಿ ಹಣ ಪಾವತಿ ಮಾಡಲು ಸಾಧ್ಯ. ಬ್ಯಾಂಕ್ ಅಕೌಂಟ್ ಬ್ಯಾಲನ್ಸ್ ಪರಿಶೀಲಿಸುವುದು, ಯುಪಿಐ ಪಿನ್ ಬದಲಿಸುವುದು ಇವೇ ಮುಂತಾದ ಕೆಲಸ ಮಾಡಬಹುದು.
ಈ ಮೊಬೈಲ್ ಬ್ಯಾಂಕಿಂಗ್ನ ಸ್ಪೆಷಲ್ ಫೀಚರ್ ದೇಶದ ಎಲ್ಲೆಡೆ ಲಭ್ಯ ಇದೆ. ಎಲ್ಲಾ ಪ್ರಮುಖ ಬ್ಯಾಂಕುಗಳು ಈ ಸೇವೆಗೆ ಲಭ್ಯ ಇವೆ. ಕನ್ನಡವೂ ಸೇರಿದಂತೆ 13 ಭಾಷೆಗಳಲ್ಲಿ ಈ ಸೇವೆ ಪಡೆಯಬಹುದು. ಈ ಫೀಚರ್ ಪಡೆಯಲು ಸ್ಮಾರ್ಟ್ಫೋನ್ ಅಗಲೇಬೇಕೆಂದಿಲ್ಲ, ಫೀಚರ್ ಫೋನಾದರೂ ಇದು ಸಾಧ್ಯ.
*99# ಸೇವೆ ಮೊಬೈಲ್ಗೆ ಸೆಟಪ್ ಮಾಡುವ ವಿಧಾನ
- ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಫೋನ್ ನಂಬರ್ ಇರುವ ಮೊಬೈಲ್ನಿಂದ *99# ಅನ್ನು ಡಯಲ್ ಮಾಡಿರಿ.
- ನಿಮಗೆ ಬೇಕಾದ ಭಾಷೆ ಆಯ್ದುಕೊಳ್ಳಿ
- ನಿಮ್ಮ ಮೊಬೈಲ್ ನಂಬರ್ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗಳ ಪಟ್ಟಿ ಕಾಣುತ್ತದೆ.
- ನೀವು ಯಾವ ಖಾತೆಯಿಂದ ವಹಿವಾಟು ನಡೆಸಬೇಕೋ ಅದನ್ನು ಆಯ್ದುಕೊಳ್ಳಿ
- ಬಳಿಕ ಆ ಬ್ಯಾಂಕ್ನ ನಿಮ್ಮ ಡೆಬಿಟ್ ಕಾರ್ಡ್ನ ಕೊನೆಯ 6 ಅಂಕಿಗಳು ಹಾಗೂ ಅದರ ಎಕ್ಸ್ಪಿರಿ ಡೇಟ್ ಅನ್ನು ನಮೂದಿಸಿ
ಇದನ್ನೂ ಓದಿ: SBI Rules: ಕ್ಯಾಷ್ಬ್ಯಾಕ್ ಸರ್ವಿಸ್: ಎಸ್ಬಿಐನ ವಿವಿಧ ಕ್ರೆಡಿಟ್ ಕಾರ್ಡ್ಗಳಲ್ಲಿ ನಿಯಮಗಳು ಬದಲಾಗಿವೆ; ತಿಳಿದಿರಲಿ
*99# ಮೂಲಕ ಹಣ ಪಾವತಿ ಮಾಡುವ ವಿಧಾನ
ನಿಮ್ಮ ಮೊಬೈಲ್ಗೆ *99# ಫೀಚರ್ ಅನ್ನು ಸೆಟಪ್ ಮಾಡಿದ ಬಳಿಕ ನೀವು ಇಂಟರ್ನೆಟ್ ಕನೆಕ್ಷನ್ ಇಲ್ಲದೇ ಯುಪಿಐ ಪೇಮೆಂಟ್ ಮಾಡಬಹುದು. ಅದರ ವಿಧಾನ ಇಲ್ಲಿದೆ:
- ನಿಮ್ಮ ಮೊಬೈಲ್ನಿಂದ *99# ಡಯಲ್ ಮಾಡಿ.
- ಅಲ್ಲಿ ಕೇಳಲಾಗುವ ನಂಬರ್ಗಳಲ್ಲಿ 1 ಅನ್ನು ಆಯ್ದುಕೊಳ್ಳಿ.
- ನೀವು ಹಣ ಕಳುಹಿಸಬೇಕೆಂದಿದ್ದರೆ ಅದನ್ನೇ ಆಯ್ದುಕೊಳ್ಳಿ.
- ನೀವು ಹಣ ಕಳುಹಿಸಬೇಕಿರುವ ವ್ಯಕ್ತಿಯ ಯುಪಿಐ ಐಡಿ ಅಥವಾ ಫೋನ್ ನಂಬರ್ ಅಥವಾ ಬ್ಯಾಂಕ್ ಅಕೌಂಟ್ ನಂಬರ್ ಅನ್ನು ನಮೂದಿಸಿ.
- ಬಳಿಕ ಎಷ್ಟು ಹಣ ಎಂದು ನಮೂದಿಸಿ ಯುಪಿಐ ಪಿನ್ ಹಾಕಿ.
ಇಷ್ಟಾದರೆ ನಿಮ್ಮ ಮೊಬೈಲ್ನಿಂದ ಇಂಟರ್ನೆಟ್ ಇಲ್ಲದೇ ಯುಪಿಐ ಪೇಮೆಂಟ್ ಮಾಡಿದಂತಾಗುತ್ತದೆ. ಈ ಸೇವೆ ಉಚಿತವಲ್ಲ ಎಂಬುದು ಗೊತ್ತಿರಲಿ. ಒಂದು ವಹಿವಾಟಿಗೆ 50 ಪೈಸೆ ಶುಲ್ಕ ಇರುತ್ತದೆ. ಹಾಗೆಯೇ, ಈ ವ್ಯವಸ್ಥೆ ಮೂಲಕ ನೀವು ಹಣ ಕಳುಹಿಸುವುದಾದರೆ ಒಂದು ವಹಿವಾಟಿಗೆ ಗರಿಷ್ಠ ಮಿತಿ 5,000 ರೂ ಇದೆ.