How Scams Work?: ನಕಲಿ ರಿವ್ಯೂ ಬರೆಯಿಸಿ ಹಣವನ್ನೂ ಕೊಟ್ಟು ಖೆಡ್ಡಾ ತೋಡುವ ವಂಚಕರು; ನಿತಿನ್ ಕಾಮತ್ ಬಿಚ್ಚಿಟ್ಟ ಭಯಾನಕ ಕ್ರಿಪ್ಟೋ ವೃತ್ತಾಂತ

Zerodha CEO Nithin Kamath Reveals Online Fraud: ಹೆಸರಾಂತ ಸ್ಟಾಕ್ ಟ್ರೇಡರ್ ಝೀರೋಧ ಮುಖ್ಯಸ್ಥ ನಿತಿನ್ ಕಾಮತ್ ಇದೀಗ ಇಂಥದ್ದೇ ರೀತಿಯ ವಂಚನೆಯ ಘಟನೆಯನ್ನು ಬಹಿರಂಗಪಡಿಸಿದ್ದಾರೆ. ತಮಗೆ ಪರಿಚಿತರೊಬ್ಬರು 5 ಲಕ್ಷ ರೂ ಹೇಗೆ ಕಳೆದುಕೊಂಡರು ಎಂಬುದನ್ನು ಕಾಮತ್ ವಿವರಿಸಿದ್ದಾರೆ.

How Scams Work?: ನಕಲಿ ರಿವ್ಯೂ ಬರೆಯಿಸಿ ಹಣವನ್ನೂ ಕೊಟ್ಟು ಖೆಡ್ಡಾ ತೋಡುವ ವಂಚಕರು; ನಿತಿನ್ ಕಾಮತ್ ಬಿಚ್ಚಿಟ್ಟ ಭಯಾನಕ ಕ್ರಿಪ್ಟೋ ವೃತ್ತಾಂತ
ಆನ್​ಲೈನ್ ಸ್ಕ್ಯಾಮ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 04, 2023 | 1:42 PM

ಬೆಂಗಳೂರು: ಇತ್ತೀಚೆಗೆ ಆನ್​ಲೈನ್​ನಲ್ಲಿ ವಂಚಕರ (Online Fraudsters) ಹಾವಳಿ ವಿಪರೀತ ಆಗಿದೆ. ಹಣ ಸಂಪಾದನೆಯ ಒತ್ತಡಕ್ಕೆ ಸಿಲುಕಿದ ಜನರನ್ನು ವಂಚಕರು ಸುಲಭವಾಗಿ ಏಮಾರಿಸುತ್ತಿದ್ದಾರೆ. ವಂಚಕರ ಗಾಳಕ್ಕೆ ಸಿಕ್ಕು ಜನರು ಲಕ್ಷ ಲಕ್ಷ ಹಣ ಕಳೆದುಕೊಂಡ ಘಟನೆಗಳು ಬಹಳಷ್ಟು ಕಡೆ ಬೆಳಕಿಗೆ ಬರುತ್ತಲೇ ಇರುತ್ತವೆ. ಮಾಧ್ಯಮಗಳಲ್ಲೂ ವರದಿಯಾಗುತ್ತಿರುತ್ತವೆ. ಆದರೂ ಇಂಥ ಘಟನೆಗಳು ನಿಲ್ಲುವುದೇ ಇಲ್ಲ. ಹಣ ಸಂಪಾದನೆಯ ದಾರಿ ತೋರಿಸುತ್ತೇವೆ ಎಂದು ಜನರನ್ನು ಮಂಗ ಮಾಡುವ ದುಷ್ಕರ್ಮಿಗಳ ಸಂಖ್ಯೆಯೂ ಕಡಿಮೆ ಆಗಿಲ್ಲ. ಈಗಂತೂ ಜನರಿಗೆ ಟ್ರೆಂಡಿಂಗ್ ಎನಿಸಿರುವ ಕ್ರಿಪ್ಟೋಕರೆನ್ಸಿ ಹೆಸರಿನಲ್ಲಂತೂ ಮೋಸ ದಗಾ ಹೆಚ್ಚೆಚ್ಚು ನಡೆಯುತ್ತಿವೆ. ಕಳೆದ ತಿಂಗಳು ಪುಣೆಯ ಮಹಿಳೆಯೊಬ್ಬರು ಕ್ರಿಪ್ಟೋ ಗ್ಯಾಂಗ್​ನ ಗಾಳಕ್ಕೆ ಬಿದ್ದು 24 ಲಕ್ಷ ರೂ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿತ್ತು. ಹೆಸರಾಂತ ಸ್ಟಾಕ್ ಟ್ರೇಡರ್ ಝೀರೋಧ ಮುಖ್ಯಸ್ಥ ನಿತಿನ್ ಕಾಮತ್ (Zerodha CEO Nithin Kamath) ಇದೀಗ ಇಂಥದ್ದೇ ರೀತಿಯ ವಂಚನೆಯ ಘಟನೆಯನ್ನು ಬಹಿರಂಗಪಡಿಸಿದ್ದಾರೆ. ತಮಗೆ ಪರಿಚಿತರೊಬ್ಬರು 5 ಲಕ್ಷ ರೂ ಹೇಗೆ ಕಳೆದುಕೊಂಡರು ಎಂಬುದನ್ನು ಕಾಮತ್ ವಿವರಿಸಿದ್ದಾರೆ.

ನಕಲಿ ರಿವ್ಯೂ ಬರೆಯಿಸಿ ಹಣವನ್ನೂ ಕೊಟ್ಟು ಬಲೆ ಕಟ್ಟಲು ಆರಂಭಿಸಿದ ದುಷ್ಕರ್ಮಿಗಳು

ನಿತಿನ್ ಕಾಮತ್ ತಮ್ಮ ಪರಿಚಿತರಿಗಾದ ವಂಚನೆ ಬಗ್ಗೆ ಸರಣಿ ಟ್ವೀಟ್​ಗಳನ್ನು ಮಾಡಿ, ಘಟನೆಯ ಇಂಚಿಂಚು ವಿವರವನ್ನೂ ನೀಡಿದ್ದಾರೆ. ಮೊದಲಿಗೆ ಈ ವ್ಯಕ್ತಿಗೆ ವಾಟ್ಸಾಪ್​ನಲ್ಲಿ ಪಾರ್ಟ್ ಟೈಮ್ ಕೆಲಸದ ಆಫರ್ ಬಂದಿದೆ. ಇದೇನು ಎಂದು ವಿಚಾರಿಸಿದಾಗ ಪೆರು ಇತ್ಯಾದಿ ಯಾವ್ಯಾವುದೋ ದೇಶಗಳ ಯಾವ್ಯಾವುದೋ ಸ್ಥಳದಲ್ಲಿರುವ ರೆಸಾರ್ಟ್, ರೆಸ್ಟೋರೆಂಟ್ ಇತ್ಯಾದಿಗಳಿಗೆ ನಕಲಿ ರಿವ್ಯೂ (Fake Review) ಬರೆಯುವ ಕೆಲಸ ಇದು ಎಂದು ತಿಳಿಸಲಾಯಿತು. ಅದೇನು ಮಹಾ ಎಂದು ಇವರು ಅ ಕೆಲಸ ಮಾಡಿದ್ದಾರೆ. ಅಚ್ಚರಿ ಎಂದರೆ 30,000 ರೂ ಹಣ ಇವರ ಬ್ಯಾಂಕ್ ಖಾತೆಗೆ ಜಮೆ ಆಗಿದೆ.

ಇದನ್ನೂ ಓದಿ: Cognizant Layoffs: ಆಗ ಅಕ್ಸೆಂಚರ್​ನಲ್ಲಿ 19 ಸಾವಿರ, ಈಗ ಕಾಗ್ನಿಜೆಂಟ್​ನಲ್ಲಿ 3,500 ಉದ್ಯೋಗಿಗಳ ಲೇ ಆಫ್

ಬಳಿಕ ಒಂದು ಟೆಲಿಗ್ರಾಂ ಗ್ರೂಪ್​ಗೆ ಇವರನ್ನು ಸೇರಿಸಲಾಗಿದೆ. ಈ ಗ್ರೂಪ್​ನಲ್ಲಿರುವವರು ನಕಲಿ ಕ್ರಿಪ್ಟೋ ಪ್ಲಾಟ್​ಫಾರ್ಮ್​ನಲ್ಲಿ ಒಂದಷ್ಟು ನಿಯಮಗಳ ಪ್ರಕಾರ ಟ್ರೇಡಿಂಗ್ ಮಾಡಬೇಕು. ಅಲ್ಲಿ ಬಂದ ಲಾಭವನ್ನು ಹಿಂಪಡೆದುಕೊಳ್ಳಬಹುದು. ಅಚ್ಚರಿ ಎಂದರೆ ಈ ಲಾಭದ ಹಣ ನಿಜವಾದ ಹಣವೇ ಆಗಿರುವುದಿಲ್ಲ. ಕ್ರಿಪ್ಟೋ ಟೋಕನ್​ಗಳ ರೂಪದಲ್ಲಿ ಹಣ ಟ್ರಾನ್ಸ್​ಫರ್ ಆಗುತ್ತದೆ.

ನಿತಿನ್ ಕಾಮತ್ ಹೇಳುವ ಪ್ರಕಾರ ಇದು ಬಿಟ್​ಕಾಯಿನ್ ಅಥವಾ ಎದಿರಿಯಮ್ ಇತ್ಯಾದಿ ಚಿರಪರಿಚಿತ ಕ್ರಿಪ್ಟೋಗಳಲ್ಲ. ವಂಚಕರು ತಮ್ಮಿಚ್ಛೆ ಬಂದಂತೆ ಬೆಲೆ ಬದಲಿಸಲು ಸಾಧ್ಯವಾಗುವ ಯಾವುದೋ ಕ್ರಿಪ್ಟೋ ಟೋಕನ್​ಗಳಾಗಿದ್ದವು. ಈಗ ಟೆಲಿಗ್ರಾಂ ಗ್ರೂಪ್​ನಲ್ಲಿದ್ದವರಿಗೆ ನಿಜವಾದ ಹಣ ವರ್ಗಾವಣೆ ಮಾಡಿ ಇನ್ನೂ ಹೆಚ್ಚು ಲಾಭ ಮಾಡಿಕೊಳ್ಳಬಹುದು ಎಂದು ಹೇಳಲಾಗುತ್ತದೆ. ಗ್ರೂಪ್​ನಲ್ಲಿ ಕೆಲವರು ತಾವು ಹಣ ವರ್ಗಾವಣೆ ಮಾಡಿದ್ದೇವೆ ಎಂದು ಹೇಳಿಕೊಂಡು ಬೇರೆಯವರಿಗೂ ಒತ್ತಡ ಹಾಕಿದ್ದಾರೆ.

ಅತಿಯಾಸೆ ಗತಿಕೇಡು..!

ಇದೇ ಪ್ಲಾಟ್​ಫಾರ್ಮ್​ನಲ್ಲಿ ಸಂಪಾದನೆ ಮಾಡಿದ್ದ ಹಣವಲ್ಲವೇ ಎಂದು ಈ ವ್ಯಕ್ತಿ 30 ಸಾವಿರ ರೂ ಹಣವನ್ನು ಟ್ರಾನ್ಸ್​ಫರ್ ಮಾಡಿದ್ದಾರೆ. ಆದರೆ, ಹೆಚ್ಚು ಲಾಭದ ಆಸೆಗೆ ಬಿದ್ದೋ ಅಥವಾ ಗ್ರೂಪ್​ನಲ್ಲಿದ್ದ ಇತರರ ಪ್ರಭಾವಕ್ಕೆ ಬಿದ್ದೋ ಈ ವ್ಯಕ್ತಿ ಇನ್ನಷ್ಟು ಹಣವನ್ನು ಟ್ರಾನ್ಸ್​ಫರ್ ಮಾಡಿದ್ದಾರೆ.

ಇದನ್ನೂ ಓದಿ: Hindenburg Research: ಅದಾನಿ ಆಯ್ತು, ಹಿಂಡನ್ಬರ್ಗ್​ಗೆ ಈಗ ಟಾರ್ಗೆಟ್ ಆದ್ರು ಟ್ರಂಪ್ ಬೆಂಬಲಿಗ ಉದ್ಯಮಿ ಕಾರ್ಲ್ ಐಕಾನ್

ಈಗ ಈ ವ್ಯಕ್ತಿ ತನ್ನ ಲಾಭವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಸಾಧ್ಯವಾಗುವುದಿಲ್ಲ. ಹಣ ವಿತ್​ಡ್ರಾ ಮಾಡಲು ಇಂತಿಷ್ಟು ಸಂಖ್ಯೆಯಲ್ಲಿ ಟ್ರೇಡರ್​ಗಳು ಇರಬೇಕು ಎಂದು ತಿಳಿಸಲಾಗುತ್ತದೆ. ಹಣ ಹಿಂಪಡೆಯಲಾಗುವುದಿಲ್ಲ ಎಂಬ ಭಯದಲ್ಲಿ ಈ ವ್ಯಕ್ತಿ ಇನ್ನಷ್ಟು ಹಣವನ್ನು ತುಂಬಿಸುತ್ತಾರೆ. ಒಟ್ಟು 5 ಲಕ್ಷ ರೂ ಆಗುತ್ತದೆ.

ಇನ್ನಷ್ಟು ಸೇರಿಸಲು ತನ್ನಲ್ಲಿ ಹಣ ಇಲ್ಲ ಎಂದು ಈ ವ್ಯಕ್ತಿ ಹೇಳಿದಾಗ ಸಾಲ ಪಡೆಯುವ ಸಲಹೆ ಬಂದಿತ್ತು. ಕೊನೆಗೆ ಈ ವ್ಯಕ್ತಿ ತನ್ನ ಪತ್ನಿ ಬಳಿ ಘಟನೆಯ ವಿವರ ಹಂಚಿಕೊಂಡಿದ್ದಾರೆ. ಆಕೆಗೆ ಇದು ಫ್ರಾಡ್ ಎಂಬುದು ಅರಿವಾಗುತ್ತದೆ. ಅಂತಿಮವಾಗಿ ಇವರು ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾರೆ.

ಇದನ್ನೂ ಓದಿ: YouTube Money: ಯೂಟ್ಯೂಬ್​ನಿಂದ ಹಣ ಮಾಡುವುದು ಹೇಗೆ? ಕನಿಷ್ಠ ಎಷ್ಟು ವೀಕ್ಷಣೆ ಆಗಬೇಕು? ಮಹತ್ವದ ವಿವರ ಇಲ್ಲಿದೆ

ಪ್ರತಿಯೊಬ್ಬರೂ ಟಾರ್ಗೆಟ್, ಏಳಿ ಎಚ್ಚರಗೊಳ್ಳಿ ಎನ್ನುವ ನಿತಿನ್ ಕಾಮತ್

ಇದು ನಿತಿನ್ ಕಾಮತ್ ವಿವರಿಸಿದ ವಂಚನೆಯ ಕರ್ಮಕಾಂಡ. ಇಂಥ ಹಲವು ಪ್ರಕರಣಗಳನ್ನು ಪೊಲೀಸರು ಬಹಿರಂಗಪಡಿಸಿದ್ದರೂ ಚೆನ್ನಾಗಿ ಓದಿಕೊಂಡ ಜನರೂ ಇಂಥ ಸ್ಕ್ಯಾಮ್​ಗಳಿಗೆ ಬಲಿಯಾಗಿ ತಮ್ಮ ಅಮೂಲ್ಯ ಸಂಪಾದನೆಯ ಲಕ್ಷ ಲಕ್ಷ ಹಣ ಕಳೆದುಕೊಳ್ಳುತ್ತಿದ್ದಾರೆ ಎಂದು ಝೀರೋಧ ಸಂಸ್ಥೆಯ ಮುಖ್ಯಸ್ಥ ತಮ್ಮ ಟ್ವೀಟ್​ನಲ್ಲಿ ವಿಷಾದಿಸಿದ್ದಾರೆ.

ಪ್ರತಿಯೊಬ್ಬರೂ ಟಾರ್ಗೆಟ್ ಆಗಿದ್ದಾರೆ. ನಾವು ಜಾಗೃತಿ ಮೂಡಿಸಬೇಕಿದೆ. ಬಹಳ ಮುಖ್ಯ ಸಂಗತಿ ಎಂದರೆ ದೊಡ್ಡ ಪ್ರಮಾಣದಲ್ಲಿ ಹಣ ಸಂಪಾದನೆ ಮಾಡಲು ಯಾವ ಸುಲಭ ದಾರಿಯೂ ಇಲ್ಲ ಎಂಬುದು ನಮಗೆ ಚೆನ್ನಾಗಿ ಗೊತ್ತಿರಲಿ ಎಂದು ನಿತಿನ್ ಕಾಮತ್ ತಮ್ಮ ಟ್ವೀಟ್​ನ ಕೊನೆಯಲ್ಲಿ ಸಲಹೆ ನೀಡಿದ್ದಾರೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ