ಬೆಂಗಳೂರು: ಕೋಲಾರದ ನರಸಾಪುರದಲ್ಲಿರುವ ವಿಸ್ಟ್ರಾನ್ ಘಟಕ (Wistron) ಇತ್ತೀಚೆಗೆ ಮತ್ತೆ ಸುದ್ದಿಯಲ್ಲಿತ್ತು. ಅಲ್ಲಿನ ಕಾರ್ಮಿಕರು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿರುವ ಸುದ್ದಿ ರಾಚಿ ಬಂದಿತ್ತು. 2020ರಲ್ಲೂ ಇಲ್ಲಿ ಕಾರ್ಮಿಕ ಗಲಾಟೆಯಿಂದ ಕೋಟ್ಯಂತರ ರೂ ಹಾನಿಯಾಗಿತ್ತು. ಇದೀಗ ವಿಸ್ಟ್ರಾನ್ ಘಟಕವನ್ನು ಟಾಟಾ ಸಂಸ್ಥೆ ಖರೀದಿಸಿ, ಆಡಳಿತ ವ್ಯವಹಾರವನ್ನು ಸುಪರ್ದಿಗೆ ತೆಗೆದುಕೊಂಡಿದೆ. ಇದೇ ಹೊತ್ತಲ್ಲಿ, ಆ್ಯಪಲ್ ಕಂಪನಿಯ ಮೂರು ಸರಬರಾಜುದಾರರಲ್ಲಿ ಒಂದೆನಿಸಿದ ವಿಸ್ಟ್ರಾನ್ ಇದೀಗ ಭಾರತದಲ್ಲಿನ ತನ್ನ ಎಲ್ಲಾ ಚಟುವಟಿಕೆಯನ್ನು ಬಂದ್ ಮಾಡಿದೆ. ಐಫೋನ್ ತಯಾರಿಕೆಯನ್ನು (iPhone Manufacturing) ನಿಲ್ಲಿಸಿದೆ. ಕೋಲಾರದ ವಿಸ್ಟ್ರಾನ್ ಘಟಕದಲ್ಲಿ ಕಾರ್ಮಿಕರ ಗಲಾಟೆ ನಡೆದದ್ದಕ್ಕೂ ವಿಸ್ಟ್ರಾನ್ ದೇಶಬಿಟ್ಟು ಹೋಗುತ್ತಿರುವುದಕ್ಕೂ ಸಂಬಂಧ ಇದೆಯಾ? ನೇರ ಸಂಬಂಧ ಇಲ್ಲದಿದ್ದರೂ ಪರೋಕ್ಷವಾಗಿ ಈ ಘಟನೆಯು ವಿಸ್ಟ್ರಾನ್ ಹೊರಬೀಳಲು ಇರುವ ಕಾರಣಗಳಲ್ಲಿ ಒಂದಾಗಿದೆ.
ಮೇಲೆ ಹೇಳಿದ ಹಾಗೆ ಕಾರ್ಮಿಕರ ಗಲಾಟೆಯು ಪರೋಕ್ಷವಾಗಿ ವಿಸ್ಟ್ರಾನ್ ಎಕ್ಸಿಟ್ಗೆ ಒಂದು ಕಾರಣವಾಗಿದೆ. ಚೀನಾ ಮತ್ತು ಭಾರತದಲ್ಲಿನ ಕೆಲಸದ ವಾತಾವರಣ ಭಿನ್ನವಾಗಿದೆ. ಚೀನಾದಲ್ಲಿ ಐಫೋನ್ ಘಟಕಗಳನ್ನು ಹೊಂದಿರುವ ವಿಸ್ಟ್ರಾನ್ ಅದೇ ರೀತಿಯ ಕೆಲಸದ ನಿಯಮಗಳನ್ನು ಕೋಲಾರದ ಘಟಕದಲ್ಲಿ ತರಲು ಯತ್ನಿಸಿತೆನ್ನಲಾಗಿದೆ. ಇದು ಇಲ್ಲಿ ಕಾರ್ಮಿಕರ ಅಸಮಾಧಾನಕ್ಕೆ ಕಾರಣವಾಯಿತು. ಹೆಚ್ಚು ವೇತನ ಕೊಡದೆ ಹೆಚ್ಚು ಅವಧಿ ದುಡಿಸಿಕೊಳ್ಳಲಾಗುತ್ತಿತ್ತು ಎಂಬ ಗಂಭೀರ ಆರೋಪ ವಿಸ್ಟ್ರಾನ್ ಆಡಳಿತದ ಮೇಲಿತ್ತು.
ಇದರ ಜೊತೆಗೆ ಕಾರ್ಮಿಕರು ಅಥವಾ ಉದ್ಯೋಗಿಗಳನ್ನು ಹಿಡಿದಿಟ್ಟುಕೊಳ್ಳಲು ವಿಸ್ಟ್ರಾನ್ ಮ್ಯಾನೇಜ್ಮೆಂಟ್ ವಿಫಲವಾಗಿತ್ತು. ಬಹಳ ಮಂದಿ ಉದ್ಯೋಗಿಗಳು ಕೆಲಸ ಬಿಟ್ಟುಹೋಗುತ್ತಿದ್ದರು. ಇದರಿಂದ ಐಫೋನ್ ತಯಾರಿಕೆ ಕಾರ್ಯ ವಿಳಂಬವಾಗುತ್ತಿತ್ತು ಎನ್ನಲಾಗುತ್ತಿದೆ.
ಐಫೋನ್ಗಳ ಇತರೆ ತಯಾರಕರಾದ ಫಾಕ್ಸ್ಕಾನ್, ಪೆಗಾಟ್ರಾನ್ಗೆ ಹೋಲಿಸಿದರೆ ವಿಸ್ಟ್ರಾನ್ ಸಣ್ಣ ಕಂಪನಿ. ಇದು ವಿಸ್ಟ್ರಾನ್ಗೆ ಹಿನ್ನಡೆ ತಂದಿತ್ತು. ಮೇಲಾಗಿ ಭಾರತದಲ್ಲಿ ಆ್ಯಪಲ್ ಕಂಪನಿಯ ಉತ್ಪನ್ನಗಳ ತಯಾರಿಕೆಯಿಂದ ವಿಸ್ಟ್ರಾನ್ಗೆ ಯಾವ ಲಾಭವೂ ಆಗುತ್ತಿರಲಿಲ್ಲ. ಉತ್ಪನ್ನಗಳಿಗೆ ಹೆಚ್ಚಿನ ಮಾರ್ಜಿನ್ ಕೊಡುವಂತೆ ಅದು ಮಾಡಿಕೊಂಡ ಮನವಿಗೆ ಯಾವ ಪುರಸ್ಕಾರವೂ ಸಿಕ್ಕಲಿಲ್ಲ.
ಬೇಡಿಕೆ ಗ್ರಹಿಸುವ ಸಮರ್ಪಕ ವ್ಯವಸ್ಥೆ ವಿಸ್ಟ್ರಾನ್ ಬಳಿ ಇರಲಿಲ್ಲ. ಉತ್ಪನ್ನಗಳನ್ನು ವಿವಿಧ ಘಟಕಗಳಿಗೆ ಕಳುಹಿಸುವ ವ್ಯವಸ್ಥೆಯೂ ಸಮರ್ಪಕವಾಗಿರಲಿಲ್ಲ.
ತೈವಾನ್ ಮೂಲದ ವಿಸ್ಟ್ರಾನ್ ಸಂಸ್ಥೆ ಭಾರತೀಯ ಮಾರುಕಟ್ಟೆ ಪ್ರವೇಶಿಸಿದ್ದು 2008ರಲ್ಲೇ. ಅದು ತಯಾರಿಸುವ ಕಂಪ್ಯೂಟರ್, ಲ್ಯಾಪ್ಟಾಪ್, ಸರ್ವರ್ ಇತ್ಯಾದಿ ಸಾಧನಗಳ ದುರಸ್ತಿ ಘಟಕವನ್ನು ಮೊದಲು ತೆರೆಯಿತು. 2017ರಲ್ಲಿ ಅದು ಆ್ಯಪಲ್ನ ಐಫೋನ್ಗಳ ಉತ್ಪಾದನೆ ಕಾರ್ಯಗಳಿಗೆ ಕೈಹಾಕಿತು. ಆದರೆ, ಕೋಲಾರದಲ್ಲಿ ಅದರ ಇರುವಿಕೆಯ ಅಷ್ಟೂ ದಿನ ಸುಗಮವಾಗಂತೂ ಇರಲಿಲ್ಲ.
ಈಗ ಟಾಟಾ ಕಂಪನಿ ವಿಸ್ಟ್ರಾನ್ನ ಭಾರತೀಯ ವ್ಯವಹಾರಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡಿದೆ. ಕೋಲಾರದ ವಿಸ್ಟ್ರಾನ್ ಘಟಕದಲ್ಲಿ ಟಾಟಾ ಕಂಪನಿ ಐಫೋನ್15, ಐಫೋನ್15 ಪ್ಲಸ್ ಮಾಡೆಲ್ಗಳ ಅಸೆಂಬ್ಲಿ ಮಾಡಿ ಅದನ್ನು ಆ್ಯಪಲ್ಗೆ ಪೂರೈಸಲಿದೆ. ಆದರೆ ಹಿಂದಿನ ವಿಸ್ಟ್ರಾನ್ ಕಂಪನಿಯ ಆಡಳಿತದ ವಿರುದ್ಧ ಕಾರ್ಮಿಕರು ಪ್ರತಿಭಟನೆ ನಡೆಸಿದ್ದು ಟಾಟಾ ವಿಚಾರದಲ್ಲೂ ಮಾರ್ದನಿಸಿದೆ. ಟಾಟಾ ಈಗಲೇ ಈ ಕಾರ್ಮಿಕರ ಸಮಸ್ಯೆಗೆ ಪರಿಹಾರ ಹುಡುಕದಿದ್ದರೆ ವಿಸ್ಟ್ರಾನ್ಗೆ ಆದ ಗತಿ ಟಾಟಾಗೂ ಬಂದೀತು..!