October New Rules: ಆನ್ಲೈನ್ ಗೇಮಿಂಗ್ಗೆ ಶೇ. 20 ಟಿಸಿಎಸ್ ತೆರಿಗೆ ಸೇರಿದಂತೆ 5 ನಿಯಮಗಳು
ಜನನ ಮತ್ತು ಮರಣ ನೊಂದಣಿ ತಿದ್ದುಪಡಿ ಕಾಯ್ದೆ, ವಿದೇಶ ವೆಚ್ಚಕ್ಕೆ ಟಿಸಿಎಸ್ ತೆರಿಗೆ, ಆನ್ಲೈನ್ ಗೇಮಿಂಗ್ಗೆ ಶೇ. 28ರಷ್ಟು ತೆರಿಗೆ, ತಂಬಾಕು ಉತ್ಪನ್ನಗಳ ರಫ್ತುದಾರರಿಗೆ ಐಜಿಎಸ್ಟಿ ವೆಚ್ಚದ ರೀಫಂಡ್ ಇತ್ಯಾದಿ ಕೆಲವಾರು ಪ್ರಮುಖ ಬದಲಾವಣೆಗಳು 2023ರ ಅಕ್ಟೋಬರ್ 1ರಿಂದ ಜಾರಿಯಾಗುತ್ತದೆ. ಈ ಬಗ್ಗೆ ಮಾಹಿತಿ...
ಸರ್ಕಾರ ಆಗಾಗ್ಗೆ ಕೆಲ ನಿಯಮಗಳನ್ನು ಬದಲಿಸುವುದೋ ಅಥವಾ ಹೊಸ ನಿಯಮಗಳನ್ನು (New Rules) ತರುವುದೋ ಮಾಡುತ್ತಿರುತ್ತದೆ. ಎಲ್ಲಾ ನಿಯಮಗಳು ಎಲ್ಲರಿಗೂ ಮುಖ್ಯ ಆಗುವುದಿಲ್ಲವಾದರೂ ಒಂದಿಲ್ಲೊಂದು ಸಂದರ್ಭದಲ್ಲಿ ಇವು ಅಗತ್ಯ ಬೀಳುತ್ತವೆ. ಹೀಗಾಗಿ ನಿಯಮಗಳಲ್ಲಿ ಆಗುವ ಬದಲಾವಣೆಗಳನ್ನು ತಿಳಿದುಕೊಂಡಿರುವುದು ಒಳಿತು. ಸೆಪ್ಟೆಂಬರ್ ತಿಂಗಳು ಕಳೆದು ಅಕ್ಟೋಬರ್ ತಿಂಗಳು ಶುರುವಾಗಲು ಕೆಲವೇ ದಿನಗಳಿವೆ. ಜನನ ಪ್ರಮಾಣಪತ್ರದಿಂದ ಹಿಡಿದು ವಾಹನ ಅಪಘಾತ ಪರೀಕ್ಷೆಯವರೆಗೆ ಪ್ರಮುಖ ಐದು ಸಂಗತಿಗಳನ್ನು ಅಕ್ಟೋಬರ್ನಲ್ಲಿ ನೋಡಬಹುದು. ಅಕ್ಟೋಬರ್ 1ರಿಂದ ಯಾವೆಲ್ಲಾ ಬದಲಾವಣೆಗಳಾಗುತ್ತವೆ ಎಂಬ ವಿವರ ಇಲ್ಲಿದೆ…
ಜನನ ಮತ್ತು ಮರಣ ನೊಂದಣಿ ತಿದ್ದುಪಡಿ ಕಾಯ್ದೆ
ಶಾಲೆ ಸೇರ್ಪಡೆ, ಡ್ರೈವಿಂಗ್ ಲೈಸೆನ್ಸ್, ವೋಟರ್ ಲಿಸ್ಟ್, ಆಧಾರ್ ನಂಬರ್, ವಿವಾಹ ನೊಂದಣಿ, ಸರ್ಕಾರಿ ನೌಕರಿ ನೇಮಕಾತಿ ಇತ್ಯಾದಿ ಬಹುಕಾರ್ಯಗಳಿಗೆ ಜನನ ಪ್ರಮಾಣಪತ್ರವನ್ನು (ಬರ್ತ್ ಸರ್ಟಿಫಿಕೇಟ್) ಏಕೈಕ ದಾಖಲೆಯಾಗಿ ಬಳಸಲು ಅನುಮತಿಸುವಂತಹ ಕಾನೂನು ಅಕ್ಟೋಬರ್ 1ರಿಂದ ಜಾರಿಗೆ ಬರುತ್ತದೆ. ಜನ್ಮ ದಿನಾಂಕ ಮತ್ತು ಜನ್ಮಸ್ಥಳಕ್ಕೆ ವಿವಿಧ ದಾಖಲೆಗಳನ್ನು ಒದಗಿಸುವ ಪ್ರಮೇಯ ತಪ್ಪಲಿದೆ.
ಶೇ. 20ರಷ್ಟು ಟಿಸಿಎಸ್ ತೆರಿಗೆ
ವಿದೇಶಗಳಲ್ಲಿ ನಮ್ಮ ಪ್ರಯಾಣ, ವಿದೇಶೀ ಷೇರುಗಳು, ಮ್ಯೂಚುವಲ್ ಫಂಡ್ಗಳು, ಕ್ರಿಪ್ಟೋಕರೆನ್ಸಿಗಳು ಮತ್ತು ಉನ್ನತ ಶಿಕ್ಷಣ ಇತ್ಯಾದಿಗೆ ಶೇ. 20ರಷ್ಟು ಟಿಸಿಎಸ್ ಇರಲಿದೆ. ಒಂದು ಹಣಕಾಸು ವರ್ಷದಲ್ಲಿ ಈ ಎಲ್ಲಾ ವೆಚ್ಚಗಳು ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಿದ್ದರೆ ಆಗ ಟಿಸಿಎಸ್ ಅನ್ವಯ ಆಗುತ್ತದೆ.
ಇದನ್ನೂ ಓದಿ: ಇನ್ಷೂರೆನ್ಸ್ ಪಾಲಿಸಿ ಕಟ್ಟದೇ ಲ್ಯಾಪ್ಸ್ ಆಗಿದೆಯಾ? ಮರುಚಾಲನೆಗೆ ಡಂಡಕಟ್ಟಬೇಕಾ? ಈ ವಿವರ ಓದಿ
ಆರ್ಬಿಐನ ಹಿಂದಿನ ಎಲ್ಆರ್ಎಸ್ ಸ್ಕೀಮ್ ಅಡಿಯಲ್ಲಿ ಒಬ್ಬ ವ್ಯಕ್ತಿ ವಿದೇಶಕ್ಕೆ ಒಂದು ವರ್ಷದಲ್ಲಿ 2.50 ಲಕ್ಷ ಡಾಲರ್ವರೆಗೂ (ಸುಮಾರು 2 ಕೋಟಿ ರೂಗಿಂತ ತುಸು ಹೆಚ್ಚು) ಹಣವನ್ನು ಕಳುಹಿಸಬಹುದು. ಅಕ್ಟೋಬರ್ 1ರಿಂದ ಇದರಲ್ಲಿ ಬದಲಾವಣೆ ಆಗಲಿದ್ದು, ಒಂದು ವರ್ಷದಲ್ಲಿ ಏಳು ಲಕ್ಷ ರೂಗಿಂತ ಹೆಚ್ಚು ಹಣವನ್ನು ವಿದೇಶಕ್ಕೆ ಕಳುಹಿಸಿಸಿದರೆ ಶೇ. 20ರಷ್ಟು ಟಿಸಿಎಸ್ ಕಡಿತವಾಗುತ್ತದೆ.
ಆನ್ಲೈನ್ ಗೇಮಿಂಗ್ಗೆ ಶೇ. 28ರಷ್ಟು ತೆರಿಗೆ
ಆನ್ಲೈನ್ ಗೇಮ್, ಕ್ಯಾಸಿನೋ ಇತ್ಯಾದಿ ಜೂಜಾಟಗಳಿಗೆ ತೆರಿಗೆ ನಿಯಮ ಬದಲಿಸಲಾಗಿದೆ. ಬೆಟ್ಟಿಂಗ್ನ ಗೆಲುವಿನ ಮೊತ್ತ ಹೊರತುಪಡಿಸಿ ಆಡಲು ಆಟಗಾರ ಕಟ್ಟುವ ಶುಲ್ಕಕ್ಕೆ ಶೇ. 28ರಷ್ಟು ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದೆ. ಇದು ಅಕ್ಟೋಬರ್ 1ರಿಂದ ಜಾರಿಗೆ ಬರುತ್ತದೆ.
ಪಾನ್ ಮಸಾಲ, ತಂಬಾಕು ಮೇಲಿನ ತೆರಿಗೆ ರೀಫಂಡ್ಗೆ ನಿರ್ಬಂಧ
ಪಾನ್ ಮಸಾಲ, ತಂಬಾಕು ಹಾಗೂ ಅಂಥ ವಸ್ತುಗಳ ರಫ್ತು ಮಾಡುವಾಗ ಕಟ್ಟಲಾದ ಐಜಿಎಸ್ಟಿ ಮೊತ್ತವನ್ನು ಸ್ವಯಂಚಾಲಿತವಾಗಿ ರೀಫಂಡ್ ಮಾಡಲಾಗುತ್ತಿತ್ತು. ಈಗ ಅಕ್ಟೋಬರ್ 1ರಿಂದ ಈ ರೀತಿಯ ರೀಫಂಡ್ ವ್ಯವಸ್ಥೆಯಲ್ಲಿ ನಿರ್ಬಂಧ ಹಾಕಲಾಗಿದೆ. ತೆರಿಗೆ ವಂಚನೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಹೊಸ ಮನೆ ಖರೀದಿಸುವ ಮುನ್ನ ಈ ಏಳು ಅಂಶಗಳನ್ನು ಪರಿಗಣಿಸಿ; ಇದು ಜೀವಮಾನದ ಸಾಧನೆ ಎಂಬುದು ನೆನಪಿರಲಿ
ಪಾನ್ ಮಸಾಲ, ತಂಬಾಕು, ಗುಟ್ಕಾ, ಹುಕ್ಕಾ, ಸಿಗರೇಟ್, ಮೆಂತಾ ಎಣ್ಣೆ ಇತ್ಯಾದಿಗಳಿಗೆ ಶೇ. 28ರಷ್ಟು ಐಜಿಎಸ್ಟಿ ಮತ್ತು ಸೆಸ್ ಹಾಕಲಾಗುತ್ತದೆ. ಈ ವಸ್ತುಗಳನ್ನು ರಫ್ತು ಮಾಡುವವರು ನಿಗದಿತ ತೆರಿಗೆ ಅಧಿಕಾರಿಗಳ ಬಳಿ ಹೋಗಿ ರೀಫಂಡ್ಗೆ ಅನುಮೋದನೆ ಪಡೆದುಕೊಳ್ಳಬೇಕಾಗುತ್ತದೆ.
ವಾಹನ ಅಪಘಾತ ಪರೀಕ್ಷೆ
ಅಕ್ಟೋಬರ್ 1ರಿಂದ ಭಾರತದ್ದೇ ಆದ ಕಾರ್ ಕ್ರ್ಯಾಶ್ ಟೆಸ್ಟಿಂಗ್ ಪ್ರೋಗ್ರಾಮ್ ಜಾರಿಗೆ ಬರುತ್ತದೆ. ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಮ್ (ಬಿಎಸ್ಸಿಎಪಿ) ಎಂಬುದು ಭಾರತದ ಮೊದಲ ವಾಹನ ಅಪಘಾತ ಪರೀಕ್ಷಾ ವ್ಯವಸ್ಥೆಯಾಗಿದೆ. ಇದರ ಅಡಿಯಲ್ಲಿ ಕಾರು ತಯಾರಕರು ತಮ್ಮ ಹೊಸ ಕಾರ್ ಮಾಡೆಲ್ ಅನ್ನು ಅಪಘಾತ ಪರೀಕ್ಷೆಗೆ ಒಳಪಡಿಸಬಹುದು. ಪರೀಕ್ಷೆಯ ಫಲಿತಾಂಶಕ್ಕೆ ಅನುಗುಣವಾಗಿ ವಾಹನಕ್ಕೆ ರೇಟಿಂಗ್ ಕೊಡಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ