PM DDK Yojana: ಕೋಟ್ಯಂತರ ರೈತರ ಭವಿಷ್ಯ ಹೆಚ್ಚಿಸಬಲ್ಲ ಪಿಎಂ ಧನ-ಧಾನ್ಯ ಕೃಷಿ ಯೋಜನೆ; ಏನಿದು ಪಿಎಂಡಿಡಿಕೆವೈ?
Know what is PM Dhan Dhaanya Krishi Yojana: ಪಿಎಂ ಧನ್ ಧಾನ್ಯ ಕೃಷಿ ಯೋಜನೆಗೆ ಒಂದು ವರ್ಷಕ್ಕೆ 24,000 ಕೋಟಿ ರೂ ವಿನಿಯೋಗಿಸಲು ಸಂಪುಟ ಒಪ್ಪಿಗೆ ನೀಡಿದೆ. ದೇಶಾದ್ಯಂತ ಆಯ್ದ 100 ಜಿಲ್ಲೆಗಳಲ್ಲಿ ಕೃಷಿ ಹಾಗೂ ಸಂಬಂಧಿತ ಕ್ಷೇತ್ರಗಳ ಬೆಳವಣಿಗೆಗೆ ಉತ್ತೇಜಿಸುವುದು ಯೋಜನೆಯ ಗುರಿ. ಕೃಷಿ ಉತ್ಪನ್ನತೆ, ಬೆಳೆದಟ್ಟನೆ ಮತ್ತು ಸಾಲದ ಹರಿವು ಈ ಮೂರು ಅಂಶಗಳಲ್ಲಿ ಹಿಂದುಳಿದಿರುವ ಜಿಲ್ಲೆಗಳು ಈ ಸ್ಕೀಮ್ನಲ್ಲಿ ಇರಲಿವೆ.

ನವದೆಹಲಿ, ಜುಲೈ 16: ಕೇಂದ್ರ ಸಂಪುಟ ಇವತ್ತು ಹಣ ಬಿಡುಗಡೆಗೆ ಅನುಮೋದನೆ ನೀಡಿದ ಮೂರು ಉಪಕ್ರಮಗಳಲ್ಲಿ ಪಿಎಂ ಧನ್ ಧಾನ್ಯ ಕೃಷಿ ಯೋಜನೆಯೂ (PM Dhan Dhaanya Krishi Yojana) ಒಂದು. ಕೃಷಿ ಕ್ಷೇತ್ರಕ್ಕೆ ಪುಷ್ಟಿಕೊಡಬಲ್ಲ ಈ ಯೋಜನೆಗೆ ಕೇಂದ್ರ ಸರ್ಕಾರ 24,000 ಕೋಟಿ ರೂ ವೆಚ್ಚ ಮಾಡಲಿದೆ. ಇದು ಒಂದು ವರ್ಷಕ್ಕೆ ಸರ್ಕಾರ ನೀಡುವ ನೆರವು. ಈ ರೀತಿ ಆರು ವರ್ಷ ಕಾಲ ಸರ್ಕಾರವು ಯೋಜನೆಗೆ ಪ್ರತ್ಯೇಕವಾಗಿ ಹಣ ಬಿಡುಗಡೆ ಮಾಡಲಿದೆ. ಈ ಯೋಜನೆಯಿಂದ ದೇಶದ 1.7 ಕೋಟಿ ರೈತರಿಗೆ (farmers) ಅನುಕೂಲವಾಗಬಹುದು, ಅವರ ಜೀವನ ಹೆಚ್ಚು ಸುಭದ್ರವಾಗಬಹುದು ಎನ್ನುವ ನಿರೀಕ್ಷೆ ಇದೆ.
ಏನಿದು ಪಿಎಂ ಧನ್ ಧಾನ್ಯ ಕೃಷಿ ಯೋಜನೆ?
ಈ ಬಾರಿಯ ಕೇಂದ್ರ ಬಜೆಟ್ನಲ್ಲಿ (2025-26) ಪಿಎಂ ಧನ್ ಧಾನ್ಯ ಕೃಷಿ ಯೋಜನೆಯನ್ನು ಘೋಷಿಸಲಾಗಿತ್ತು. ಆಶೋತ್ತರ ಜಿಲ್ಲಾ ಯೋಜನೆ ಚೌಕಟ್ಟು (Aspirational District Programme Framework) ಅಡಿಯಲ್ಲಿ ಕೃಷಿ ಹಾಗು ಅದರ ಸಂಬಂಧಿತ ವಲಯಗಳಿಗೆ ಕೇಂದ್ರಿತವಾಗಿ ಈ ಯೋಜನೆಯನ್ನು ರೂಪಿಸಲಾಗಿದೆ. ಕೃಷಿಯಲ್ಲಿ ಹಿನ್ನಡೆ ಹೊಂದಿರುವ ನೂರು ಜಿಲ್ಲೆಗಳನ್ನು ಆಯ್ದುಕೊಂಡು ಈ ಸ್ಕೀಮ್ ಅನ್ನು ಜಾರಿಗೊಳಿಸಲಾಗುತ್ತದೆ.
ಈ ನೂರು ಜಿಲ್ಲೆಗಳನ್ನು ಆಯ್ಕೆ ಮಾಡಲು ಮೂರು ಪ್ರಮುಖ ಮಾನದಂಡಗಳಿವೆ. ಮೊದಲನೆಯದು, ಕೃಷಿ ಉತ್ಪನ್ನಶೀಲತೆ ಕಡಿಮೆ ಇರುವುದು; ಎರಡನೆಯದು, ಬೆಳೆ ಪ್ರಮಾಣ ಕಡಿಮೆ ಇರುವುದು; ಮೂರನೆಯದು, ಸಾಲದ ಹರಿವು ಸೀಮಿತವಾಗಿರುವುದು.
ಇದನ್ನೂ ಓದಿ: Agri, Renewables: ಕೃಷಿ, ನವೀಕರಣ ಇಂಧನ ಕ್ಷೇತ್ರ ಬಲಪಡಿಸಲು 51,000 ರೂ ನೀಡಲು ಸಂಪುಟ ಸಮ್ಮತಿ
ಈ ನೂರು ಜಿಲ್ಲೆಗಳಲ್ಲಿ ಕರ್ನಾಟಕದ್ದು ಇವೆಯಾ?
ಸದ್ಯ ಈ ಸ್ಕೀಮ್ಗೆ ನೂರು ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿಲ್ಲ. ಆದರೆ, ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಿಂದ ಕನಿಷ್ಠ ಒಂದಾದರೂ ಜಿಲ್ಲೆಯಾದರೂ ಈ ಸ್ಕೀಮ್ ವ್ಯಾಪ್ತಿಯಲ್ಲಿ ಇರುತ್ತದೆ ಎಂದು ಭರವಸೆ ನೀಡಲಾಗಿದೆ. ಕರ್ನಾಟಕವು ಕೃಷಿಯಲ್ಲಿ ಸಾಕಷ್ಟು ಬೆಳವಣಿಗೆ ಹೊಂದಿದೆಯಾದರೂ ಕೃಷಿಯಲ್ಲಿ ಹಿಂದುಳಿದಿರುವ ಕೆಲ ಜಿಲ್ಲೆಗಳಿವೆ. ಗದಗ, ಕಲ್ಬುರ್ಗಿ, ಬೀದರ್, ರಾಯಚೂರು ಮೊದಲಾದ ಜಿಲ್ಲೆಗಳಲ್ಲಿ ಕೃಷಿ ಉತ್ಪನ್ನತೆ ಬಹಳ ಕಡಿಮೆ ಇದೆ.
ಪಿಎಂ ಧನ್ ಧಾನ್ಯ ಕೃಷಿ ಯೋಜನೆಯಿಂದ ಲಾಭವೇನು?
ಆಯ್ದ ಜಿಲ್ಲೆಗಳಲ್ಲಿ ಆಧುನಿಕ ಮತ್ತು ಸುಸ್ಥಿರ ಕೃಷಿ ಪದ್ಧತಿಯನ್ನು ಅಳವಡಿಸಲು ಉತ್ತೇಜಿಸಲಾಗುತ್ತದೆ. ಕೃಷಿಕರಿಗೆ ಸುಲಭ ಸಾಲ ಸೌಲಭ್ಯ ವ್ಯವಸ್ಥೆ ಮಾಡಲಾಗುತ್ತದೆ. ಬೆಳೆಗಳ ವೈವಿಧ್ಯತೆ ಹೆಚ್ಚಿಸುವ, ಸುಸ್ಥಿರ ಕೃಷಿ ಪದ್ಧತಿಗೆ ಉತ್ತೇಜಿಸುವ ಕೆಲಸ ಮಾಡಲಾಗುತ್ತದೆ.
ಇದನ್ನೂ ಓದಿ: ಅಮೆರಿಕದ ಕೃಷಿ ರಫ್ತುಗಳಿಗೆ ಶೇ. 40ರಿಂದ ಶೇ. 5ಕ್ಕೆ ಟ್ಯಾರಿಫ್ ಇಳಿಸುವಂತೆ ಭಾರತಕ್ಕೆ ಒತ್ತಡ
ಕಟಾವಿನ ನಂತರ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಲು ಪಂಚಾಯತ್ ಮತ್ತು ಬ್ಲಾಕ್ ಮಟ್ಟದಲ್ಲಿ ಉಗ್ರಾಣಗಳನ್ನು ಸ್ಥಾಪಿಸಲಾಗುತ್ತದೆ. ನೀರಾವರಿ ಸೌಕರ್ಯವನ್ನು ಹೆಚ್ಚಿಸಲಾಗುತ್ತದೆ.
36 ವಿವಿಧ ಯೋಜನೆಗಳ ಸಂಯೋಜನೆ…
11 ಕೇಂದ್ರೀಯ ಸಚಿವಾಲಯಗಳ 36 ವಿವಿಧ ಯೋಜನೆಗಳನ್ನು ಪಿಎಂ ಧನ್ ಧಾನ್ಯ ಕೃಷಿ ಯೋಜನೆಗೆ ಪರಿಣಾಮಕಾರಿಯಾಗಿ ಬಳಸಲಾಗುತ್ತದೆ. ರಾಜ್ಯಮಟ್ಟದ ಯೋಜನೆಗಳು ಹಾಗೂ ಖಾಸಗಿ ವಲಯವನ್ನೂ ಇದರಲ್ಲಿ ಬಳಸಲಾಗುವುದು.
ಪಿಎಂ ಧನ್ ಧಾನ್ಯ ಕೃಷಿ ಯೋಜನೆಯ ಪ್ಲಾನಿಂಗ್, ಅನುಷ್ಠಾನ ಮತ್ತು ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ಮೂರು ಸ್ತರದ ಸಮಿತಿಗಳನ್ನು ರಚಿಸಲಾಗುತ್ತದೆ. ಜಿಲ್ಲಾ ಧನ್ ಧಾನ್ಯ ಸಮಿತಿಯಲ್ಲಿ ಪ್ರಗತಿಪರ ಕೃಷಿಕರನ್ನೂ ಸೇರಿಸಿಕೊಳ್ಳಲಾಗುತ್ತದೆ. ಜಿಲ್ಲಾ ಕೃಷಿ ಚಟುವಟಿಕೆಗಳ ಬಗ್ಗೆ ಈ ಸಮಿತಿ ಒಂದು ಯೋಜನೆ ರೂಪಿಸುತ್ತದೆ. ಈ ಜಿಲ್ಲಾ ಯೋಜನೆಗಳು ರಾಷ್ಟ್ರೀಯ ಒಟ್ಟು ಗುರಿಗೆ ಪೂರಕವಾಗಿರುವಂತೆ ನೋಡಿಕೊಳ್ಳಲಾಗುವುದು.
ಇದನ್ನೂ ಓದಿ: ಸ್ವಚ್ಛ ಇಂಧನ ಮೂಲಗಳಿಂದ ಶೇ. 50 ವಿದ್ಯುತ್ ಉತ್ಪಾದನೆ; ಐದು ವರ್ಷ ಮುಂಚೆಯೇ ಗುರಿ ಮುಟ್ಟಿದ ಭಾರತ
ಒಂದು ಜಿಲ್ಲೆಯು ಈ ಯೋಜನೆ ದೆಸೆಯಿಂದ ಹೇಗೆ ಬೆಳವಣಿಗೆ ಹೊಂದುತ್ತಿದೆ ಎಂಬುದನ್ನು ಗುರುತಿಸಲು ಪ್ರಮುಖ 117 ಪರ್ಫಾರ್ಮೆನ್ಸ್ ಇಂಡಿಕೇಟರ್ಗಳನ್ನು ನಿಗದಿ ಮಾಡಲಾಗಿದೆ. ಪ್ರತೀ ತಿಂಗಳೂ ಕೂಡ ಈ ಸೂಚಕಗಳನ್ನು ಗಮನಿಸಿ ಜಿಲ್ಲಾಭಿವೃದ್ಧಿಯಾಗುತ್ತಿರುವುದನ್ನು ಖಚಿತಪಡಿಸಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








