Go First: ಗೋ ಫಸ್ಟ್ ಭವಿಷ್ಯ ಅಭಿಲಾಷ್ ಲಾಲ್ ಕೈಯಲ್ಲಿ; ಇವರ ಬೆಂಗಳೂರು ಕನೆಕ್ಷನ್ ಬಗ್ಗೆ ಒಂದು ಮಾಹಿತಿ

|

Updated on: May 11, 2023 | 3:35 PM

Abhilash Lal To Rescue Go First As IRP: ಗೋಫಸ್ಟ್ ದಿವಾಳಿ ಬಿಕ್ಕಟ್ಟು ಪರಿಹಾರಕ್ಕಾಗಿ ಎನ್​ಸಿಎಲ್​ಟಿ ಅಭಿಲಾಷ್ ಲಾಲ್ ಅವರನ್ನು ಇಂಟರಿಮ್ ರೆಸಲ್ಯೂಷನ್ ಪ್ರೊಫೆಷನಲ್ ಆಗಿ ನೇಮಿಸಿದೆ. ಈ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಅಭಿಲಾಷ್ ಲಾಲ್ ಬೆಂಗಳೂರಿನ ಐಐಎಂನಲ್ಲಿ ಓದಿದವರು....

Go First: ಗೋ ಫಸ್ಟ್ ಭವಿಷ್ಯ ಅಭಿಲಾಷ್ ಲಾಲ್ ಕೈಯಲ್ಲಿ; ಇವರ ಬೆಂಗಳೂರು ಕನೆಕ್ಷನ್ ಬಗ್ಗೆ ಒಂದು ಮಾಹಿತಿ
ಗೋ ಫಸ್ಟ್
Follow us on

ಕಳೆದ ಒಂದು ವಾರದಿಂದ ಗೋ ಫಸ್ಟ್ ಏರ್​ಲೈನ್ಸ್ ಸುದ್ದಿಯಲ್ಲಿದೆ. ನಷ್ಟ ಮತ್ತು ಸಾಲದ ಹೊರೆ ತಾಳಲಾರದೆ ಇನ್ಸಾಲ್ವೆನ್ಸಿ ರೆಸಲ್ಯೂಷನ್ ಅರ್ಜಿ ಸಲ್ಲಿಸಿದ್ದ ಗೋ ಫಸ್ಟ್ ಸಂಸ್ಥೆಯ ಭವಿಷ್ಯ ಇದೀಗ ಐಆರ್​ಪಿ ಕೈಯಲ್ಲಿದೆ. ದಿವಾಳಿಯಾಗುವುದನ್ನು ತಡೆಯುವ ಮಾರ್ಗೋಪಾಯ ಅವಲೋಕಿಸಲು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT) ಏಪ್ರಿಲ್ 10ರಂದು ಅಭಿಲಾಷ್ ಲಾಲ್ ಅವರನ್ನು ಇಂಟೆರಿಮ್ ರೆಸಲ್ಯೂಷನ್ ಪ್ರೊಫೆಷನಲ್ (IRP) ಆಗಿ ನೇಮಿಸಿ, ಗೋ ಫಸ್ಟ್ ಕಗ್ಗಂಟನ್ನು ಬಿಡಿಸುವಂತೆ ತಿಳಿಸಿದೆ. ಇವರು ಗೋ ಫಸ್ಟ್ ಹಾಗು ಅದಕ್ಕೆ ವಿಮಾನ ಗುತ್ತಿಗೆ, ಹಣಕಾಸು ನೆರವು ನೀಡಿದ ಸಂಸ್ಥೆಗಳ ಮಧ್ಯೆ ಸಂಧಾನ ನಡೆಸಿ ಒಂದು ಒಮ್ಮತದ ಸೂತ್ರದ ಪರಿಹಾರ ಒದಗಿಸುವ ಪ್ರಯತ್ನ ಮಾಡಲಿದ್ದಾರೆ. ಅಂದರೆ, ಗೋ ಫಸ್ಟ್​ನ ಹಣಕಾಸು ಹೊರೆ ತಗ್ಗಿಸಲು ಮಾರ್ಗೋಪಾಯಗಳನ್ನು ಅಭಿಲಾಶ್ ಲಾಲ್ ಹುಡುಕಲಿದ್ದಾರೆ. ಇವರೊಂದಿಗೆ ಎಲ್ಲಾ ರೀತಿಯಲ್ಲೂ ಸಹಕರಿಸುವಂತೆ ಎನ್​ಸಿಎಲ್​ಟಿ ಗೋ ಫಸ್ಟ್ ಸಂಸ್ಥೆಗೆ ತಿಳಿಸಿದೆ.

ಬೆಂಗಳೂರಿನಲ್ಲಿ ಓದಿದವರು ಅಭಿಲಾಷ್ ಲಾಲ್

ಅಭಿಲಾಷ್ ಲಾಲ್ ಹಣಕಾಸು ಕ್ಷೇತ್ರದಲ್ಲಿ ವಿವಿಧ ಸ್ತರಗಳಲ್ಲಿ ಬಹಳ ವರ್ಷಗಳಿಂದ ಕೆಲಸ ಮಾಡಿದ್ದಾರೆ. ಇವರು ಇಂಥ ದಿವಾಳಿ ಪರಿಹಾರ ಕಾರ್ಯಗಳಲ್ಲಿ ನಿಷ್ಣಾತರೆನಿಸಿದ್ದಾರೆ. ಇನ್ಸಾಲ್ವೆನ್ಸಿ ರೆಸಲ್ಯೂಶನ್ ಪ್ರೊಫೆಷನಲ್ ಎನಿಸಿದ್ದಾರೆ.

ಇದನ್ನೂ ಓದಿ: Go First: ಬೀಸೋ ದೊಣ್ಣೆಯಿಂದ ಪಾರಾದ ಗೋ ಫಸ್ಟ್: ಮೇ 24ರಿಂದ ಮತ್ತೆ ವಿಮಾನ ಹಾರಾಟ ಸಾಧ್ಯತೆ; ಎಂಜಿನ್ ಕಂಪನಿ ಜೊತೆ ತಿಕ್ಕಾಟ ಇನ್ನೂ ಹಳೆಯದು

ದೆಹಲಿಯ ಆಗ್ರಾದ ದಯಾಲ್​ಬಾಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆದ ಅಭಿಲಾಷ್ ಲಾಲ್ ಬೆಂಗಳೂರಿನ ಐಐಎಂನಲ್ಲಿ ಮ್ಯಾನೇಜ್ಮೆಂಟ್ ಅಧ್ಯಯನ ಮಾಡಿದ್ದಾರೆ. ಸಿಯಟ್ ಟಯರ್ಸ್, ಎಚ್​ಎಸ್​ಬಿಸಿ, ಎಟಿ ಕೇರ್ನೀ, ಜೆನ್​ಪ್ಯಾಕ್ಟ್ ಕಂಪನಿಗಳಲ್ಲಿ ವಿವಿಧ ಸ್ತರಗಳ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಬಳಿಕ 2006ರಲ್ಲಿ ಡಿಟಿಝಡ್, ಅಟೋಲೋ ಟ್ಯೂಬ್ಸ್, ಈಸ್ಟ್ ಡೆಲ್ಲಿ ವೇಸ್ಟ್ ಪ್ರೋಸಸಿಂಗ್ ಕಂಪನಿ, ಲಾಯ್ಡ್ ಲೈನ್ ಪೈಪ್ಸ್, ಓಂಕಾರ್ ಕ್ಲೀನ್ ಎನರ್ಜಿ, ಗಣೇಶ ಇಕೋಸ್ಪಿಯರ್ ಕಂಪನಿಗಳಲ್ಲಿ ಸ್ವತಂತ್ರ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈಗ ಆಲ್ವಾರಜ್ ಅಂಡ್ ಮರ್ಸಲ್ ಇಂಡಿಯಾ ಪ್ರೊಫೆಷನಲ್ ಸರ್ವಿಸಸ್ ಎಂಬ ಕಂಪನಿಯೊಂದಿಗೆ ಅವರು ತೊಡಗಿಸಿಕೊಂಡಿದ್ದಾರೆ.

ದಿವಾಳಿ ಪರಿಹಾರ ಕಾರ್ಯದಲ್ಲಿ ಭಾರೀ ಅನುಭವ ಹೊಂದಿರುವ ಲಾಲ್

ಅಭಿಲಾಶ್ ಲಾಲ್ ಈವರೆಗೆ ಏಳು ಬಾರಿ ಇನ್ಸಾಲ್ವೆನ್ಸಿ ರೆಸಲ್ಯೂಷನ್ ಪ್ರೊಫೆಷನಲ್ ಆಗಿ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಗೋ ಫಸ್ಟ್​ನದ್ದು ಅವರಿಗೆ ಎಂಟನೆಯ ಅಸೈನ್ಮೆಂಟ್. 2019ರಲ್ಲಿ ಝಬುವಾ ಪವರ್ ಪ್ಲಾಂಟ್ (Jhabua Power Plant) ಬಿಕ್ಕಟ್ಟಿನಲ್ಲೂ ಅಭಿಲಾಶ್ ಲಾಲ್ ಅವರನ್ನು ಐಆರ್​ಪಿ ಆಗಿ ನೇಮಿಸಲಾಗಿತ್ತು. ಅವರ ಸಂಧಾನದ ಫಲವಾಗಿ ಭಾರೀ ನಷ್ಟದಲ್ಲಿದ್ದ ಈ ವಿದ್ಯುತ್ ಘಟಕವನ್ನು ಎನ್​ಟಿಪಿಸಿ 925 ಕೋಟಿ ರೂಗೆ ಶೇ. 50ರಷ್ಟು ಪಾಲು ಖರೀದಿ ಮಾಡಿತ್ತು.

ಇದನ್ನೂ ಓದಿ: Microsoft: ಬೋನಸ್ ಇಲ್ಲ, ಸಂಬಳ ಹೆಚ್ಚಳವೂ ಇಲ್ಲ; 10 ಸಾವಿರ ಲೇ ಆಫ್ ಕಂಡ ಮೈಕ್ರೋಸಾಫ್ಟ್ ಉದ್ಯೋಗಿಗಳ ಗಾಯಕ್ಕೆ ಇನ್ನೊಂದು ಬರೆ

ಜಬುವಾ ಮಾತ್ರವಲ್ಲ ಸೆವೆನ್​ಹಿಲ್ಸ್ ಹೆಲ್ತ್​ಕೇರ್, ಹೋಟೆಲ್ ಹಾರಿಜಾನ್, ಎಸ್​ಟಿಜಿ ಸಾಫ್ಟೆಕ್, ವರಸಗಾಂವ್ ಅಸೆಟ್ ಮೈಂಟೆನೆನ್ಸ್, ಜೆಎಸ್​ಕೆ ಮಾರ್ಕೆಟಿಂಗ್ ಸಂಸ್ಥೆಗಳ ಪ್ರಕರಣದಲ್ಲೂ ಅಭಿಲಾಷ್ ಲಾಲ್ ಐಆರ್​ಪಿ ಆಗಿ ಕಾರ್ಯನಿರ್ವಹಿಸಿ ಶಹಬ್ಬಾಸ್ ಎನಿಸಿದ್ದರು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ