Microsoft: ಬೋನಸ್ ಇಲ್ಲ, ಸಂಬಳ ಹೆಚ್ಚಳವೂ ಇಲ್ಲ; 10 ಸಾವಿರ ಲೇ ಆಫ್ ಕಂಡ ಮೈಕ್ರೋಸಾಫ್ಟ್ ಉದ್ಯೋಗಿಗಳ ಗಾಯಕ್ಕೆ ಇನ್ನೊಂದು ಬರೆ

No Salary Hike In Microsoft: ಕಳೆದ ವರ್ಷ ಭರ್ಜರಿ ಸ್ಯಾಲರಿ ಹೈಕ್ ಕಂಡಿದ್ದ ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಈ ವರ್ಷ ಯಾರಿಗೂ ಸಂಬಳ ಹೆಚ್ಚಳ ಇರುವುದಿಲ್ಲವಂತೆ. ಬೋನಸ್ ಸಿಗುತ್ತದೆಯಾದರೂ ಅಲ್ಪ ಮಾತ್ರ. ಬಡ್ತಿ ಪಡೆಯುವ ಭಾಗ್ಯವೊಂದನ್ನೇ ಮೈಕ್ರೋಸಾಫ್ಟ್ ಉದ್ಯೋಗಿಗಳು ನಿರೀಕ್ಷಿಸಬಹುದು.

Microsoft: ಬೋನಸ್ ಇಲ್ಲ, ಸಂಬಳ ಹೆಚ್ಚಳವೂ ಇಲ್ಲ; 10 ಸಾವಿರ ಲೇ ಆಫ್ ಕಂಡ ಮೈಕ್ರೋಸಾಫ್ಟ್ ಉದ್ಯೋಗಿಗಳ ಗಾಯಕ್ಕೆ ಇನ್ನೊಂದು ಬರೆ
ಮೈಕ್ರೋಸಾಫ್ಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 11, 2023 | 12:15 PM

ನವದೆಹಲಿ: ಜಾಗತಿಕ ಟೆಕ್ ದೈತ್ಯ ಮೈಕ್ರೋಸಾಫ್ಟ್ (Microsoft Inc) ಉದ್ಯೋಗಿಗಳಿಗೆ ಈ ವರ್ಷ ನಿರಾಸೆ ಕಾದಿದೆ. ಇತ್ತೀಚೆಗಷ್ಟೇ 10,000 ಉದ್ಯೋಗಿಗಳನ್ನು ಲೇ ಆಫ್ (Layoffs) ಮಾಡುತ್ತಿರುವುದಾಗಿ ಕಂಪನಿ ಘೋಷಿಸಿತ್ತು. ಇದರ ಬೆನ್ನಲ್ಲೇ ಇದೀಗ ಈ ವರ್ಷ ಉದ್ಯೋಗಿಗಳಿಗೆ ಸಂಬಳ ಹೆಚ್ಚಳ ಇರುವುದಿಲ್ಲ (No Salary Hike) ಎಂದು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಘೋಷಿಸಿದ್ದಾರೆ. ಸಂಬಳ ಹೆಚ್ಚಳ ರದ್ದು ಮಾತ್ರವಲ್ಲ, ಬೋನಸ್ ಮತ್ತು ಷೇರು ಕೊಡುಗೆ ಪ್ರಮಾಣವನ್ನು ಇಳಿಕೆ ಮಾಡಲಾಗುತ್ತಿದೆ ಎಂದೂ ಸಿಇಒ ಕಂಪನಿಯ ಆಂತರಿಕ ಇಮೇಲ್​ನಲ್ಲಿ ಎಲ್ಲ ಸಿಬ್ಬಂದಿವರ್ಗಕ್ಕೂ ತಿಳಿಸಿದ್ದಾರೆ. ಅಂದರೆ, ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಈ ವರ್ಷ ಸ್ಯಾಲರಿ ಹೈಕ್ ಇಲ್ಲ ಎಂಬುದು ಸ್ಪಷ್ಟವಾಗಿದೆಯಾದರೂ ಬೋನಸ್ ಮತ್ತು ಸ್ಟಾಕ್ ಅವಾರ್ಡ್ ಸ್ವಲ್ಪವಾದರೂ ಸಿಗುತ್ತಲ್ಲಾ ಎಂಬ ಸಮಾಧಾನ ಮಾತ್ರ ಇದೆ. ಹಾಗೆಯೇ, ದುಡ್ಡು ಸಿಗದಿದ್ದರೂ ಬಡ್ಡಿಯಾದರೂ ದೊರೆಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಫುಲ್ ಟೈಮ್ ಉದ್ಯೋಗಿಗಳಿಗೆ ಮಾತ್ರ ಸ್ಯಾಲರಿ ಹೈಕ್ ಇರುವುದಿಲ್ಲ. ಗುತ್ತಿಗೆಯಲ್ಲಿ ಕೆಲಸ ಮಾಡುವ ಮಂದಿಗೆ ಸಂಬಳದಲ್ಲಿ ಹೆಚ್ಚಳ ಮಾಡಬಹುದು ಎಂದು ಕಂಪನಿಯ ಮ್ಯಾನೇಜರುಗಳಿಗೆ ಸಿಇಒ ಸತ್ಯ ನಾದೆಲ್ಲಾ ಮಾಹಿತಿ ನೀಡಿರುವುದು ತಿಳಿದುಬಂದಿದೆ.

ಇದನ್ನೂ ಓದಿGo First: ಬೀಸೋ ದೊಣ್ಣೆಯಿಂದ ಪಾರಾದ ಗೋ ಫಸ್ಟ್: ಮೇ 24ರಿಂದ ಮತ್ತೆ ವಿಮಾನ ಹಾರಾಟ ಸಾಧ್ಯತೆ; ಎಂಜಿನ್ ಕಂಪನಿ ಜೊತೆ ತಿಕ್ಕಾಟ ಇನ್ನೂ ಹಳೆಯದು

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಮಾತ್ರವಲ್ಲ ಚೀಫ್ ಪೀಪಲ್ ಆಫಿಸರ್ ಕ್ಯಾಥಲೀನ್ ಹೋಗಲ್ (Microsoft Chief People’s Officer Kathleen Hogan) ಕೂಡ ಮ್ಯಾನೇಜರುಗಳಿಗೆ ಇಮೇಲ್ ಕಳುಹಿಸಿದ್ದು ಬೋನಸ್ ಕಡಿತ ಇರುವ ವಿಚಾರವನ್ನು ತಿಳಿಸಿದ್ದಾರೆ.

ಕಳೆದ ವರ್ಷ ಮೈಕ್ರೋಸಾಫ್ಟ್ ಕಂಪನಿ ತನ್ನ ಉದ್ಯೋಗಿಗಳಿಗೆ ಭರಪೂರವಾಗಿ ಸಂಬಳ ಹೆಚ್ಚಳ, ಬೋನಸ್ ಇತ್ಯಾದಿ ಕೊಡುಗೆಗಳನ್ನು ನೀಡಿ ಸಂತೃಪ್ತಗೊಳಿಸಿತ್ತು. ಅದಾದ ಬಳಿಕ 10,000 ಮಂದಿಯನ್ನು ಲೇ ಆಫ್ ಮಾಡುತ್ತಿರುವುದಾಗಿ ಹೇಳಿ ಸ್ಯಾಲರಿ ಹೈಕ್ ಗುಂಗಿನಲ್ಲಿದ್ದ ಉದ್ಯೋಗಿಗಳಲ್ಲಿ ಚಳಿ ಮೂಡಿಸಿತ್ತು. ಈ ವರ್ಷ ಸ್ಯಾಲರಿ ಹೆಚ್ಚಳ ಇಲ್ಲವೇ ಇಲ್ಲ ಎಂದು ಸಾರಾಸಗಟಾಗಿ ಹೇಳಿಬಿಟ್ಟಿದೆ ಮೈಕ್ರೋಸಾಫ್ಟ್. ಸಂಬಳ ಜಾಸ್ತಿ ಆಗದಿದ್ದರೂ ಪರವಾಗಿಲ್ಲ, ಕೆಲಸ ಉಳಿದರೆ ಸಾಕೆಂದು ಕೆಲ ಉದ್ಯೋಗಿಗಗಳು ಅಭಿಪ್ರಾಯಪಡುತ್ತಿರಬಹುದು.

ಇದನ್ನೂ ಓದಿHigh Streets: ಬೆಂಗಳೂರೇ ಬೆಸ್ಟ್..! ಭಾರತದ ಟಾಪ್-10 ಹೈ ಸ್ಟ್ರೀಟ್​ಗಳಲ್ಲಿ ಎಂಜಿ ರೋಡ್ ಸೇರಿ ಬೆಂಗಳೂರಿನ 4 ರಸ್ತೆಗಳು; ಏನಿದು ಹೈ ಸ್ಟ್ರೀಟ್ ಎಂದರೆ?

ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ಮೈಕ್ರೋಸಾಫ್ಟ್ ಒತ್ತು

ಮೈಕ್ರೋಸಾಫ್ಟ್ ಕಂಪನಿ ತನ್ನ ಆಫೀಸ್ ಪ್ರಾಡಕ್ಟ್​ಗಳಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಸ್ಪರ್ಶ ಕೊಡುವ ಪ್ರಯತ್ನದಲ್ಲಿದೆ. ಅದರಲ್ಲೂ ಅಳಿವಿನಂಚಿನಲ್ಲಿರುವ ತನ್ನ ಸರ್ಚ್ ಎಂಜಿನ್ ಬಿಂಗ್​ಗೆ ಎಐನಿಂದ ಪುನಶ್ಚೇತನ ತರುವ ಪ್ರಯತ್ನವಾಗಲಿದೆ. ಬಿಲ್ ಗೇಟ್ಸ್ ಸಂಸ್ಥಾಪಿಸಿದ ಮೈಕ್ರೋಸಾಫ್ಟ್ ಸಂಸ್ಥೆ ಈ ನಿಟ್ಟಿನಲ್ಲಿ ಓಪನ್​ಎಐ ಸಂಸ್ಥೆ ಜೊತೆ ಸೇರಿ ಕೆಲಸ ಮಾಡುತ್ತಿದೆ. ಚ್ಯಾಟ್​ಜಿಪಿಟಿ ಮೂಲಕ ಇಡೀ ಜಗತ್ತಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ನ ಸಾಧ್ಯಾಸಾಧ್ಯತೆಯ ಸ್ಯಾಂಪಲ್ ತೋರಿಸಿರುವ ಓಪನ್​ಎಐ ಸಂಸ್ಥೆಗೆ ಮೈಕ್ರೋಸಾಫ್ಟ್​ನಿಂದ ಲಕ್ಷಾಂತರ ಕೋಟಿ ರೂನಷ್ಟು ಫಂಡಿಂಗ್ ಕೂಡ ಹೋಗಿದೆಯಂತೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:12 pm, Thu, 11 May 23