Big Relief: ಕರ್ನಾಟಕ ಹೈಕೋರ್ಟ್ ತೀರ್ಪಿಂದ ಗೇಮ್ಸ್ಕ್ರಾಫ್ಟ್ ನಿರಾಳ; ತಪ್ಪಿತು 21,000 ಕೋಟಿ ರೂ ತೆರಿಗೆ ಭೀತಿ
GamesKraft Technology Tax Evasion: 2017ರಿಂದ 2022 ಜೂನ್ 30ರವರೆಗಿನ ಅವಧಿಯಲ್ಲಿ ಗೇಮ್ಸ್ಕ್ರಾಫ್ಟ್ ಟೆಕ್ನಾಲಜಿ 21,000 ಕೋಟಿ ರೂನಷ್ಟು ಜಿಎಸ್ಟಿ ಪಾವತಿಸಿಲ್ಲ ಎಂಬುದು ಜಿಎಸ್ಟಿ ಇಂಟೆಲಿಜೆನ್ಸ್ ಯೂನಿಟ್ನ ಆರೋಪ. ಆದರೆ, ಕರ್ನಾಟಕ ಹೈಕೋರ್ಟ್ ಇದೀಗ ಗೇಮಿಂಗ್ ಕಂಪನಿ ಪರವಾಗಿ ತೀರ್ಪು ಕೊಟ್ಟಿದೆ.
ಬೆಂಗಳೂರು: ಭಾರತದ ಗೇಮಿಂಗ್ ಉದ್ಯಮಕ್ಕೆ (Gaming Industry) ಸಕಾರಾತ್ಮಕವಾಗಿ ಪರಿಣಮಿಸುವ ಮತ್ತು ಸ್ಪಷ್ಟತೆ ಕೊಡುವ ಬೆಳವಣಿಗೆಯಲ್ಲಿ ಗೇಮ್ಸ್ಕ್ರಾಫ್ಟ್ ಟೆಕ್ನಾಲಜಿಗೆ (GTPL- GamesKraft Technology Pvt Ltd) ನೀಡಿದ ಜಿಎಸ್ಟಿ ತೆರಿಗೆ ನೋಟೀಸ್ ಅನ್ನು ಕರ್ನಾಟಕ ಹೈಕೋರ್ಟ್ (Karnataka High Court) ರದ್ದು ಮಾಡಿದೆ. 21,000 ಕೋಟಿ ರೂನಷ್ಟು ತೆರಿಗೆಯನ್ನು ಗೇಮ್ಸ್ಕ್ರಾಫ್ಟ್ ಟೆಕ್ನಾಲಜಿ ಪಾವತಿಸಿಲ್ಲ ಎಂದು ಜಿಎಸ್ಟಿ ಇಂಟೆಲಿಜೆನ್ಸ್ ಯೂನಿಟ್ 2022ರ ಸೆಪ್ಟಂಬರ್ನಲ್ಲಿ ಶೋಕಾಸ್ ನೋಟೀಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಬೆಂಗಳೂರು ಮೂಲದ ಈ ಗೇಮಿಂಗ್ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಜಿಎಸ್ಟಿ ನೋಟೀಸ್ (GST Notice) ಅನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿರುವುದು ಗೇಮ್ಸ್ಕ್ರಾಫ್ಟ್ ಟೆಕ್ನಾಲಜಿಗೆ ನಿರಾಳತೆ ತಂದಿದೆ. 2017ರಿಂದ 2022 ಜೂನ್ 30ರವರೆಗಿನ ಅವಧಿಯಲ್ಲಿ ಗೇಮ್ಸ್ಕ್ರಾಫ್ಟ್ ಟೆಕ್ನಾಲಜಿ 20,000 ಕೋಟಿ ರೂನಷ್ಟು ಜಿಎಸ್ಟಿ ಪಾವತಿಸಿಲ್ಲ ಎಂಬುದು ಜಿಎಸ್ಟಿ ಇಂಟೆಲಿಜೆನ್ಸ್ ಯೂನಿಟ್ನ ಆರೋಪ. ಭಾರತದ ಇತಿಹಾಸದಲ್ಲಿ ಯಾವುದೇ ಕಂಪನಿ ವಿರುದ್ಧ ಇಷ್ಟೊಂದು ಮೊತ್ತದ ಜಿಎಸ್ಟಿ ಬಾಕಿ ಬಗ್ಗೆ ನೋಟೀಸ್ ಜಾರಿ ಆಗಿದ್ದು ಅದೇ ಮೊದಲು.
ಗೇಮ್ಸ್ಕ್ರಾಫ್ಟ್ ಟೆಕ್ನಾಲಜಿ ಕಂಪನಿಯು ಕಾರ್ಡ್, ರಮ್ಮಿ ಕಲ್ಚರ್, ಗೇಮ್ಜಿ, ರಮ್ಮಿ ಟೈಮ್ ಇತ್ಯಾದಿ ಮೂಲಕ ಆನ್ಲೈನ್ ಬೆಟ್ಟಿಂಗ್ಗೆ ಪ್ರಚೋದನೆ ಕೊಡುತ್ತಿದೆ. ಗ್ರಾಹಕರಿಗೆ ಇನ್ವಾಯ್ಸ್ ಕೊಡುತ್ತಿಲ್ಲ ಎಂಬಿತ್ಯಾದಿ ಆರೋಪಗಳೂ ಇವೆ. ಜಿಎಸ್ಟಿ ಅಧಿಕಾರಿಗಳು ಗೇಮ್ಸ್ಕ್ರಾಫ್ಟ್ ಪ್ಲಾಟ್ಫಾರ್ಮ್ಗಳಲ್ಲಿ ದಾಖಲಾದ ಆನ್ಲೈನ್ ಬೆಟ್ಟಿಂಗ್ ಮೊತ್ತದ ಮೇಲೆ ಶೇ. 28ರಷ್ಟು, ಅಂದರೆ 77,000 ಕೋಟಿ ರೂನಷ್ಟು ಜಿಎಸ್ಟಿ ತೆರಿಗೆಯನ್ನು ಹೇರಿತ್ತು.
ಇದನ್ನೂ ಓದಿ: Go First: ಗೋ ಫಸ್ಟ್ ಭವಿಷ್ಯ ಅಭಿಲಾಷ್ ಲಾಲ್ ಕೈಯಲ್ಲಿ; ಇವರ ಬೆಂಗಳೂರು ಕನೆಕ್ಷನ್ ಬಗ್ಗೆ ಒಂದು ಮಾಹಿತಿ
ಅಷ್ಟೇ ಅಲ್ಲ, ಗೇಮ್ಸ್ಕ್ರಾಫ್ಟ್ ಟೆಕ್ನಾಲಜಿ ಸಂಸ್ಥೆಯ ದಾಖಲೆಗಳ ಫೋರೆನ್ಸಿಕ್ ಪರೀಕ್ಷೆ ಮಾಡಿದಾಗ ನಕಲಿ ಇನ್ವಾಯ್ಸ್ ಮತ್ತು ಹಿಂದಿನ ದಿನಾಂಕಗಳ ಇನ್ವಾಯ್ಸ್ಗಳನ್ನು ಸಲ್ಲಿಸಿದ್ದು ಕಂಡುಬಂದಿತ್ತು ಎಂದೂ ಜಿಎಸ್ಟಿ ಅಧಿಕಾರಿಗಳು ಆರೋಪಿಸಿದ್ದರು.
ಆದರೆ, ಗೇಮ್ಸ್ಕ್ರಾಫ್ಟ್ ಟೆಕ್ನಾಲಜಿ ಕಂಪನಿ ಈ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದು, ತಮ್ಮದು ಕೌಶಲ್ಯ ಆಧಾರಿತ ಗೇಮಿಂಗ್ ನಡೆಸುತ್ತಿದ್ದೇವೆ. ಈ ಸೇವೆಗೆ ಜಿಎಸ್ಟಿ ಶೇ. 18 ಮಾತ್ರ ಇದೆ. ಗೇಮ್ ಆಡುವ ಆಟಗಾರರ ಪ್ರವೇಶ ಶುಲ್ಕದಿಂದ ಈ ಜಿಎಸ್ಟಿ ಮುರಿದುಕೊಳ್ಳಲಾಗುತ್ತದೆ ಎಂದು ಈ ಕಂಪನಿ ಪರ ವಕೀಲರು ಉಚ್ಚ ನ್ಯಾಯಾಲಯದಲ್ಲಿ ವಾದಿಸಿದ್ದರು.
ಇದನ್ನೂ ಓದಿ: Microsoft: ಬೋನಸ್ ಇಲ್ಲ, ಸಂಬಳ ಹೆಚ್ಚಳವೂ ಇಲ್ಲ; 10 ಸಾವಿರ ಲೇ ಆಫ್ ಕಂಡ ಮೈಕ್ರೋಸಾಫ್ಟ್ ಉದ್ಯೋಗಿಗಳ ಗಾಯಕ್ಕೆ ಇನ್ನೊಂದು ಬರೆ
2017ರಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಗೇಮ್ಸ್ಕ್ರಾಫ್ಟ್ ಸಂಸ್ಥೆ ಆನ್ಲೈನ್ನಲ್ಲಿ ಹಲವು ರಮ್ಮಿ ಗೇಮ್ಗಳು, ಲುಡೋ, ಫ್ಯಾಂಟಸಿ ಸ್ಪೋರ್ಟ್ಸ್ ಇತ್ಯಾದಿಯನ್ನು ನಡೆಸುತ್ತದೆ. ಇದೀಗ ಅಪಾರ ಪ್ರಮಾಣದ ಜಿಎಸ್ಟಿ ತೆರಿಗೆ ಹೊರೆಯಿಂದ ತನ್ನನ್ನು ಬಚಾವ್ ಮಾಡಿದ ಹೈಕೋರ್ಟ್ ತೀರ್ಪನ್ನು ಗೇಮ್ಸ್ಕ್ರಾಫ್ಟ್ ಸ್ವಾಗತಿಸಿದೆ. ಈ ಬಗ್ಗೆ ಮಾತನಾಡಿದ ಕಂಪನಿ ಪರ ವಕೀಲ ಜಾಯ್ಜ್ಯೋತಿ ಮಿಶ್ರ, ನಮ್ಮ ಬ್ಯುಸಿನೆಸ್ ಮಾಡಲ್ ನ್ಯಾಯಯುತವಾಗಿರುವುದು ಸ್ಪಷ್ಟವಾಗಿದೆ. ಸರ್ಕಾರ ಮತ್ತು ನ್ಯಾಯಾಂಗದ ಬಗ್ಗೆ ನಮಗೆ ಮೊದಲಿಂದಲೂ ನಂಬಿಕೆ ಇತ್ತು. ಮುಂದೆಯೂ ಇರುತ್ತದೆ. ಈ ನ್ಯಾಯತೀರ್ಪಿನಿಂದ ಮುಂದಿನ ದಿನಗಳಲ್ಲಿ ಜಿಎಸ್ಟಿ ಅಧಿಕಾರಿಗಳೊಂದಿಗೆ ಸಕಾರಾತ್ಮಕ ಸಂವಾದಕ್ಕೆ ದಾರಿ ಸಿಕ್ಕು, ಗೇಮಿಂಗ್ ಕ್ಷೇತ್ರದಲ್ಲಿ ಪ್ರಗತಿಪರ ಜಿಎಸ್ಟಿ ಕಾಯ್ದೆಗಳು ರಚನೆ ಆಗಲು ಅನುಕೂಲವಾಗಬಹುದು ಎಂದು ಹೇಳಿದ್ದಾರೆ.