ಮುಂಬೈ, ಜೂನ್ 4: ಷೇರು ಮಾರುಕಟ್ಟೆ ಇಂದು ಮಂಗಳವಾರ ಬೆಳಗಿನ ವಹಿವಾಟಿನಲ್ಲಿ ಅಕ್ಷರಶಃ ರಕ್ತದೋಕುಳಿ (Share market blood bath) ಕಂಡಿತು. ಸೆನ್ಸೆಕ್ಸ್, ನಿಫ್ಟಿ ಇತ್ಯಾದಿ ಎಲ್ಲಾ ಸೂಚ್ಯಂಕಗಳು ಪ್ರಪಾತಕ್ಕೆ ಬಿದ್ದವು. ಕೇವಲ 15 ನಿಮಿಷದಲ್ಲಿ ಹೂಡಿಕೆದಾರರಿಗೆ (investors’ money) 9 ಲಕ್ಷ ಕೋಟಿ ರೂ ನಷ್ಟವಾಯಿತು. ಅದಾದ ಬಳಿಕ ಕ್ರಮೇಣವಾಗಿ ಷೇರು ಮಾರುಕಟ್ಟೆ ಮತ್ತೆ ಸಕಾರಾತ್ಮಕವಾಗಿ ವರ್ತಿಸಲು ಆರಂಭಿಸಿದೆ. ಒಂದೊಂದೇ ಷೇರುಗಳು ಹಸಿರು ಬಣ್ಣಕ್ಕೆ ತಿರುಗುತ್ತಿವೆ. ಆದರೆ, ಆರಂಭದ 15 ನಿಮಿಷದಲ್ಲಿ ಮಾರುಕಟ್ಟೆ ಆಗಿದ್ದಾದರೂ ಏನು?
ಷೇರು ಮಾರುಕಟ್ಟೆ ಎಂಬುದು ಜನರು ಲಾಭಕ್ಕೆ ವ್ಯವಹರಿಸುವ ಒಂದು ಅಡ್ಡೆ. ಇಲ್ಲಿ ರೀಟೇಲ್ ಹೂಡಿಕೆದಾರರು (ಜನಸಾಮಾನ್ಯರು), ದೊಡ್ಡ ಹೂಡಿಕೆದಾರರು, ಮ್ಯೂಚುವಲ್ ಫಂಡ್ಸ್ ಹೂಡಿಕೆದಾರರು ಹೀಗೆ ಇರುತ್ತಾರೆ. ಎಲ್ಲರೂ ಕೂಡ ಲಾಭದ ಅವಕಾಶಕ್ಕೆ ಕಾಯುತ್ತಿರುತ್ತಾರೆ. ಶನಿವಾರ ಎಕ್ಸಿಟ್ ಪೋಲ್ ರಿಸಲ್ಟ್ ಬಂದಿತು. ಷೇರು ಮಾರುಕಟ್ಟೆ ಏರುತ್ತದೆ ಎಂಬುದು ಖಾತ್ರಿಯಾಯಿತು. ನಿರೀಕ್ಷೆಯಂತೆ ಸೋಮವಾರ ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹರಿದುಬರತೊಡಗಿದವು. ಪರಿಣಾಮವಾಗಿ ಮಾರುಕಟ್ಟೆ ಉಬ್ಬಿತು.
ಇದನ್ನೂ ಓದಿ: ನಿನ್ನೆ ಉಬ್ಬಿದ್ದ ಷೇರುಪೇಟೆ ಇವತ್ತು ಪ್ರಪಾತಕ್ಕೆ; ಸೆನ್ಸೆಕ್ಸ್, ನಿಫ್ಟಿ ಸೇರಿ ಪ್ರಮುಖ ಸೂಚ್ಯಂಕಗಳ ಕುಸಿತ
ಬಹಳಷ್ಟು ಹೂಡಿಕೆದಾರರಿಗೆ ಇದು ಲಾಭದ ಸಮಯ. ಕೃತಕವಾಗಿ ಮತ್ತು ಭಾವನಾತ್ಮಕವಾಗಿ ಉಬ್ಬಿದ ಷೇರುಪೇಟೆಯಿಂದ ಲಾಭ ಪಡೆಯಬೇಕಾದರೆ ಷೇರು ಮಾರಬೇಕು. ಈಗ ಮಂಗಳವಾರ ಬೆಳಗಿನ ಅವಧಿಯಲ್ಲಿ ಆಗಿದ್ದೂ ಅದೇ. ಅದುವೇ ಪ್ರಾಫಿಟ್ ಬುಕಿಂಗ್. ಒಂದೇ ದಿನದಲ್ಲಿ ಸಖತ್ತಾಗಿ ಏರಿದ್ದ ಷೇರುಗಳನ್ನು ಮಾರಿ ಬಹಳಷ್ಟು ಜನರು ಲಾಭ ಮಾಡಿಕೊಂಡಿದ್ದಾರೆ.
ಮಾರಾಟ ಹೆಚ್ಚಾದಾಗ ಮತ್ತು ಅದನ್ನು ಖರೀದಿಸಲು ಜನರ ಸಂಖ್ಯೆ ಕಡಿಮೆ ಇದ್ದಾಗ ಷೇರುಮೌಲ್ಯ ಕಡಿಮೆ ಆಗುತ್ತದೆ. ಇದು ಯಾವುದೇ ಬಿಸಿನೆಸ್ನಲ್ಲೂ ಇರುವ ಸ್ವಾಭಾವಿಕ ಅಂಶ. ಮೊದಲ 15 ನಿಮಿಷದಲ್ಲಿ ಇದೇ ಆಗಿದ್ದು. ಸಾಕಷ್ಟು ಜನರು ಲಾಭದ ಆಸೆಗೆ ಷೇರು ಮಾರಲು ಹೋಗಿದ್ದಾರೆ. ಪರಿಣಾಮವಾಗಿ ಪೇಟೆ ಕುಸಿತ ಕಂಡಿದೆ. ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಹೆಚ್ಚಾಗಿ ಮಾರಾಟ ಮಾಡಿರುವುದು ತಿಳಿದುಬಂದಿದೆ.
ಇದನ್ನೂ ಓದಿ: ಐಪಿಒದಲ್ಲಿ ಷೇರು ಖರೀದಿಸಿ ಲಿಸ್ಟಿಂಗ್ನಲ್ಲಿ ಮಾರಿದಾಗ ಎಷ್ಟು ತೆರಿಗೆ ಕಟ್ಟಬೇಕು?
ಷೇರು ಕುಸಿತ ಆಗುತ್ತಿರುವಂತೆಯೇ ತಳದಿಂದ ಷೇರುಗಳ ಖರೀದಿ ಆರಂಭವಾಗಿದೆ. ಪರಿಣಾಮವಾಗಿ ಕ್ರಮೇಣವಾಗಿ ಷೇರುಮೌಲ್ಯ ಹೆಚ್ಚಾಗತೊಡಗಿದೆ. ದಿನಾಂತ್ಯದೊಳಗೆ ಸೂಚ್ಯಂಕಗಳು ಒಂದಷ್ಟು ಚೇತರಿಕೆ ಕಾಣಬಹುದು. 2019ರಲ್ಲೂ ಲೋಕಸಭೆ ಚುನಾವಣೆಯ ಫಲಿತಾಂಶದ ದಿನ ಇದೇ ರೀತಿ ಪೇಟೆ ಕುಸಿತ ಕಂಡಿತ್ತು. ಬಳಿಕ ಚೇರಿಕೆ ಕಂಡಿತ್ತು. ಷೇರು ಮಾರುಕಟ್ಟೆ ಅಕ್ಷರಶಃ ಬಿಸಿನೆಸ್ ಅಡ್ಡೆ ಎನ್ನುವುದು ಇದಕ್ಕೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:28 am, Tue, 4 June 24