ಒಂಬತ್ತಲ್ಲ, 38 ಲಕ್ಷ ಕೋಟಿ ರೂ ನಷ್ಟ ಕಂಡ ಷೇರುಪೇಟೆ; ಮಾರುಕಟ್ಟೆ ನಡುಗಿದ ನಾಲ್ಕು ಸಂದರ್ಭಗಳಿವು

|

Updated on: Jun 04, 2024 | 3:02 PM

Stock market crashes from Harshad Mehta to Covid crisis: ಇವತ್ತು ಷೇರು ಮಾರುಕಟ್ಟೆ ಗಡಗಡ ನಡುಗಿ ಹೋಗಿದೆ. ಇಂಟ್ರಾಡೇ ಟ್ರೇಡಿಂಗ್​ನಲ್ಲಿ 38 ಲಕ್ಷ ಕೋಟಿ ರೂ ನಷ್ಟವಾಗಿರುವ ಅಂದಾಜು ಇದೆ. ಭಾರತದ ಷೇರು ಮಾರುಕಟ್ಟೆ ಕಂಡ ದೊಡ್ಡ ಮಟ್ಟದ ಕುಸಿತಗಳಲ್ಲಿ ಇದೂ ಒಂದು. ಈ ಹಿಂದೆ ಐದಾರು ಬಾರಿ ಈ ರೀತಿ ವಿಪ್ಲವಗಳಾಗಿವೆ. ಹರ್ಷದ್ ಮೆಹ್ತಾ ಹಗರಣದಿಂದ ಹಿಡಿದು ಕೋವಿಡ್​ವರೆಗೂ ವಿವಿಧ ಸಂದರ್ಭಗಳಲ್ಲಿ ಮಾರುಕಟ್ಟೆ ಕುಸಿತ ಕಂಡಿದೆ.

ಒಂಬತ್ತಲ್ಲ, 38 ಲಕ್ಷ ಕೋಟಿ ರೂ ನಷ್ಟ ಕಂಡ ಷೇರುಪೇಟೆ; ಮಾರುಕಟ್ಟೆ ನಡುಗಿದ ನಾಲ್ಕು ಸಂದರ್ಭಗಳಿವು
ಷೇರು ಮಾರುಕಟ್ಟೆ
Follow us on

ಮುಂಬೈ, ಜೂನ್ 4: ಕೋವಿಡ್ ಬಳಿಕ ಕ್ರಮೇಣವಾಗಿ ಕೊಬ್ಬಿ ಬೆಳೆದಿದ್ದ ಭಾರತದ ಷೇರು ಮಾರುಕಟ್ಟೆ ಬಲೂನು ಠುಸ್ ಎನ್ನುವಂತೆ ಇಂದು ಮಂಗಳವಾರ ಭರ್ಜರಿ ಕುಸಿತ ಅನುಭವಿಸಿದೆ. ಇವತ್ತಿನ ಟ್ರೇಡಿಂಗ್​ನಲ್ಲಿ ಸೆನ್ಸೆಕ್ಸ್ ಬರೋಬ್ಬರಿ 5,000ಕ್ಕೂ ಹೆಚ್ಚು ಅಂಕಗಳಷ್ಟು ಇಳಿಕೆ ಕಂಡಿದೆ. ಒಂದು ಅಂದಾಜು ಪ್ರಕಾರ ಇವತ್ತಿನ ಒಟ್ಟಾರೆ ಇಂಟ್ರಾಡೇ ಟ್ರೇಡಿಂಗ್​ನಲ್ಲಿ ಹೂಡಿಕೆದಾರರು ಹತ್ತಿರಹತ್ತಿರ 40 ಲಕ್ಷ ಕೋಟಿ ರೂನಷ್ಟು ನಷ್ಟ ಮಾಡಿಕೊಂಡಿದ್ದಾರೆ. ಸೆನ್ಸೆಕ್ಸ್ ಐದು ಸಾವಿರ ಅಂಕಗಳಷ್ಟು ಕುಸಿತ ಕಂಡಿದ್ದು ಬಹಳ ಅಪರೂಪ. ಭಾರತದ ಷೇರು ಮಾರುಕಟ್ಟೆ ಇದಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಈ ಹಿಂದೆ ಕುಸಿತ ಕಂಡಿದ್ದಿದೆ. ಆದರೆ, ಇವತ್ತು ಆರಂಭವಾಗಿರುವ ಕುಸಿತ ಎಷ್ಟು ದಿನ ಮುಂದುವರಿಯುತ್ತೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಸರ್ಕಾರವೊಂದು ರಚನೆಯಾಗಿ ಅದು ಐದು ವರ್ಷ ಸ್ಥಿರ ಆಡಳಿತ ನೀಡಬಲ್ಲುದು ಎಂಬುದು ಖಾತ್ರಿಯಾದ ಬಳಿಕ ಮಾರುಕಟ್ಟೆ ಚೇತರಿಕೆ ಕಾಣತೊಡಗಬಹುದು ಎನ್ನಲಾಗುತ್ತಿದೆ.

ಷೇರು ಮಾರುಕಟ್ಟೆಯ ಈ ಹಿಂದಿನ ಕುಸಿತದ ಘಟನೆಗಳಿವು…

1992: ಹರ್ಷದ್ ಮೆಹ್ತಾ ಹಗರಣ

ಷೇರು ಮಾರುಕಟ್ಟೆಯ ಬಿಗ್ ಬುಲ್ ಎಂದು ಹೆಸರಾಗಿದ್ದ ಹರ್ಷದ್ ಮೆಹ್ತಾನ ಷೇರು ಮತ್ತು ಹಣಕಾಸು ಅಕ್ರಮಗಳು 1992ರಲ್ಲಿ ಬೆಳಕಿಗೆ ಬಂದವು. ಆ ಒಂದು ವರ್ಷದಲ್ಲಿ ಸೆನ್ಸೆಕ್ಸ್ ಶೇ. 50ಕ್ಕೂ ಹೆಚ್ಚು ಅಂಕಗಳಷ್ಟು ಕುಸಿತ ಕಂಡಿತ್ತು. ಅಂದಿನ ಕಾಲಕ್ಕೆ ಹೂಡಿಕೆದಾರರು 4,000 ಕೋಟಿ ರೂ ನಷ್ಟ ಮಾಡಿಕೊಂಡರು.

2008: ಅಮೆರಿಕ ಹಣಕಾಸು ಬಿಕ್ಕಟ್ಟು

ಅಮೆರಿಕದಲ್ಲಿ ಉದ್ಭವವಾದ ಹಣಕಾಸು ಬಿಕ್ಕಟ್ಟು ಜಾಗತಿಕವಾಗಿ ಎಲ್ಲೆಡೆ ತಲ್ಲಣಗೊಳಿಸಿತ್ತು. ಭಾರತವೂ ಇದಕ್ಕೆ ಹೊರತಾಗಿರಲಿಲ್ಲ. ಜನವರಿ 21, ಸೋಮವಾರ ಒಂದೇ ದಿನದಂದು ಸೆನ್ಸೆಕ್ಸ್ ಸುಮಾರು ಒಂದೂವರೆ ಸಾವಿರ ಅಂಕಗಳಷ್ಟು ಕುಸಿತ ಕಂಡಿತ್ತು. 20,000ಕ್ಕೂ ಹೆಚ್ಚು ಅಂಕಗಳ ಮಟ್ಟದಲ್ಲಿದ್ದ ಸೆನ್ಸೆಕ್ಸ್ ಆ ವರ್ಷದ ಕೊನೆಯಲ್ಲಿ 10,000 ಅಂಕಗಳಿಗೂ ಕಡಿಮೆ ಮಟ್ಟಕ್ಕೆ ಇಳಿದುಹೋಗಿತ್ತು.

ಇದನ್ನೂ ಓದಿ: ಇದು ಪಕ್ಕಾ ಬಿಸಿನೆಸ್; ಬೆಳಗಿನ ಮೊದಲ 5 ನಿಮಿಷದಲ್ಲಿ ಷೇರುಪೇಟೆ ಪ್ರಪಾತಕ್ಕೆ ಬೀಳಲು ಏನು ಕಾರಣ?

2015-2016: ಡೀಮಾನಿಟೈಸೇಶನ್ ಮತ್ತು ಜಾಗತಿಕ ವಿದ್ಯಮಾನ

2015 ಮತ್ತು 2016ರಲ್ಲಿ ಭಾರತದ ಸೆನ್ಸೆಕ್ಸ್ ಶೇ. 30ಕ್ಕೂ ಹೆಚ್ಚು ಕುಸಿತ ಕಂಡಿತು. ಮೊದಲಿಗೆ ಕೆಲ ಅಂತಾರಾಷ್ಟ್ರೀಯ ವಿದ್ಯಮಾನಗಳು ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದವು. ಚೀನಾ ತನ್ನ ಕರೆನ್ಸಿಯಾದ ಯುವಾನ್​ನ ಮೌಲ್ಯವನ್ನು ತಗ್ಗಿಸಿತು. ಐರೋಪ್ಯ ಒಕ್ಕೂಟವನ್ನು ತೊರೆಯಲು ಬ್ರಿಟನ್ ನಿರ್ಧರಿಸಿತು. ಇವೆರಡು ಬೆಳವಣಿಗೆಗಳು ಹೂಡಿಕೆದಾರರ ಸೆಂಟಿಮೆಂಟ್ ಕುಂದಿಸಿದವು. ಜೊತೆಗೆ ತೈಲ ಬೆಲೆ ಇಳಿಕೆ, ಗ್ರೀಸ್ ಸಾಲ ಬಿಕ್ಕಟ್ಟು ಇವೂ ಕೂಡ ಗಾಯದ ಮೇಲೆ ಬರೆ ಎಳೆದವು.

ಬ್ಯಾಂಕುಗಳ ಅನುತ್ಪಾದಕ ಆಸ್ತಿ ಹೆಚ್ಚಳ ಹಾಗೂ ಇತರ ಹಣಕಾಸು ಬಿಕ್ಕಟ್ಟು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿತು.

2016ರಲ್ಲಿ ಸರ್ಕಾರ ಕೈಗೊಂಡ ಡೀಮಾನಿಟೈಸೇಶನ್ ಕ್ರಮ ಭಾರತದ ಹಣಕಾಸು ಮಾರುಕಟ್ಟೆಯನ್ನು ಇನ್ನಿಲ್ಲದಂತೆ ಅಲುಗಾಡಿಸಿತ್ತು. 2016ರ ನವೆಂಬರ್ ತಿಂಗಳಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ನಾಲ್ಕು ದಿನಗಳಲ್ಲಿ ಶೇ. 6ರಷ್ಟು ಕುಸಿತ ಕಂಡವು.

2020: ಕೋವಿಡ್ ಬಿಕ್ಕಟ್ಟು

2020ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಇಡೀ ಜಗತ್ತನ್ನು ಬಾಧಿಸಿತು. ಮನುಕುಲ ಹಿಂದೆಂದೂ ಕಾಣದ ರೀತಿಯಲ್ಲಿ ಅದರ ಪರಿಣಾಮಗಳು ಆಗಿವೆ. ಸೆನ್ಸೆಕ್ಸ್ ಒಂದೇ ವಾರದಲ್ಲಿ ಹೆಚ್ಚೂಕಡಿಮೆ 14,000 ಅಂಕಗಳಷ್ಟು ಕುಸಿತ ಕಂಡಿತು. 2020ರ ಮಾರ್ಚ್ 23ರಂದು ಸೆನ್ಸೆಕ್ಸ್ ಲೋಯರ್ ಸರ್ಕ್ಯುಟ್ ತಲುಪುತ್ತಿದ್ದಂತೆಯೇ 45 ನಿಮಿಷ ಟ್ರೇಡಿಂಗ್ ಅನ್ನೇ ನಿಲ್ಲಿಸಲಾಯಿತು. ಹತ್ತು ದಿನದ ಅಂತದಲ್ಲಿ ಎರಡು ಬಾರಿ ಈ ರೀತಿ ಆಗಿತ್ತು.

ಇದನ್ನೂ ಓದಿ: ನಿನ್ನೆ ಉಬ್ಬಿದ್ದ ಷೇರುಪೇಟೆ ಇವತ್ತು ಪ್ರಪಾತಕ್ಕೆ; ಸೆನ್ಸೆಕ್ಸ್, ನಿಫ್ಟಿ ಸೇರಿ ಪ್ರಮುಖ ಸೂಚ್ಯಂಕಗಳ ಕುಸಿತ

ಇದರ ಜೊತೆಗೆ 2004ರ ಲೋಕಸಭಾ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟ ಸೋತಾಗಲೂ ಮಾರುಕಟ್ಟೆ ನಡುಗಿತ್ತು. ಅಂದೂ ಕೂಡ ಷೇರುಪೇಟೆ ಕುಸಿತ ಕಂಡಿತ್ತು. ಮಾರುಕಟ್ಟೆ ಈ ರೀತಿ ವಿಶೇಷ ಕುಸಿತಗೊಂಡ ಸಂದರ್ಭದಲ್ಲಿ ಕಾಲಾನುಕ್ರಮದಲ್ಲಿ ಚೇತರಿಕೆ ಕಂಡಿದೆ. ಕೆಲವೊಮ್ಮೆ ಚೇತರಿಕೆ ಒಂದರಿಂದ ಒಂದೂವರೆ ವರ್ಷ ಆಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:00 pm, Tue, 4 June 24