ನಿನ್ನೆ ಉಬ್ಬಿದ್ದ ಷೇರುಪೇಟೆ ಇವತ್ತು ಪ್ರಪಾತಕ್ಕೆ; ಸೆನ್ಸೆಕ್ಸ್, ನಿಫ್ಟಿ ಸೇರಿ ಪ್ರಮುಖ ಸೂಚ್ಯಂಕಗಳ ಕುಸಿತ

|

Updated on: Jun 04, 2024 | 10:20 AM

Stock Market updates today: ಎಕ್ಸಿಟ್ ಪೋಲ್​ಗಳು ಎನ್​ಡಿಎ ಗೆಲುವನ್ನು ಸೂಚಿಸಿದ ಬಳಿಕ ನಿನ್ನೆ ಸೋಮವಾರ (ಜೂನ್ 3) ಷೇರುಪೇಟೆ ಸಖತ್ತಾಗಿ ಏರಿತ್ತು. ಎಲ್ಲಾ ಸೂಚ್ಯಂಕಗಳು ಪಾಸಿಟಿವ್ ಆಗಿ ಅಂತ್ಯಗೊಂಡಿದ್ದವು. ಇವತ್ತು ಮತ ಎಣಿಕೆ ದಿನ ಮಾರುಕಟ್ಟೆ ಆರಂಭವಾಗಿ ಕೆಲವೇ ನಿಮಿಷಗಳಲ್ಲಿ ಷೇರುಪೇಟೆ ಕುಸಿತ ಕಂಡಿದೆ. 15 ನಿಮಿಷದಲ್ಲಿ ಹೂಡಿಕೆದಾರರು 9 ಲಕ್ಷ ಕೋಟಿ ರೂ ಹಣ ನಷ್ಟ ಮಾಡಿಕೊಂಡಿದ್ದಾರೆ.

ನಿನ್ನೆ ಉಬ್ಬಿದ್ದ ಷೇರುಪೇಟೆ ಇವತ್ತು ಪ್ರಪಾತಕ್ಕೆ; ಸೆನ್ಸೆಕ್ಸ್, ನಿಫ್ಟಿ ಸೇರಿ ಪ್ರಮುಖ ಸೂಚ್ಯಂಕಗಳ ಕುಸಿತ
ಷೇರು ಮಾರುಕಟ್ಟೆ
Follow us on

ಮುಂಬೈ, ಜೂನ್ 4: ಎಕ್ಸಿಟ್ ಪೋಲ್ ಬಳಿಕ ಫೀನಿಕ್ಸ್​ನಂತೆ ಮೇಲೆ ಜಿಗಿದಿದ್ದ ಷೇರು ಮಾರುಕಟ್ಟೆ (stock market) ಇವತ್ತು ಅಷ್ಟೇ ವೇಗದಲ್ಲಿ ಕೆಳಗೆ ಬಿದ್ದಿದೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಸೆನ್ಸೆಕ್ಸ್, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ನಿಫ್ಟಿ (Nifty50 index) ಸೇರಿದಂತೆ ಬಹುತೇಕ ಎಲ್ಲಾ ಸೂಚ್ಯಂಕಗಳು ಕುಸಿತ ಕಂಡಿವೆ. ಬೆಳಗ್ಗೆ 9:15ಕ್ಕೆ ಮಾರುಕಟ್ಟೆ ವ್ಯವಹಾರ ಆರಂಭವಾಗಿ ಕೆಲವೇ ನಿಮಿಷದಲ್ಲಿ ಸೆನ್ಸೆಕ್ಸ್ ಬರೋಬ್ಬರಿ 2,800 ಅಂಕಗಳಷ್ಟು ಕುಸಿತ ಕಂಡಿತು. ನಿಫ್ಟಿ50 ಸೂಚ್ಯಂಕ 22,400 ಮಟ್ಟಕ್ಕಿಂತ ಕೆಳಗೆ ಇಳಿದಿತ್ತು. ಕೇವಲ 15 ನಿಮಿಷದಲ್ಲಿ ಷೇರುಪೇಟೆಯಲ್ಲಿ ಹೂಡಿಕೆದಾರರ 9 ಲಕ್ಷ ಕೋಟಿ ರೂ ಹಣ ವೈಟ್​ವಾಶ್ ಆಯಿತು.

ಹತ್ತು ಗಂಟೆಯ ಬಳಿಕ ಸೂಚ್ಯಂಕಗಳು ಮತ್ತೆ ತುಸು ಮೇಲೇರತೊಡಗಿವೆ. ಎಕ್ಸಿಟ್ ಪೋಲ್​ನಲ್ಲಿ ಎನ್​ಡಿಎ ಮೈತ್ರಿಕೂಟ ಭರ್ಜರಿ ಮುನ್ನಡೆ ಸಾಧಿಸುವ ಸುಳಿವು ಸಿಕ್ಕ ಬಳಿಕ ಷೇರು ಮಾರುಕಟ್ಟೆ ಸಕಾರಾತ್ಮಕವಾಗಿ ಸ್ಪಂದಿಸಿತ್ತು. ಬಿಎಸ್​ಇನ 30 ಷೇರುಗಳ ಸೆನ್ಸೆಕ್ಸ್ ಸೂಚ್ಯಂಕ 2,507 ಅಂಕಗಳಷ್ಟು ಮೇಲೇರಿ 76,468.78 ಮಟ್ಟ ಮುಟ್ಟಿತು. ಬಿಎಸ್​ಇ ಇತಿಹಾಸದಲ್ಲಿ ಯಾವುದೇ ದಿನದಲ್ಲಿ ಸೆನ್ಸೆಕ್ಸ್ ಈ ಎತ್ತರದಲ್ಲಿ ಅಂತ್ಯಗೊಂಡಿದ್ದು ಅದೇ ಮೊದಲು. ಕಳೆದ ಮೂರು ವರ್ಷದಲ್ಲಿ ಒಂದೇ ದಿನದಲ್ಲಿ ಸೆನ್ಸೆಕ್ಸ್ ಕಂಡ ಅತಿಹೆಚ್ಚಳ ಅದು.

ಇದನ್ನೂ ಓದಿ: ಐಪಿಒದಲ್ಲಿ ಷೇರು ಖರೀದಿಸಿ ಲಿಸ್ಟಿಂಗ್​ನಲ್ಲಿ ಮಾರಿದಾಗ ಎಷ್ಟು ತೆರಿಗೆ ಕಟ್ಟಬೇಕು?

ನಿಫ್ಟಿ50, ಸೆನ್ಸೆಕ್ಸ್, ನಿಫ್ಟಿ ಬ್ಯಾಂಕ್, ನಿಫ್ಟಿ ಐಟಿ, ಬಿಎಸ್​ಇ ಸ್ಮಾಲ್​ಕ್ಯಾಪ್ ಹೀಗೆ ಬಹುತೇಕ ಎಲ್ಲಾ ಸೂಚ್ಯಂಕಗಳು ಇಳಿಕೆ ಕಂಡಿವೆ. ಫಾರ್ಮಾ, ಎಫ್​ಎಂಸಿಜಿ, ಹೆಲ್ತ್​ಕೇರ್ ಇತ್ಯಾದಿ ವಲಯಗಳ ಸೂಚ್ಯಂಕಗಳು ಮಾತ್ರ ಹಸಿರು ಬಣ್ಣದಲ್ಲಿವೆ. ಉಳಿದಂತೆ ಬಹುತೇಕ ಎಲ್ಲವೂ ಕೆಂಪು ಬಣ್ಣಮಯವಾಗಿದೆ.

ಎಚ್​ಯುಎಲ್, ನೆಸ್ಲೆ, ಟಿಸಿಎಸ್, ಬ್ರಿಟಾನಿಯಾ, ಸನ್ ಫಾರ್ಮಾ, ಡಿವಿಸ್ ಲ್ಯಾಬ್ಸ್, ಅಪೋಲೋ ಆಸ್ಪತ್ರೆ, ಏಷ್ಯನ್ ಪೇಮೆಂಟ್ಸ್, ಟೈಟಾನ್ ಕಂಪನಿ, ಡಾಕ್ಟರ್ ರೆಡ್ಡೀಸ್ ಲ್ಯಾಬ್ಸ್, ಹೀರೋ ಮೋಟೋಕಾರ್ಪ್, ಟಿಸಿಎಸ್ ಮೊದಲಾದ ಕಂಪನಿಗಳ ಷೇರುಗಳು ಬೆಲೆ ಪಡೆದಿವೆ.

ಇದನ್ನೂ ಓದಿ: ರಿಸಲ್ಟ್ ಬರುವ ಮುನ್ನವೇ ಉಬ್ಬಿ ನಿಂತ ಷೇರುಪೇಟೆ; ನಿಫ್ಟಿ, ಸೆನ್ಸೆಕ್ಸ್ ಸೇರಿ ಪ್ರಮುಖ ಸೂಚ್ಯಂಕಗಳು ಮೇಲಕ್ಕೆ

ರಿಲಾಯನ್ಸ್, ಅದಾನಿ ಎಂಟರ್​ಪ್ರೈಸಸ್, ಅದಾನಿ ಪೋರ್ಟ್ಸ್, ಎಚ್​ಡಿಎಫ್​ಸಿ ಬ್ಯಾಂಕ್, ಎಸ್​ಬಿಐ, ವಿಪ್ರೋ, ಅಲ್ಟ್ರಾಟೆಕ್ ಸಿಮೆಂಟ್, ಬಜಾಜ್ ಆಟೊ, ಏಚರ್ ಮೋಟಾರ್ಸ್ ಮೊದಲಾದ ಷೇರುಗಳು ಪ್ರಮುಖವಾಗಿ ಲಾಸ್ ಮಾಡಿಕೊಂಡಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ