
ನವದೆಹಲಿ, ಅಕ್ಟೋಬರ್ 21: ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರುಬಿಯೋ (US Secretary of State Marco Rubio) ಅವರು ಕಳೆದ ಐದು ತಿಂಗಳ ಅವಧಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮಾಲಕ ಮುಕೇಶ್ ಅಂಬಾನಿ ಅವರನ್ನು ಎರಡನೇ ಬಾರಿ ಭೇಟಿ ಮಾಡುತ್ತಿದ್ದಾರೆ. ನಿನ್ನೆ ಭಾರತಕ್ಕೆ ಎರಡು ದಿನದ ಭೇಟಿಗೆ ಆಗಮಿಸಿರುವ ರೂಬಿಯೋ ಅವರು ಇಂದು ಗುಜರಾತ್ನ ಜಾಮ್ನಗರ್ಗೆ ಹೋಗಿ ಅಲ್ಲಿ ಅಂಬಾನಿಯನ್ನು ಭೇಟಿ ಮಾಡಲಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅಮೆರಿಕದ ಉದ್ಯಮಿ ಇಲಾನ್ ಮಸ್ಕ್ ಅವರು ಅಂಬಾನಿಯನ್ನು ಮಿಸ್ಟರ್ ಪ್ರೈಮ್ ಮಿನಿಸ್ಟರ್ ಎಂದು ಹೇಳಿ ಕುಹಕವಾಡಿದ್ದರು. ಈಗ ಅಮೆರಿಕದ ಪ್ರಮುಖ ಸಚಿವರೊಬ್ಬರು ಅಂಬಾನಿ ಭೇಟಿಗೆ ಮುಗಿಬಿದ್ದಿರುವುದು ಕುತೂಹಲದ ಸಂಗತಿ ಎನಿಸಬಹುದು.
ಗುಜರಾತ್ನ ಜಾಮ್ನಗರ್ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಬೃಹತ್ ತೈಲ ಸಂಸ್ಕರಣಾ ಘಟಕ ಹೊಂದಿದೆ. ವೆನಿಜುವೆಲಾ ತೈಲವನ್ನು ಇಲ್ಲಿ ಸಂಸ್ಕರಿಸುವ ಸಂಬಂಧ ಮಾರ್ಕೊ ರುಬಿಯೋ ಅವರು ಮುಕೇಶ್ ಅಂಬಾನಿಯನ್ನು ಭೇಟಿ ಮಾಡುತ್ತಿದ್ದಾರೆ. ರಿಲಯನ್ಸ್ ಮೂಲಕ ಅಮೆರಿಕಕ್ಕೆ ಡೀಸಲ್ ಮತ್ತು ಪೆಟ್ರೋಲ್ ಪೂರೈಕೆ ಪಡೆಯಲು ಒಂದು ಪ್ರಯತ್ನ ಆಗುತ್ತಿದೆ.
ಇದನ್ನೂ ಓದಿ: ಜಿಯೋ ಐಪಿಒ; ಆಂಕರ್ ಇನ್ವೆಸ್ಟರ್ಸ್ ನಂತರ ಸಾಂಸ್ಥಿಕ ಹೂಡಿಕೆದಾರರಿಂದಲೂ ಭರ್ಜರಿ ಸ್ಪಂದನೆ
ವೆನಿಜುವೆಲಾದಲ್ಲಿ 65 ಬಿಲಿಯನ್ ಬ್ಯಾರಲ್ಗಳಷ್ಟು ತೈಲ ನಿಕ್ಷೇಪಗಳಿರುವುದು ಗೊತ್ತಾಗಿದೆ. ತೈಲ ಬಿಕ್ಕಟ್ಟು ತಲೆದೋರಿರುವ ಹಿನ್ನೆಲೆಯಲ್ಲಿ ವೆನಿಜುವೆಲಾದಿಂದ ತೈಲ ಪೂರೈಕೆಯಾದರೆ ಒಂದಷ್ಟು ಬಿಕ್ಕಟ್ಟು ಶಮನ ಮಾಡಬಹುದು ಎಂಬುದು ಅಮೆರಿಕದ ಇರಾದೆ.
ಆದರೆ, ಇಲ್ಲೊಂದು ತೊಡಕು ಇದೆ. ವೆನಿಜುವೆಲಾದಲ್ಲಿ ಇರುವುದು ಒಂದು ಸಾಧಾರಣ ತೈಲವಲ್ಲ. ಇದು ಅಧಿಕ ಸಲ್ಫರ್ ಹೊಂದಿರುವ ಮತ್ತು ಅತಿ ತೂಕದ ತೈಲವಾಗಿದೆ. ಇದನ್ನು ಸಂಸ್ಕರಿಸುವ ಪ್ರಕ್ರಿಯೆ ತುಸು ಸಂಕೀರ್ಣವಾಗಿದೆ. ವಿಶ್ವದ ಕೆಲವೇ ಕಂಪನಿಗಳು ಇಷ್ಟು ಕಠಿಣ ಕಚ್ಚಾ ತೈಲವನ್ನು ಸಂಸ್ಕರಿಸಬಲ್ಲ ಸಾಮರ್ಥ್ಯ ಹೊಂದಿವೆ. ಅದರಲ್ಲಿ ರಿಲಯನ್ಸ್ ಪೆಟ್ರೊಕೆಮಿಕಲ್ಸ್ ಒಂದು.
ಅಮೆರಿಕದ ಶೆವ್ರೋನ್ ಕಾರ್ಪೊರೇಶನ್, ಎಕ್ಸಾನ್ಮೋಬಿಲ್, ಫಿಲಿಪ್ಸ್ 66 ಇತ್ಯಾದಿ ಕಂಪನಿಗಳೂ ಕೂಡ ಕಠಿಣ ಕಚ್ಚಾ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿವೆ. ಆದರೆ, ಈ ಕಂಪನಿಗಳ ತೈಲ ಸಂಸ್ಕರಣೆ ಸಾಮರ್ಥ್ಯ ದೇಶೀಯ ತೈಲ ಸಂಸ್ಕರಣೆಗೆಯೇ ಪೂರ್ಣಗೊಂಡಿದೆ. ವೆನಿಜುವೆಲಾ ತೈಲದ ಸಂಸ್ಕರಣೆ ಮಾಡಲು ಆಗದಷ್ಟು ಬ್ಯುಸಿಯಾಗಿವೆ.
ಇದನ್ನೂ ಓದಿ: ಭಾರತ-ನ್ಯೂಜಿಲ್ಯಾಂಡ್ ವ್ಯಾಪಾರ ಒಪ್ಪಂದ ಜಾರಿ; ಭಾರತದ ಸರಕುಗಳಿಗೆ ಸುಂಕರಹಿತ ಪ್ರವೇಶ
ಈ ಹಿನ್ನೆಲೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುನ್ನೆಲೆಗೆ ಬರುತ್ತದೆ. ರಿಲಯನ್ಸ್ ಇಂಡಸ್ಟ್ರೀಸ್ ವಿಶ್ವದಲ್ಲೇ ಅತಿದೊಡ್ಡ ಪೆಟ್ರೋಲಿಯಂ ರಿಫೈನರಿ ಘಟಕ ಹೊಂದಿದೆ. ಇದು ವೆನಿಜುವೆಲಾದಲ್ಲಿ ಸಿಗುವಂತಹ ದಟ್ಟ ಹಾಗೂ ಕಠಿಣವಾದ ಕಚ್ಚಾ ತೈಲದ ಸಂಸ್ಕರಣೆಗೆ ಬೇಕಾದ ತಂತ್ರಜ್ಞಾನ ಹೊಂದಿದೆ. ಒಂದು ದಿನಕ್ಕೆ 14 ಲಕ್ಷ ಬ್ಯಾರಲ್ ತೈಲ ಸಂಸ್ಕರಿಸುವ ಸಾಮರ್ಥ್ಯ ಇದೆ.
ಹೀಗಾಗಿ, ಜಾಗತಿಕ ತೈಲ ಬಿಕ್ಕಟ್ಟು ತಗ್ಗಿಸಲು ಅಮೆರಿಕಕ್ಕೆ ಈಗ ರಿಲಯನ್ಸ್ ಇಂಡಸ್ಟ್ರೀಸ್ನ ನೆರವು ಬೇಕಾಗಿದೆ. ಈ ಕಾರಣಕ್ಕೆ ಅಮೆರಿಕದ ವಿದೇಶಾಂಗ ಸಚಿವರು ಗುಜರಾತ್ನ ಜಾಮ್ನಗರಕ್ಕೆ ಬಂದು ಮುಕೇಶ್ ಅಂಬಾನಿಯನ್ನು ಭೇಟಿಯಾಗುತ್ತಿರುವುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ