ಭಾರತ-ನ್ಯೂಜಿಲ್ಯಾಂಡ್ ವ್ಯಾಪಾರ ಒಪ್ಪಂದ ಜಾರಿ; ಭಾರತದ ಸರಕುಗಳಿಗೆ ಸುಂಕರಹಿತ ಪ್ರವೇಶ
ಭಾರತ ಮತ್ತು ನ್ಯೂಜಿಲೆಂಡ್ ಎಫ್ಟಿಎ ಜಾರಿಗೆ ಬಂದಿದೆ. ಎರಡೂ ದೇಶಗಳಿಗೂ ಲಾಭ ತರುವ ವ್ಯಾಪಾರ ಒಪ್ಪಂದ ಇದಾಗಿದೆ. ಭಾರತ ನ್ಯೂಜಿಲೆಂಡ್ ನಡುವೆ ಸದ್ಯ 2.4 ಬಿಲಿಯನ್ ಡಾಲರ್ ವ್ಯಾಪಾರ ನಡೆಯುತ್ತಿದೆ. 2030ರೊಳಗೆ ಇದು 7 ಬಿಲಿಯನ್ ಡಾಲರ್ಗೆ ಏರುವ ನಿರೀಕ್ಷೆ ಇದೆ. ಭಾರತದಿಂದ ನ್ಯೂಜಿಲೆಂಡ್ಗೆ ಆಗುವ ರಫ್ತು ಮತ್ತಷ್ಟು ಏರಿಕೆಯಾಗಿದೆ. ನ್ಯೂಜಿಲೆಂಡ್ನಿಂದ ಭಾರತದಲ್ಲಿ 20 ಬಿಲಿಯನ್ ಡಾಲರ್ನಷ್ಟು ಹೂಡಿಕೆ ಆಗುವ ನಿರೀಕ್ಷೆ ಇದೆ.

ನವದೆಹಲಿ, ಅಕ್ಟೋಬರ್ 19: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ (ಎಫ್ಟಿಎ) ನಿನ್ನೆ ರಾತ್ರಿಯಿಂದಲೇ ಜಾರಿಗೆ ಬಂದಿದೆ. ಉಭಯ ರಾಷ್ಟ್ರಗಳಿಗೂ ವಿನ್ ವಿನ್ ಎನ್ನುವಂತಿರುವ ಈ ಒಪ್ಪಂದವು ದ್ವಿಪಕ್ಷೀಯ ವ್ಯಾಪಾರವನ್ನು 2-3 ಪಟ್ಟು ಹೆಚ್ಚಿಸುವ ನಿರೀಕ್ಷೆ ಇದೆ. ಭಾರತದ ಹೆಚ್ಚಿನ ಸರಕುಗಳ ಆಮದಿಗೆ ನ್ಯೂಜಿಲೆಂಡ್ ಮಾರುಕಟ್ಟೆಯಲ್ಲಿ ಶೂನ್ಯ ಸುಂಕ ಇರುತ್ತದೆ. ಭಾರತಕ್ಕೆ ಬರುವ ನ್ಯೂಜಿಲೆಂಡ್ನ ಬಹಳಷ್ಟು ಸರಕುಗಳಿಗೆ ಸುಂಕ ರಿಯಾಯಿತಿ ಸಿಗುತ್ತದೆ.
ಈ ಒಪ್ಪಂದವು ಭಾರತದಲ್ಲಿ ನ್ಯೂಜಿಲೆಂಡ್ನಿಂದ 20 ಬಿಲಿಯನ್ ಡಾಲರ್ನಷ್ಟು ಹೂಡಿಕೆಗೆ ಎಡೆ ಮಾಡಿಕೊಡಲಿದೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಸರಕು ಮತ್ತು ಸೇವೆಗಳಿಂದ ಸೇರಿ ಒಟ್ಟು ವ್ಯಾಪಾರವು 2.4 ಬಿಲಿಯನ್ ಡಾಲರ್ನಷ್ಟು ಇದೆ. ಎಫ್ಟಿಎಯಿಂದಾಗಿ ಈ ವ್ಯಾಪಾರವು 2030ರಷ್ಟರೊಳಗೆ 7 ಬಿಲಿಯನ್ ಡಾಲರ್ ಅಥವಾ 35,000 ಕೋಟಿ ರೂ ಆಗುವ ಗುರಿ ಇದೆ. ಇದು ಎರಡೂ ದೇಶಗಳ ಆರ್ಥಿಕತೆಗೆ ಉತ್ತಮ ಟಾನಿಕ್ ಆಗಬಹುದು.
ಇದನ್ನೂ ಓದಿ: ಜಿಯೋ ಪ್ಲಾಟ್ಫಾರ್ಮ್ಸ್ ಐಪಿಒ; 8,100 ಕೋಟಿ ರೂ ಆಂಕರ್ ಬುಕ್ಗೆ 2.5 ಲಕ್ಷ ಕೋಟಿ ರೂ ಬಿಡ್ಡಿಂಗ್
ನ್ಯೂಜಿಲೆಂಡ್ನೊಂದಿಗಿನ ಎಫ್ಟಿಎಯಿಂದ ಭಾರತಕ್ಕೆ ಭರಪೂರ ಲಾಭ
ನ್ಯೂಜಿಲೆಂಡ್ ಜೊತೆಗಿನ ಈಗಿನ ವ್ಯಾಪಾರದಲ್ಲಿ ಭಾರತ ಹೆಚ್ಚಿನ ಪಾಲು ಹೊಂದಿದೆ. ಭಾರತದಿಂದಲೇ ಹೆಚ್ಚು ಸರಕುಗಳು ನ್ಯೂಜಿಲೆಂಡ್ಗೆ ರಫ್ತಾಗುತ್ತವೆ. ಆದರೆ, ನ್ಯೂಜಿಲೆಂಡ್ನಿಂದ ಭಾರತ ಆಮದು ಮಾಡಿಕೊಳ್ಳುತ್ತಿರುವುದು ಕಡಿಮೆಯೇ. ಈಗ ಎಫ್ಟಿಎ ಬಂದ ಬಳಿಕ ಭಾರತದ ಸರಕುಗಳಿಗೆ ಸುಂಕರಹಿತ ಪ್ರವೇಶ ಸಿಗುವುದರಿಂದ ರಫ್ತು ಇನ್ನಷ್ಟು ಹೆಚ್ಚಲಿದೆ.
ಜವಳಿ, ಉಡುಪು, ಲೆದರ್, ಪಾದರಕ್ಷೆ, ಕಾರ್ಪೆಟ್ ಉತ್ಪಾದನೆಯಂತಹ ಕಾರ್ಮಿಕ ಅಗತ್ಯತೆಯ ಸೆಕ್ಟರ್ಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಫಾರ್ಮಾ, ಪ್ಲಾಸ್ಟಿಕ್, ಎಂಜಿನಿಯರಿಂಗ್ ಸರಕು, ರಬ್ಬರ್, ಎಲೆಕ್ಟ್ರಿಕಲ್, ಕೆಮಿಕಲ್ಸ್, ಆಹಾರ ಸಂಸ್ಕರಣೆ ಇತ್ಯಾದಿ ಸರಕುಗಳಿಗೂ ಮಾರುಕಟ್ಟೆ ಅವಕಾಶ ಸುಲಭಗೊಳ್ಳಲಿದೆ.
ಇದನ್ನೂ ಓದಿ: ಪಿಎಂ ಕಿಸಾನ್ ಸ್ಕೀಮ್; 24ನೇ ಕಂತಿನ ಹಣ ನವೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಸಾಧ್ಯತೆ
ನ್ಯೂಜಿಲೆಂಡ್ನಿಂದ ಮರದ ದಿಮ್ಮಿಗಳು, ಕೋಕಿಂಗ್ ಕೋಲ್, ಮೆಟಲ್ ಸ್ಕ್ರಾಪ್ಗಳು ಕಡಿಮೆ ಬೆಲೆಗೆ ಭಾರತಕ್ಕೆ ಪೂರೈಕೆಯಾಗಲಿವೆ. ಇದರಿಂದ ಭಾರತದ ಮ್ಯಾನುಫ್ಯಾಕ್ಚರಿಂಗ್ ಉದ್ಯಮಕ್ಕೆ ಅನುಕೂಲವಾಗುತ್ತದೆ.
ಇನ್ನು, ಸರ್ವಿಸ್ ಸೆಕ್ಟರ್ಗಳಲ್ಲೂ ಭಾರತಕ್ಕೆ ಬಹಳಷ್ಟು ಲಾಭಗಳಿವೆ. 118 ಸರ್ವಿಸ್ ಸೆಕ್ಟರ್ಗಳಲ್ಲಿ ನ್ಯೂಜಿಲೆಂಡ್ನ ಮಾರುಕಟ್ಟೆಯೊಳಗೆ ಪ್ರವೇಶ ಸುಲಭಗೊಳ್ಳಲಿದೆ. 2024ರಲ್ಲಿ ಭಾರತದಿಂದ ನ್ಯೂಜಿಲೆಂಡ್ಗೆ ಸರ್ವಿಸ್ ರಫ್ತು 634 ಮಿಲಿಯನ್ ಡಾಲರ್. ಎಫ್ಟಿಎ ಬಂದ ಬಳಿಕ ಇದು ಬಹಳಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




