ಬೆಂಗಳೂರು, ಡಿಸೆಂಬರ್ 14: ರಾಡಿಕೋ ಖೇತಾನ್ (Radico Khaitan) ಎಂಬ ಲಿಕ್ಕರ್ ಕಂಪನಿ ಮಾಲೀಕರಾದ 80 ವರ್ಷದ ಡಾ. ಲಲಿತ್ ಖೇತಾನ್ (Dr Lalit Khaitan) ಭಾರತದ ಹೊಸ ಬಿಲಿಯನೇರ್ ಎನಿಸಿದ್ದಾರೆ. ಭಾರತದಲ್ಲಿ ಸಮೃದ್ಧವಾಗಿ ಬೆಳೆಯುತ್ತಿರುವ ಮದ್ಯ ಮಾರುಕಟ್ಟೆಯಲ್ಲಿ ಖೇತಾನ್ ಕಂಪನಿ ಗಣನೀಯವಾಗಿ ಆದಾಯ ವೃದ್ಧಿ ಕಾಣುತ್ತಾ ಬಂದಿದೆ. ಅದರ ಷೇರು ಮೌಲ್ಯ ಈ ವರ್ಷ ಶೇ. 50ರಷ್ಟು ಹೆಚ್ಚಿದೆ. ಇದರ ಪರಿಣಾಮವಾಗಿ ಮಾಲೀಕ ಡಾ. ಲಲಿತ್ ಅವರ ವೈಯಕ್ತಿಕ ಷೇರುಸಂಪತ್ತು 1 ಬಿಲಿಯನ್ ಡಾಲರ್ ದಾಟಿದೆ. ಈ ಮೂಲಕ 80ರ ವಯಸ್ಸಿನಲ್ಲಿ ಬಿಲಿಯನೇರ್ ಆದ ದಾಖಲೆ ಅವರದ್ದಾಗಿದೆ.
ರಾಡಿಕೋ ಖೇತಾನ್ ಸಂಸ್ಥೆಯ ಹಲವು ಲಿಕ್ಕರ್ ಉತ್ಪನ್ನಗಳು ಟಾಪ್ ಬ್ರ್ಯಾಂಡ್ನದ್ದಾಗಿವೆ. 8ಪಿಎಂ ವಿಸ್ಕಿ, ಮ್ಯಾಜಿಕ್ ಮೊಮೆಂಟ್ಸ್ ವೋಡ್ಕಾ, ಓಲ್ಡ್ ಅಡ್ಮಿರಲ್ ಬ್ರಾಂಡಿ, ರಾಮ್ಪುರ್ ಸಿಂಗಲ್ ಮಾಲ್ಟ್ ಹೀಗೆ ಖೇತಾನ್ ಸಂಸ್ಥೆಯಿಂದ ಉನ್ನತ ಸ್ತರದ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಹಿಡಿತ ಹೊಂದಿವೆ. 380 ಮಿಲಿಯನ್ ಡಾಲರ್ನಷ್ಟು ಆದಾಯವನ್ನು ಈ ಸಂಸ್ಥೆ ಗಿಟ್ಟಿಸಿದೆ.
ಇದನ್ನೂ ಓದಿ: Inspiration: ಕರ್ನಾಟಕದ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಮನೆಗೆಲಸ ಮಾಡುತ್ತಿದ್ದ ವ್ಯಕ್ತಿ ಇವತ್ತು 40 ಕೋಟಿ ರೂ ಕಂಪನಿಯ ಒಡೆಯ
ಮಾರ್ವಾಡಿ ಕುಟುಂಬಕ್ಕೆ ಸೇರಿದ ಲಲಿತ್ ಅವರು ಓದಿನ ದಿನಗಳಲ್ಲಿ ಒಂದೇ ಕಡೆ ಇದ್ದವರಲ್ಲ. ರಾಜಸ್ಥಾನದ ಅಜ್ಮೇರ್ನ ಮೇಯೋ ಕಾಲೇಜು ಮತ್ತು ಕೋಲ್ಕತಾದ ಸೇಂಟ್ ಕ್ಸೇವಿಯರ್ಸ್ ಕಾಲೇಜಿನಲ್ಲಿ ಓದಿದ್ದಾರೆ. ಬೆಂಗಳೂರಿನ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಟೆಕ್ ಮಾಡಿದ್ದಾರೆ. ಅಮೆರಿಕದ ಹಾರ್ವರ್ಡ್ನಲ್ಲಿ ಮ್ಯಾನೇಜರಿಯಲ್ ಫೈನಾನ್ಸ್ ಅಂಡ್ ಅಕೌಂಟಿಂಗ್ ಮಾಡಿದ್ದಾರೆ.
ಲಲಿತ್ ಖೇತನ್ ಅವರು ಯಾವತ್ತೂ ಸಿಗರೇಟು, ಡ್ರಿಂಕ್ಸ್ ಮಾಡಿದವರಲ್ಲ. ಆದರೆ, ಇವತ್ತು ಅವರು ಲಿಕ್ಕರ್ ಸಾಮ್ರಾಜ್ಯದ ಒಬ್ಬ ದೊರೆಯಾಗಿದ್ದಾರೆ. ಇವರ ತಂದೆ ಜಿ.ಎನ್. ಖೇತಾನ್ 1972ರಲ್ಲಿ ರಾಮ್ಪುರ್ ಡಿಸ್ಟಿಲರಿಯನ್ನು ಖರೀದಿ ಮಾಡಿದ ಬಳಿಕ ಎಲ್ಲವೂ ಬದಲಾಗುತ್ತದೆ. ನಷ್ಟದಲ್ಲಿದ್ದ ರಾಮಪುರ್ ಡಿಸ್ಟಿಲರೀಸ್ ಅನ್ನು ಲಾಭದ ಹಳಿಗೆ ತರುತ್ತಾರೆ ಖೇತಾನ್. ಬಳಿಕ ಈ ಕಂಪನಿಯ ಹೆಸರು ರಾಡಿಕೋ ಖೇತಾನ್ ಎಂದಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ