Inspiration: ಕರ್ನಾಟಕದ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಮನೆಗೆಲಸ ಮಾಡುತ್ತಿದ್ದ ವ್ಯಕ್ತಿ ಇವತ್ತು 40 ಕೋಟಿ ರೂ ಕಂಪನಿಯ ಒಡೆಯ

Poor Man Renuka Aradhya Success Story: ರೇಣುಕ ಆರಾಧ್ಯ ಎಂಬುವವರು ಸ್ಥಾಪಿಸಿದ ಕಂಪನಿ ಈಗ ವರ್ಷಕ್ಕೆ 40 ಕೋಟಿ ರೂ ಟರ್ನೋವರ್ ಕಾಣುತ್ತಿದೆ. 150 ಮಂದಿಗೆ ಕೆಲಸ ಕೊಟ್ಟಿದ್ದಾರೆ. ರೇಣುಕ ಬೆಂಗಳೂರಿನ ಸಮೀಪದ ಒಂದು ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬಡತನದಲ್ಲೇ ಬೆಳೆದ ವ್ಯಕ್ತಿ. ಮನೆಗೆಲಸ, ಭಿಕ್ಷೆ, ಸೆಕ್ಯೂರಿಟಿ ಗಾರ್ಡ್, ಮೆಷಿನ್ ಆಪರೇಟರ್, ಡ್ರೈವರ್ ಆಗಿ ಕೆಲಸ ಮಾಡಿದ್ದ ರೇಣುಕಾ ಇವತ್ತು ಯಶಸ್ವಿ ವ್ಯಕ್ತಿ ಎನಿಸಿದ್ದಾರೆ.

Inspiration: ಕರ್ನಾಟಕದ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಮನೆಗೆಲಸ ಮಾಡುತ್ತಿದ್ದ ವ್ಯಕ್ತಿ ಇವತ್ತು 40 ಕೋಟಿ ರೂ ಕಂಪನಿಯ ಒಡೆಯ
ರೇಣುಕ ಆರಾಧ್ಯ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 10, 2023 | 6:39 PM

ಏನಾದರೂ ಸಾಧಿಸಬೇಕೆನ್ನುವ ಛಲ ಇದ್ದರೆ ಸಾಕು ಎಂಥದ್ದೇ ಅಡೆತಡೆಗಳು ನಮ್ಮನ್ನು ತಡೆಯಲು ಆಗುವುದಿಲ್ಲ. ಆಗದು ಎಂದು ಕೈಕಟ್ಟಿ ಕೂತರೆ ಸಾಗದು ಕೆಲಸವು ಮುಂದೆ ಎಂದು ಡಾ. ರಾಜಕುಮಾರ್ ಅಭಿನಯದ ಬಂಗಾರದ ಮನುಷ್ಯ ಚಿತ್ರದ ಸ್ಫೂರ್ತಿದಾಯಕ ಹಾಡೊಂದು ಇದೆ. ಇದಕ್ಕೆ ನಿದರ್ಶನ ರೇಣುಕ ಆರಾಧ್ಯ. ಬೆಂಗಳೂರಿನ ಸಮೀಪದ ಒಂದು ಪುಟ್ಟ ಗ್ರಾಮದಲ್ಲಿ ಹುಟ್ಟಿದ ಇವರು (Renuka Aradhya) ಸಾಕಷ್ಟು ಬಡತನದ ಬೇಗೆಯಲ್ಲಿ ಬೆಂದು ಮೇಲೆದ್ದು ಸೋಲು ಗೆಲುವುಗಳನ್ನು ಕಂಡು ಇವತ್ತು 40 ಕೋಟಿ ರೂ ಮೌಲ್ಯದ ಕಂಪನಿಯ ಒಡೆಯರಾಗಿದ್ದಾರೆ. ಇವರ ಕಥೆ (Inspirational Story) ಇವತ್ತಿನ ಬಡ ಮಧ್ಯಮವರ್ಗದ ಜನರಿಗೆ ಹೇಳಿ ಮಾಡಿಸಿದಂತಿದೆ.

ಬಡ ಕುಟುಂಬದಲ್ಲಿ ಹುಟ್ಟಿದ ರೇಣುಕ ಆರಾಧ್ಯ 10ನೇ ತರಗತಿ ಬಳಿಕ ಕುಟುಂಬ ಪೋಷಣೆಗೆ ಮನೆಗೆಲಸ ಮಾಡಿ ಹಣ ಸಂಪಾದಿಸತೊಡಗಿದ್ದರು. ಬಳಿಕ ದೇವಸ್ಥಾನದ ಗುಡಿಯಲ್ಲಿ ಕೆಲಸ ಮಾಡತೊಡಗಿ, ಮನೆಮನೆಗೆ ಹೋಗಿ ಭಿಕ್ಷಾಟನೆ ಕೂಡ ಮಾಡಿದರು. ಆದರೆ, ಅದರಿಂದ ಏನೂ ಗೀಟದ ಕಾರಣ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಆರಂಭಿಸಿದರು.

ಅದೇ ವೇಳೆ ಮೆಷಿನ್ ಆಪರೇಶನ್ ಕೆಲಸ ಕಲಿತು ಲೇಥ್ ಮೆಷಿನ್ ಫ್ಯಾಕ್ಟರಿಯಲ್ಲಿ ಕೆಲಸ ಪಡೆದರು. ಆನಂತರ ಅವರಿಗೆ ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಕೆಲಸ ಸಿಕ್ಕಿತು.

ಇದನ್ನೂ ಓದಿ: Success Story: ಹೋಟೆಲ್​ನಲ್ಲಿ ವೈಟರ್ ಆಗಿದ್ದ ಜಯಗಣೇಶ್ ಐಎಎಸ್ ಅಧಿಕಾರಿಯಾದ ಕತೆಯಿದು

20ರ ವಯಸ್ಸಿನಲ್ಲಿ ಮದುವೆಯಾದ ರೇಣುಕ ಆರಾಧ್ಯ

ಉದ್ಯೋಗಗಕ್ಕಾಗಿ ಕಷ್ಟಪಡುತ್ತಿದ್ದರೂ ರೇಣುಕ ಆರಾಧ್ಯ ಬಹಳ ಸಣ್ಣ ವಯಸ್ಸಿನಲ್ಲೇ ವಿವಾಹವಾಗಲು ನಿರ್ಧರಿಸಿದ್ದರು. ಅವರು ಮದುವೆಯಾದಾಗ ಇನ್ನೂ 21 ವರ್ಷ ಕೂಡ ಆಗಿರಲಿಲ್ಲ. ಮದುವೆ ಆದರೆ ಜವಾಬ್ದಾರಿ ಹೆಚ್ಚಿ, ತಾನು ಇನ್ನೂ ಹೆಚ್ಚು ಕೆಲಸ ಮಾಡಲು ಮನಸ್ಸಾಗುತ್ತದೆ ಎಂಬುದು ಅವರ ಆಲೋಚನೆ.

ಮೊದಲ ಬಿಸಿನೆಸ್​ನಿಂದ ನಷ್ಟ; ಚೇತರಿಕೆ ಸಾಧ್ಯವಾಗಲಿಲ್ಲ

ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿದ್ದಾಗಲೇ ಅವರು ಮದುವೆ ಆದರು. ಆಗಲೇ ಅವರು ಸ್ವಂತ ಬಿಸಿನೆಸ್ ಮಾಡುವ ಐಡಿಯಾ ಮಾಡಿದರು. ಸ್ಯೂಟ್​ಕೇಸ್ ಕವರ್​ಗಳನ್ನು ಮಾರತೊಡಗಿದರು. ಆದರೆ, ಅದರಿಂದ 30,000 ರೂ ನಷ್ಟ ಮಾಡಿಕೊಂಡರು. ಮತ್ತೆ ಅವರು ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಮರಳಬೇಕಾಯಿತು.

ಡ್ರೈವಿಂಗ್ ಕೆಲಸ ಆರಂಭಿಸಿದ ರೇಣುಕ

ಈಗ ರೇಣುಕ ಆಧಾಧ್ಯ ಡ್ರೈವಿಂಗ್ ಕೆಲಸ ಕಲಿತು, ಟ್ರಾವಲ್ ಏಜೆನ್ಸಿಯಲ್ಲಿ ಚಾಲಕನಾಗಿ ಕೆಲಸ ಮಾಡಿದರು. ನಾಲ್ಕು ವರ್ಷ ಅಲ್ಲಿ ಕೆಲಸ ಮಾಡಿ ತನ್ನದೇ ಸ್ವಂತ ಟ್ರಾವಲ್ ಏಜೆನ್ಸಿ ಆರಂಭಿಸಲು ನಿರ್ಧರಿಸಿದರು.

ಇದನ್ನೂ ಓದಿ: Inspiring: ಸ್ಲಂನಲ್ಲಿ ಬೆಳೆದು, 12 ವರ್ಷಕ್ಕೆ ಮದುವೆಯಾಗಿ, ಕೌಟುಂಬಿಕ ಹಿಂಸಾಚಾರಕ್ಕೊಳಗಾದರೂ ಜಗ್ಗದೇ ಬೆಳೆದ ಕಲ್ಪನಾ ಸರೋಜ್; ಇವತ್ತು 7 ಕಂಪನಿಗಳ ಒಡತಿ

ಪ್ರವಾಸಿ ಕ್ಯಾಬ್ಸ್ ಪ್ರೈ ಲಿ ಎಂಬ ಕಂಪನಿ ಸ್ಥಾಪಿಸಿದರು. ತಾನು ಉಳಿಸಿಟ್ಟ ಹಣವನ್ನು ಇದಕ್ಕೆ ಹಾಕಿದರು. ಬ್ಯಾಂಕುಗಳಿಂದ ಒಂದಷ್ಟು ಸಾಲ ಪಡೆದು ಮೊದಲ ಸ್ವಂತ ಕಾರು ಖರೀದಿಸಿದರು. ಒಂದು ವರ್ಷದ ಬಳಿಕ ಇನ್ನೊಂದು ಕಾರು ಖರೀದಿಸಿದರು.

ಇದೇ ವೇಳೆ, ಬೇರೊಂದು ಟ್ರಾವಲ್ ಏಜೆನ್ಸಿ ಮಾರಾಟಕ್ಕಿರುವ ವಿಚಾರ ತಿಳಿದು ಅದನ್ನು 6 ಲಕ್ಷ ರೂಗೆ ಖರೀದಿಸಿದರು. ಆ ಏಜೆನ್ಸಿ ಬಳಿ 35 ಕ್ಯಾಬ್​ಗಳಿದ್ದವು. ಅಲ್ಲಿಂದ ರೇಣುಕ ಆರಾಧ್ಯ ಅವರ ಅದೃಷ್ಟರೇಖೆ ಇನ್ನಷ್ಟು ಗಾಢವಾಯಿತು.

ಅಮೇಜಾನ್ ತನ್ನ ಜಾಹೀರಾತುಗಳಿಗೆ ರೇಣುಕಾರ ಕಂಪನಿಯನ್ನು ಜೋಡಿಸಿಕೊಂಡಿತು. ವಾಲ್ಮಾರ್ಟ್, ಜನರಲ್ ಮೋಟಾರ್ಸ್ ಮೊದಲಾದ ಕಂಪನಿಗಳೂ ಇವರೊಂದಿಗೆ ವ್ಯವಹಾರ ಮಾಡಿದವು. ಇವರ ಕಂಪನಿಯ ವ್ಯವಹಾರ ದಿನೇ ದಿನೇ ಹೆಚ್ಚುತ್ತಾ ಬಂದಿದ್ದು ಇವತ್ತು ವಹಿವಾಟು 40 ಕೋಟಿ ರೂ ದಾಟಿದೆ.

150ಕ್ಕೂ ಹೆಚ್ಚು ಮಂದಿಗೆ ಕೆಲಸ ಕೊಟ್ಟಿರುವ ರೇಣುಕ ಆರಾಧ್ಯ ಇಂದು ಬಡಮಂದಿಯ ಆಶೋತ್ತರಗಳಿಗೆ ನಿದರ್ಶನವಾಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ