Cash Rules: ಮನೆಯಲ್ಲಿ ಎಷ್ಟು ನಗದು ಹಣ ಇಟ್ಟುಕೊಳ್ಳಬಹುದು? ಕ್ಯಾಷ್ ವಹಿವಾಟು ಎಷ್ಟರವರೆಗೆ ಸಾಧ್ಯ? ಕೆಲ ಕಾನೂನು ತಿಳಿಯಿರಿ
ಮನೆಯಲ್ಲಿ ಕ್ಯಾಷ್ ಇಟ್ಟುಕೊಳ್ಳಲು ಮಿತಿ ಇಲ್ಲ, ಆದರೆ, ನಿರ್ಬಂಧತೆ ಇದೆ. ಆ ಹಣಕ್ಕೆ ಸೂಕ್ತ ದಾಖಲೆ ನಿಮ್ಮ ಜೊತೆ ಇರಬೇಕು. ದಾಖಲೆ ಇಲ್ಲದ ಹಣವೇನಾದರೂ ಐಟಿ ಇಲಾಖೆಗೆ ಸಿಕ್ಕಿದಲ್ಲಿ ಶೇ. 137ರಷ್ಟು ದಂಡ ಕಟ್ಟಬೇಕಾಗುತ್ತದೆ ಹುಷಾರ್. ಒಂದು ಹಣಕಾಸು ವರ್ಷದಲ್ಲಿ 20 ಲಕ್ಷ ರೂಗಿಂತ ಹೆಚ್ಚಿನ ನಗದು ವಹಿವಾಟು ನಡೆಸಿದರೆ ಪ್ಯಾನ್, ಆಧಾರ್ ದಾಖಲೆ ಒದಗಿಸಬೇಕು.
ಕೇಂದ್ರ ಸಂಸದರೊಬ್ಬರಿಗೆ ಸೇರಿದ ಸ್ಥಳಗಳಿಂದ ಐಟಿ ಅಧಿಕಾರಿಗಳು 300 ಕೋಟಿ ರೂಗೂ ಹೆಚ್ಚು ಮೊತ್ತದಷ್ಟು ನಗದು ಹಣವನ್ನು ವಶಕ್ಕೆ ಪಡೆದಿರುವ ಸುದ್ದಿ ಇದೆ. ಈ ಹಿಂದೆಯೂ ಹಲವು ಐಟಿ ರೇಡ್ಗಳಲ್ಲಿ ಅಧಿಕಾರಿಗಳು ಕಂತೆ ಕಂತೆ ನೋಟುಗಳನ್ನು ಜಫ್ತಿ ಮಾಡಿಕೊಂಡಿರುವ ದೃಶ್ಯವನ್ನು ಟಿವಿಗಳಲ್ಲಿ ನೋಡಿರುತ್ತೀರಿ. ಹಾಗಿದ್ದರೆ, ನೋಟುಗಳನ್ನು ಮನೆಯಲ್ಲಿ ಎಷ್ಟು ಇಟ್ಟುಕೊಳ್ಳಬಹುದು. ನಗದು ಹಣ ಇಟ್ಟುಕೊಳ್ಳಲು (hoarding of cash money) ಮಿತಿ ಎಷ್ಟಿದೆ? ಆದಾಯ ತೆರಿಗೆ ಕಾಯ್ದೆ ಪ್ರಕಾರ, ಮನೆಯಲ್ಲಿ ಇರಿಸಲಾಗುವ ನಗದು ಹಣಕ್ಕೆ ಮಿತಿ ಇರುವುದಿಲ್ಲ. ಎಷ್ಟು ಬೇಕಾದರೂ ಕ್ಯಾಷ್ ಇಟ್ಟುಕೊಳ್ಳಬಹುದು. ಆದರೆ, ಆ ಹಣಕ್ಕೆ ಸೂಕ್ತ ದಾಖಲೆ ಅಥವಾ ವಿವರಣೆ ಇರಬೇಕು.
ಒಂದು ವೇಳೆ, ನೀವು ಮನೆಯಲ್ಲಿ ಇರಿಸಿಕೊಂಡಿರುವ ಹಣಕ್ಕೆ ಯಾವುದೇ ದಾಖಲೆ ಇಲ್ಲವಾದರೆ, ಅಂದರೆ ದಾಖಲೆ ಇಲ್ಲದ ಹಣವಾಗಿದ್ದರೆ ಐಟಿ ಇಲಾಖೆ ಆ ಹಣಕ್ಕೆ ಶೇ. 137ರವರೆಗೂ ದಂಡ ವಿಧಿಸಬಹುದು. ಉದಾಹರಣೆಗೆ, ಒಂದು ಕೋಟಿ ರೂ ದಾಖಲೆ ರಹಿತ ಹಣ ಇದ್ದರೆ ಐಟಿ ಇಲಾಖೆ 1.37 ಕೋಟಿ ರೂವರೆಗೂ ದಂಡ ವಿಧಿಸಬಹುದು.
ಇದನ್ನೂ ಓದಿ: ಐಟಿ ದಾಳಿ ನಡೆಯುವ ಮುನ್ನ ಇಲಾಖೆ ತಯಾರಿ ಹೇಗಿರುತ್ತೆ? ಸುಳ್ಳು ಕೇಸ್ ದಾಖಲಿಸುವುದಿಲ್ಲವಾ ಇಲಾಖೆ?
ನಗದು ಮತ್ತು ಹಣ ವರ್ಗಾವಣೆ ನಿಯಮಗಳನ್ನು ತಿಳಿಯಿರಿ…
- ಯಾವುದೇ ಸಾಲ ಅಥವಾ ಠೇವಣಿಗಾಗಿ ಒಬ್ಬ ವ್ಯಕ್ತಿ 20,000 ರೂಗಿಂತ ಹೆಚ್ಚಿನ ಮೊತ್ತದ ನಗದು ಹಣವನ್ನು ಸ್ವೀಕರಿಸುವಂತಿಲ್ಲ.
- ಒಬ್ಬ ವ್ಯಕ್ತಿಯ ಚಿರಾಸ್ತಿ ಮಾರಾಟದಲ್ಲೂ 20,000 ರೂಗಿಂತ ಹೆಚ್ಚಿನ ಮೊತ್ತದ ನಗದು ವರ್ಗಾವಣೆಗೆ ಅವಕಾಶ ಇರುವುದಿಲ್ಲ.
- ಒಂದು ವಹಿವಾಟಿನಲ್ಲಿ 50,000 ರೂಗಿಂತ ಹೆಚ್ಚಿನ ಮೊತ್ತದ ಠೇವಣಿ ಇಡಬೇಕಾದರೆ ಅಥವಾ ವಿತ್ಡ್ರಾ ಮಾಡಬೇಕಾದರೆ ಪ್ಯಾನ್ ನಂಬರ್ ದಾಖಲಿಸುವುದು ಕಡ್ಡಾಯ.
- ಯಾವುದೇ ಹಣಕಾಸು ವರ್ಷದಲ್ಲಿ 20 ಲಕ್ಷ ರೂಗಿಂತ ಹೆಚ್ಚಿನ ಮೊತ್ತದ ನಗದು ವಹಿವಾಟು ಆದರೆ ಪ್ಯಾನ್ ಮತ್ತು ಆಧಾರ್ ವಿವರಗಳನ್ನು ಒದಗಿಸಬೇಕು.
- ಆಸ್ತಿ ಮಾರಾಟದಲ್ಲಿ 30 ಲಕ್ಷ ರೂಗಿಂತ ಹೆಚ್ಚಿನ ಮೊತ್ತದ ನಗದು ಹಣವನ್ನು ಪಾವತಿಗೆ ಬಳಸಿದರೆ ತನಿಖೆ ಎದುರಿಸಬೇಕಾಗಬಹುದು.
- ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಟ್ ಮೂಲಕ ಒಂದು ವಹಿವಾಟಿನಲ್ಲಿ ಒಂದು ಲಕ್ಷ ರೂಗಿಂತ ಹೆಚ್ಚಿನ ಮೊತ್ತದ ಹಣ ವರ್ಗಾವಣೆ ಮಾಡುವಂತಿಲ್ಲ.
- ಕುಟುಂಬ ಸದಸ್ಯರು ಒಂದು ದಿನದಲ್ಲಿ 2 ಲಕ್ಷ ರೂಗಿಂತ ಹೆಚ್ಚಿನ ಮೊತ್ತವನ್ನು ವಿತ್ಡ್ರಾ ಮಾಡಲು ನಿರ್ಬಂಧ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ