Shell Companies: 3 ವರ್ಷದಲ್ಲಿ 2.38 ಲಕ್ಷ ಶೆಲ್ ಕಂಪೆನಿಗಳ ನಿರ್ಮೂಲನೆ; ಅಂಕಿ- ಅಂಶ ತೆರೆದಿಟ್ಟ ಕೇಂದ್ರ ಸರ್ಕಾರ
ಕಳೆದ 3 ವರ್ಷದಲ್ಲಿ 2.38 ಲಕ್ಷ ಶೆಲ್ ಕಂಪೆನಿಗಳನ್ನು ಗುರುತಿಸಿ, ನಿರ್ಮೂಲನೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರದಿಂದ ರಾಜ್ಯಸಭೆಗೆ ಮಾಹಿತಿ ನೀಡಲಾಗಿದೆ.
2018ನೇ ಇಸವಿಯಿಂದ 2021ರ ಮಧ್ಯೆ 2.38 ಲಕ್ಷ “ಶೆಲ್” ಕಂಪೆನಿಗಳನ್ನು (Shell Company) ಗುರುತಿಸಿ, ನಿರ್ಮೂಲನೆ ಮಾಡಲಾಗಿದೆ ಎಂದು ಸರ್ಕಾರದಿಂದ ಮಂಗಳವಾರ (ಜುಲೈ 27) ರಾಜ್ಯಸಭೆಯಲ್ಲಿ ಮಾಹಿತಿ ನೀಡಲಾಗಿದೆ. ಪ್ರಶ್ನೆಯೊಂದಕ್ಕೆ ಲಿಖಿತವಾಗಿ ಉತ್ತರ ನೀಡಿದ ಕಾರ್ಪೊರೇಟ್ ವ್ಯವಹಾರಗಳು ರಾಜ್ಯ ಸಚಿವ ರಾವ್ ಇಂದ್ರಜಿತ್ ಸಿಂಗ್, ಕಂಪೆನಿ ಕಾಯ್ದೆ ಅಡಿಯಲ್ಲಿ ಶೆಲ್ ಕಂಪೆನಿಗಳು ಅನ್ನೋದಿಕ್ಕೆ ಯಾವುದೇ ವ್ಯಾಖ್ಯಾನ ಇಲ್ಲ. ಸಾಮಾನ್ಯವಾಗಿ ಯಾವುದಾದರೂ ಸಂಸ್ಥೆಯು ಸಕ್ರಿಯ ವ್ಯವಹಾರ ಕಾರ್ಯಾಚರಣೆಯನ್ನು ನಡೆಸದೆ ಅಥವಾ ಮಹತ್ವದ ಆಸ್ತಿ ಹೊಂದಿರದೆ, ಕೆಲವು ಪ್ರಕರಣಗಳಲ್ಲಿ ತೆರಿಗೆ ತಪ್ಪಿಸುವುದಕ್ಕೆ, ಅಕ್ರಮ ಹಣ ವರ್ಗಾವಣೆಗೆ, ಬೇನಾಮಿ ಆಸ್ತಿಗಳಿಗಾಗಿ ಮುಂತಾದ ಕಾನೂನುಬಾಹಿರವಾದ ಉದ್ದೇಶಗಳಿಗೆ ಈ ಕಂಪೆನಿಗಳನ್ನು ಬಳಸಲಾಗುತ್ತದೆ.
ಸಚಿವರು ಇನ್ನೂ ಮುಂದುವರಿದು ಮಾತನಾಡಿ, ಶೆಲ್ ಕಂಪೆನಿಗಳಿಗೆ ಸಂಬಂಧಿಸಿದಂತೆ ಕಣ್ಣಿಡುವ ಸಲುವಾಗಿಯೇ ಸರ್ಕಾರದಿಂದ ವಿಶೇಷ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಇದರ ಜತೆಗೆ ಶೆಲ್ ಕಂಪೆನಿಗಳನ್ನು ಗುರುತಿಸುವ ಸಲುವಾಗಿ ಕೆಲವು ಸೂಚನೆಗಳನ್ನು ನೀಡಲಾಗಿದ್ದು, ಶಿಫಾರಸಿನ ಅಡಿಯಲ್ಲಿ ಬರುವ ಇತರ ಸಂಗತಿಗಳ ಬಗ್ಗೆ ಕೂಡ ಆ ಟಾಸ್ಕ್ ಫೋರ್ಸ್ ಕಣ್ಗಾವಲು ಇಡಲಿದೆ.
“ಶೆಲ್ ಕಂಪೆನಿಗಳನ್ನು ಗುರುತಿಸಲು ಮತ್ತು ಅವುಗಳ ಮೇಲೆ ದಾಳಿ ನಡೆಸುವುದಕ್ಕಾಗಿಯೇ ಕಳೆದ ಮೂರು ವರ್ಷಗಳಿಂದ ಸರ್ಕಾರವು ವಿಶೇಷ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿದೆ,” ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಹೇಳಿಕೆಯಿಂದ ಗೊತ್ತಾಗಿದೆ. ಅಂದಹಾಗೆ 2018ರಿಂದ 2021ರ ಮಧ್ಯೆ ನಿರ್ಮೂಲನೆ ಮಾಡಿರುವ ಶೆಲ್ ಕಂಪೆನಿಗಳ ದತ್ತಾಂಶಗಳನ್ನು ಸಹ ಸಚಿವರು ಮಂಡಿಸಿದ್ದಾರೆ. ಆ ದತ್ತಾಂಶದ ಪ್ರಕಾರವಾಗಿ ಕಳೆದ ಮೂರು ವರ್ಷದಲ್ಲಿ 2,38,223 ಶೆಲ್ ಕಂಪೆನಿಗಳನ್ನು ಪತ್ತೆ ಹಚ್ಚಿ, ತೊಡೆದುಹಾಕಲಾಗಿದೆ.
ಇದನ್ನೂ ಓದಿ: ಡಿಎಚ್ಎಫ್ಎಲ್ನಿಂದ 14,046 ಕೋಟಿ ರೂ. ಪಿಎಂಎವೈ ವಂಚನೆ; ಸಿಬಿಐನಿಂದ ಪ್ರಕರಣ ದಾಖಲು
(Last 3 Years 2.38 Lakh Shell Companies Identified And Struck Off By Central Government )