LIC IPO: ಎಲ್​ಐಸಿ ಐಪಿಒ ಬಿಡುಗಡೆ ದಿನಾಂಕ ಮರುನಿಗದಿ ಸಾಧ್ಯತೆ: ನಿರ್ಮಲಾ ಸೀತಾರಾಮನ್ ಸುಳಿವು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 03, 2022 | 6:00 AM

Nirmala Sitharaman: ಜಾಗತಿಕ ವಿದ್ಯಮಾನಗಳನ್ನು ಗಮನಿಸಿ ಸರ್ಕಾರವು ಐಪಿಒ ದಿನಾಂಕಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕಾಗಬಹುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

LIC IPO: ಎಲ್​ಐಸಿ ಐಪಿಒ ಬಿಡುಗಡೆ ದಿನಾಂಕ ಮರುನಿಗದಿ ಸಾಧ್ಯತೆ: ನಿರ್ಮಲಾ ಸೀತಾರಾಮನ್ ಸುಳಿವು
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
Follow us on

ಭಾರತದ ಷೇರು ಹೂಡಿಕೆದಾರರು ಕಾತರದಿಂದ ನಿರೀಕ್ಷಿಸುತ್ತಿರುವ ಸರ್ಕಾರಿ ಸ್ವಾಮ್ಯದ ದೈತ್ಯ ವಿಮಾ ಕಂಪನಿ ಭಾರತೀಯ ಜೀವ ವಿಮಾ ನಿಗಮದ (Life Insurance Corporation of India – LIC) ಆರಂಭಿಕ ಸಾರ್ವಜನಿಕ ಹೂಡಿಕೆ ಕೊಡುಗೆ (Intial Public Offer – IPO) ಮುಂದಿನ ಆರ್ಥಿಕ ವರ್ಷಕ್ಕೆ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ. ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಪರಿಣಾಮಗಳನ್ನು ಭಾರತ ಸರ್ಕಾರ ಅಂದಾಜಿಸುತ್ತಿದೆ. ಆರ್ಥಿಕತೆಗೆ ಇದು ಪ್ರತಿಕೂಲ ಎನಿಸಿದರೆ ಎಲ್​ಐಸಿ ಐಪಿಒ ಮುಂದೂಡುವ ಸಾಧ್ಯತೆಗಳು ನಿಚ್ಚಳವಾಗಿವೆ ಎಂದು ಹಣಕಾಸು ಇಲಾಖೆಯ ಮೂಲಗಳನ್ನು ಉಲ್ಲೇಖಿಸಿ ಮನಿ ಕಂಟ್ರೋಲ್ ಮತ್ತು ಬ್ಯುಸಿನೆಸ್​ಲೈನ್ ಜಾಲತಾಣಗಳು ವರದಿ ಮಾಡಿವೆ.

ಎಲ್​ಐಸಿ ಐಪಿಒ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲು ಇದೇ ವಾರದಲ್ಲಿ ಕೇಂದ್ರ ವಿತ್ತ ಸಚಿವಾಲಯದ ಅಧಿಕಾರಿಗಳು ಸಭೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಐಪಿಒ ದಿನಾಂಕಗಳನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಈ ವಿಚಾರದಲ್ಲಿ ಸರ್ಕಾರದ ನಿಲುವು ಸ್ಪಷ್ಟಪಡಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಜಾಗತಿಕ ವಿದ್ಯಮಾನಗಳನ್ನು ಗಮನಿಸಿ ಸರ್ಕಾರವು ಐಪಿಒ ದಿನಾಂಕಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕಾಗಬಹುದು ಎಂದು ಹೇಳಿದ್ದರು.

‘ಭಾರತದ ಆರ್ಥಿಕ ಪರಿಸ್ಥಿತಿಯನ್ನಷ್ಟೇ ಗಮನದಲ್ಲಿ ಇರಿಸಿಕೊಂಡು ನಾವು ಐಪಿಒಗೆ ದಿನಾಂಕಗಳನ್ನು ನಿಗದಿಪಡಿಸಿದ್ದೆವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಉಕ್ರೇನ್-ರಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಾಗತಿಕ ವಿದ್ಯಮಾನಗಳು ಬದಲಾಗಿವೆ. ಹೀಗಾಗಿ ಎಲ್​ಐಸಿ ಐಪಿಒ ದಿನಾಂಕಗಳನ್ನೂ ಮರುನಿಗದಿ ಮಾಡಬೇಕಾದ ಸಂದರ್ಭ ಬಂದಿದೆ’ ಎಂದು ಸಚಿವರು ಹೇಳಿದ್ದರು.

ಎಲ್​ಐಸಿ ಐಪಿಒಗಾಗಿ ಕರಡು ಪ್ರಸ್ತಾವವನ್ನು ಫೆಬ್ರುವರಿ 13ರಂದು ಬಿಡುಗಡೆ ಮಾಡಿತ್ತು. ಐಪಿಒ ಮೂಲಕ ಸರ್ಕಾರವು ಎಲ್​ಐಸಿಯಲ್ಲಿದ್ದ ತನ್ನ ಪಾಲಿನಲ್ಲಿ ಶೇ 5ರಷ್ಟನ್ನು ಮಾರಾಟ ಮಾಡಲು ಮುಂದಾಗಿತ್ತು. 3.16 ಕೋಟಿ ಷೇರುಗಳನ್ನು ಮಾರುಕಟ್ಟೆ ಬಿಡುಗಡೆ ಮಾಡುವ ಉದ್ದೇಶ ಹೊಂದಿತ್ತು. ‘ಈಗಾಗಲೇ ಷೇರುಪೇಟೆಯಲ್ಲಿ ಎಲ್​ಐಸಿ ಐಪಿಒ ಬಗ್ಗೆ ಮಾತುಕತೆ ಬಿರುಸಾಗಿ ನಡೆಯುತ್ತಿದೆ. ಹೂಡಿಕೆದಾರರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಇದೇ ದಿನಾಂಕಗಳಂದು ಐಪಿಒ ಘೋಷಿಸಲು ಸರ್ಕಾರ ನಿರ್ಧರಿಸಿದೆ’ ಎಂದು ಈ ಹಿಂದೆ ಹೇಳಿದ್ದರು. ಆದರೆ ಇದೀಗ ಸರ್ಕಾರದ ಚಿಂತನೆ ಬದಲಾಗಬಹುದು ಎಂಬ ಮುನ್ನೋಟವನ್ನು ಬ್ಯುಸಿನೆಸ್​ಲೈನ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ನೀಡಿದ್ದಾರೆ.

ಪೂರ್ವ ಯೂರೋಪ್​ನಲ್ಲಿ ನಡೆಯುತ್ತಿರುವ ಮಿಲಿಟರಿ ಸಂಘರ್ಷವು ವಿಶ್ವದಾದ್ಯಂತ ತಲ್ಲಣಗಳನ್ನು ಸೃಷ್ಟಿಸಿದೆ. ಉಕ್ರೇನ್ ಮೇಲಿನ ದಾಳಿಗೆ ಪ್ರತಿಯಾಗಿ ವಿಶ್ವದ ಹಲವು ಸರ್ಕಾರಗಳು ರಷ್ಯಾ ವಿರುದ್ಧ ದಿಗ್ಬಂಧಗಳನ್ನು ಹೇರಿವೆ. ಮುಖ್ಯವಾಗಿ ಕಮಾಡಿಟಿ ಮಾರುಕಟ್ಟೆಯು ಕುಸಿಯುತ್ತಿದೆ. ಕಚ್ಚಾತೈಲದ ಬೆಲೆ ಬ್ಯಾರೆಲ್​ಗೆ 110 ಅಮೆರಿಕನ್ ಡಾಲರ್​ನಷ್ಟು ಏರಿಕೆಯಾಗಿದೆ. ರಷ್ಯಾ ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ ಎದ್ದಿದೆ. ಯೂರೋಪ್​ನ ಷೇರುಪೇಟೆಗಳಲ್ಲಿಯೂ ಷೇರುಗಳು ಮೌಲ್ಯ ಕಳೆದುಕೊಳ್ಳುತ್ತಿವೆ. ಜರ್ಮನಿ ಮತ್ತು ಫ್ರಾನ್ಸ್​ನ ವಿನಿಮಯ ಕೇಂದ್ರಗಳು ಶೇ 3ರಷ್ಟು ಬಂಡವಾಳ ಕಳೆದುಕೊಂಡಿವೆ. ಕಳೆದ ಕೆಲವು ವಾರಗಳಿಂದ ಇದೇ ಬೆಳವಣಿಗೆ ಕಂಡುಬರುತ್ತಿದೆ.

ಇದನ್ನೂ ಓದಿ: LIC IPO: ಅಕಾಲದಲ್ಲಿ ಬರುತ್ತಿದೆಯೇ ಎಲ್​ಐಸಿ ಐಪಿಒ: ಹೂಡಿಕೆ ತಜ್ಞರಿಂದ ಹಲವು ಪ್ರಶ್ನೆಗಳು

ಇದನ್ನೂ ಓದಿ: LIC IPO: ಎಲ್​ಐಸಿ ಐಪಿಒ ಹೂಡಿಕೆಯಲ್ಲಿ ಲಾಭವೇ ಆಗುತ್ತೆ ಎಂಬ ಖಾತ್ರಿಯಿಲ್ಲ: ವೈಭವ್ ಅಗರ್​ವಾಲ್