Vedanta: ವೇದಾಂತದಿಂದ ಒಂದೇ ಆರ್ಥಿಕ ವರ್ಷದಲ್ಲಿ ಮೂರನೇ ಬಾರಿಗೆ ಡಿವಿಡೆಂಡ್; ಈ ಬಾರಿ ಷೇರಿಗೆ 13 ರೂ.

Vedanta: ವೇದಾಂತದಿಂದ ಒಂದೇ ಆರ್ಥಿಕ ವರ್ಷದಲ್ಲಿ ಮೂರನೇ ಬಾರಿಗೆ ಡಿವಿಡೆಂಡ್; ಈ ಬಾರಿ ಷೇರಿಗೆ 13 ರೂ.
ಸಾಂದರ್ಭಿಕ ಚಿತ್ರ

ಪ್ರಸಕ್ತ ಹಣಕಾಸು ವರ್ಷದಲ್ಲಿ ಮೂರನೇ ಬಾರಿಗೆ ವೇದಾಂತ ಲಿಮಿಟೆಡ್ ಲಾಭಾಂಶವನ್ನು ಘೋಷಣೆ ಮಾಡಿದೆ. ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

TV9kannada Web Team

| Edited By: Srinivas Mata

Mar 02, 2022 | 9:17 PM

ಶತಕೋಟ್ಯಧಿಪತಿ ಅನಿಲ್ ಅಗರ್​ವಾಲ್ ನೇತೃತ್ವದ ವೇದಾಂತ ಲಿಮಿಟೆಡ್ ಪ್ರತಿ ಈಕ್ವಿಟಿ ಷೇರಿಗೆ 13 ರೂಪಾಯಿಗಳ ಮಧ್ಯಂತರ ಲಾಭಾಂಶವನ್ನು (Dividend) ಘೋಷಿಸಿದ್ದು, ಇದು ಗಣಿಗಾರಿಕೆ ವ್ಯವಹಾರ ನಡೆಸುವ ಈ ಪ್ರಮುಖ ಕಂಪೆನಿಗೆ 4,832 ಕೋಟಿ ರೂಪಾಯಿಗಳ ಮೊತ್ತ ವೆಚ್ಚ ಆಗುವುದಕ್ಕೆ ಕಾರಣ ಆಗುತ್ತದೆ. ಇದು 2021-22ರ ಆರ್ಥಿಕ ವರ್ಷಕ್ಕೆ ಮೂರನೇ ಮಧ್ಯಂತರ ಲಾಭಾಂಶ ಆಗಿದೆ. ಮಾರ್ಚ್ 2ರಂದು ಸಭೆ ಸೇರಿದ ಕಂಪೆನಿಯ ಮಂಡಳಿಯು ಮಧ್ಯಂತರ ಲಾಭಾಂಶವನ್ನು ಅನುಮೋದಿಸಿದ್ದು, ಇದು ವಿನಿಮಯ ಕೇಂದ್ರದ ಪ್ರಕಟಣೆಯ ಪ್ರಕಾರ, 1 ರೂಪಾಯಿ ಮುಖಬೆಲೆಯ ಪ್ರತಿ ಈಕ್ವಿಟಿ ಷೇರಿಗೆ ಶೇಕಡಾ 1,300ರಷ್ಟು ಲಾಭಾಂಶ ದೊರೆಯುತ್ತದೆ. ಲಾಭಾಂಶ ಪಾವತಿಯ ಉದ್ದೇಶಕ್ಕಾಗಿ ದಾಖಲೆ ದಿನಾಂಕ (ರೆಕಾರ್ಡ್ ದಿನಾಂಕ) ಮಾರ್ಚ್ 10 ಎಂದು ಅದು ಸೇರಿಸಿದೆ.

2021ರ ಸೆಪ್ಟೆಂಬರ್​ನಲ್ಲಿ ವೇದಾಂತ ಒಂದು ಷೇರಿಗೆ 18.50 ರೂಪಾಯಿಗಳ ಮಧ್ಯಂತರ ಲಾಭಾಂಶವನ್ನು ಘೋಷಿಸಿತು ಮತ್ತು 2021ರ ಡಿಸೆಂಬರ್​ನಲ್ಲಿ ಅದು ಷೇರಿನ ಲಾಭಾಂಶವಾಗಿ 13.50 ರೂಪಾಯಿಗಳನ್ನು ನೀಡಿತು. ಎಲ್ಲ ಮೂರೂ ಲಾಭಾಂಶಗಳನ್ನು ಒಟ್ಟುಗೂಡಿಸಿ, ಅದರ ಲಾಭಾಂಶ ಇಳುವರಿಯು ಮಾರ್ಚ್ 2ರಂದು ಅದರ ಮುಕ್ತಾಯದ ಬೆಲೆಯ ಸುಮಾರು ಶೇ 11.62ಕ್ಕೆ ಬರುತ್ತದೆ. ಸೆಪ್ಟೆಂಬರ್‌ನಲ್ಲಿ ಡಿವಿಡೆಂಡ್ ಆಗಿ ನೀಡಿದ ಮೊತ್ತವು 6,876.82 ಕೋಟಿ ರೂಪಾಯಿ ಆಗಿದ್ದರೆ, ಡಿಸೆಂಬರ್‌ನಲ್ಲಿ 5,018.22 ಕೋಟಿ ರೂಪಾಯಿ ವಿತರಿಸಿತ್ತು.

ಹಣಕಾಸು ವರ್ಷ 2021ರಂತೆ ವೇದಾಂತ ಒಟ್ಟು 57,026 ಕೋಟಿ ರೂಪಾಯಿ ಸಾಲವನ್ನು ಹೊಂದಿದೆ. ಸಂಸ್ಥೆಯ ಷೇರುಗಳು ಮಾರ್ಚ್ 2ರಂದು ಬಿಎಸ್​ಇನಲ್ಲಿ ರೂ. 387.35ಕ್ಕೆ ಕೊನೆಗೊಂಡಿದ್ದು, ಅದರ ಹಿಂದಿನ ಮುಕ್ತಾಯಕ್ಕಿಂತ ಶೇ 1.81ರಷ್ಟು ಹೆಚ್ಚಾಗಿದೆ. ವಿಶ್ಲೇಷಕರು ಹೇಳುವಂತೆ, ರಷ್ಯಾ ಮತ್ತು ಉಕ್ರೇನ್ ಮಧ್ಯೆ ಹೆಚ್ಚಿದ ಉದ್ವಿಗ್ನತೆಯಿಂದಾಗಿ ಇಂಧನ ಬೆಲೆಗಳ ಏರಿಕೆ, ಜತೆಗೆ ಮೂಲ ಲೋಹದ ಬೆಲೆಗಳಲ್ಲಿ ತೀವ್ರ ಹೆಚ್ಚಳದಿಂದ ವೇದಾಂತ ಪ್ರಯೋಜನ ಪಡೆಯುತ್ತದೆ. ವಾಲ್ಯೂಮ್‌ಗಳು ಮತ್ತು ಹೆಚ್ಚಿನ ಲೋಹದ ಬೆಲೆಗಳನ್ನು ಸುಧಾರಿಸುವಲ್ಲಿ ಕಾರ್ಯನಿರ್ವಹಣೆ ಕಾರ್ಯಕ್ಷಮತೆಯು ಬಲವಾಗಿ ಉಳಿಯುತ್ತದೆ. ಇದು ಉತ್ತಮ ಲಾಭಾಂಶವನ್ನು ಮುಂದುವರಿಸುತ್ತದೆ ಮತ್ತು ಸಂಸ್ಥೆಯಯ ದೊಡ್ಡ ಸಾಲ ಮರುಪಾವತಿ ಹೊಣೆಗಾರಿಕೆಯನ್ನು ಹೊಂದಿರುತ್ತದೆ.

ಕಳೆದ ತಿಂಗಳು ವೇದಾಂತವು ಈ ಹಿಂದೆ ಮೌಲ್ಯಮಾಪನ ಮಾಡಲಾಗಿದ್ದ ಪುನರ್​ರಚನೆಯ ಯೋಜನೆಗಳನ್ನು ತಳ್ಳಿಹಾಕಿತು ಮತ್ತು ಲಾಭಾಂಶ ನೀತಿಯನ್ನು ವಿವರಿಸಿತು. ತೆರಿಗೆಯ ನಂತರದ ಲಾಭದ ಕನಿಷ್ಠ ಶೇ 30ರಷ್ಟನ್ನು (ಹಿಂದೂಸ್ತಾನ್ ಝಿಂಕ್​ ಲಾಭವನ್ನು ಹೊರತುಪಡಿಸಿ) ಲಾಭಾಂಶವಾಗಿ ವಿತರಿಸುತ್ತದೆ. ಕಂಪೆನಿಯು ಭಾರತ್ ಪೆಟ್ರೋಲಿಯಂ ಕಾರ್ಪ್‌ನಲ್ಲಿ ತನ್ನ ಆಸಕ್ತಿಯನ್ನು ಮತ್ತೊಮ್ಮೆ ಹೇಳಿಕೊಂಡಿದ್ದು, ಇದು ಆಸಕ್ತಿಯ ವ್ಯಕ್ತಪಡಿಸುವ ಹಂತದಲ್ಲಿದೆ. ಮತ್ತು 2050 ಅಥವಾ ಅದಕ್ಕಿಂತ ಮೊದಲು ನಿವ್ವಳ ಶೂನ್ಯ ಸಾಲವನ್ನು ಸಾಧಿಸಲು ಬದ್ಧವಾಗಿದೆ. ಕಂಪೆನಿಯು ಏಕೀಕೃತ ಮಟ್ಟದಲ್ಲಿ ಅತ್ಯುತ್ತಮ ಲೆವರೇಜ್ ಅನುಪಾತವನ್ನು (ನಿವ್ವಳ ಸಾಲ/ಇಬಿಐಟಿಡಿಎ) ನಿರ್ವಹಿಸುತ್ತದೆ ಎಂದು ಅದು ಹೇಳಿದೆ. “ವೇದಾಂತ ಲಿಮಿಟೆಡ್‌ನ ಡಿಸೆಂಬರ್ 21ರ ಏಕೀಕೃತ ಲೆವರೇಜ್ ಅನುಪಾತವು 0.7x ಆಗಿದ್ದು, ಇದು ಅದೇ ರೀತಿಯ ಇತರ ಕಂಪೆನಿಗಳ ಗುಂಪಿಗೆ ಹೋಲಿಸಿದರೆ ಅತ್ಯುತ್ತಮವಾಗಿದೆ. ಸಾಮಾನ್ಯ ವ್ಯವಹಾರದ ಸಂದರ್ಭದಲ್ಲಿ ಕಂಪೆನಿಯು ಈ ಅನುಪಾತವನ್ನು 1.5x ಕ್ಕಿಂತ ಕಡಿಮೆ ಏಕೀಕೃತ ಮಟ್ಟದಲ್ಲಿ ನಿರ್ವಹಿಸುತ್ತದೆ,” ಎಂಬುದನ್ನು ಕಂಪೆನಿಯು ಗಮನಿಸಿದೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ನೂರು‌ ಹಾಸಿಗೆಯ ಆಸ್ಪತ್ರೆ ನಿರ್ಮಾಣಕ್ಕೆ ಸಿದ್ಧತೆ; ಜಿಲ್ಲಾಡಳಿತದ ಜತೆ ಕೈ ಜೊಡಿಸಿದ ವೇದಾಂತ ಮೈನ್ಸ್ ಸಂಸ್ಥೆ

Follow us on

Related Stories

Most Read Stories

Click on your DTH Provider to Add TV9 Kannada