ಸರ್ಕಾರಿ ಸ್ವಾಮ್ಯದ ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (Life Insurance Corporation Of India) ಅಥವಾ ಎಲ್ಐಸಿಯಿಂದ ಎರಡನೇ ಬಾರಿಗೆ ಪಾಲಿಸಿದಾರರಿಗೆ ಅತ್ಯುತ್ತಮ ಅವಕಾಶವೊಂದು ಮಾಡಿಕೊಡಲಾಗುತ್ತಿದೆ. ಕೊರೊನಾ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿರುವ ಜತೆಗೆ ಹಣಕಾಸು ಮತ್ತು ಆರೋಗ್ಯಕ್ಕೆ ಸಂಬಂಧಿಸಿ ಸವಾಲುಗಳೊಂದಿಗೆ ಸೆಣೆಸುತ್ತಿರುವ ಸಂದರ್ಭದಲ್ಲಿ ಇದರಿಂದ ಅನುಕೂಲ ಆಗಲಿದೆ. ಈಗಾಗಲೇ ಲ್ಯಾಪ್ಸ್ ಆದ ಪಾಲಿಸಿಗಳಿಗೆ ಮರುಜೀವ ನೀಡುವುದಕ್ಕೆ ಎಲ್ಐಸಿಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಪಾಲಿಸಿದಾರರಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವೈಯಕ್ತಿಕವಾಗಿ ಲ್ಯಾಪ್ಸ್ ಆದ ಪಾಲಿಸಿಗಳಿಗೆ ಫೆಬ್ರವರಿ 7ನೇ ತಾರೀಕಿನಿಂದ ಮಾರ್ಚ್ 25ರ ಮಧ್ಯೆ ವಿಶೇಷ ಪಾಲಿಸಿ ಮರು ಜೀವ ಅಭಿಯಾನ ನಡೆಸುವುದಾಗಿ ಎಲ್ಐಸಿ ತಿಳಿಸಿದೆ. ಪ್ರೀಮಿಯಂ ಪಾವತಿ ವಿಚಾರವಾಗಿ ಹಾಗೂ ಪಾಲಿಸಿ ಅವಧಿ ಮುಕ್ತಾಯ ಆಗದೆ ಇರುವಂಥದ್ದು ಲ್ಯಾಪ್ಸ್ ಆದ ಸ್ಥಿತಿಯಲ್ಲಿ ಇದ್ದಲ್ಲಿ ಅಂಥವಕ್ಕೆ ಈ ಅಭಿಯಾನದ ಅಡಿಯಲ್ಲಿ ಮರು ಜೀವ ನೀಡಬಹುದು.
“ಈಗಿನ ಸನ್ನಿವೇಶವನ್ನು ಗಮನದಲ್ಲಿ ಇಟ್ಟುಕೊಂಡು, ಟರ್ಮ್ ಇನ್ಷೂರೆನ್ಸ್ ಹಾಗೂ ಹೈ ರಿಸ್ಕ್ ಪ್ಲಾನ್ಗಳನ್ನು ಹೊರತುಪಡಿಸಿ ಉಳಿದವಕ್ಕೆ ವಿಳಂಬ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ. ಅದು ಕೂಡ ಒಟ್ಟಾರೆ ಪ್ರೀಮಿಯಂ ಪಾವತಿಸುವ ಮೊತ್ತದ ಮೇಲೆ ಅನ್ವಯ ಆಗುತ್ತದೆ. ವೈದ್ಯಕೀಯ ಅಗತ್ಯದ ಮೇಲೆ ಯಾವುದೇ ವಿನಾಯಿತಿ ಇಲ್ಲ. ಅರ್ಹ ಆರೋಗ್ಯ ಮತ್ತು ಮೈಕ್ರೋ ಇನ್ಷೂರೆನ್ಸ್ ಪ್ಲಾನ್ಗಳು ಸಹ ವಿಳಂಬ ಶುಲ್ಕದಿಂದ ವಿನಾಯಿತಿಗೆ ಅರ್ಹವಾಗಿರುತ್ತವೆ,” ಎಂದು ಎಲ್ಐಸಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
“ವಿಶೇಷ “ಮರುಜೀವ ಅಭಿಯಾನ” ಅಡಿಯಲ್ಲಿ ನಿರ್ದಿಷ್ಟವಾಗಿ ಅರ್ಹತೆ ಪಡೆದ ಯೋಜನೆಗಳು ಪ್ರೀಮಿಯಂ ಪಾವತಿ ಆಗದ ಮೊದಲ ಕಂತಿನಿಂದ ಐದು ವರ್ಷದೊಳಗಾಗಿ ಮರುಜೀವ ಪಡೆಯಬಹುದು. ಆದರೆ ಕೆಲವು ನಿಯಮ, ನಿಬಂಧನೆಗಳು ಒಳಗೊಂಡಿರುತ್ತದೆ,” ಎಂದು ಎಲ್ಐಸಿ ತಿಳಿಸಿದೆ. “ಪಾಲಿಸಿಗಳು ಲ್ಯಾಪ್ಸ್ ಆಗಿರುವ ಸ್ಥಿತಿಯಲ್ಲಿ ಇದ್ದು, ಪ್ರೀಮಿಯಂ ಪಾವತಿ ಅವಧಿ ಪೂರ್ಣಗೊಂಡಿಲ್ಲ ಅಂತಾದರೆ ಅಂಥ ಪಾಲಿಸಿಗಳು ಈ ಅಭಿಯಾನದ ಅಡಿಯಲ್ಲಿ ಮರುಜೀವಕ್ಕೆ ಅರ್ಹವಾಗಿವೆ,” ಎಂದು ಮಾಹಿತಿ ನೀಡಲಾಗಿದೆ.
ವೈದ್ಯಕೀಯ ಅಗತ್ಯಗಳಿಗೆ ಸಂಬಂಧಿಸಿದಂತೆ ಯಾವ ವಿನಾಯಿತಿಯೂ ಇರುವುದಿಲ್ಲ. ಅರ್ಹ ಆರೋಗ್ಯ ಮತ್ತು ಮೈಕ್ರೋ ಇನ್ಷೂರೆನ್ಸ್ ಪ್ಲಾನ್ಗಳು ವಿಳಂಬ ಶುಲ್ಕದಲ್ಲಿ ವಿನಾಯಿತಿ ಪಡೆಯುವುದಕ್ಕೆ ಅರ್ಹತೆ ಪಡೆದಿವೆ. ಸಾಂಪ್ರದಾಯಿಕ ಹಾಗೂ ಆರೋಗ್ಯ ಪಾಲಿಸಿಗಳ ಒಟ್ಟು ಬರಬೇಕಾದ ಪ್ರೀಮಿಯಂ ರೂ. 1 ಲಕ್ಷದ ತನಕ ಮೊತ್ತಕ್ಕೆ ಎಲ್ಐಸಿಯು ವಿಳಂಬ ಶುಲ್ಕದಲ್ಲಿ ಶೇ 20ರ ವಿನಾಯಿತಿ ನೀಡುತ್ತಿದೆ. ಅದು ಗರಿಷ್ಠ ಮೊತ್ತ 2000 ರೂಪಾಯಿ ಆಗಿರುತ್ತದೆ. ಅದೇ ರೀತಿ ಮೂರು ಲಕ್ಷ ರೂಪಾಯಿ ಮೇಲಿನ ಮೊತ್ತಕ್ಕೆ ಶೇ 30 ವಿನಾಯಿತಿ ಅಥವಾ ಗರಿಷ್ಠ 3000 ರೂಪಾಯಿ ಇದೆ. ಈ ಬಗ್ಗೆ ಟ್ವಿಟರ್ ಹೇಳಿಕೆ ಸಹ ನೀಡಲಾಗಿದೆ.
ಅರ್ಹ ಪಾಲಿಸಿಗಳ ಮೇಲಿನ ವಿಳಂಬ ಶುಲ್ಕಕ್ಕೆ ಇರುವ ವಿನಾಯಿತಿಗಳ ವಿವರ ಇಲ್ಲಿದೆ:
– 1 ಲಕ್ಷ ರೂಪಾಯಿಯೊಳಗೆ: ವಿಳಂಬ ಶುಲ್ಕ ವಿನಾಯಿತಿ ಶೇ 20ರಷ್ಟು; ಗರಿಷ್ಠ 2000 ರೂಪಾಯಿ
– 1,00,001 ರೂಪಾಯಿಯಿಂದ 3,00,000 ರೂ.- ವಿಳಂಬ ಶುಲ್ಕ ವಿನಾಯಿತಿ ಶೇ 25ರಷ್ಟು; ಗರಿಷ್ಠ 2500 ರೂಪಾಯಿ
– 3,00,001 ರೂಪಾಯಿ ಮೇಲ್ಪಟ್ಟು: ವಿಳಂಬ ಶುಲ್ಕ ಶೇ 30ರಷ್ಟು; ಗರಿಷ್ಠ 3000 ರೂಪಾಯಿ
– ಮೈಕ್ರೋ ಇನ್ಷೂರೆನ್ಸ್ ಪ್ಲಾನ್ಗಳಿಗೆ ಶೇ 100ರಷ್ಟು ವಿನಾಯಿತಿ, ಪೂರ್ತಿಯಾಗಿ ನೀಡಲಾಗುತ್ತದೆ.
ಆದರೆ, ಟರ್ಮ್ ಅಶ್ಯೂರೆನ್ಸ್ ಮತ್ತು ಮಲ್ಟಿಪಲ್ ರಿಸ್ಕ್ ಪಾಲಿಸಿಗಳಿಗೆ ಅನ್ವಯ ಆಗುವುದಿಲ್ಲ. ಇನ್ನೇನು ಎಲ್ಐಸಿ ಐಪಿಒ ಬಿಡುಗಡೆ ಆಗಬೇಕು ಎಂಬ ಹೊತ್ತಿಗೆ ಈ ಸುದ್ದಿ ಹೊರಬಿದ್ದಿದೆ.
ಇದನ್ನೂ ಓದಿ: LIC IPO Valuation: ಎಲ್ಐಸಿ ಐಪಿಒಗೆ ಮಾರುಕಟ್ಟೆ ಮೌಲ್ಯದ ಅಂದಾಜು 15 ಲಕ್ಷ ಕೋಟಿ ರೂಪಾಯಿ