ಕಂಪನಿ ಕಾನೂನು ಉಲ್ಲಂಘನೆ ಆರೋಪ, ಲಿಂಕ್ಡ್ಇನ್ ಸಂಸ್ಥೆ, ಸತ್ಯ ನಾದೆಲ್ಲಾ ಹಾಗೂ ಇತರ ಎಂಟು ಮಂದಿಗೆ ದಂಡ ವಿಧಿಸಿದ ಸರ್ಕಾರ
Company Law Violations: ಕಂಪನಿ ಕಾನೂನುಗಳ ಉಲ್ಲಂಘನೆ ಮಾಡಿದ ಕಾರಣಕ್ಕೆ ಲಿಂಕ್ಡ್ಇನ್ ಸಂಸ್ಥೆ ಹಾಗೂ ಅದಕ್ಕೆ ಸಂಬಂಧಿಸಿದ 9 ವ್ಯಕ್ತಿಗಳ ಮೇಲೆ ಸರ್ಕಾರ ದಂಡ ವಿಧಿಸಿದೆ. ಕಾನೂನು ಪ್ರಕಾರ ಕಂಪನಿಯ ಸಿಗ್ನಿಫಿಕೆಂಟ್ ಬೆನಿಫಿಶಿಯಲ್ ಓನರ್ ಅಥವಾ ಎಸ್ಬಿಒ ಯಾರೆಂದು ಬಹಿರಂಗಪಡಿಸಬೇಕು. ಲಿಂಕ್ಡ್ಇನ್ ಇಂಡಿಯಾ ಈ ನಿಯಮ ಪಾಲಿಸಿಲ್ಲ. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಹಾಗೂ ರಯಾನ್ ರೋಸ್ಲಾನ್ಸ್ಕಿ ಅವರು ಲಿಂಕ್ಡ್ಇನ್ನ ಎಸ್ಬಿಒಗಳಾಗಿದ್ದಾರೆ. ಈ ವಿಚಾರ ಬಹಿರಂಪಡಿಸಿದ್ದಕ್ಕೆ ಇವರನ್ನೂ ಸೇರಿಸಿ ನಿರ್ದೇಶಕರು ಮತ್ತಿತರರನ್ನೂ ಜವಾಬ್ದಾರರನ್ನಾಗಿ ಮಾಡಲಾಗಿದೆ.
ನವದೆಹಲಿ, ಮೇ 23: ಕಂಪನಿ ಕಾನೂನುಗಳನ್ನು ಉಲ್ಲಂಘನೆ ಮಾಡಿದ ಆರೋಪದ ಮೇಲೆ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು (Ministry of corporate affairs) ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ (Satya Nadella) ಸೇರಿದಂತೆ 9 ಮಂದಿಗೆ ಹಾಗೂ ಲಿಂಕ್ಡ್ಇನ್ ಸಂಸ್ಥೆಗೆ (LinkedIn India) ದಂಡ ವಿಧಿಸಿದೆ. ಲಿಂಕ್ಡ್ಇನ್ ಇಂಡಿಯಾದ ಮಾಜಿ ಮುಖ್ಯಸ್ಥ ಆಶುತೋಷ್ ಗುಪ್ತಾ, ಕೀತ್ ರೇಂಜರ್ ಡಾಲಿವರ್, ಬೆಂಜಮಿನ್ ಓವನ್ ಆರ್ನ್ಡಾರ್ಫ್, ಮಿಶೆಲೆ ಕ್ಯಾಟಿ ಲ್ಯೂಂಗ್, ಲೀಸಾ ಎಮಿಕೋ ಸ್ಯಾಟೋ, ಮಾರ್ಕ್ ಲಿಯೋನಾರ್ಡ್ ನೇಡ್ರೆಸ್ ಲೇಗಾಸ್ಪಿ ಮತ್ತು ಹೆನ್ರಿ ಚೈನಿಂಗ್ ಫಾಂಗ್ ಅವರು ದಂಡ ಪಡೆದ ಇತರರು. ಇವರೆಲ್ಲರೂ ಲಿಂಕ್ಡ್ಇನ್ಗೆ ಜೋಡಿತವಾಗಿರುವವರು.
ಎನ್ಸಿಟಿ ದೆಹಲಿ ಹರ್ಯಾಣ ವಿಭಾಗ ಕಂಪನಿ ರಿಜಿಸ್ಟ್ರಾರ್ ಲಿಂಕ್ಡ್ಇನ್ ಇಂಡಿಯಾ ಸಂಸ್ಥೆಗೆ 7 ಲಕ್ಷ ದಂಡ ವಿಧಿಸಿದೆ. ಲಿಂಕ್ಡ್ಇನ್ ಸಂಸ್ಥೆಯ ಮಾಲಕತ್ವ ಇರುವ ಮೈಕ್ರೋಸಾಫ್ಟ್ನ ಸಿಇಒ ಸತ್ಯ ನಾಸೆಲ್ಲಾ ಮತ್ತು ಲಿಂಕ್ಡ್ಇನ್ ಕಾರ್ಪೊರೇಶನ್ನ ಗ್ಲೋಬಲ್ ಸಿಇಒ ರಯಾನ್ ರೋಸ್ಲಾನ್ಸ್ಕಿ ಅವರಿಗೆ ತಲಾ 2 ಲಕ್ಷ ರೂ ದಂಡ ಹೇರಲಾಗಿದೆ. ಇತರ ಏಳು ಮಂದಿಯದ್ದೂ ಸೇರಿ ಒಟ್ಟು 27,10,800 ರೂ (27 ಲಕ್ಷ ರೂ) ದಂಡ ಹಾಕಲಾಗಿದೆ.
ಇದನ್ನೂ ಓದಿ: ಎನ್ಆರ್ಐಗಳು ವಿದೇಶೀಯನ್ನು ವಿವಾಹವಾದರೆ ಭಾರತದಲ್ಲಿರುವ ಅವರ ಆಸ್ತಿ ಏನಾಗುತ್ತೆ? ಇಲ್ಲಿದೆ ವಿವರ
ಯಾವ ಕಾನೂನು ಉಲ್ಲಂಘನೆ?
ಭಾರತದ ಕಂಪನಿ ಕಾನೂನು ಪ್ರಕಾರ ನೊಂದಾಯಿತ ಸಂಸ್ಥೆಗಳು ಸಿಬಿಒಗಳ ಮಾಹಿತಿಯನ್ನು ಸಲ್ಲಿಸಬೇಕು. ಇಲ್ಲಿ ಎಸ್ಬಿಒ ಎಂದರೆ ಸಿಗ್ನಿಫಿಕೆಂಟ್ ಬೆನಿಫಿಷಿಯಲ್ ಓನರ್. ಅಂದರೆ ಕಂಪನಿಯಲ್ಲಿ ಶೇ. 10ಕ್ಕಿಂತ ಹೆಚ್ಚು ಷೇರುಪಾಲು ಇರುವಂಥವರು. ಲಿಂಕ್ಡ್ಇನ್ ಇಂಡಿಯಾದಲ್ಲಿ ಸತ್ಯ ನಾದೆಲ್ಲ ಮತ್ತು ರಯಾನ್ ರೋಸ್ಲಾನ್ಸ್ಕಿ ಅವರು ಎಸ್ಬಿಒಗಳಾಗಿದ್ದಾರೆ. ಈ ವಿಚಾರವನ್ನು ಸಂಸ್ಥೆ ಬಹಿರಂಗಪಡಿಸಿಲ್ಲ ಎಂದು ರಿಜಿಸ್ಟ್ರಾರ್ ಆಫ್ ಕಂಪನೀಸ್ (ಆರ್ಒಸಿ) ತನ್ನ 63 ಪುಟಗಳ ಆದೇಶದಲ್ಲಿ ತಿಳಿಸಿದೆ.
ಇಲ್ಲಿ ದಂಡ ವಿಧಿಸಲಾಗಿರುವ ಇತರ ವ್ಯಕ್ತಿಗಳು ಲಿಂಕ್ಡ್ಇನ್ನ ನಿರ್ದೇಶಕರು ಹಾಗೂ ಇತರ ಉನ್ನತ ಹುದ್ದೆಯಲ್ಲಿರುವವರಾಗಿದ್ದಾರೆ. ಕಂಪನಿಯ ಎಸ್ಬಿಒಗಳು ಯಾರೆಂದು ಮಾಹಿತಿ ಬಹಿರಂಪಡಿಸಲು ವಿಫಲರಾಗಿದ್ದಕ್ಕೆ ಅವರನ್ನೂ ಜವಾಬ್ದಾರರನ್ನಾಗಿ ಮಾಡಲಾಗಿದೆ. ಲಿಂಕ್ಡ್ಇನ್ ಸಂಸ್ಥೆ ಹಾಗೂ 9 ಮಂದಿ ವ್ಯಕ್ತಿಗಳಿಗೆ ಫೈನ್ ಹೇರಲಾಗಿದೆ.
ಇದನ್ನೂ ಓದಿ: ಆರ್ಬಿಐನಿಂದ ಸರ್ಕಾರಕ್ಕೆ ದಾಖಲೆಯ 2.11 ಲಕ್ಷ ಕೋಟಿ ರೂ ಡಿವಿಡೆಂಡ್
ವೃತ್ತಿಪರರ ಸೋಷಿಯಲ್ ನೆಟ್ವರ್ಕಿಂಗ್ ಸೈಟ್ ಆಗಿರುವ ಲಿಂಕ್ಡ್ಇನ್ ಕಾರ್ಪೊರೇಶನ್ ಅನ್ನು ಮೈಕ್ರೋಸಾಫ್ಟ್ ಸಂಸ್ಥೆ 2016ರಲ್ಲಿ ಖರೀದಿ ಮಾಡಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ