ಭಾರತದಲ್ಲೇ ‘ರೇರ್ ಅರ್ಥ್ ಮ್ಯಾಗ್ನೆಟ್ಸ್’ ತಯಾರಿಕೆಗೆ ಎಲ್‌&ಟಿ ಸಜ್ಜು; ಚೀನಾ ಪ್ರಾಬಲ್ಯಕ್ಕೆ ಸವಾಲು

L&T to bid for manufacturing rare earth magnets in India: ದೇಶದ ಪ್ರಮುಖ ಎಂಜಿನಿಯರಿಂಗ್ ಕಂಪನಿಯಾದ ಎಲ್ ಅಂಡ್ ಟಿ ಈಗ ರೇರ್ ಅರ್ಥ್ ಮ್ಯಾಗ್ನೆಟ್​ಗಳನ್ನು ಭಾರತದಲ್ಲಿ ತಯಾರಿಸಲು ಯೋಜಿಸಿದೆ. ಈ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಪ್ರೋತ್ಸಾಹಕ ಯೋಜನೆಯಲ್ಲಿ ಭಾಗಿಯಾಗಲು ನಿರ್ಧರಿಸಿದೆ. ರೇರ್ ಅರ್ಥ್ ಮ್ಯಾಗ್ನೆಟ್​ಗಳು ಎಲೆಕ್ಟ್ರಾನಿಕ್ಸ್ ಉಪಕರಣಗಳ ತಯಾರಿಕೆಯಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ. ಹೀಗಾಗಿ, ಇದರ ಮಹತ್ವ ಬಹಳ ಇದೆ.

ಭಾರತದಲ್ಲೇ ರೇರ್ ಅರ್ಥ್ ಮ್ಯಾಗ್ನೆಟ್ಸ್ ತಯಾರಿಕೆಗೆ ಎಲ್‌&ಟಿ ಸಜ್ಜು; ಚೀನಾ ಪ್ರಾಬಲ್ಯಕ್ಕೆ ಸವಾಲು
ಎಲ್‌&ಟಿ
Image Credit source: Getty Images

Updated on: Aug 14, 2026 | 1:44 PM

ನವದೆಹಲಿ, ಆಗಸ್ಟ್ 14: ಲಾರ್ಸೆನ್ ಅಂಡ್ ಟೂಬ್ರೊ (L&T) ಭಾರತದಲ್ಲಿಯೇ ‘ರೇರ್ ಅರ್ಥ್ ಮ್ಯಾಗ್ನೆಟ್ಸ್’ (Rare-earth magnets) ತಯಾರಿಸಲು ಯೋಜನೆ ರೂಪಿಸುತ್ತಿದೆ. ಇದು ಈಡೇರಿದ್ದೇ ಆದಲ್ಲಿ, ಚೀನಾದ ಮೇಲಿನ ಭಾರತದ ಪ್ರಮುಖ ಅವಲಂಬನೆಯೊಂದು ಕಡಿಮೆ ಆಗಲಿದೆ. ಕೇಂದ್ರ ಸರ್ಕಾರವು ದೇಶೀಯವಾಗಿ ಲಭ್ಯ ಇರುವ ವಿರಳ ಭೂ ಖನಿಜಗಳನ್ನು ತಯಾರಿಸಲು ವಿವಿಧ ಯೋಜನೆಗಳನ್ನು ಹಾಕಿದೆ. ಈ ಹಿನ್ನೆಲೆಯಲ್ಲಿ, ಪ್ರಮುಖ ಎಂಜಿನಿಯರಿಂಗ್ ಕಂಪನಿಯಾದ ಎಲ್ ಅಂಡ್ ಟಿ ಈ ಕಾರ್ಯಕ್ಕೆ ಕೈಹಾಕಲು ಯೋಜಿಸುತ್ತಿದೆ.

ಜಾಗತಿಕವಾಗಿ ರೇರ್ ಅರ್ಥ್ ಮ್ಯಾಗ್ನೆಟ್ ಉತ್ಪಾದನೆಯಲ್ಲಿ ಚೀನಾ ಸುಮಾರು 90% ಹಿಡಿತ ಹೊಂದಿದೆ. ಈ ಅವಲಂಬನೆಯನ್ನು ತಪ್ಪಿಸಲು ಮತ್ತು ಭಾರತದಲ್ಲಿಯೇ ದೇಶಿಯ ಪೂರೈಕೆ ಸರಪಳಿಯನ್ನು (Domestic Supply Chain) ಬಲಪಡಿಸಲು ಎಲ್‌&ಟಿ ಮುಂದಾಗಿದೆ.

ಇದನ್ನೂ ಓದಿ: ಸರಕುಗಳ ಮೇಲೆ ಟ್ಯಾರಿಫ್ ತಪ್ಪಿಸಲು ಚೀನಾದ ಕಳ್ಳದಾರಿಗಳಲ್ಲಿ ಭಾರತವೂ ಒಂದು: ಅಮೆರಿಕ ಗಂಭೀರ ಆರೋಪ

ಈ ಉತ್ಪನ್ನಗಳ ತಯಾರಿಕೆಯನ್ನು ಉತ್ತೇಜಿಸಲು ಭಾರತ ಸರ್ಕಾರವು ಸುಮಾರು 7,280 ಕೋಟಿ ರೂಪಾಯಿಗಳ ಪ್ರೋತ್ಸಾಹಕ ಯೋಜನೆಯನ್ನು (Incentive Policy) ಘೋಷಿಸಿದೆ. ಎಲ್‌&ಟಿ ಈ ಯೋಜನೆಯಡಿ ಬಿಡ್ ಮಾಡಲು ತಯಾರಿ ನಡೆಸುತ್ತಿದೆ. ಎಲ್ ಅಂಡ್ ಟಿಯದ್ದು ಸೇರಿದಂತೆ ಒಟ್ಟು 15 ಬಿಡ್​ಗಳು ಸಲ್ಲಿಕೆಯಾಗಿರುವುದು ತಿಳಿದುಬಂದಿದೆ. ಜಪಾನ್​ನ ಪ್ರೋಟೆರಿಯಲ್ ಲಿಮಿಟೆಡ್ ಕಂಪನಿ ಒಳಗೊಂಡ ಒಂದು ಗುಂಪು ಹಾಗೂ ಒಂದೆರಡು ಭಾರತೀಯ ವಾಹನ ಕಂಪನಿಗಳೂ ಕೂಡ ಬಿಡ್ ಸಲ್ಲಿಸಿವೆ ಎನ್ನಲಾಗಿದೆ.

ಈ ವಿರಳ ಭೂ ಖನಿಜ ಅಯಸ್ಕಾಂತಗಳು ಯಾಕೆ ಮುಖ್ಯ?

ರೇರ್ ಅರ್ಥ್ ಮ್ಯಾಗ್ನೆಟ್‌ಗಳು ಎಲೆಕ್ಟ್ರಿಕ್ ವಾಹನಗಳ (EV) ಮೋಟಾರ್‌ಗಳು, ವಿಂಡ್ ಟರ್ಬೈನ್‌ಗಳು, ಕೈಗಾರಿಕಾ ರೋಬೋಟ್‌ಗಳು ಮತ್ತು ವಿವಿಧ ಎಲೆಕ್ಟ್ರಾನಿಕ್ಸ್ ಉಪಕರಣಗಳಲ್ಲಿ ಅತ್ಯಗತ್ಯವಾಗಿವೆ. ಎಲ್‌&ಟಿ ತನ್ನ ಎಲೆಕ್ಟ್ರಿಕ್ ವಾಹನ ಮೋಟಾರ್ ತಯಾರಿಕಾ ಯೋಜನೆಗೂ ಈ ಮ್ಯಾಗ್ನೆಟ್‌ಗಳನ್ನು ಬಳಸಿಕೊಳ್ಳಲು ಉದ್ದೇಶಿಸಿದೆ.

ಇದನ್ನೂ ಓದಿ: ಪ್ರಿ-ರೈಡ್ ಟಿಪ್ಸ್ ಬಂದ್‌: ಓಲಾ, ಉಬರ್, ರ‍್ಯಾಪಿಡೋ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಬಿಗ್ ರಿಲೀಫ್

ಈ ಕ್ಷೇತ್ರವು ಉನ್ನತ ಮಟ್ಟದ ನಿಖರ ಇಂಜಿನಿಯರಿಂಗ್ ಅನ್ನು ಬೇಡುವುದರಿಂದ, ಸೂಕ್ತ ತಾಂತ್ರಿಕ ಪರಿಣತಿಯನ್ನು ಹೊಂದಿರುವ ಪಾಲುದಾರರನ್ನು ಹುಡುಕುವ ಪ್ರಕ್ರಿಯೆಯಲ್ಲಿ ಎಲ್‌&ಟಿ ತೊಡಗಿದೆ.

ಒಟ್ಟಾರೆಯಾಗಿ, ಎಲ್‌&ಟಿಯ ಈ ಹೆಜ್ಜೆಯು ಭಾರತದ ಉತ್ಪಾದನಾ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಮತ್ತು ನಿರ್ಣಾಯಕ ತಂತ್ರಜ್ಞಾನಗಳಲ್ಲಿ ಚೀನಾದ ಮೇಲಿನ ಅವಲಂಬನೆಯನ್ನು ತಗ್ಗಿಸಲು ಸಹಕಾರಿಯಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us