ಮಹಾರಾಷ್ಟ್ರದ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಮಾತನಾಡಿ, ಜೈಲಿನಲ್ಲಿ ಮಾಡಿದ ದುಡಿಮೆಯ ಆಧಾರದಲ್ಲಿ ಕೈದಿಗಳಿಗೆ ರೂ. 50,000ವರೆಗೆ ವೈಯಕ್ತಿಕ ಸಾಲ (Personal Loan) ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದ್ದಾರೆ. ಕೈದಿಗಳ ಕುಟುಂಬದ ಜೀವನ ಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ವೈಯಕ್ತಿಕ ಸಾಲ ನೀಡುವ ಯೋಜನೆಯನ್ನು ಪ್ರಾರಂಭಿಸಿದೆ. ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ ಈ ಯೋಜನೆಯಡಿ ಶೇ 7ರ ಬಡ್ಡಿ ದರದಲ್ಲಿ ರೂ. 50,000 ವರೆಗೆ ಸಾಲ ನೀಡುತ್ತದೆ. ಈ ಯೋಜನೆಯನ್ನು ಪುಣೆಯ ಯರವಾಡ ಕೇಂದ್ರ ಕಾರಾಗೃಹದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುವುದು ಎಂದು ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಹೇಳಿದ್ದಾರೆ. ಅಂಥದ್ದನ್ನು “ಖಾವಟಿ” ಸಾಲ ಎಂದು ಕರೆಯಲಾಗುತ್ತದೆ. ಮತ್ತು ಈ ಯೋಜನೆಗೆ ಮಂಗಳವಾರ ಆದೇಶ ಹೊರಡಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. “ಗ್ಯಾರೆಂಟರ್ ಅಗತ್ಯವಿರುವುದಿಲ್ಲ. ವೈಯಕ್ತಿಕ ಬಾಂಡ್ ಮೇಲೆ ವಿತರಿಸಲಾಗುತ್ತದೆ. ಗಳಿಕೆ, ಕೌಶಲ, ದೈನಂದಿನ ವೇತನದ ಆಧಾರದ ಮೇಲೆ ಬ್ಯಾಂಕ್ ಮೊತ್ತವನ್ನು ನಿರ್ಧರಿಸುತ್ತದೆ.”
ಗೃಹ ಸಚಿವ ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಸಂಬಂಧ ಸರ್ಕಾರಿ ನಿರ್ಣಯವನ್ನು (ಜಿಆರ್) ಹೊರಡಿಸಲಾಗಿದೆ. ಪಾಟೀಲ ಅವರು ಯೋಜನೆಗೆ ಚಾಲನೆ ನೀಡಿ ಮಾತನಾಡಿ, “ಜೈಲಿನಲ್ಲಿ ಕೆಲಸ ಮಾಡುವಾಗ ಗಳಿಸಿದ ಆದಾಯದ ಆಧಾರದ ಮೇಲೆ ಸಾಲ ಪಡೆಯುವ ದೇಶದ ಮೊದಲ ವಿನೂತನ ಸಾಲ ಯೋಜನೆ ಇದಾಗಲಿದೆ. ಇದರೊಂದಿಗೆ ಕಲ್ಯಾಣ ಯೋಜನೆ ದೃಢವಾದ ರೂಪದಲ್ಲಿ ಬರಬಹುದು ಮತ್ತು ಅಂದಾಜು 1,055 ಕೈದಿಗಳು ಯೋಜನೆಯಿಂದ ಪ್ರಯೋಜನ ಪಡೆಯಬಹುದು. ಅನೇಕ ಕೈದಿಗಳು ದೀರ್ಘಾವಧಿ ಸೆರೆವಾಸವನ್ನು ಅನುಭವಿಸುತ್ತಿದ್ದಾರೆ. ಈ ಕೈದಿಗಳಲ್ಲಿ ಹೆಚ್ಚಿನವರು ಕುಟುಂಬದ ಪ್ರಮುಖ ಸದಸ್ಯರಾಗಿರುವುದರಿಂದ ಅವರ ಕುಟುಂಬಗಳು ಆಘಾತಗೊಳ್ಳಬಹುದು.”
‘‘ಜೈಲಿಗೆ ಹೋಗಿ ಬಂದ ವ್ಯಕ್ತಿ ತನ್ನ ಕೌಟುಂಬಿಕ ಕರ್ತವ್ಯದಲ್ಲಿ ವಿಫಲರಾಗಿದ್ದಾರೆ ಎಂಬ ಭಾವನೆ ಕುಟುಂಬದಲ್ಲಿ ಮೂಡುತ್ತದೆ. ಇಂತಹ ಸಂದರ್ಭದಲ್ಲಿ ಕೈದಿಯೊಬ್ಬರಿಗೆ ತನ್ನ ಕುಟುಂಬದ ಅಗತ್ಯಕ್ಕಾಗಿ ಸಾಲ ನೀಡಿದರೆ ಕುಟುಂಬದವರ ಸಹಾನುಭೂತಿ, ಪ್ರೀತಿ ಹೆಚ್ಚಲು ಸಹಕಾರಿಯಾಗುತ್ತದೆ. ಮತ್ತು ಆರೋಗ್ಯಕರ ಕುಟುಂಬದ ವಾತಾವರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ”ಎಂದು ಸಚಿವರು ಹೇಳಿದ್ದಾರೆ. ಈ ಯೋಜನೆಯಡಿಯಲ್ಲಿ ಕೈದಿ, ಕೈದಿಯ ಸಾಲದ ಮಿತಿ, ಶಿಕ್ಷೆಯ ಅವಧಿ, ಅದರಿಂದ ಸಾಧ್ಯವಿರುವ ಪರಿಹಾರ, ವಯಸ್ಸು, ಅಂದಾಜು ವಾರ್ಷಿಕ ಕೆಲಸದ ದಿನ ಮತ್ತು ಕನಿಷ್ಠ ದೈನಂದಿನ ಆದಾಯದ ಆಧಾರದ ಮೇಲೆ ಸಾಲ ಸೌಲಭ್ಯವನ್ನು ನಿರ್ಧರಿಸಲಾಗುತ್ತದೆ. ಸಾಲಕ್ಕೆ ಜಾಮೀನುದಾರರ ಅಗತ್ಯವಿರುವುದಿಲ್ಲ.
ಸಾಲ ನೀಡುವ ಬ್ಯಾಂಕ್ ಸಾಲದ ಮೊತ್ತವನ್ನು ಕುಟುಂಬದ ಅಗತ್ಯಗಳನ್ನು ಪೂರೈಸಲು ಅಥವಾ ವಕೀಲರ ಶುಲ್ಕವನ್ನು ಪಾವತಿಸಲು ಅಥವಾ ಇತರ ಕಾನೂನು ವಿಷಯಗಳಿಗಾಗಿ ಬಳಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಸಂಪೂರ್ಣ ಜವಾಬ್ದಾರಿ ಹೊಂದಿರುತ್ತದೆ. ಜತೆಗೆ ಸಾಲ ಮರುಪಾವತಿಯಿಂದ ಬ್ಯಾಂಕ್ ವಸೂಲಿ ಮಾಡುವ ಮೊತ್ತದ ಶೇ 1ರಷ್ಟು ಮೊತ್ತವನ್ನು ಕೈದಿಗಳ ಕಲ್ಯಾಣ ನಿಧಿಗೆ ವಾರ್ಷಿಕವಾಗಿ ನೀಡಲಾಗುವುದು.
ಇದನ್ನೂ ಓದಿ: Paytm Instant Personal Loan| ಪೇಟಿಎಂ ಮೂಲಕ ರೂ. 2 ಲಕ್ಷದ ತನಕ ತಕ್ಷಣದ ಪರ್ಸನಲ್ ಲೋನ್