Personal loan: ಟೇಕ್‌ ಇಟ್‌ ಈಸಿ ಧೋರಣೆ ಬೇಡ; ಯಾವತ್ತಿಗೂ ಈ ಕಾರಣಗಳಿಗಾಗಿ ವೈಯಕ್ತಿಕ ಸಾಲ ತಗೋಬೇಡಿ

Personal loan: ಟೇಕ್‌ ಇಟ್‌ ಈಸಿ ಧೋರಣೆ ಬೇಡ; ಯಾವತ್ತಿಗೂ ಈ ಕಾರಣಗಳಿಗಾಗಿ ವೈಯಕ್ತಿಕ ಸಾಲ ತಗೋಬೇಡಿ
ಸಾಂದರ್ಭಿಕ ಚಿತ್ರ

ಅನಿವಾರ್ಯ ಅಥವಾ ಕೊನೆ ಆಯ್ಕೆ ಎಂಬುದು ಅಲ್ಲದ ಹೊರತು ವೈಯಕ್ತಿಕ ಸಾಲವನ್ನು ಪಡೆಯಬೇಡಿ ಎಂಬುದು ಆರ್ಥಿಕ ತಜ್ಞರ ಸಲಹೆ. ಏಕೆ ಹಾಗೆ ಸಲಹೆ ನೀಡುತ್ತಾರೆ ಎಂಬುದರ ವಿವರಣೆ ಇಲ್ಲಿದೆ.

TV9kannada Web Team

| Edited By: Srinivas Mata

Jan 03, 2022 | 11:48 AM

ಕೆಲವರು ತಮ್ಮ ಹಣಕಾಸಿನ ಅಗತ್ಯಗಳಿಗೆ ವೈಯಕ್ತಿಕ ಸಾಲ ತೆಗೆದುಕೊಂಡು, ಆ ನಂತರ ಯಾಕಪ್ಪ ತೆಗೆದುಕೊಂಡೆ ಎಂದು ಪರಿತಪಿಸುತ್ತಾರೆ. ಬ್ಯಾಂಕ್‌ಗಳಿಂದ ಸಾಲದ ಆಫರ್‌ ಬಂದಿದೆ ಅಂತಲೂ, ಮೆಸೇಜ್‌ ಬಂದಿದೆ ಅಂತಲೋ ವೈಯಕ್ತಿಕ ಸಾಲ ತೆಗೆದುಕೊಳ್ಳಲು ಹೊರಟಿದ್ದೀರಾ? ಹಾಗಾದರೆ ಈಗಲೇ ಒಮ್ಮೆ ಈ ಲೇಖನವನ್ನು ಓದಿಕೊಂಡು ಬಿಡಿ. ಉದಾಹರಣೆ ಸಹಿತ ವಿವರಿಸಲಾಗಿದೆ.

ಇದಕ್ಕಾಗಿ ವೈಯಕ್ತಿಕ ಸಾಲ ತಗೊಳ್ತೀರಾ? ಖಂಡಿತಾ ಬೇಡ ರಾಜುಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹಣ ಗಳಿಸುವ ಬಯಕೆ ಇತ್ತು. ಆದರೆ ದುಡ್ಡಿರಲಿಲ್ಲ. ಒಂದು ದಿನ ಹೇಗೋ 4 ಲಕ್ಷ ರೂಪಾಯಿ ಪರ್ಸನಲ್‌ ಲೋನ್‌ ತಗೊಂಡು ಅಷ್ಟೂ ದುಡ್ಡನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿಬಿಟ್ಟರು. ಆದರೆ ಕೆಲವೇ ದಿನಗಳಲ್ಲಿ ಷೇರು ಮಾರುಕಟ್ಟೆಯ ಏರಿಳಿತದಿಂದ ಅವರ ಲೆಕ್ಕಾಚಾರವೆಲ್ಲ ತಲೆ ಕೆಳಗಾಯಿತು. ಹೂಡಿಕೆ ಹಣದಲ್ಲಿ ಅರ್ಧದಷ್ಟನ್ನು ಕಳೆದುಕೊಂಡು ಕೈಕೈ ಹಿಸುಕಿಕೊಂಡರು. ಇದು ರಾಜು ಒಬ್ಬರ ಕಥೆ ಅಲ್ಲ. ಅವರಂತೆ ಸಾವಿರಾರು ಜನರು ಅಗತ್ಯವಲ್ಲದ ಕಾರಣಗಳಿಗೆ ಪರ್ಸನಲ್‌ ಲೋನ್‌ ತೆಗೆದುಕೊಂಡು, ಅದರಲ್ಲಿ ಸಿಲುಕಿಹಾಕಿಕೊಂಡು ಆ ನಂತರ ಪಶ್ಚಾತ್ತಾಪ ಪಡುತ್ತಾರೆ. ಹಾಗಾಗಿ ನೀವು ಇಂತಹ ಉಸಾಬರಿಯಿಂದ ದೂರವಿರಿ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಸಾಲ ಮಾಡಬೇಡಿ ಕೆಲವರು ಸುಲಭದಲ್ಲಿ ಪರ್ಸನಲ್‌ ಲೋನ್‌ ಸಿಗುತ್ತದೆ ಅಂತ ಸಾಲ ಮಾಡುವುದುಂಟು. ಅಲ್ಪಾವಧಿಯಲ್ಲಿ ಭಾರಿ ಲಾಭ ಗಳಿಸುವ ಉದ್ದೇಶದೊಂದಿಗೆ ಕೆಲವರು ಷೇರುಗಳಲ್ಲಿ ಹೂಡಿಕೆ ಮಾಡಲೆಂದೇ ವೈಯಕ್ತಿಕ ಸಾಲ ತೆಗೆದುಕೊಳ್ಳುತ್ತಾರೆ. ಇಂತಹ ತಪ್ಪನ್ನು ಸರ್ವತಾ ಮಾಡಬೇಡಿ ಎನ್ನುತ್ತಾರೆ ಆರ್ಥಿಕ ತಜ್ಞರು. “ಪರ್ಸನಲ್‌ ಲೋನ್‌ ಅಸುರಕ್ಷಿತ ಸಾಲವಾಗಿದ್ದು, ಬಡ್ಡಿ ದರಗಳು ಅತ್ಯಧಿಕವಾಗಿರುತ್ತವೆ. ಇಂತಹ ಸಾಲ ಯಾವತ್ತಿದ್ದರೂ ನಿಮಗೆ ಹೊರೆಯಾಗುತ್ತವೆ,ʼʼ ಎನ್ನುತ್ತಾರೆ ಫೈನಾನ್ಷಿಯಲ್‌ ಪ್ಲಾನರ್‌ ಜಿತೇಂದ್ರ ಸೋಂಲಕಿ.

ಅಸುರಕ್ಷಿತ ಸಾಲದಲ್ಲಿ ಯಾವುದೇ ಬಗೆಯ ಸ್ವತ್ತನ್ನು ಅಡಮಾನವಾಗಿ ಇಡಬೇಕಾಗಿಲ್ಲ. ಇಲ್ಲಿ ಸಾಲದಾತ ಸಂಸ್ಥೆಯು ಸಾಲಗಾರನ ಕ್ರೆಡಿಟ್‌ ವರ್ಥ್, ಅಂದರೆ ಸಾಲ ಮರುಪಾವತಿ ಯೋಗ್ಯತೆಯನ್ನು ಆಧರಿಸಿ ಸಾಲ ನೀಡುತ್ತದೆಯೇ ಹೊರತು ಯಾವುದೇ ಸ್ವತ್ತನ್ನು ಅಡಮಾನವಾಗಿ ಇಡುವ ಅಗತ್ಯ ಇರುವುದಿಲ್ಲ. ವೈಯಕ್ತಿಕ ಸಾಲಗಳು, ಶೈಕ್ಷಣಿಕ ಉದ್ದೇಶದ ಸಾಲಗಳು, ಕ್ರೆಡಿಟ್‌ ಕಾರ್ಡ್‌ಗಳು ಇವೆಲ್ಲವೂ ಅಸುರಕ್ಷಿತ ಸಾಲ ಎನಿಸಿಕೊಳ್ಳುತ್ತವೆ. ಕೆಲವು ಸಂದರ್ಭಗಳಲ್ಲಂತೂ ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರವು ಶೇಕಡಾ 20ಕ್ಕಿಂತಲೂ ಅಧಿಕವಾಗಿರುತ್ತದೆ. ಹೀಗಿದ್ದೂ ನೀವು ತುರ್ತಲ್ಲದ ಹಣಕಾಸಿನ ವೆಚ್ಚಗಳಿಗೆ ವೈಯಕ್ತಿಕ ಸಾಲ ತೆಗೆದುಕೊಂಡರೆ ಮೂರ್ಖತನ ಎನಿಸಿಕೊಳ್ಳುತ್ತದೆ.

ಯಾವ ಸಾಲವೂ ಉಚಿತವಾಗಿ ಸಿಗಲ್ಲ ಇತ್ತೀಚಿನ ದಿನಗಳಲ್ಲಿ ಬ್ಯಾಕ್‌ಗಳು ತಮ್ಮ ಗ್ರಾಹಕರಿಗೆ ಪೂರ್ವ ಅನುಮೋದಿತ ಸಾಲಗಳನ್ನು ಆಕರ್ಷಕ ರೂಪದಲ್ಲಿ ಪ್ರಸ್ತುತಪಡಿಸುತ್ತಿವೆ. ನೀವು ಉತ್ತಮ ಗ್ರಾಹಕರಾಗಿದ್ದರೆ ಮತ್ತು ಸಿಬಿಲ್‌ ಸ್ಕೋರ್‌ ಚೆನ್ನಾಗಿದ್ದರೆ ಬ್ಯಾಂಕ್‌ಗಳಿಂದ ಪ್ರತಿನಿತ್ಯವೂ ಪರ್ಸನಲ್‌ ಲೋನ್‌ ತೆಗೆದುಕೊಳ್ಳುವಂತೆ ಫೋನ್‌ ಕರೆಗಳು ಬರುತ್ತವೆ. ಇಂತಹ ಗ್ರಾಹಕರಿಗೆ ಬ್ಯಾಂಕ್‌ಗಳು ಪ್ರೀ ಅಪ್ರೂವ್ಡ್‌ ಲೋನ್‌ಗಳನ್ನು ನೀಡುತ್ತವೆ. ಗ್ರಾಹಕರು ಬ್ಯಾಂಕ್‌ಗಳ ಮೊಬೈಲ್‌ ಅಪ್ಲಿಕೇಷನ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡು, ಕೆಲವೇ ಕ್ಲಿಕ್‌ಗಳ ಮೂಲಕ ಸುಲಭದಲ್ಲಿ ಪರ್ಸನಲ್‌ ಲೋನ್‌ ಪಡೆದುಕೊಳ್ಳಬಹುದು. ಬಹುತೇಕ ಗ್ರಾಹಕರು ಅರೆ, ಇಷ್ಟೊಂದು ಸುಲಭದಲ್ಲಿ ಸಾಲ ಸಿಗುತ್ತಲ್ಲ ಎಂದು ತೆಗೆದುಕೊಳ್ಳುವುದುಂಟು. ದಯವಿಟ್ಟು ನೀವು ಜಾಗೃತರಾಗಿರಿ! ಇದ್ಯಾವುದೂ ಪುಕ್ಕಟೆ ಸಿಗಲ್ಲ. ಪಡೆದ ಸಾಲಕ್ಕೆ ಭಾರಿ ಬಡ್ಡಿಯನ್ನು ಪಾವತಿಸಬೇಕಾಗಿರುತ್ತದೆ.

ವೈಯಕ್ತಿಕ ಸಾಲ ಯಾವಾಗ ತೆಗೆದುಕೊಳ್ಳಬಾರದು ಎಂಬುದನ್ನು ಅರ್ಥ ಮಾಡಿಕೊಳ್ಳಿ ನಿಮ್ಮ “ಬೇಕು”ಗಳಿಗೆ ಸಾಲವನ್ನು ತೆಗೆದುಕೊಳ್ಳಬೇಡಿ ದುಬಾರಿ ಬೆಲೆಯ ಫೋನ್ ಖರೀದಿಸುವುದು, ರಜಾ ಪ್ರವಾಸ ಹೋಗುವುದು, ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವುದು ಇತ್ಯಾದಿಗಳು ನಿಮ್ಮ ‘ಅಗತ್ಯಗಳೇʼ ಅಲ್ಲ. ಆದರೆ ಇವೆಲ್ಲವೂ ನಿಮಗೆ ಬೇಕು ಎನಿಸುತ್ತವೆ. ಹಾಗಾಗಿ ನಿಮ್ಮ ಇಂತಹ ಆಸೆಗಳ ಈಡೇರಿಕೆಗೆ ವೈಯಕ್ತಿಕ ಸಾಲ ತೆಗೆದುಕೊಳ್ಳುವುದರಿಂದ ದೂರವಿರಿ.

ಮತ್ತೊಂದು ಸಾಲ ಮರುಪಾವತಿಸಲು ಪರ್ಸನಲ್‌ ಲೋನ್‌ ಮೊರೆ ಹೋಗಬೇಡಿ ವೈಯಕ್ತಿಕ ಸಾಲಗಳು ಯಾವತ್ತಿದ್ದರೂ ದುಬಾರಿ. ಹಾಗಾಗಿ ಈಗಾಗಲೇ ಇರುವ ಸಾಲ ಮರು ಪಾವತಿಸಲು ಮತ್ತೊಂದು ಕಡೆ ಪರ್ಸನಲ್‌ ಲೋನ್‌ ಪಡೆದುಕೊಂಡರೆ ಅದು ಅವಿವೇಕದ ನಿರ್ಧಾರ ಎನಿಸಿಕೊಳ್ಳುತ್ತದೆ. ಅನೇಕ ಬಾರಿ ಜನರು ಕ್ರೆಡಿಟ್ ಕಾರ್ಡ್ ಬಿಲ್‌ ಬಾಕಿಯನ್ನು ಮರುಪಾವತಿಸಲು ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳುತ್ತಾರೆ. ನಿಯಮಿತವಾಗಿ ತಿಂಗಳ ಆದಾಯ ಪಡೆಯುವಾಗ ಇಎಂಐ ಕಂತುಗಳನ್ನು ಪಾವತಿಸುವುದು ಸುಲಭ ಎಂದು ಜನರು ಭಾವಿಸುತ್ತಾರೆ. ಆದರೆ ಅದು ಅಷ್ಟು ಸುಲಭವಲ್ಲ. ಕೊನೆಗೆ ನೀವು ಸಾಲಗಳ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳಬಹುದು.

ಸರಿಯಾದ ಕಾರಣಕ್ಕೆ ಸರಿಯಾದ ಸಾಲ ತಗೊಳ್ಳಿ ಬಹುತೇಕ ಜನರು ಮನೆ ಖರೀದಿಗೆಂದು ಡೌನ್‌ ಪೇಮೆಂಟ್‌ಗೆ ಇಲ್ಲವೇ ಕಾರು ಖರೀದಿಗೆ ಅಥವಾ ಶೈಕ್ಷಣಿಕ ಉದ್ದೇಶಕ್ಕೆ ವೈಯಕ್ತಿಕ ಸಾಲ ತೆಗೆದುಕೊಳ್ಳುವುದು ಸಹ ಕಂಡುಬರುತ್ತದೆ. ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಅಧಿಕ ಬಡ್ಡಿ ದರ ಹೊಂದಿರುವ ವೈಯಕ್ತಿಕ ಸಾಲಗಳು ಈ ಉದ್ದೇಶಕ್ಕೆ ಸೂಕ್ತವಲ್ಲ.

ಯಾವುದೇ ವೆಚ್ಚಕ್ಕಾಗಿ ವೈಯಕ್ತಿಕ ಸಾಲ ತೆಗೆದುಕೊಳ್ಳುವ ಮುನ್ನ ನೀವೇ ಕೇಳಿಕೊಳ್ಳಿ: – ಯಾವುದೇ ಅನಗತ್ಯ ವೆಚ್ಚವಿಲ್ಲದೇ ನಿಭಾಯಿಸಬಹುದೇ? – ನಿಮ್ಮ ಅಗತ್ಯಗಳಿಗೆ ಉಳಿತಾಯದ ಹಣ ಅಥವಾ ನಿಮ್ಮಲ್ಲಿರುವ ನಗದು ರೂಪದ ಸ್ವತ್ತುಗಳನ್ನು ಬಳಸಿಕೊಳ್ಳಲು ಸಾಧ್ಯವಾದರೆ ಆಗ ವೈಯಕ್ತಿಕ ಸಾಲಕ್ಕೆ ಹೋಗಬೇಡಿ – ನಿಮ್ಮ ಮನೆಯಲ್ಲಿ ಅಲ್ಪ ಸ್ವಲ್ಪ ಚಿನ್ನದ ಒಡವೆ, ಆಭರಣಗಳು ಇದ್ದರೆ ಅದನ್ನು ಅಡ ಇಟ್ಟು ಪಡೆವ ಸಾಲ ಉತ್ತಮ ಪರ್ಯಾಯ ಆಗಬಲ್ಲದು.

ಕೊನೆ ಮಾತು ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ದರಗಳ ಬಗ್ಗೆ ಸದಾ ಜಾಗೃತರಾಗಿರಿ, ಪರ್ಸನಲ್‌ ಲೋನ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ನಮ್ಮ ಲೇಖನಗಳನ್ನು ಗಮನಿಸುತ್ತಿರಿ.

(ಲೇಖನ: ಪವನ ಜಯಸ್ವಾಲ್)

ಇದನ್ನೂ ಓದಿ: Personal Loan: ಕಡಿಮೆ ಬಡ್ಡಿ ದರಕ್ಕೆ ಪರ್ಸನಲ್ ಲೋನ್ ನೀಡುತ್ತಿರುವ 9 ಬ್ಯಾಂಕ್​ಗಳಿವು

Follow us on

Related Stories

Most Read Stories

Click on your DTH Provider to Add TV9 Kannada