ಮುಂಬೈ: ಸ್ಪೇಸ್-ಎಕ್ಸ್ ಮಾಲೀಕ ಹಾಗೂ ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ (Elon Musk) ಅವರನ್ನು ಮಹಾರಾಷ್ಟ್ರದ (Maharashtra) ನೀರಾವರಿ ಸಚಿವ ಮತ್ತು ಎನ್ಸಿಪಿ (NCP) ರಾಜ್ಯ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್ ತಮ್ಮ ರಾಜ್ಯಕ್ಕೆ ಸ್ವಾಗತಿಸಿದ್ದಾರೆ. ‘ಮಹಾರಾಷ್ಟ್ರವು ಭಾರತದ ಮುಂದುವರಿದ ರಾಜ್ಯಗಳಲ್ಲಿ ಒಂದಾಗಿದೆ. ಭಾರತದಲ್ಲಿ ನಿಮ್ಮ ಕಂಪನಿ ಸ್ಥಾಪನೆಯಾಗಲು ನಿಮಗೆ ಬೇಕಿರುವ ಎಲ್ಲ ಬಗೆಯ ನೆರವನ್ನು ಮಹಾರಾಷ್ಟ್ರದಿಂದ ನಾವು ಕೊಡುತ್ತೇವೆ. ನಿಮ್ಮ ಉತ್ಪಾದನಾ ಘಟಕವನ್ನು ಮಹಾರಾಷ್ಟ್ರದಲ್ಲಿ ಸ್ಥಾಪಿಸಬೇಕೆಂದು ಕೋರುತ್ತೇವೆ’ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ. ಹೂಡಿಕೆ ಮಾಡಲು ಮಹಾರಾಷ್ಟ್ರ ಅತ್ಯುತ್ತಮ ಸ್ಥಳ ಎನಿಸಿದೆ ಎಂದು ಸಚಿವರು ಟ್ವೀಟ್ನಲ್ಲಿ ವಿವರಿಸಿದ್ದಾರೆ. ನಿನ್ನೆಯಷ್ಟೇ (ಜ.15) ತೆಲಂಗಾಣ ಸರ್ಕಾರ ಎಲಾನ್ ಮಸ್ಕ್ಗೆ ಇದೇ ರೀತಿಯ ಸ್ವಾಗತ ಕೋರಿತ್ತು.
‘ನಿಮ್ಮ ಕಾರ್ ಭಾರತದಲ್ಲಿ ಯಾವಾಗ ಸಿಗುತ್ತದೆ’ ಎಂದು ಟ್ವಿಟರ್ ಬಳಕೆದಾರರೊಬ್ಬರು ಎಲಾನ್ ಮಸ್ಕ್ ಅವರನ್ನು ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಮಸ್ಕ್, ‘ಭಾರತದಲ್ಲಿ ಸರ್ಕಾರದ ನಿಯಮಗಳ ಅಡೆತಡೆ ಎದುರಿಸುತ್ತಿದ್ದೇನೆ’ ಎಂದು ಜನವರಿ 13ರಂದು ಉತ್ತರಿಸಿದ್ದರು.
ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಮಸ್ಕ್ ನಿರ್ಧಾರಕ್ಕೆ ಪೂರಕವಾಗಿ ಸ್ಪಂದಿಸಿದ್ದ ತೆಲಂಗಾಣ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಕೆ.ಟಿ.ರಾಮರಾವ್, ‘ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಮಸ್ಕ್ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ’ ಎಂದಿದ್ದರು.
.@elonmusk, Maharashtra is one of the most progressive states in India. We will provide you all the necessary help from Maharashtra for you to get established in India. We invite you to establish your manufacturing plant in Maharashtra. https://t.co/w8sSZTpUpb
— Jayant Patil- जयंत पाटील (@Jayant_R_Patil) January 16, 2022
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಘಟಕದ ಆರಂಭಿಸುವುದಾಗಿ ಎಲಾನ್ ಮಸ್ಕ್ 2020ರಲ್ಲಿ ಘೋಷಿಸಿದ್ದರು. ಇದಕ್ಕಾಗಿ ಟೆಸ್ಲಾ ಕಂಪನಿಯ ಅಧೀನದಲ್ಲಿ ಇಂಡಿಯಾ ಮೋಟಾರ್ಸ್ ಅಂಡ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದ್ದರು.
ಇದನ್ನೂ ಓದಿ: Elon Musk: ಭಾರತದಲ್ಲಿ ಟೆಸ್ಲಾ ಕಾರು ಬಿಡುಗಡೆ ಬಗ್ಗೆ ಎಲಾನ್ ಮಸ್ಕ್ ನೀಡಿದ ಅಪ್ಡೇಟ್ಸ್ ಇದು
ಇದನ್ನೂ ಓದಿ: Elon Musk: ಜಗತ್ತಿನ ಅತಿ ಶ್ರೀಮಂತ ಎಲಾನ್ ಮಸ್ಕ್ ಸಂಪತ್ತಲ್ಲಿ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ಒಂದೇ ದಿನ ಖಲ್ಲಾಸ್
Published On - 4:22 pm, Sun, 16 January 22