Elon Musk: ಭಾರತದಲ್ಲಿ ಟೆಸ್ಲಾ ಕಾರು ಬಿಡುಗಡೆ ಬಗ್ಗೆ ಎಲಾನ್ ಮಸ್ಕ್ ನೀಡಿದ ಅಪ್ಡೇಟ್ಸ್ ಇದು
ಭಾರತದಲ್ಲಿ ಟೆಸ್ಲಾ ಕಂಪೆನಿಯ ಎಲೆಕ್ಟ್ರಿಕ್ ಕಾರು ಬಿಡುಗಡೆಯ ಬಗ್ಗೆ ಕಂಪೆನಿಯ ಸಿಇಒ ಎಲಾನ್ ಮಸ್ಕ್ ಗುರುವಾರದಂದು ಅಪ್ಡೇಟ್ ನೀಡಿದ್ದಾರೆ.
ಭಾರತದಲ್ಲಿ “ಸಿಕ್ಕಾಪಟ್ಟೆ ಸವಾಲುಗಳನ್ನು” ಎದುರಿಸುತ್ತಿದ್ದೇವೆ ಎಂದು ಟೆಸ್ಲಾ ಕಾರು ಬಿಡುಗಡೆ ವಿಚಾರವಾಗಿ ಕಂಪೆನಿಯ ಸ್ಥಾಪಕ ಹಾಗೂ ಸಿಇಒ ಎಲಾನ್ ಮಸ್ಕ್ ಗುರುವಾರ ಮಾಹಿತಿ ನೀಡಿದ್ದಾರೆ. ಎಲ್ಲ ಅಡೆತಡೆಗಳನ್ನು ದಾಟುವ ಉದ್ದೇಶದಿಂದ ಸರ್ಕಾರದ ಜತೆಗೆ ತೊಡಗಿಕೊಂಡಿರುವುದಾಗಿ ಹೇಳಿದ್ದಾರೆ. “ಸರ್ಕಾರದ ಜತೆಗೆ ಬಹಳ ಸವಾಲುಗಳು ಇರುವ ಹೊರತಾಗಿಯೂ ನಾವು ಕೆಲಸ ಮಾಡುತ್ತಿದ್ದೇವೆ,” ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ. ಪ್ರಣಯ್ ಪಥೋಲೆ ಎಂಬುವರು ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದರು: ಭಾರತದಲ್ಲಿ ಟೆಸ್ಲಾ ಯಾವಾಗ ಬಿಡುಗಡೆ ಆಗುತ್ತದೆ? ವಿಶ್ವದ ಮೂಲೆಮೂಲೆಯಲ್ಲೂ ಇರುವುದಕ್ಕೆ ಅರ್ಹವಾದ ಸುಂದರವಾದ ಕಾರು ಅದು ಎಂದಿದ್ದರು. ಅದಕ್ಕೆ ಎಲಾನ್ ಮಸ್ಕ್ ಮೇಲ್ಕಂಡಂತೆ ಪ್ರತಿಕ್ರಿಯಿಸಿದ್ದಾರೆ. ಭಾರತದ ಮಾರುಕಟ್ಟೆ ಪ್ರವೇಶಿಸುವುದಕ್ಕೆ ಮುನ್ನ, ಎಲೆಕ್ಟ್ರಿಕ್ ವಾಹನಗಳ ಮೇಲಿನ ಆಮದು ಸುಂಕವನ್ನು ಇಳಿಕೆ ಮಾಡುವುದು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಾಲಯವನ್ನು ಟೆಸ್ಲಾ ಕೇಳಿದೆ ಎಂಬುದಾಗಿ ರಾಯಿಟರ್ಸ್ ಸುದ್ದಿ ಸಂಸ್ಥೆಯು ಮೂಲಗಳನ್ನು ಆಧರಿಸಿ ವರದಿ ಮಾಡಿದೆ. ಆದರೆ ತೆರಿಗೆ ಇಳಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಭಾರತದ ಕೆಲವು ವಾಹನ ತಯಾರಕರ ಆಕ್ಷೇಪ ಇದೆ.
ಈ ವರ್ಷ ಭಾರತದಲ್ಲಿ ಆಮದು ಕಾರನ್ನು ಮಾರಾಟ ಮಾಡುವುದಕ್ಕೆ ಟೆಸ್ಲಾ ಬಯಸಿದೆ. ಆದರೆ ಭಾರತದಲ್ಲಿ ಅದಕ್ಕೆ ವಿಶ್ವದಲ್ಲೇ ಅತಿ ಹೆಚ್ಚಿನ ತೆರಿಗೆ ಆಗುತ್ತದೆ. ಟೆಸ್ಲಾಗೆ ಅನುಮತಿ ನೀಡುವುದರಿಂದ ದೇಶೀಯ ಹೂಡಿಕೆ ಕಡಿಮೆ ಆಗುತ್ತದೆ ಎಂಬ ಸ್ಥಳೀಯ ವಾಹನ ತಯಾರಕರ ಆಕ್ಷೇಪದ ಹೊರತಾಗಿಯೂ ತೆರಿಗೆ ಕಡಿತಕ್ಕೆ ಕೇಳಿದೆ. ಭಾರತದಲ್ಲಿ ಅಧಿಕೃತವಾಗಿ ತನ್ನ ಕಾರಿನೊಂದಿಗೆ ಪ್ರವೇಶಿಸುವ ಮುನ್ನ “ತೆರಿಗೆಯಿಂದ ತಾತ್ಕಾಲಿಕವಾಗಿ ಪರಿಹಾರ ದೊರಕಿಸುವಂತೆ” ಟೆಸ್ಲಾದಿಂದ ಲಾಬಿ ಮುಂದುವರಿದಿದೆ. ಮಸ್ಕ್ ಮಾತನಾಡಿ, ಶೀಘ್ರದಲ್ಲೇ ಭಾರತದಲ್ಲಿ ಕಾರು ಬಿಡುಗಡೆ ಮಾಡುವುದಕ್ಕೆ ಟೆಸ್ಲಾ ಬಯಸಿದೆ. ಯಾವುದೇ ದೊಡ್ಡ ದೇಶದಲ್ಲಿ ವಿಧಿಸುವ ಆಮದು ಸುಂಕಕ್ಕಿಂತ ವಿಶ್ವದಲ್ಲೇ ಅತಿ ಹೆಚ್ಚಿನದಲ್ಲಿ ಭಾರತವು ಆಮದು ಸುಂಕವಾಗಿ ಹಾಕುತ್ತದೆ. ಭಾರತದಲ್ಲಿ ಟೆಸ್ಲಾದಿಂದ ಕಾರ್ಖಾನೆ ಆರಂಭಿಸಲಾಗುವುದು. ಆದರೆ ಮೊದಲಿಗೆ ಆಮದು ಕಾರುಗಳು ಯಶಸ್ಸು ಕಾಣಬೇಕು ಎಂದಿದ್ದಾರೆ.
ಸದ್ಯಕ್ಕೆ ಭಾರತದಲ್ಲಿ ಆಮದು ಕಾರಿನ ಮೇಲಿನ ಸುಂಕ ಶೇ 60ರಿಂದ ಶೇ 100ರಷ್ಟಿದೆ. ಆಮದು ಕಾರು ಜತೆಗೆ CIF (ವೆಚ್ಚ, ಇನ್ಷೂರೆನ್ಸ್ ಹಾಗೂ ಸಾಗಾಟ) ಸೇರಿ ಶೇ 100ರಷ್ಟು ಸುಂಕವು 40 ಸಾವಿರ ಡಾಲರ್ ಮೇಲ್ಪಟ್ಟ ಮೌಲ್ಯಕ್ಕೆ ಆಗುತ್ತದೆ. ಇನ್ನು ಅದಕ್ಕಿಂತ ಕಡಿಮೆ ಮೊತ್ತದ್ದಕ್ಕೆ ಶೇ 60ರಷ್ಟು ಸುಂಕವಾಗುತ್ತದೆ. ವಿಲಾಸಿ ಕಾರು ಬ್ರ್ಯಾಂಡ್ ಆದ ಮರ್ಸಿಡಿಸ್- ಬೆಂಜ್ ಎಸ್- ಕ್ಲಾಸ್ ಸೆಡಾನ್, ಇಕ್ಯೂಎಸ್ ಎಲೆಕ್ಟ್ರಿಕ್ ಮಾದರಿಯನ್ನು ಈ ವರ್ಷದಿಂದ ಭಾರತದಲ್ಲೇ ಜೋಡಣೆ ಮಾಡುವುದಕ್ಕೆ ನಿರ್ಧರಿಸಿದೆ. ಆಮದು ಸುಂಕ ಕಡಿತ ಮಾಡುವ ಉದ್ದೇಶಕ್ಕೆ ಟೆಸ್ಲಾ ಕೂಡ ಇದೇ ಹಾದಿ ತುಳಿಯಬಹುದು.
ಇದನ್ನೂ ಓದಿ: Tesla: ಎಲೆಕ್ಟ್ರಿಕ್ ವಾಹನಗಳ ಆಮದು ಸುಂಕ ಇಳಿಸುವಂತೆ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಟೆಸ್ಲಾ ಒತ್ತಾಯ