TCS Q3 Results: ಟಿಸಿಎಸ್ ಮೂರನೇ ತ್ರೈಮಾಸಿಕ ಲಾಭ ರೂ. 9769 ಕೋಟಿ, ರೂ. 7 ಡಿವಿಡೆಂಡ್ ಘೋಷಣೆ
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ನ 2022ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದ ಫಲಿತಾಂಶವನ್ನು ಪ್ರಕಟಿಸಿದ್ದು ರೂ. 9769 ಕೋಟಿ ಲಾಭವನ್ನು ಗಳಿಸಿದೆ.
ಭಾರತದ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಸೇವೆಗಳ ಕಂಪೆನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ನಿಂದ ಬುಧವಾರದಂದು 31 ಡಿಸೆಂಬರ್, 2021 (Q3FY22) ತ್ರೈಮಾಸಿಕಕ್ಕೆ ರೂ. 9,769 ಕೋಟಿಗಳ ಏಕೀಕೃತ ನಿವ್ವಳ ಲಾಭವನ್ನು ದಾಖಲಿಸಿದ್ದು, ವರ್ಷದ ಹಿಂದಿನ 8,701 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ಶೇ 12ರಷ್ಟು ಹೆಚ್ಚಾಗಿದೆ. ಈ ಮಧ್ಯೆ, ಮೂರನೇ ತ್ರೈಮಾಸಿಕದಲ್ಲಿ ಟಿಸಿಎಸ್ ಕಾರ್ಯಾಚರಣೆಗಳ ಆದಾಯವು ಶೇ 16ರಷ್ಟು ಏರಿಕೆಯಾಗಿ, ರೂ. 48,885 ಕೋಟಿಗಳಿಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ರೂ. 42,015 ಕೋಟಿ ಇತ್ತು. ಸ್ಥಿರ ಕರೆನ್ಸಿ (CC) ಪರಿಭಾಷೆಯಲ್ಲಿ, ಹಿಂದಿನ ವರ್ಷದ ಅವಧಿಗೆ ಹೋಲಿಸಿದರೆ ಆದಾಯವು ಶೇ 15.4ರಷ್ಟು ಏರಿಕೆಯಾಗಿದೆ. ಡಾಲರ್ ಲೆಕ್ಕದಲ್ಲಿ, ಕಂಪೆನಿಯು Q3 ಕಾರ್ಯಕ್ಷಮತೆಯು ವಾರ್ಷಿಕ ಆದಾಯದಲ್ಲಿ 25 ಬಿಲಿಯನ್ ಡಾಲರ್ ಗಳಿಸಲು ಸಹಾಯ ಮಾಡಿದೆ ಎಂದು ಹೇಳಿದೆ.
ಕಂಪೆನಿಯ ಮಂಡಳಿಯು ರೂ. 18,000 ಕೋಟಿ ಮೌಲ್ಯದ ಷೇರುಗಳ ಮರುಖರೀದಿಯನ್ನು ಅನುಮೋದಿಸಿದೆ. “ನಿರ್ದೇಶಕರ ಮಂಡಳಿಯು ತನ್ನ ಸಭೆಯಲ್ಲಿ ಕಂಪೆನಿಯ 4,00,00,000 ಈಕ್ವಿಟಿ ಷೇರುಗಳನ್ನು ಒಟ್ಟು ರೂ. 18,000 ಕೋಟಿಗೆ ಮೀರದ ಒಟ್ಟು ಮೊತ್ತಕ್ಕೆ ಪಾವತಿಸಿದ ಈಕ್ವಿಟಿ ಷೇರು ಬಂಡವಾಳದ ಶೇ 1.08ವರೆಗೆ ಖರೀದಿಸುವ ಪ್ರಸ್ತಾಪವನ್ನು ಅನುಮೋದಿಸಿದೆ. ಪ್ರತಿ ಈಕ್ವಿಟಿ ಷೇರಿಗೆ 4,500 ರೂಪಾಯಿಯಂತೆ ಷೇರುದಾರರ ಅನುಮೋದನೆಗೆ ಒಳಪಟ್ಟಿದೆ,” ಎಂದು ಟಿಸಿಎಸ್ ಫೈಲಿಂಗ್‌ನಲ್ಲಿ ತಿಳಿಸಿದೆ. ಪ್ರಸ್ತುತ ಷೇರಿನ ಬೆಲೆಯಿಂದ ರೂ. 643 ಪ್ರೀಮಿಯಂನಲ್ಲಿ ಮರುಖರೀದಿಯನ್ನು ಕಾರ್ಯಗತಗೊಳಿಸಲಾಗುತ್ತದೆ.
ಟಿಸಿಎಸ್ ಸಿಇಒ ಮತ್ತು ಎಂ.ಡಿ. ರಾಜೇಶ್ ಗೋಪಿನಾಥನ್ ಮಾತನಾಡಿ, “ನಮ್ಮ ಮುಂದುವರಿದ ಬೆಳವಣಿಗೆಯ ವೇಗವು ಗ್ರಾಹಕರ ವ್ಯವಹಾರ ರೂಪಾಂತರದ ಅಗತ್ಯಗಳಿಗೆ ನಮ್ಮ ಸಹಯೋಗದ, ಒಳ-ಹೊರಗಿನ ವಿಧಾನದ ಮೌಲ್ಯಮಾಪನ ಆಗಿದೆ,” ಎಂದಿದ್ದಾರೆ. ಟಿಸಿಎಸ್ ಮಂಡಳಿಯು ಪ್ರತಿ ಈಕ್ವಿಟಿ ಷೇರಿಗೆ ರೂ. 7ರ ಮಧ್ಯಂತರ ಲಾಭಾಂಶವನ್ನು ಘೋಷಿಸಿದೆ. ಬುಧವಾರದಂದು ಫಲಿತಾಂಶಗಳಿಗೆ ಮುಂಚಿತವಾಗಿ ಎನ್ಎಸ್ಇನಲ್ಲಿ ಟಿಸಿಎಸ್ ಸ್ಕ್ರಿಪ್ ಶೇ 1.50ರಷ್ಟು ಇಳಿದು, ರೂ. 3,857ಕ್ಕೆ ಕುಸಿದಿದೆ. ಕಳೆದ ಒಂದು ವರ್ಷದಲ್ಲಿ ಷೇರುಗಳು ಶೇ 21.37ರಷ್ಟು ಏರಿಕೆ ಕಂಡಿವೆ. ಅದೇ ಅವಧಿಯಲ್ಲಿ ನಿಫ್ಟಿ ಐಟಿ ಸೂಚ್ಯಂಕ ಶೇ 25.02 ಗಳಿಕೆ ದಾಖಲಿಸಿದೆ.
ಈ ಮಧ್ಯೆ, ತ್ರೈಮಾಸಿಕದ ಅಂತ್ಯದಲ್ಲಿ ಕಾರ್ಯಾಚರಣೆಗಳಿಂದ ನಿವ್ವಳ ನಗದು ರೂ. 10,853 ಕೋಟಿಗಳಷ್ಟಿದೆ, ಇದು ನಿವ್ವಳ ಆದಾಯದ ಸುಮಾರು ಶೇ 111.1ರಷ್ಟು ಆಗಿದೆ. ಕಂಪೆನಿಯು ಮೂರನೇ ತ್ರೈಮಾಸಿಕದಲ್ಲಿ 28,238 ನಿವ್ವಳ ಉದ್ಯೋಗಿಗಳ ಸಂಖ್ಯೆಯನ್ನು ಸೇರಿಸಿದ್ದು, ಒಟ್ಟು ಉದ್ಯೋಗಿಗಳ ಬಲವನ್ನು 5,56,986ಕ್ಕೆ ತಲುಪಿಸಿದೆ.
ಷೇರು ಮರುಖರೀದಿ ಎಂದರೇನು? ಷೇರು ಮರುಖರೀದಿ ಎಂದರೆ ಕಂಪನಿಯು ತನ್ನ ಸ್ವಂತ ಷೇರುಗಳನ್ನು ಹೂಡಿಕೆದಾರರು ಅಥವಾ ಮಧ್ಯಸ್ಥಗಾರರಿಂದ ಖರೀದಿಸುವುದು. ಷೇರುದಾರರಿಗೆ ಹಣವನ್ನು ಹಿಂದಿರುಗಿಸುವ ಪರ್ಯಾಯ, ತೆರಿಗೆ-ಸಮರ್ಥ ಮಾರ್ಗವಾಗಿ ಇದನ್ನು ಕಾಣಬಹುದು.
ಸಾಮಾನ್ಯವಾಗಿ ಕಂಪೆನಿಗಳು ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೆಚ್ಚಿಸಲು ಬಯಸಿದರೆ ಷೇರು ಮರುಖರೀದಿಯ ಮೊರೆ ಹೋಗುತ್ತವೆ. ಷೇರು ಮರುಖರೀದಿಗಳು ಚಲಾವಣೆಯಲ್ಲಿರುವ ಷೇರುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ, ಇದು ಷೇರು ಮೌಲ್ಯ ಮತ್ತು ಪ್ರತಿ ಷೇರಿಗೆ ಗಳಿಕೆಯನ್ನು (ಇಪಿಎಸ್) ಹೆಚ್ಚಿಸಬಹುದು.
ಇದನ್ನೂ ಓದಿ: TCS Share Buyback: ಜನವರಿ 12ಕ್ಕೆ ಷೇರು ಮರುಖರೀದಿ ಪ್ರಸ್ತಾವ ಪರಿಗಣಿಸಲಿದೆ ಟಿಸಿಎಸ್