Infosys Q3 Results: ಇನ್ಫೋಸಿಸ್​ಗೆ ಮೂರನೇ ತ್ರೈಮಾಸಿಕದಲ್ಲಿ 5809 ಕೋಟಿ ರೂಪಾಯಿ ಲಾಭ

TV9 Digital Desk

| Edited By: Srinivas Mata

Updated on: Jan 12, 2022 | 5:55 PM

ಬೆಂಗಳೂರು ಮೂಲದ ಮಾಹಿತಿ ತಂತ್ರಜ್ಞಾನ ಕಂಪೆನಿಯಾದ ಇನ್ಫೋಸಿಸ್ ಮೂರನೇ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದ್ದು, ನಿವ್ವಳ ಲಾಭ ರೂ. 5809 ಕೋಟಿ ಬಂದಿದೆ.

Infosys Q3 Results: ಇನ್ಫೋಸಿಸ್​ಗೆ ಮೂರನೇ ತ್ರೈಮಾಸಿಕದಲ್ಲಿ 5809 ಕೋಟಿ ರೂಪಾಯಿ ಲಾಭ
ಸಾಂದರ್ಭಿಕ ಚಿತ್ರ
Follow us

ಮಾರುಕಟ್ಟೆ ಬಂಡವಾಳ ಮೌಲ್ಯದ ಮೂಲಕ ದೇಶದ ಎರಡನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಇನ್ಫೋಸಿಸ್ ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ 5809 ಕೋಟಿ ರೂಪಾಯಿ ಲಾಭ ಬಂದಿದೆ. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇಕಡಾ 7.2ರಷ್ಟು ಏರಿಕೆ ಆಗಿದೆ. ಏಕೀಕೃತ ಆದಾಯದಲ್ಲೂ ಈ ತ್ರೈಮಾಸಿಕದಲ್ಲಿ ಶೇ 7.7ರಷ್ಟು ಏರಿಕೆ ವರದಿ ಮಾಡಿದ್ದು, ಡಿಸೆಂಬರ್ 2020ರಲ್ಲಿ ಘೋಷಿಸಲಾದ ಜರ್ಮನ್ ಆಟೋ ಪ್ರಮುಖ ಕಂಪೆನಿ ಡೈಮ್ಲರ್‌ನೊಂದಿಗಿನ ಹೈಬ್ರಿಡ್ ಕ್ಲೌಡ್ ಪಾಲುದಾರಿಕೆಯಿಂದಾಗಿ ವರದಿಯಾದ ಈ ತ್ರೈಮಾಸಿಕಕ್ಕೆ 31,867 ಕೋಟಿ ರೂಪಾಯಿ ಆದಾಯ ಬಂದಿದೆ. ಇನ್ಫೋಸಿಸ್ ತ್ರೈಮಾಸಿಕದಿಂದ ತ್ರೈಮಾಸಿಕ ಶೇ 4.5ರಷ್ಟು ಬೆಳವಣಿಗೆ, ಏಕೀಕೃತ ಆದಾಯ ರೂ. 30,940 ಕೋಟಿಗಳಾಗಿದ್ದರೆ, ಅದರ ಏಕೀಕೃತ ನಿವ್ವಳ ಲಾಭವು ತ್ರೈಮಾಸಿಕದಲ್ಲಿ ಶೇಕಡಾ 5.2ರಷ್ಟು ಏರಿಕೆ ಆಗಿ, 5,701 ಕೋಟಿ ರೂಪಾಯಿ ತಲುಪಬಹುದು ಎಂದು ಸಿಎನ್​ಬಿಸಿ- ಟಿವಿ18 ಸಮೀಕ್ಷೆ ಅಂದಾಜಿಸಿತ್ತು.

“ಬಲವಾದ ಕಾರ್ಯಕ್ಷಮತೆ ಮತ್ತು ಮಾರುಕಟ್ಟೆ ಪಾಲು ಲಾಭಗಳು ನಮ್ಮ ಗ್ರಾಹಕರು ತಮ್ಮ ಡಿಜಿಟಲ್ ರೂಪಾಂತರದಲ್ಲಿ ಸಹಾಯ ಮಾಡಲು ನಮ್ಮಲ್ಲಿ ಹೊಂದಿರುವ ಅಗಾಧ ವಿಶ್ವಾಸಕ್ಕೆ ಸಾಕ್ಷಿಯಾಗಿದೆ,” ಎಂದು ಇನ್ಫೋಸಿಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಲೀಲ್ ಪರೇಖ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸ್ಥಿರ-ಕರೆನ್ಸಿ ಪರಿಭಾಷೆಯಲ್ಲಿ, ಇನ್ಫೋಸಿಸ್‌ನ ಏಕೀಕೃತ ಆದಾಯವು ಅನುಕ್ರಮವಾಗಿ ಶೇ 7ರಷ್ಟು ಬೆಳೆದಿದೆ. ದೃಢವಾದ ಟಾಪ್‌ಲೈನ್ ಕಾರ್ಯಕ್ಷಮತೆಯು ಕಂಪೆನಿಯು 2022-23ರ ಆದಾಯದ ಬೆಳವಣಿಗೆಯ ಮಾರ್ಗದರ್ಶನವನ್ನು ಹಿಂದಿನ ಶೇಕಡಾ 16.5-17.5 ರಿಂದ 19.5-20.0ಕ್ಕೆ ಹೆಚ್ಚಿಸಲು ಅನುವು ಮಾಡಿಕೊಟ್ಟಿತು.

“ದೊಡ್ಡ ಉದ್ಯಮಗಳು ತಮ್ಮ ಡಿಜಿಟಲ್ ರೂಪಾಂತರಗಳಲ್ಲಿ ಪ್ರಗತಿ ಹೊಂದುವುದರೊಂದಿಗೆ ಆರೋಗ್ಯಕರ ತಂತ್ರಜ್ಞಾನದ ಖರ್ಚು ಮುಂದುವರಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ,” ಎಂಬುದಾಗಿ ಪರೇಖ್ ಹೇಳಿದ್ದಾರೆ. ವರದಿಯಾದ ತ್ರೈಮಾಸಿಕದಲ್ಲಿ 2.53 ಶತಕೋಟಿ ಡಾಲರ್ ಮೌಲ್ಯದ ಒಪ್ಪಂದವನ್ನು ಇನ್ಫೋಸಿಸ್ ವರದಿ ಮಾಡಿದೆ. ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಸ್ಥಿರ ಕರೆನ್ಸಿಯಲ್ಲಿ ವರ್ಷದಿಂದ ವರ್ಷಕ್ಕೆ ಶೇ 42.6ರಷ್ಟು ಏರಿಕೆಯಾದ ಕಾರಣ ಬೆಂಗಳೂರು ಮೂಲದ ಕಂಪೆನಿಯ ಡಿಜಿಟಲ್ ಸೇವೆಗಳ ಮಾರಾಟವು ಬಲವಾದ ಬೆಳವಣಿಗೆಯನ್ನು ಮುಂದುವರಿಸಿದೆ. ಒಟ್ಟಾರೆ ಮಾರಾಟಕ್ಕೆ ಡಿಜಿಟಲ್ ಆದಾಯದ ಪಾಲು ಹಿಂದಿನ ತ್ರೈಮಾಸಿಕದಲ್ಲಿ ಶೇ 56.1 ಶೇಕಡಾದಿಂದ 58.5ಕ್ಕೆ ತಲುಪಿದೆ.

ವರದಿಯಾದ ತ್ರೈಮಾಸಿಕದಲ್ಲಿ ಇನ್ಫೋಸಿಸ್ 100 ಮಿಲಿಯನ್-ಪ್ಲಸ್ ವರ್ಗ ಮತ್ತು 50 ಮಿಲಿಯನ್-ಪ್ಲಸ್ ವಿಭಾಗದಲ್ಲಿ ತಲಾ ಇಬ್ಬರು ಹೊಸ ಗ್ರಾಹಕರನ್ನು ಸೇರಿಸಿದೆ. ತ್ರೈಮಾಸಿಕದಲ್ಲಿ ಕಡಿಮೆ ಕೆಲಸದ ದಿನಗಳಿಂದಾಗಿ ತರಬೇತಿ ಪಡೆದವರು ಸೇರಿದಂತೆ ಸಿಬ್ಬಂದಿ ಬಳಕೆಯು ಹಿಂದಿನ ತ್ರೈಮಾಸಿಕದಲ್ಲಿ ಶೇ 84.1ರಿಂದ ಶೇ 82.7ಕ್ಕೆ ಇಳಿದಿದೆ. ಭೌಗೋಳಿಕವಾಗಿ, ಉತ್ತರ ಅಮೆರಿಕಾವು ವರ್ಷಕ್ಕೆ ಶೇ 21.3 ಬೆಳವಣಿಗೆಯನ್ನು ವರದಿ ಮಾಡಿದೆ ಮತ್ತು ಭಾರತವು ವರ್ಷದ ಹಿಂದಿನ ತ್ರೈಮಾಸಿಕದಿಂದ ಶೇ 38.4 ಬೆಳವಣಿಗೆಯನ್ನು ಕಂಡಿದೆ.

ಇನ್ಫೋಸಿಸ್ ಷೇರು ಶೇಕಡಾ 1.1ರಷ್ಟು ಏರಿಕೆಯಾಗಿ, ಎನ್​ಎಸ್​ಇಯಲ್ಲಿ ರೂ. 1,875.80ಕ್ಕೆ ದಿನಾಂತ್ಯ ಮುಗಿಸಿದೆ.

ಇದನ್ನೂ ಓದಿ: ಈ ಬಿಎಸ್​ಇ ಎಸ್​ಎಂಇ ಷೇರು 9 ಟ್ರೇಡಿಂಗ್ ಸೆಷನ್​ನಲ್ಲಿ ಶೇ 76ಕ್ಕೂ ಜಾಸ್ತಿ ಹೆಚ್ಚಳ

ತಾಜಾ ಸುದ್ದಿ

Related Stories

Click on your DTH Provider to Add TV9 Kannada