Elon Musk: ಜಗತ್ತಿನ ಅತಿ ಶ್ರೀಮಂತ ಎಲಾನ್​ ಮಸ್ಕ್ ಸಂಪತ್ತಲ್ಲಿ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ಒಂದೇ ದಿನ ಖಲ್ಲಾಸ್

ಜಗತ್ತಿನ ಅತಿ ಶ್ರೀಮಂತ ಎಲಾನ್​ ಮಸ್ಕ್​ರ 1 ಲಕ್ಷ ಕೋಟಿ ರೂಪಾಯಿ ಸೇರಿದಂತೆ ಟಾಪ್​ 10 ಶ್ರೀಮಂತರು ಡಿಸೆಂಬರ್ 3ನೇ ತಾರೀಕಿನ ಶುಕ್ರವಾರ ಭಾರೀ ಪ್ರಮಾಣದಲ್ಲಿ ಸಂಪತ್ತು ನಷ್ಟ ಅನುಭವಿಸಿದ್ದಾರೆ. ಷೇರು ಮಾರುಕಟ್ಟೆಯಲ್ಲಿನ ಷೇರು ಬೆಲೆ ಕುಸಿತದಿಂದ ಹೀಗಾಗಿದೆ.

Elon Musk: ಜಗತ್ತಿನ ಅತಿ ಶ್ರೀಮಂತ ಎಲಾನ್​ ಮಸ್ಕ್ ಸಂಪತ್ತಲ್ಲಿ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ಒಂದೇ ದಿನ ಖಲ್ಲಾಸ್
ಎಲಾನ್ ಮಸ್ಕ್ (ಸಂಗ್ರಹ ಚಿತ್ರ)

ಹಣದುಬ್ಬರ ಮತ್ತು ಆರ್ಥಿಕ ಒತ್ತಡ ಭಯದ ಮಧ್ಯೆ ತಂತ್ರಜ್ಞಾನದ ಷೇರುಗಳು ಕುಸಿದಿದ್ದರಿಂದ ಅಮೆರಿಕದ ಟೆಕ್ನಾಲಜಿ ಕಂಪೆನಿ ಶ್ರೀಮಂತರ ಹತ್ತಾರು ಬಿಲಿಯನ್‌ ಡಾಲರ್ ಸಂಪತ್ತು ಸಾಮೂಹಿಕವಾಗಿ ಕರಗಿಹೋಯಿತು. ಟೆಸ್ಲಾ ಇಂಕ್ ಷೇರುಗಳು ನಷ್ಟವು ವಿಸ್ತರಿಸಿದ ನಂತರ ಎಲಾನ್ ಮಸ್ಕ್ ಅವರ ನಿವ್ವಳ ಮೌಲ್ಯವು ಶುಕ್ರವಾರ 1520 ಕೋಟಿ ಅಮೆರಿಕನ್ ಡಾಲರ್ ಕುಸಿಯಿತು – ಟೆಕ್ ಬಿಲಿಯನೇರ್‌ಗಳಲ್ಲಿ ಹೆಚ್ಚು ನಷ್ಟವನ್ನು ಕಂಡವರು ಮಸ್ಕ್. ಇಷ್ಟು ದೊಡ್ಡ ಮೊತ್ತದ ಸಂಪತ್ತು ಕರಗಿದ ಮೇಲೆ ಮಸ್ಕ್‌ ನಿವ್ವಳ ಮೌಲ್ಯ 26,890 ಕೋಟಿ ಅಮೆರಿಕನ್ ಡಾಲರ್ ತಲುಪಿದೆ. ಪರಿಸ್ಥಿತಿ ಹೀಗಿದ್ದರೂ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕ ಪ್ರಕಾರ ಈ ವರ್ಷ ಎಲಾನ್​ ಮಸ್ಕ್​ ಅವರ ಆಸ್ತಿ ಶೇ 72ರಷ್ಟು ಹೆಚ್ಚಾಗಿದೆ.

ನ್ಯೂಯಾರ್ಕ್‌ನಲ್ಲಿ ಅಮೆಜಾನ್.ಕಾಮ್​ ಇಂಕ್​ನ ಷೇರುಗಳು ಶೇ 1.4ರಷ್ಟು ಕುಸಿದಿದ್ದರಿಂದ ಜೆಫ್ ಬೆಜೋಸ್ ಅವರ ನಿವ್ವಳ ಮೌಲ್ಯವು 270 ಕೋಟಿ ಡಾಲರ್​ಗಳಷ್ಟು ಕುಸಿಯಿತು. ಒರಾಕಲ್ ಕಾರ್ಪ್ ಸಹ-ಸಂಸ್ಥಾಪಕ ಲ್ಯಾರಿ ಎಲಿಸನ್ ಸಂಪತ್ತು 260 ಕೋಟಿ ಡಾಲರ್ ಕುಸಿಯಿತು. ಇತ್ತೀಚೆಗೆ ಮರುನಾಮಕರಣಗೊಂಡ ಮೆಟಾ ಪ್ಲಾಟ್​ಫಾರ್ಮ್ಸ್​ ಇಂಕ್ ಅದರ ಇತ್ತೀಚಿನ ಗರಿಷ್ಠ ಮಟ್ಟದಿಂದ ಸುಮಾರು ಶೇ 20ರ ಕುಸಿತದ ನಂತರ ಮಾರ್ಕ್ ಜುಕರ್‌ಬರ್ಗ್ ಸಂಪತ್ತು 130 ಕೋಟಿ ಡಾಲರ್​ ಇಳಿಕೆ ಆಗುವುದರೊಂದಿಗೆ 11,470 ಕೋಟಿ ಡಾಲರ್​ಗೆ ಕುಸಿದಿದೆ.

ಮಾರುಕಟ್ಟೆಗಳು ಇನ್ನೂ ಹೆಚ್ಚಿನ ಹಣದುಬ್ಬರಕ್ಕೆ ಪ್ರತಿಕ್ರಿಯಿಸುತ್ತಿವೆ ಮತ್ತು ಫೆಡರಲ್ ರಿಸರ್ವ್ ಆಸ್ತಿ ಖರೀದಿಗಳನ್ನು ವೇಗವಾಗಿ ಟ್ಯಾಪರಿಂಗ್ ಮಾಡುವುದರೊಂದಿಗೆ ಮುಂದಕ್ಕೆ ಒಯ್ಯುವ ಸಾಧ್ಯತೆಯಿದೆ. ಸೂಚ್ಯಂಕದ ಪ್ರಕಾರ, ಅಗ್ರ 10 ಯುಎಸ್ ತಂತ್ರಜ್ಞಾನದ ಬಿಲಿಯನೇರ್‌ಗಳು ಒಟ್ಟು 2740 ಕೋಟಿ ಡಾಲರ್ ಸಂಪತ್ತನ್ನು ಕಳೆದುಕೊಂಡಿದ್ದಾರೆ.

ಶ್ರೀಮಂತರು ಕಳೆದುಕೊಂಡ ಸಂಪತ್ತಿನ ಮೊತ್ತ ಭಾರತದ ರೂಪಾಯಿಗಳಲ್ಲಿ 1. ಎಲಾನ್ ಮಸ್ಕ್- 1,14,718.20 ಕೋಟಿ 2. ಜೆಫ್​ ಬೆಜೋಸ್- 20,377.58 ಕೋಟಿ 3. ಲ್ಯಾರಿ ಎಲಿಸನ್- 19,622.85 ಕೋಟಿ 4. ಮಾರ್ಕ್​ ಜುಕರ್​ಬರ್ಗ್- 9,811.43 ಕೋಟಿ

ಒಟ್ಟಾರೆಯಾಗಿ ಟಾಪ್​ 10 ಶ್ರೀಮಂತರು 2,06,794.65 ಕೋಟಿ ರೂಪಾಯಿ ಸಂಪತ್ತನ್ನು ಕಳೆದುಕೊಂಡಿದ್ದಾರೆ. ಹೆಚ್ಚೂ- ಕಡಿಮೆ ಕೇರಳ ರಾಜ್ಯದ ಒಂದು ವರ್ಷದ ಬಜೆಟ್​ನ ಮೊತ್ತ ಒಂದೇ ದಿನದಲ್ಲಿ ಕರಗಿಹೋಗಿದೆ.

ಇದನ್ನೂ ಓದಿ: Elon Musk: ಎಲಾನ್ ಮಸ್ಕ್ ಸ್ಟಾರ್ ಲಿಂಕ್ ಇಂಟರ್ನೆಟ್ ಪ್ಲಾನ್ ಖರೀದಿಸಬೇಡಿ: ಭಾರತ ಸರ್ಕಾರದಿಂದ ಎಚ್ಚರಿಕೆ

Published On - 11:26 am, Sat, 4 December 21

Click on your DTH Provider to Add TV9 Kannada