Edible Oil Price: ಅದಾನಿ ವಿಲ್ಮರ್, ಮದರ್​ ಡೇರಿಯಂಥ ಪ್ರಮುಖ ಬ್ರ್ಯಾಂಡ್​ಗಳ ಖಾದ್ಯತೈಲ ಬೆಲೆಗಳಲ್ಲಿ ಇಳಿಕೆ

| Updated By: Digi Tech Desk

Updated on: Jun 23, 2022 | 12:08 PM

ದೇಶದ ಪ್ರಮುಖ ಬ್ರ್ಯಾಂಡ್​ಗಳ ಖಾದ್ಯ ತೈಲ ಬೆಲೆಗಳು ಲೀಟರ್​ಗೆ 10ರಿಂದ 15 ರೂಪಾಯಿ ಇಳಿಕೆ ಆಗಿದೆ. ಅದು ಹೇಗೆ, ಏಕೆ ಎಂಬ ವಿವರ ಇಲ್ಲಿದೆ.

Edible Oil Price: ಅದಾನಿ ವಿಲ್ಮರ್, ಮದರ್​ ಡೇರಿಯಂಥ ಪ್ರಮುಖ ಬ್ರ್ಯಾಂಡ್​ಗಳ ಖಾದ್ಯತೈಲ ಬೆಲೆಗಳಲ್ಲಿ ಇಳಿಕೆ
ಸಾಂದರ್ಭಿಕ ಚಿತ್ರ
Follow us on

ಅಂತಾರಾಷ್ಟ್ರೀಯ ಮಟ್ಟದಲ್ಲಿ ದರಗಳಲ್ಲಿನ ಇಳಿಕೆ, ಸರ್ಕಾರವು ಸರಿಯಾದ ಸಮಯಕ್ಕೆ ಮಧ್ಯಪ್ರವೇಶ ಮಾಡಿದ ಕಾರಣಕ್ಕೆ ರೀಟೇಲ್ ಮಾರುಕಟ್ಟೆಯಲ್ಲಿ ಖಾದ್ಯ ತೈಲ (Edible Oil) ಬೆಲೆಗಳು ದೇಶೀ ಮಾರುಕಟ್ಟೆಯಲ್ಲಿ ಇಳಿಕೆ ಕಡಿಮೆ ಆಗಿದೆ ಎಂದು ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಬುಧವಾರ ಹೇಳಿದ್ದಾರೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಕಡಲೆಕಾಯಿ ಎಣ್ಣೆಯನ್ನು ಹೊರತುಪಡಿಸಿ ಪ್ಯಾಕ್ ಮಾಡಿದ ಖಾದ್ಯ ತೈಲಗಳ ಸರಾಸರಿ ರೀಟೇಲ್ ಬೆಲೆಗಳು ಈ ತಿಂಗಳ ಆರಂಭದಿಂದ ದೇಶಾದ್ಯಂತ ಸ್ವಲ್ಪ ಕಡಿಮೆಯಾಗಿದೆ ಮತ್ತು ಪ್ರತಿ ಕೇಜಿಗೆ ರೂ. 150ರಿಂದ 190ರ ನಡುವೆ ವಹಿವಾಟು ನಡೆಸುತ್ತಿದೆ. ಕಳೆದ ವಾರ, ಖಾದ್ಯ ತೈಲ ಸಂಸ್ಥೆಗಳಾದ ಅದಾನಿ ವಿಲ್ಮರ್ ಮತ್ತು ಮದರ್ ಡೇರಿ ವಿವಿಧ ಬಗೆಯ ಅಡುಗೆ ಎಣ್ಣೆಗಳ ಎಂಆರ್​ಪಿ (ಗರಿಷ್ಠ ಚಿಲ್ಲರೆ ಬೆಲೆ) ಅನ್ನು ಲೀಟರ್‌ಗೆ 10-15 ರೂಪಾಯಿ ಇಳಿಕೆ ಮಾಡಲಿದೆ. ಹೊಸ ಎಂಆರ್​ಪಿಗಳನ್ನು ಹೊಂದಿರುವ ದಾಸ್ತಾನುಗಳು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿವೆ ಎಂದು ಎರಡೂ ಕಂಪೆನಿಗಳು ತಿಳಿಸಿವೆ.

“ಸರ್ಕಾರದ ಸಮಯೋಚಿತ ಮಧ್ಯಪ್ರವೇಶ ಮತ್ತು ಜಾಗತಿಕ ಬೆಳವಣಿಗೆಗಳಿಂದಾಗಿ ಖಾದ್ಯ ತೈಲಗಳ ಬೆಲೆಗಳಲ್ಲಿನ ಟ್ರೆಂಡ್​ಗಳು ತುಂಬಾ ಸಕಾರಾತ್ಮಕವಾಗಿವೆ” ಎಂದು ಪಾಂಡೆ ಸುದ್ದಿಗಾರರಿಗೆ ತಿಳಿಸಿದ್ದಾರೆ. ಖಾದ್ಯ ತೈಲಗಳು ಮಾತ್ರವಲ್ಲ, ರೀಟೇಲ್ ಗೋಧಿ ಮತ್ತು ಗೋಧಿ ಹಿಟ್ಟಿನ ಬೆಲೆಗಳು ಸ್ಥಿರವಾಗಿವೆ, ದೇಶೀಯ ಬೆಲೆಗಳನ್ನು ನಿಯಂತ್ರಣದಲ್ಲಿಡಲು ನಿಯಮಗಳು ಉಪಯುಕ್ತವಾಗಿವೆ ಎಂದು ಅವರು ಹೇಳಿದ್ದಾರೆ. ಪ್ರಮುಖ ಖಾದ್ಯ ತೈಲ ಬ್ರಾಂಡ್‌ಗಳು ಎಂಆರ್‌ಪಿಯನ್ನು ಹಂತಹಂತವಾಗಿ ಇಳಿಸಿವೆ ಮತ್ತು ಇತ್ತೀಚೆಗಷ್ಟೇ ಪ್ರತಿ ಲೀಟರ್‌ಗೆ 10-15 ರೂಪಾಯಿಗಳಷ್ಟು ಬೆಲೆಯನ್ನು ಕಡಿತಗೊಳಿಸಿವೆ ಎಂದು ಆಹಾರ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗ್ರಾಹಕ ವ್ಯವಹಾರಗಳ ಇಲಾಖೆಯು ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, ಶೇಂಗಾ ಎಣ್ಣೆಯ (ಪ್ಯಾಕೇಜ್ ಮಾಡಿದ) ಸರಾಸರಿ ಚಿಲ್ಲರೆ ಬೆಲೆಗಳು ಜೂನ್ 1ರಂದು ಕೇಜಿಗೆ 186.43 ರಿಂದ ಜೂನ್ 21ರಂದು 188.14 ರೂ., ಸಾಸಿವೆ ಎಣ್ಣೆ ದರವು ಜೂನ್ 1 ರಂದು ಕೇಜಿಗೆ 183.68ರಿಂದ ಜೂನ್ 21ರಂದು 180.85 ರೂ.ಗೆ ಕಡಿಮೆಯಾಗಿದೆ. ವನಸ್ಪತಿ ಬೆಲೆ ಕೆಜಿಗೆ 165 ರೂ., ಸೋಯಾ ಎಣ್ಣೆಯ ಬೆಲೆ 169.65 ರಿಂದ 167.67ಕ್ಕೆ ಸ್ವಲ್ಪ ಕಡಿಮೆಯಾಗಿದೆ, ಆದರೆ ಸೂರ್ಯಕಾಂತಿ ದರವು ಕೇಜಿಗೆ 193ರಿಂದ 189.99ಕ್ಕೆ ಸ್ವಲ್ಪ ಕುಸಿದಿದೆ. ತಾಳೆ ಎಣ್ಣೆ ದರವು ಜೂನ್ 1ರಂದು ಕೇಜಿಗೆ 156.4ರಿಂದ ಜೂನ್ 21ರಂದು 152.52 ರೂಪಾಯಿಗೆ ಇಳಿದಿದೆ.

ಇಲಾಖೆಯು 22 ಅಗತ್ಯ ವಸ್ತುಗಳ (ಅಕ್ಕಿ, ಗೋಧಿ, ಹಿಟ್ಟು, ಬೇಳೆ, ತೂರ್ (ಅರ್ಹರ್) ದಾಲ್, ಉದ್ದಿನ ಬೇಳೆ, ಹೆಸರು ಬೇಳೆ, ಮಸೂರ್ ದಾಲ್, ಸಕ್ಕರೆ, ಗುರ್, ಕಡಲೆ ಎಣ್ಣೆ, ಸಾಸಿವೆ ಎಣ್ಣೆ, ವನಸ್ಪತಿ, ಸೂರ್ಯಕಾಂತಿ ಎಣ್ಣೆ, ಸೋಯಾ ಎಣ್ಣೆ, ತಾಳೆ ಎಣ್ಣೆ, ಚಹಾ, ಹಾಲು, ಆಲೂಗಡ್ಡೆ, ಈರುಳ್ಳಿ, ಟೊಮೆಟೊ ಮತ್ತು ಉಪ್ಪು) ಬೆಲೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಉತ್ತರ, ಪಶ್ಚಿಮ, ಪೂರ್ವ, ದಕ್ಷಿಣ ಮತ್ತು ಈಶಾನ್ಯ ಪ್ರದೇಶಗಳನ್ನು ಪ್ರತಿನಿಧಿಸುವ ದೇಶಾದ್ಯಂತ ಹರಡಿರುವ 167 ಮಾರುಕಟ್ಟೆ ಕೇಂದ್ರಗಳಿಂದ ಸಂಗ್ರಹಿಸಿದ ಡೇಟಾವನ್ನು ಆಧರಿಸಿದೆ. ಕೇಂದ್ರದ ಗ್ರಾಹಕ ವ್ಯವಹಾರಗಳ ಇಲಾಖೆ ಅಭಿವೃದ್ಧಿಪಡಿಸಿದ ಮೊಬೈಲ್ ಆ್ಯಪ್ ಮೂಲಕ 167 ಕೇಂದ್ರಗಳ 22 ಸರಕುಗಳ ಚಿಲ್ಲರೆ ಮತ್ತು ಸಗಟು ಬೆಲೆಗಳನ್ನು ಆಯಾ ರಾಜ್ಯ ಸರ್ಕಾರಗಳ ರಾಜ್ಯ ನಾಗರಿಕ ಸರಬರಾಜು ಇಲಾಖೆಗಳಿಂದ ಪ್ರತಿ ದಿನ ಪಡೆಯಲಾಗುತ್ತದೆ.

ಅದಾನಿ ವಿಲ್ಮರ್ ಶನಿವಾರ ತನ್ನ ಖಾದ್ಯ ತೈಲಗಳ ಬೆಲೆಯನ್ನು ಲೀಟರ್‌ಗೆ 10 ರೂ. ಫಾರ್ಚೂನ್ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ 1-ಲೀಟರ್ ಪ್ಯಾಕ್‌ನ ಎಂಆರ್‌ಪಿ ಲೀಟರ್‌ಗೆ 220 ರೂ.ನಿಂದ 210 ರೂ.ಗೆ ಇಳಿಕೆಯಾಗಿದೆ. ಫಾರ್ಚೂನ್ ಸೋಯಾಬೀನ್ ಮತ್ತು ಫಾರ್ಚೂನ್ ಸಾಸಿವೆ ಎಣ್ಣೆ 1 ಲೀಟರ್ ಪ್ಯಾಕ್‌ಗಳ ಎಂಆರ್‌ಪಿ ಲೀಟರ್‌ಗೆ 205.30 ರೂ.ನಿಂದ 195 ರೂ.ಗೆ ಇಳಿಕೆಯಾಗಿದೆ. ದೆಹಲಿ-ಎನ್‌ಸಿಆರ್‌ನ ಪ್ರಮುಖ ಹಾಲು ಪೂರೈಕೆದಾರರಲ್ಲಿ ಒಂದಾದ ಮದರ್ ಡೇರಿ ಕಳೆದ ವಾರ ತನ್ನ ಅಡುಗೆ ಎಣ್ಣೆಗಳ ಬೆಲೆಯನ್ನು ಪ್ರತಿ ಲೀಟರ್‌ಗೆ ರೂ. 15 ರಷ್ಟು ಕಡಿಮೆಗೊಳಿಸಿದೆ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ದರಗಳನ್ನು ಕಡಿಮೆಗೊಳಿಸಿದೆ ಎಂದು ಹೇಳಿದೆ. ಕಂಪೆನಿಯು ತನ್ನ ಖಾದ್ಯ ತೈಲಗಳನ್ನು ಧಾರಾ ಬ್ರ್ಯಾಂಡ್ ಅಡಿಯಲ್ಲಿ ಮಾರಾಟ ಮಾಡುತ್ತದೆ.

ಧಾರಾ ಸಾಸಿವೆ ಎಣ್ಣೆ (1 ಲೀಟರ್ ಪಾಲಿ ಪ್ಯಾಕ್) ಪ್ರತಿ ಲೀಟರ್ ಗೆ 208 ರೂ.ನಿಂದ 193 ರೂ.ಗೆ ಇಳಿಕೆಯಾಗಿದೆ. ಧಾರಾ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ (1 ಲೀಟರ್ ಪಾಲಿ ಪ್ಯಾಕ್) ಪ್ರತಿ ಲೀಟರ್‌ಗೆ 235 ರೂ.ನಿಂದ ಈಗ 220 ರೂ.ಗೆ ಮಾರಾಟವಾಗಲಿದೆ. ಧಾರಾ ಸಂಸ್ಕರಿಸಿದ ಸೋಯಾಬೀನ್ ಎಣ್ಣೆ (1 ಲೀಟರ್ ಪಾಲಿ ಪ್ಯಾಕ್) ದರ 209 ರೂ.ನಿಂದ 194 ರೂ.ಗೆ ಇಳಿಯಲಿದೆ.

ಭಾರತ ಖಾದ್ಯ ತೈಲದ ಶೇಕಡಾ 60ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತದೆ.

2020-21ರ ಮಾರುಕಟ್ಟೆ ವರ್ಷದಲ್ಲಿ (ನವೆಂಬರ್-ಅಕ್ಟೋಬರ್) ಭಾರತದ ಖಾದ್ಯ ತೈಲದ ಆಮದು 131.3 ಲಕ್ಷ ಟನ್‌ಗಳಿತ್ತು. ಆದರೆ ಮೌಲ್ಯದ ಪರಿಭಾಷೆಯಲ್ಲಿ, ಒಳಗಿನ ಸಾಗಣೆಗಳು ಶೇಕಡಾ 63ರಷ್ಟು ಏರಿಕೆಯಾಗಿ 1.17 ಲಕ್ಷ ಕೋಟಿ ರೂಪಾಯಿಗಳನ್ನು ದಾಖಲಿಸಿದೆ ಎಂದು ಸಾಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ (SEA) ಸಂಗ್ರಹಿಸಿದ ಮಾಹಿತಿ ತಿಳಿಸಿದೆ.

2021-22 ತೈಲ ಮಾರುಕಟ್ಟೆ ವರ್ಷದ ಮೊದಲ ಏಳು ತಿಂಗಳಲ್ಲಿ ಸಸ್ಯಜನ್ಯ ಎಣ್ಣೆಗಳ (ಖಾದ್ಯ ಮತ್ತು ಖಾದ್ಯವಲ್ಲದ) ಆಮದು ಅಕ್ಟೋಬರ್‌ಗೆ ಕೊನೆಗೊಂಡಿದ್ದು, ಹಿಂದಿನ ವರ್ಷದ ಇದೇ ಅವಧಿಯ 76,77,998 ಟನ್‌ಗಳಿಗೆ ಹೋಲಿಸಿದರೆ 77,68,990 ಟನ್‌ಗಳು ಅಂದರೆ ಶೇ. 1ರಷ್ಟು ಹೆಚ್ಚಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Edible Oil: ಬೆಲೆ ಇಳಿಕೆಗಾಗಿ ಖಾದ್ಯ ತೈಲ ಮೇಲಿನ ತೆರಿಗೆ ಇಳಿಕೆಗೆ ಮುಂದಾದ ಕೇಂದ್ರ ಸರ್ಕಾರ

Published On - 11:10 am, Thu, 23 June 22