ನವದೆಹಲಿ: ಭಾರತದಲ್ಲಿ ಬಹಳ ಜನಪ್ರಿಯವಾಗಿರುವ ಮತ್ತು ಇಲ್ಲಿಯ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ (Smartphone Market) ಪ್ರಾಬಲ್ಯ ಹೊಂದಿರುವ ಚೀನಾ ಕಂಪನಿಗಳ ವಿರುದ್ದ ತೆರಿಗೆಗಳ್ಳತನ, ಅಕ್ರಮ ಹಣ ವರ್ಗಾವಣೆ ಇತ್ಯಾದಿ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಚೀನೀ ಸ್ಮಾರ್ಟ್ಫೋನ್ ಕಂಪನಿಗಳಿಗೆ ಮೂಗುದಾರ ಹಾಕಲು ಹೊರಟಂತಿದೆ. ಶಿಯೋಮಿ (Xiaomi), ಒಪ್ಪೋ, ವಿವೋ, ರಿಯಾಲ್ಮಿ ಇತ್ಯಾದಿ ಕಂಪನಿಗಳಿಗೆ ಭಾರತ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಅದರ ಪ್ರಕಾರ ಈ ಕಂಪನಿಗಳು ಭಾರತೀಯರನ್ನು ಸಿಇಒಗಳನ್ನಾಗಿ ನೇಮಿಸಬೇಕು ಎಂಬಿತ್ಯಾದಿ ಅಂಶಗಳು ಈ ಮಾರ್ಗಸೂಚಿಯಲ್ಲಿದ್ದು, ಅದಕ್ಕೆ ಬದ್ಧವಾಗಿ ಚೀನೀ ಕಂಪನಿಗಳು ಕಾರ್ಯವಹಿಸಬೇಕಿದೆ.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಇತ್ತೀಚೆಗೆ ಕೈಗೊಂಡ ಸಭೆಗಳಲ್ಲಿ ಉನ್ನತ ಸರ್ಕಾರಿ ಅಧಿಕಾರಿಗಳು ಈ ವಿಚಾರಗಳ ಬಗ್ಗೆ ಚರ್ಚಿಸಿ, ಮಾರ್ಗಸೂಚಿ ರಚನೆಗೆ ಅನುವು ಮಾಡಿಕೊಟ್ಟಿದ್ದಾರೆನ್ನಲಾಗಿದೆ. ಸದ್ಯ ಈ ಮಾರ್ಗಸೂಚಿಗಳು ಪ್ರಸ್ತಾವಿತ ಹಂತದಲ್ಲಿದೆಯಾ ಅಥವಾ ಜಾರಿ ಮಾಡಲಾಗಿದೆಯಾ ಮಾಹಿತಿ ತಿಳಿದುಬಂದಿಲ್ಲ.
ಸಾವಿರಾರು ಕೋಟಿ ರೂ ಮೊತ್ತದ ಹಣವನ್ನು ಹಣ ವರ್ಗಾವಣೆ ಮಾಡಿರುವುದು, ತೆರಿಗೆಯಿಂದ ತಪ್ಪಿಸಿಕೊಂಡಿರುವುದು ಇತ್ಯಾದಿ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಚೀನೀ ಸ್ಮಾರ್ಟ್ಫೋನ್ ತಯಾರಕ ಸಂಸ್ಥೆಗಳ ಮೇಲೆ ಸರ್ಕಾರದ ಕಣ್ಣು ನೆಟ್ಟಿದೆ.
ಇನ್ನು ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಅತಿಹೆಚ್ಚು ಪ್ರಾಬಲ್ಯ ಹೊಂದಿದ್ದರೂ ಚೀನೀ ಕಂಪನಿಗಳು ಉನ್ನತ ಹುದ್ದೆಗಳಿಗೆ ಭಾರತೀಯರಿಗೆ ಮಣೆ ಹಾಕುತ್ತಿಲ್ಲ ಎಂಬ ಅಪವಾಧ ಇದೆ. ಭಾರತ ವಿಭಾಗಗಳಿಗೆ ಉನ್ನತ ಹುದ್ದೆಗೆ ಚೀನೀಯರೇ ಸಿಇಒ, ಸಿಟಿಒ ಇತ್ಯಾದಿಗಳಾಗಿರುವುದುಂಟು. ರಿಯಾಲ್ಮಿ ಸಂಸ್ಥೆಯ ಭಾರತ ವಿಭಾಗಕ್ಕೆ ಈ ಹಿಂದೆ ಭಾರತೀಯರೊಬ್ಬರು ಇದ್ದರು. ಶಿಯೋಮಿ ಸಂಸ್ಥೆ ತಾನು ಹಲವು ಉನ್ನತ ಹುದ್ದೆಗಳಿಗೆ ಭಾರತೀಯರನ್ನು ನೇಮಿಸಿದ್ದೇವೆ ಎಂದು ಹೇಳಿದ್ದರೂ ಸಿಇಒ ಸ್ಥಾನಕ್ಕೆ ಚೀನೀ ವ್ಯಕ್ತಿಯೇ ಇದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ