ನವದೆಹಲಿ, ಅಕ್ಟೋಬರ್ 2: ಇಸ್ರೇಲ್ ಮತ್ತು ಇರಾನ್ ಮಧ್ಯೆ ಪೂರ್ಣಪ್ರಮಾಣದ ಯುದ್ಧ ಶುರುವಾಗುವ ಭೀತಿ ಆವರಿಸಿದೆ. ಇರಾನ್ ಹಾಗೂ ಮಧ್ಯಪ್ರಾಚ್ಯ ಪ್ರದೇಶಗಳಾದ್ಯಂತ ದಾಳಿ ಮಾಡುವುದಾಗಿ ಇಸ್ರೇಲ್ ಘೋಷಿಸಿದೆ. ತನ್ನದು ಪ್ರತೀಕಾರದ ದಾಳಿ ಮಾತ್ರ. ಇದಕ್ಕೆ ಪ್ರತಿಯಾಗಿ ಮತ್ತೆ ದಾಳಿ ಮಾಡಿದರೆ ಇನ್ನೂ ಪ್ರಬಲ ಪ್ರತಿದಾಳಿ ಮಾಡುವುದಾಗಿ ಇರಾನ್ ಕೂಡ ಎಚ್ಚರಿಸಿದೆ. ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿಯಿಂದ ಆರಂಭವಾದ ದಾಳಿ ಪ್ರತಿದಾಳಿಗಳು ಈಗ ಮೂರನೇ ವಿಶ್ವ ಮಹಾಯುದ್ಧಕ್ಕೆ ನಾಂದಿ ಹಾಡುವಂತೆ ಕಾಣುತ್ತಿವೆ. ಇಸ್ರೇಲ್ ಮೇಲೆ ಇರಾನ್ನ ನೂರಾರು ಕ್ಷಿಪಣಿಗಳ ದಾಳಿಯಾಗಿದ್ದು ಭಾರೀ ದೊಡ್ಡ ಬೆಳವಣಿಗೆ ಎನ್ನಲಾಗಿದೆ. ನಿರೀಕ್ಷೆಯಂತೆ ಇದು ಜಗತ್ತಿನ ಕಣ್ಣು ಅತ್ತ ನೆಡುವಂತೆ ಮಾಡಿದೆ. ಸಹಜವಾಗಿ ಷೇರು ಮಾರುಕಟ್ಟೆಯಲ್ಲಿ ತಲ್ಲಣದ ಛಾಯೆ ಆವರಿಸಿದೆ.
ಏಷ್ಯಾದ ಹಲವು ಮಾರುಕಟ್ಟೆಗಳು ಕಳೆಗುಂದಿವೆ. ಜಪಾನ್ನ ನಿಕ್ಕೀ ಸೂಚ್ಯಂಕ ಶೇ. 1.5ರಷ್ಟು ಕುಸಿತ ಕಂಡಿದೆ. ಸೌತ್ ಕೊರಿಯಾದ ಕೋಸ್ಪಿ ಸೂಚ್ಯಂಕ 1.3 ಪ್ರತಿಶತದಷ್ಟು ನಷ್ಟ ಕಂಡರೆ, ಆಸ್ಟ್ರೇಲಿಯಾದ ಸೂಚ್ಯಂಕವೂ ಹಿನ್ನಡೆ ಕಂಡಿದೆ.
ಅಮೆರಿಕದ ಎಸ್ ಅಂಡ್ ಪಿ 500 ಸ್ಟಾಕ್ ಇಂಡೆಕ್ಸ್ ಫ್ಯೂಚರ್ಸ್ನಲ್ಲಿ ಕುಸಿತ ಮುಂದುವರಿದಿದೆ. ಎಂಎಸ್ಸಿಐನ ಏಷ್ಯಾ ಪೆಸಿಫಿಕ್ ಇಂಡೆಕ್ಸ್ ಕೂಡ ಇಳಿಕೆ ಕಂಡಿದೆ. ಇವೆಲ್ಲವೂ ಮಧ್ಯಪ್ರಾಚ್ಯ ಬಿಕ್ಕಟ್ಟಿನ ಪರಿಣಾಮ ಎಂದು ಹೇಳಲಾಗದು. ಸ್ವಲ್ಪ ಮಟ್ಟಿಗಾದರೂ ಹೂಡಿಕೆದಾರರನ್ನು ಭೀತಿಗೊಳಿಸಿರಬಹುದು.
ಏಷ್ಯಾದ ಮಾರುಕಟ್ಟೆಗಳು ಹಿನ್ನಡೆ ಕಾಣುತ್ತಿರುವ ಹೊತ್ತಲ್ಲೇ ಹಾಂಕಾಂಗ್ನ ಹ್ಯಾಂಗ್ ಸೆಂಗ್ ಇಂಡೆಕ್ಸ್ ಹೊಳೆಯುತ್ತಿದೆ. ಇಂದು ಬುಧವಾರ ಶೇ. 2.3ರಷ್ಟು ಹೆಚ್ಚಳ ಕಂಡಿದೆ. ಚೀನಾದ ಆರ್ಥಿಕತೆಗೆ ಪುಷ್ಟಿ ಕೊಡಲು ಅಲ್ಲಿನ ಸರ್ಕಾರ ತೆಗೆದುಕೊಂಡ ಕ್ರಮಗಳ ಪರಿಣಾಮ ಹಾಂಕಾಂಗ್ ಮಾರುಕಟ್ಟೆ ಮೇಲಾಗುತ್ತಿದೆ.
ಇದನ್ನೂ ಓದಿ: STP- ನಿಶ್ಚಿತವಾಗಿ ಸಂಪತ್ತು ಸೃಷ್ಟಿಸುವ ಏಕೈಕ ಮಾರ್ಗ ಈ ಎಸ್ಟಿಪಿ; ಏನಿದು ಫಾರ್ಮುಲಾ?
ಕಳೆದ ಕೆಲ ದಿನಗಳಿಂದ ಅದ್ಭುತವಾಗಿ ಬೆಳೆಯುತ್ತಿರುವ ಚೀನಾದ ಷೇರು ಮಾರುಕಟ್ಟೆಗೆ ಈಗ ಸಾಲಸಾಲು ರಜಾದಿನಗಳಿವೆ. ಹಬ್ಬದ ಸೀಸನ್ ಆದ್ದರಿಂದ ಸತತವಾಗಿ ರಜೆ ಇದೆ.
ಇತ್ತ, ಭಾರತದಲ್ಲಿ ನಿನ್ನೆ ಮಂಗಳವಾರ ಅಲ್ಪ ಕುಸಿತ ಕಂಡಿದ್ದ ಷೇರುಮಾರುಕಟ್ಟೆಗೆ ಇಂದು ಗಾಂಧಿ ಜಯಂತಿ ನಿಮಿತ್ತ ರಜೆ ಇದೆ. ನಾಳೆಯೂ ಕುಸಿತ ಮುಂದುವರಿಯುವ ಸಾಧ್ಯತೆ ಕಾಣುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ