STP- ನಿಶ್ಚಿತವಾಗಿ ಸಂಪತ್ತು ಸೃಷ್ಟಿಸುವ ಏಕೈಕ ಮಾರ್ಗ ಈ ಎಸ್ಟಿಪಿ; ಏನಿದು ಫಾರ್ಮುಲಾ?
STP formula for wealth creation: ಸಂಪತ್ತು ಹೆಚ್ಚಿಸುವುದು ಹೇಗೆ ಎಂದು ಹೂಡಿಕೆ ತಜ್ಞ ನವನೀತ್ ಮುನೋತ್ ತಮ್ಮ ದಶಕಗಳ ಅನುಭವದಿಂದ ಒಂದು ಸೂತ್ರ ರೂಪಿಸಿದ್ದಾರೆ. ಅವರ ಪ್ರಕಾರ ಎಸ್ಟಿಪಿ ಸದ್ಯ ಅತ್ಯುತ್ತಮ ಮಾರ್ಗ ಎನಿಸಿದೆ. ಒಳ್ಳೆಯ ಕಂಪನಿಗಳ ಷೇರುಗಳಲ್ಲಿ, ಯಾವುದೇ ತಾತ್ಕಾಲಿಕ ಮಾರುಕಟ್ಟೆ ಏರಿಳಿತಗಳಿಗೆ ತಲೆಕೆಡಿಸಿಕೊಳ್ಳದೇ ದೀರ್ಘಾವಧಿ ಹೂಡಿಕೆ ಮಾಡುವುದೇ ಈ ಫಾರ್ಮುಲಾ.
ಶ್ರೀಮಂತರಾಗಬೇಕೆಂದರೆ ಮೂರು ಅಂಶಗಳು ಬಹಳ ಮೂಲಭೂತವಾದುದು. ಒಂದು ಹಣ ಸಂಪಾದನೆ, ಎರಡನೆಯದು ಹಣ ಉಳಿತಾಯ, ಮೂರನೆಯದು ಹಣ ಹೂಡಿಕೆ. ಈ ಮೂರು ಅಂಶಗಳು ಅತ್ಯಗತ್ಯ. ಹಣ ಸಂಪಾದನೆ ಮತ್ತು ಹಣ ಉಳಿತಾಯವು ಅವರವರ ವೈಯಕ್ತಿಕ ಸಾಮರ್ಥ್ಯ, ಅಭಿರುಚಿ, ಜೀವನಶೈಲಿಯ ಮೇಲೆ ಅವಲಂಬಿತವಾಗಿರುತ್ತವೆ. ಈ ಮೂರನೆಯ ಅಂಶವಾದ ಹೂಡಿಕೆ ಎಲ್ಲರಿಗೂ ಸಮಾನ ಅವಕಾಶ ನೀಡಬಲ್ಲುದು. ಹೂಡಿಕೆ ಹೇಗಿರಬೇಕು ಎಂದು ಹೇಳುವ ಹಲವು ಸಲಹೆಗಳು ಅಂತರ್ಜಾಲದಲ್ಲಿ ಸಿಗುತ್ತವೆ. ಎಚ್ಡಿಎಫ್ಸಿ ಅಸೆಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ಸಿಇಒ ನವನೀತ್ ಮುನೋಟ್ ಈ ವಿಚಾರದಲ್ಲಿ ಎಸ್ ಟಿ ಪಿ ಎನ್ನುವ ಒಂದು ಫಾರ್ಮುಲಾ ಮುಂದಿಟ್ಟಿದ್ದಾರೆ. ಇತ್ತೀಚೆಗೆ ನಡೆದ ಇಂಡಿಯಾ ಟುಡೇ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಅವರು, ಎಸ್ಟಿಪಿ ತಮ್ಮ ಅನುಭವದಲ್ಲಿ ಹೊರಹೊಮ್ಮಿದ ಸೂತ್ರ ಎಂದಿದ್ದಾರೆ. ಅವರ ಪ್ರಕಾರ ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿಸಲು ಎಸ್ಟಿಪಿ ಬಿಟ್ಟರೆ ಬೇರೆ ಯಾವುದೇ ಸೂತ್ರ ಇಲ್ಲ.
ಏನಿದು ಎಸ್ಟಿಪಿ?
ಎಸ್ಟಿಪಿ ಎಂದರೆ, ಸೌಂಡ್ ಇನ್ವೆಸ್ಟ್ಮೆಂಟ್, ಟೈಮ್ ಮತ್ತು ಪೇಶೆನ್ಸ್. ಅಂದರೆ, ಸಮರ್ಪಕ ಹೂಡಿಕೆ ಕ್ರಮ, ಸಮಯ ಮತ್ತು ಸಂಯಮ. ಬಹಳ ಸಿಂಪಲ್ ಎನಿಸಬಹುದು. ನವನೀತ್ ಮುನೋತ್ ಪ್ರಕಾರ ಇದು ಬಹಳ ಪರಿಣಾಮಕಾರಿ ಸಂಯೋಜನೆ.
ಇದನ್ನೂ ಓದಿ: ಮ್ಯೂಚುವಲ್ ಫಂಡ್ ಹೂಡಿಕೆದಾರರ ಗಮನಕ್ಕೆ; ಸೆಬಿ ತರುತ್ತಿದೆ ನಾಮಿನಿ, ಕೆವೈಸಿ ನಿಯಮ ಬದಲಾವಣೆ
ಮೂಲಭೂತವಾಗಿ ಉತ್ತಮವಾಗಿರುವ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುವುದು ಬಹಳ ಮುಖ್ಯ. ಹೂಡಿಕೆ ದೀರ್ಘಾವಧಿಯಾದಷ್ಟೂ ಉತ್ತಮ. ಅಂತಿಮವಾಗಿ, ಮಾರುಕಟ್ಟೆ ಆಗಾಗ ಅಲುಗಾಡುತ್ತಿರುತ್ತದೆ. ಈ ಅಲ್ಪಾವಧಿ ವ್ಯತ್ಯಯಗಳಿಗೆ ನೀವು ಸ್ಪಂದಿಸದೇ, ವಿಚಲಿತರಾಗದೇ ಸಂಯಮ ಕಾಯ್ದುಕೊಂಡು ಹೂಡಿಕೆ ಮುಂದುವರಿಸಬೇಕು. ಇದು ಎಸ್ಟಿಪಿ ಸೂತ್ರ.
ಎಚ್ಡಿಎಫ್ಸಿ ಅಸೆಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ಎಂಡಿಯೂ ಆಗಿರುವ ನವನೀತ್ ಅವರು ಭಾರತೀಯ ಮಾರುಕಟ್ಟೆ ದೀರ್ಘಾವಧಿಯಲ್ಲಿ ಉತ್ತಮವಾಗಿ ಬೆಳೆಯುವುದರಲ್ಲಿ ಯಾವ ಸಂಶಯ ಬೇಡ ಎನ್ನುತ್ತಾರೆ. ಹೀಗಾಗಿ, ದೀರ್ಘಾವಧಿ ಹೂಡಿಕೆಯಿಂದ ನಿಶ್ಚಿತ ಲಾಭ ಸಿಗುತ್ತದೆ ಎನ್ನುವುದು ಅವರ ಅನಿಸಿಕೆ.
ನವನೀತ್ ಮುನೋಟ್ ಎಂಬತ್ತರ ದಶಕದಿಂದಲೇ ಇನ್ವೆಸ್ಟ್ಮೆಂಟ್ ಆರಂಭಿಸಿದ್ದಾರೆ. ಆಗ ಸೆನ್ಸೆಕ್ಸ್ 400 ಅಂಕಗಳಲ್ಲಿ ಹೊಯ್ದಾಡುತ್ತಿತ್ತು. ಇವತ್ತು 85,000 ಅಂಕಗಳ ಮಟ್ಟ ಮುಟ್ಟಿದೆ. ಭಾರತೀಯ ಮಾರುಕಟ್ಟೆ ಕೆಲ ದಶಕಗಳಿಂದಲೂ ನಂಬಿದರ ಕೈ ಹಿಡಿದಿದೆ. ಮುಂದಿನ ಕೆಲ ದಶಕಗಳಲ್ಲೂ ದೇಶದ ಆರ್ಥಿಕ ಓಟ ಅದ್ಭುತವಾಗಿ ಸಾಗಲಿದೆ. ಅದರ ಪರಿಣಾಮವಾಗಿ ಮಾರುಕಟ್ಟೆಯ ಓಟವೂ ಮುಂದುವರಿಯಲಿದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ