Minimum Balance: ಸರ್ಕಾರಿ ಬ್ಯಾಂಕುಗಳ ಖಾತೆಗಳಲ್ಲಿ ಮಿನಿಮಮ್ ಬ್ಯಾಲನ್ಸ್ ನಿಯಮ ರದ್ದಾಗುತ್ತಾ?
Public sector banks may cancel minimum balance rule: ಹಲವು ಸರ್ಕಾರಿ ಬ್ಯಾಂಕುಗಳು ಮಿನಿಮಮ್ ಬ್ಯಾಲನ್ಸ್ ನಿಯಮ ತೆಗೆದುಹಾಕಿವೆ. ಮುಂದಿನ ದಿನಗಳಲ್ಲಿ ಎಲ್ಲಾ ಸರ್ಕಾರಿ ಬ್ಯಾಂಕುಗಳೂ ಕೂಡ ಈ ನಿಯಮಕ್ಕೆ ತಿಲಾಂಜಲಿ ಹಾಡಬಹುದು. ಹಣಕಾಸು ಸಚಿವಾಲಯದೊಂದಿಗೆ ಬ್ಯಾಂಕ್ ಪ್ರತಿನಿಧಿಗಳು ಮಾತುಕತೆ ನಡೆಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ನವದೆಹಲಿ, ಜುಲೈ 7: ಹಲವು ಬ್ಯಾಂಕುಗಳು ಮಿನಿಮಮ್ ಅಕೌಂಟ್ ಬ್ಯಾಲನ್ಸ್ ನಿಯಮಗಳನ್ನು (minimum balance rule) ಹೊಂದಿರುತ್ತವೆ. ಖಾತೆಗಳಲ್ಲಿ ಕನಿಷ್ಠ 500ರಿಂದ 10,000 ರೂವರೆಗೆ ಮಿನಿಮಮ್ ಬ್ಯಾಲನ್ಸ್ ಇರಬೇಕು ಎನ್ನುವ ನಿಯಮ ಸಾಮಾನ್ಯ. ಸರ್ಕಾರಿ ಬ್ಯಾಂಕುಗಳೂ (public sector banks) ಕೂಡ ಇದರಿಂದ ಹೊರತಲ್ಲ. ಇದೀಗ ಈ ಸರ್ಕಾರಿ ಬ್ಯಾಂಕುಗಳು ಈ ನಿಯಮವನ್ನು ತೆಗೆದುಹಾಕುವ ಆಲೋಚನೆಯಲ್ಲಿ ಇವೆ ಎನ್ನುವ ಸುದ್ದಿ ಬಂದಿದೆ.
ಸೇವಿಂಗ್ಸ್ ಅಕೌಂಟ್ಗಳು ಮತ್ತು ಕರೆಂಟ್ ಅಕೌಂಟ್ಗಳಲ್ಲಿ ಒಟ್ಟು ಠೇವಣಿ ಇಳಿಮುಖವಾಗುತ್ತಿವೆ. ಈ ಸಂಬಂಧ ಸರ್ಕಾರಿ ಬ್ಯಾಂಕುಗಳು ಹಣಕಾಸು ಸಚಿವಾಲಯದೊಂದಿಗೆ ಚರ್ಚೆ ನಡೆಸಿವೆ. ಈ ಹಂತದಲ್ಲಿ ಬ್ಯಾಂಕ್ ಅಕೌಂಟ್ಗಳಲ್ಲಿ ಮಿನಿಮಮ್ ಬ್ಯಾಲನ್ಸ್ ನಿಯಮವನ್ನು ತೆಗೆದುಹಾಕುವ ಬಗ್ಗೆ ಮರುಪರಿಶೀಲಿಸುವ ಸಲಹೆ ನೀಡಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ವರದಿಯಾಗಿದೆ.
ಇದನ್ನೂ ಓದಿ: 20-35 ವರ್ಷ ವಯಸ್ಸಿನಲ್ಲಿ ಜನರು ಮಾಡುವ ಪ್ರಮುಖ ಹಣಕಾಸು ತಪ್ಪುಗಳಿವು…
ಈಗಾಗಲೇ ಎಸ್ಬಿಐ ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ ಈ ಮಿನಿಮಮ್ ಬ್ಯಾಲನ್ಸ್ ನಿಯಮವನ್ನು ಹಿಂಪಡೆದುಕೊಂಡಿದ್ದಾಗಿದೆ. ಇನ್ನುಳಿದ ಸರ್ಕಾರಿ ಬ್ಯಾಂಕುಗಳು ಇದೇ ಹಾದಿ ತುಳಿಯುವ ಸಾಧ್ಯತೆ ಇದೆ.
ಏನಿದು ಮಿನಿಮಮ್ ಬ್ಯಾಲನ್ಸ್ ನಿಯಮ?
ಒಂದು ಖಾತೆಯಲ್ಲಿ ಕನಿಷ್ಠ ಹಣ ಇರಬೇಕು ಎನ್ನುವುದೇ ಮಿನಿಮಮ್ ಬ್ಯಾಲನ್ಸ್ ನಿಯಮ. 1,000 ರೂ ಮಿನಿಮಮ್ ಬ್ಯಾಲನ್ಸ್ ಇರಬೇಕು ಎಂದಲ್ಲಿ, ಒಂದು ಖಾತೆಯಲ್ಲಿ ಸರಾಸರಿ 1,000 ರೂಗಿಂತ ಹಣ ಯಾವಾಗಲೂ ಇರಬೇಕು. ಇಲ್ಲದಿದ್ದರೆ ಬ್ಯಾಂಕುಗಳು ಪೆನಾಲ್ಟಿ ವಿಧಿಸುತ್ತವೆ. ನೀವು ಒಂದು ತಿಂಗಳಲ್ಲಿ ವಿವಿಧ ದಿನಗಳಲ್ಲಿ ಕನಿಷ್ಠ ಬ್ಯಾಲನ್ಸ್ ಅನ್ನು ಪರಿಗಣಿಸಿ ಸರಾಸರಿ ಪಡೆಯಲಾಗುತ್ತದೆ. ಮಿನಿಮಮ್ ಬ್ಯಾಲನ್ಸ್ ಇಲ್ಲದ ಖಾತೆಗೆ ಒಂದು ತಿಂಗಳಲ್ಲಿ 25 ರೂನಿಂದ 650 ರೂವರೆಗೆ ದಂಡ ವಿಧಿಸಲಾಗುತ್ತದೆ.
ಇದನ್ನೂ ಓದಿ: ಷೇರುಮಾರುಕಟ್ಟೆಯಲ್ಲಿ ಜೇನ್ ಸ್ಟ್ರೀಟ್ನಂತಹ ವಂಚಕರ ಮಧ್ಯೆ ಟ್ರೇಡಿಂಗ್ ಮತ್ತು ಹೂಡಿಕೆ ಮಾಡುವ ತಂತ್ರ ತಿಳಿದಿರಿ…
ಎಸ್ಬಿಐಗೆ ನಿವ್ವಳ ಲಾಭಕ್ಕಿಂತ ದಂಡವೇ ಹೆಚ್ಚು
ಕೆಲ ವರ್ಷಗಳ ಹಿಂದೆ ಆರ್ಟಿಐ ಮೂಲಕ ಬಂದ ಮಾಹಿತಿ ಪ್ರಕಾರ ಎಸ್ಬಿಐನಲ್ಲಿ ಮಿನಿಮಮ್ ಬ್ಯಾಲನ್ಸ್ ಹೊಂದಿಲ್ಲದ ಖಾತೆಗಳಿಗೆ ವಿಧಿಸುವ ಶುಲ್ಕಗಳ ಮೊತ್ತವು ಬ್ಯಾಂಕ್ನ ಇಡೀ ನಿವ್ವಳ ಲಾಭಕ್ಕಿಂತ ಹೆಚ್ಚಿತ್ತು. ಇದು ವಿವಾದ ಹುಟ್ಟುಹಾಕಿತು. ಇದರ ಬೆನ್ನಲ್ಲೇ 2020ರಲ್ಲಿ ಎಸ್ಬಿಐ ಮಿನಿಮಮ್ ಬ್ಯಾಲನ್ಸ್ ನಿಯಮ ತೆಗೆದುಹಾಕಿತು. ಹಾಗೆ ಮಾಡಿದ ಮೊದಲ ಸರ್ಕಾರಿ ಬ್ಯಾಂಕ್ ಎನಿಸಿತು. ಈಗ ಹೆಚ್ಚಿನ ಸರ್ಕಾರಿ ಬ್ಯಾಂಕುಗಳು ಮಿನಿಮಮ್ ಬ್ಯಾಲನ್ಸ್ ನಿಯಮ ರದ್ದು ಮಾಡಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




