Paytm: ಪೇಟಿಎಂನ ಶೇ 75ರಷ್ಟು ಮಾರುಕಟ್ಟೆ ಬಂಡವಾಳ ಮೌಲ್ಯ ನಾಲ್ಕು ತಿಂಗಳಲ್ಲಿ ಉಡೀಸ್

| Updated By: Srinivas Mata

Updated on: Mar 22, 2022 | 1:18 PM

ಪೇಟಿಎಂ ಕಂಪೆನಿ ಮಾತೃಸಂಸ್ಥೆಯಾದ ಒನ್​97 ಕಮ್ಯುನಿಕೇಷನ್ಸ್​ ಮಾರುಕಟ್ಟೆ ಬಂಡವಾಳ ಮೌಲ್ಯವು ಶೇ 75ರಷ್ಟು ಕೊಚ್ಚಿಹೋಗಿದೆ. ಷೇರಿನ ಬೆಲೆ ವಾರ್ಷಿಕ ಕನಿಷ್ಠ ಮಟ್ಟವನ್ನು ಮುಟ್ಟಿದೆ.

Paytm: ಪೇಟಿಎಂನ ಶೇ 75ರಷ್ಟು ಮಾರುಕಟ್ಟೆ ಬಂಡವಾಳ ಮೌಲ್ಯ ನಾಲ್ಕು ತಿಂಗಳಲ್ಲಿ ಉಡೀಸ್
ಸಾಂದರ್ಭಿಕ ಚಿತ್ರ
Follow us on

ಷೇರು ಮಾರ್ಕೆಟ್​ನಲ್ಲಿ ಲಾಭದ ಸನ್ನಿವೇಶಗಳು ಪಾಠ ಕಲಿಸುವುದಷ್ಟೇ ಅಲ್ಲ, ನಷ್ಟ ಸಹ ಅದರದೇ ಪಾಠಗಳನ್ನು ಹೇಳುತ್ತವೆ. ಈಗಿನ ಉದಾಹರಣೆಯನ್ನೇ ನೋಡಿ, ಅಂದರೆ ಒನ್​97 ಕಮ್ಯುನಿಕೇಷನ್ಸ್ (Paytm) ಷೇರುಗಳ ಬೆಲೆ ಅದ್ಯಾವ ಪರಿ ದರ ಕುಸಿದಿದೆ ಅಂದರೆ, ಉಹುಂ ನೀವೇ ಇಲ್ಲಿನ ಲೆಕ್ಕಾಚಾರವನ್ನು ಓದಿ. ಮಾರ್ಚ್ 22ನೇ ತಾರೀಕಿನ ಮಂಗಳವಾರದಂದು ಷೇರಿನ ಬೆಲೆ ವಾರ್ಷಿಕ ಕನಿಷ್ಠ ಮಟ್ಟದ ಕೆಟ್ಟ ದಾಖಲೆಯನ್ನು ಬರೆಯಿತು ಹೂಡಿಕೆದಾರರು ಈ ಸ್ಟಾಕ್​ನಲ್ಲಿ ಹಣ ಕಳೆದುಕೊಳ್ಳುವುದು ಮುಂದುವರಿದಿದೆ. ಬಿಎಸ್​ಇ ಸೂಚ್ಯಂಕದಲ್ಲಿ ಫಿನ್​ಟೆಕ್​ ಕಂಪೆನಿಯಾದ ಪೇಟಿಎಂನ ಮಾತೃ ಸಂಸ್ಥೆಯಾದ ಒನ್​97 ಕಮ್ಯುನಿಕೇಷನ್ಸ್​ ಷೇರಿನ ಬೆಲೆ ವಾರ್ಷಿಕ ಕನಿಷ್ಠ ಮಟ್ಟವಾದ 541.20 ರೂಪಾಯಿ ತಲುಪಿತ್ತು. ಈಗಿನ ಹೊಸ ಕುಸಿತದೊಂದಿಗೆ ಪೇಟಿಎಂನಲ್ಲಿ ಹಣ ಹೂಡಿದವರ ಆಸ್ತಿ ಶೇ 75ರಷ್ಟು ಕೊಚ್ಚಿಹೋಗಿದೆ. ಈ ಸ್ಟಾಕ್​ ಅನ್ನು 2150 ರೂಪಾಯಿಗೆ ಐಪಿಒದಲ್ಲಿ ವಿತರಿಸಲಾಗಿತ್ತು. ಆ ನಂತರ 2021ನೇ ಇಸವಿಯ ನವೆಂಬರ್​ನಲ್ಲಿ ಲಿಸ್ಟಿಂಗ್ ಆಗಿತ್ತು.

ಪೇಟಿಎಂ ಸ್ಟಾಕ್ ಲಿಸ್ಟಿಂಗ್ ಆದಾಗಿನಿಂದ ಮಾರುಕಟ್ಟೆ ಬಂಡವಾಳ ಮೌಲ್ಯ 1.03 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಈ ವರದಿ ಸಿದ್ಧವಾಗುವ ಹೊತ್ತಿಗೆ ಮಾರುಕಟ್ಟೆ ಬಂಡವಾಳ ಅಂತ ಇದ್ದದ್ದು 35,500 ಕೋಟಿ ರೂಪಾಯಿಗಿಂತ ಸ್ವಲ್ಪ ಹೆಚ್ಚು ಮಾತ್ರ. ಐಪಿಒ ಸಂದರ್ಭದಲ್ಲಿ ಇದ್ದದ್ದು 1.38 ಲಕ್ಷ ಕೋಟಿ ರೂಪಾಯಿ. ಮಾರ್ಚ್ 11, 2022ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್​ ಅನ್ನು ಹೊಸದಾಗಿ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳದಂತೆ ನಿಷೇಧಿಸಿತ್ತು. ಕೆಲವು ನಿಗಾ ಆತಂಕದ ಕಾರಣಕ್ಕೆ ತಕ್ಷಣದಿಂದಲೇ ಅನ್ವಯ ಆಗುವಂತೆ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳುವಂತಿಲ್ಲ ಎಂದಿತ್ತು.

ಅಂದಹಾಗೆ ಜಾಗತಿಕ ಬ್ರೋಕರೇಜ್ ಸಂಸ್ಥೆ ಮಾಕ್ವೆರಿಯಿಂದ ಪೇಟಿಎಂನ ಟಾರ್ಗೆಟ್ ದರ 450 ರೂಪಾಯಿಗೆ ಇಳಿಸಲಾಗಿದೆ. ಇದಕ್ಕೂ ಮುನ್ನ 750 ರೂಪಾಯಿ ಇತ್ತು. ಇತ್ತೀಚಿನ ಬೆಳವಣಿಗೆಗಳಿಂದ ಪೇಟಿಎಂಗೆ ಸಾಲ ನೀಡುವುದಕ್ಕೆ ಬ್ಯಾಂಕಿಂಗ್ ಲೈಸೆನ್ಸ್ ಸಿಗುವ ಸಾಧ್ಯತೆಯನ್ನು ಮಹತ್ತರವಾಗಿ ಕಡಿಮೆ ಮಾಡಿದೆ.

ಇದನ್ನೂ ಓದಿ: Paytm Payments Bank: ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್​ಗೆ ಹೊಸ ಗ್ರಾಹಕರ ಸೇರ್ಪಡೆ ಮಾಡದಂತೆ ಆರ್​ಬಿಐ ಸೂಚನೆ