
ನವದೆಹಲಿ, ನವೆಂಬರ್ 5: ಭಾರತದ ಷೇರು ಮಾರುಕಟ್ಟೆ (Stock market) ಕಳೆದ ಒಂದೂವರೆ ವರ್ಷದಿಂದ ತೋರಿರುವ ನೀರಸ ಪ್ರದರ್ಶನದಿಂದ ತಲೆ ಮೇಲೆ ಕೈಹೊತ್ತು ಕೂತಿರುವವರಿಗೆ ಖುಷಿಯ ಸುದ್ದಿ ಇದೆ. ಜಾಗತಿಕ ಹಣಕಾಸು ದೈತ್ಯ ಸಂಸ್ಥೆಯಾದ ಮಾರ್ಗನ್ ಸ್ಟಾನ್ಲೀ (Morgan Stanley) ಪ್ರಕಾರ ಭಾರತದ ಷೇರು ಮಾರುಕಟ್ಟೆಗೆ ಮುಂದಿನ ದಿನಗಳು ಉಜ್ವಲ ಭವಿಷ್ಯ ಹೊಂದಿವೆಯಂತೆ. ಮಾರುಕಟ್ಟೆಯ ಪ್ರೈಸ್ ಕರೆಕ್ಷನ್ ಮುಗಿದಿದೆ. ಇನ್ನೇನಿದ್ದರೂ ಬುಲ್ ರನ್ ನಡೆಯುತ್ತದೆ ಎಂದು ಅದು ಹೇಳಿದೆ.
ಮಾರ್ಗನ್ ಸ್ಟಾನ್ಲೀ ಪ್ರಕಾರ ಭಾರತದ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಸೆನ್ಸೆಕ್ಸ್ ಸೂಚ್ಯಂಕವು 2026ರ ಜೂನ್ ವೇಳೆಗೆ 1,00,000 ಅಂಕಗಳ ಮೈಲಿಗಲ್ಲು ಮುಟ್ಟಬಹುದು. ಮಾರುಕಟ್ಟೆಯು ಬುಲ್ ರನ್ ಮಾಡಿದರೆ ಆ ಗಡಿ ಮುಟ್ಟಲು ಸಾಧ್ಯ. ಬುಲ್ ರನ್ ಸಾಧ್ಯತೆ ಶೇ. 30ರಷ್ಟಿದೆ ಎಂದು ಮಾರ್ಗನ್ ಸ್ಟಾನ್ಲೀ ಹೇಳಿದೆ. ಅಂದರೆ, ಸೆನ್ಸೆಕ್ಸ್ ಒಂದು ಲಕ್ಷ ಅಂಕಗಳ ಗಡಿ ಮುಟ್ಟುವ ಸಾಧ್ಯತೆ ಶೇ.. 30ರಷ್ಟಿದೆ.
ಇದನ್ನೂ ಓದಿ: ಈ ಊಬರ್ ಡ್ರೈವರ್ ವಯಸ್ಸು 86, ಆಗರ್ಭ ಶ್ರೀಮಂತ, ದೊಡ್ಡ ಉದ್ಯಮಿ; ಆದರೆ ಡ್ರೈವಿಂಗ್ ಕೆಲಸ ಯಾಕೆ ಗೊತ್ತಾ?
ಇವತ್ತು ಸೆನ್ಸೆಕ್ಸ್ ಸೂಚ್ಯಂಕ 83,459.15 ಅಂಕಗಳಲ್ಲಿ ಅಂತ್ಯಗೊಂಡಿದೆ. 2024ರ ಸೆಪ್ಟೆಂಬರ್ 27ರಂದು ಗರಿಷ್ಠ ಮಟ್ಟವಾದ 85,571 ಅಂಕಗಳವರೆಗೂ ಹೋಗಿತ್ತು. 13-14 ತಿಂಗಳ ಅವಧಿಯಲ್ಲಿ 2,112 ಅಂಕಗಳಷ್ಟನ್ನು ನಷ್ಟ ಮಾಡಿಕೊಂಡಿದೆ. ಭಾರತದ ಷೇರುಮಾರುಕಟ್ಟೆ ಇತಿಹಾಸದಲ್ಲಿ ಹಲವು ಬಾರಿ ಈ ರೀತಿ ಪ್ರೈಸ್ ಕರೆಕ್ಷನ್ ಹಂತಗಳು ಬಂದು ಹೋಗಿವೆ. ಇವುಗಳ ನಡುವೆ ಮಾರುಕಟ್ಟೆ ದೀರ್ಘಾವಧಿಯಲ್ಲಿ ಅತ್ಯುತ್ತಮವಾಗಿ ಏರಿಕೆ ಹೊಂದುತ್ತಾ ಹೋಗಿದೆ.
ಮಾರ್ಗನ್ ಸ್ಟಾನ್ಲೀ ಅಂದಾಜು ಪ್ರಕಾರ ಷೇರು ಮಾರುಕಟ್ಟೆಯಲ್ಲಿ ಗೂಳಿಯ ಓಟ ಶುರುವಾಗಿಬಿಟ್ಟರೆ 2026ರ ಜೂನ್ ವೇಳೆಗೆ ಸೆನ್ಸೆಕ್ಸ್ 1,00,000 ಅಂಕಗಳ ಗಡಿ ಮುಟ್ಟುತ್ತದೆ. ಅಂದರೆ, ಮುಂದಿನ 6 ತಿಂಗಳಲ್ಲೇ ಶೇ. 20ರಷ್ಟು ಏರಿಕೆ ಆಗಲಿದೆ.
ಇದನ್ನೂ ಓದಿ: ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ತನ್ನ ಪತ್ನಿಗೆ ಕೊಟ್ಟ 12 ಕೋಟಿ ರೂ ಬೆಲೆಯ ಫ್ಯಾಂಟಂ ಕಾರು
ಹಣದುಬ್ಬರವನ್ನು ಗಣನೀಯವಾಗಿ ತಗ್ಗಿಸಿರುವುದರಿಂದ ಬಡ್ಡಿದರ ಇಳಿಕೆ ಆಗುತ್ತದೆ. ಬ್ಯಾಂಕಿಂಗ್ ನಿಯಮಗಳನ್ನು ಸಡಿಲಗೊಳಿಸಲಾಗುತ್ತದೆ. ಹಣದ ಹರಿವನ್ನು ಹೆಚ್ಚಿಸಲಾಗುತ್ತಿದೆ. ಸರ್ಕಾರದಿಂದ ಬಂಡವಾಳ ವೆಚ್ಚ ಹೆಚ್ಚಾಗುತ್ತಿದೆ. ಜಿಎಸ್ಟಿ ದರ ಕಡಿತ ಕೆಲಸ ಮಾಡುತ್ತಿದೆ. ಇವೆಲ್ಲವೂ ಕೂಡ ಆರ್ಥಿಕತೆಯನ್ನು ಉತ್ತೇಜಿಸುತ್ತದೆ. ಇದರ ಪರಿಣಾಮ ಷೇರು ಮಾರುಕಟ್ಟೆಗೂ ತಾಕುತ್ತದೆ ಎಂಬುದು ಮಾರ್ಗನ್ ಸ್ಟಾನ್ಲೀ ಸಂಸ್ಥೆಯ ವಿಶ್ಲೇಷಣೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ