ತಿರುವನಂತಪುರಂ, ಅಕ್ಟೋಬರ್ 18: ಪ್ಯಾಲೆಸ್ಟೀನ್ ಜನರ ಸ್ವಾತಂತ್ರ್ಯ ಹೋರಾಟದ (Protest for Palestinians) ಪರವಾಗಿ ಹೆಚ್ಚು ಧ್ವನಿ ಕೇಳಿಬರುವ ಕೇರಳ ರಾಜ್ಯಕ್ಕೂ ಇಸ್ರೇಲ್ ಭದ್ರತಾ ಪಡೆಗಳಿಗೂ ವ್ಯಾವಹಾರಿಕ ಕೊಂಡಿ ಇದೆ. ಅತ್ತ ಇಸ್ರೇಲ್ ಮತ್ತು ಹಮಾಸ್ ನಡುವೆ ಭೀಕರ ಸಂಘರ್ಷ ನಡೆಯುತ್ತಿರುವ ಹೊತ್ತಿನಲ್ಲೇ ಇತ್ತ ಕೇರಳದ ಕಣ್ಣೂರಿನಲ್ಲಿ ಗಾರ್ಮೆಂಟ್ ಫ್ಯಾಕ್ಟರಿಯೊಂದರಲ್ಲಿ ನೌಕರರು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ಏಳೆಂಟು ವರ್ಷಗಳಿಂದಲೂ ಕಣ್ಣೂರಿನ ಕೂತ್ತುಪರಂಬ ಪಟ್ಟಣದಲ್ಲಿರುವ ಮರ್ಯನ್ ಅಪ್ಪಾರೆಲ್ ಫ್ಯಾಕ್ಟರಿಯಿಂದ (Maryan Apparel Factory) ಕೇರಳ ಪೊಲೀಸರಿಗೆ ಯೂನಿಫಾರ್ಮ್ ತಯಾರಿಸಿ ಕೊಡಲಾಗುತ್ತಿದೆ. ಈ ಯುದ್ಧ ಸಂದರ್ಭದಲ್ಲಿ ಇಸ್ರೇಲ್ ಪೊಲೀಸರು ನಿಗದಿತ ದಿನಾಂಕದಿಂದ ಮುಂಚಿತವಾಗಿಯೇ ಸಮವಸ್ತ್ರಗಳನ್ನು (Police uniforms) ಹೊಲಿದುಕೊಡುವಂತೆ ಕೇಳಿಕೊಂಡಿದ್ಧಾರೆ. ಈ ಕಾರಣಕ್ಕೆ ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ.
‘ಸ್ಟ್ರೆಚ್ ಆಗುವ ಓಲಿವ್ ಗ್ರೀನ್ ಬಣ್ಣದ 12,000 ಶರ್ಟ್ ಮತ್ತು ಪ್ಯಾಂಟ್ಗಳ ಸಮವಸ್ತ್ರಗಳನ್ನು ಪ್ರತೀ ವರ್ಷ ಹೊಲಿದುಕೊಡುವ ಆರ್ಡರ್ ಇದೆ. ಈಗ ತರಬೇತಿ ಕಾರಣಕ್ಕೆ ಇವುಗಳನ್ನು ಬೇಗನೇ ಕಳುಹಿಸುವಂತೆ ಕೇಳಿದ್ದಾರೆ’ ಎಂದು ಮರ್ಯನ್ ಗಾರ್ಮೆಂಟ್ಸ್ನ ಎಂಡಿ ಥಾಮಸ್ ಓಲಿಕಲ್ ಹೇಳಿದ್ದಾರೆ.
ಇಸ್ರೇಲ್ ಪೊಲೀಸ್ ಪಡೆಯಿಂದ ಸಮವಸ್ತ್ರಕ್ಕೆ ಆರ್ಡರ್ ಬಂದಿದೆಯಾದರೂ, ಸೇನಾ ಸಿಬ್ಬಂದಿಯ ಯೂನಿಫಾರ್ಮ್ಗೆ ಆರ್ಡರ್ ಸಿಕ್ಕಿಲ್ಲ. ದಟ್ಟವಾದ ನೇವಿ ಬ್ಲೂ, ಸ್ಕೈ ಬ್ಲೂ ಮತ್ತು ತಿಳಿ ಹಸಿರು ಬಣ್ಣ, ಹೀಗೆ ಮೂರು ರೀತಿಯ ಸಮವಸ್ತ್ರಗಳನ್ನು ಇಸ್ರೇಲೀ ಪೊಲೀಸ್ ಪಡೆಗಳಿಗೆ ಮಾರ್ಯಂ ಗಾರ್ಮೆಂಟ್ಸ್ನಿಂದ ಹೊಲಿದು ಕೊಡಲಾಗುತ್ತಿದೆ.
ಇದನ್ನೂ ಓದಿ: ಹೊಸ ಸ್ಕ್ಯಾಮ್..! ಒಟಿಪಿ ಬರದೆಯೇ ಆಧಾರ್ ಬಳಸಿ ಹಣ ಎಗರಿಸುತ್ತಾರೆ; ಈಗಲೇ ಬಯೋಮೆಟ್ರಿಕ್ ಲಾಕ್ ಮಾಡಿ; ಇದು ಹೇಗೆ?
ಮುಂಬೈನಲ್ಲಿ ಮುಖ್ಯ ಕಚೇರಿ ಹೊಂದಿರುವ ಮರ್ಯನ್ ಅಪಾರೆಲ್ಸ್ ಸಂಸ್ಥೆ ವಿವಿಧ ದೇಶಗಳಿಗೆ ಬಟ್ಟೆಗಳನ್ನು ಹೊಲಿದುಕೊಡುತ್ತದೆ. 2015ರಿಂದ ಇಸ್ರೇಲೀ ಪೊಲೀಸ್ ಇಲಾಖೆಯು ಮರ್ಯನ್ ಗಾರ್ಮೆಂಟ್ಸ್ನಿಂದ ಯೂನಿಫಾರ್ಮ್ ಹೊಲಿಸುತ್ತಿದೆ. ಇವುಗಳು ಕಾಟನ್ ಮತ್ತು ಪಾಲಿಸ್ಟರ್ ಬಟ್ಟೆಗಳಾಗಿವೆ. ಅಮೆರಿಕದ ಸಂಸ್ಥೆಯಿಂದ ವಿಶೇಷ ಪಾಲಿಸ್ಟರ್ ಅನ್ನು ಆಮದು ಮಾಡಿಕೊಂಡು ಅದರಿಂದ ಬಟ್ಟೆ ಹೊಲಿಯಬೇಕೆಂಬುದು ಇಸ್ರೇಲ್ ವಿಧಿಸಿರುವ ಷರತ್ತು.
ವರ್ಷಕ್ಕೆ ಒಂದು ಲಕ್ಷದಷ್ಟು ಪೊಲೀಸ್ ಯೂನಿಫಾರ್ಮ್ ಮತ್ತು 25ರಿಂದ 40 ಸಾವಿರದಷ್ಟು ಕೈದಿ ಸಮವಸ್ತ್ರಗಳನ್ನು ಮಾರ್ಯನ್ ಗಾರ್ಮೆಂಟ್ಸ್ ಇಸ್ರೇಲ್ಗೆ ಕಳುಹಿಸುತ್ತದೆ. ಕುವೇತ್ನ ಭದ್ರತಾ ಪಡೆಗಳು, ಕತಾರ್ನ ಭದ್ರತಾ ಪಡೆಗಳು, ಸೌದಿ ಅರೇಬಿಯಾ, ಫಿಲಿಪ್ಪೈನ್ಸ್ ಮೊದಲಾದ ದೇಶಗಳ ಸೇನಾ ಪಡೆಗಳಿಗೂ ಮಾರ್ಯನ್ ಗಾರ್ಮೆಂಟ್ಸ್ನಿಂದ ಸಮವಸ್ತ್ರಗಳು ಸರಬರಾಜಾಗುತ್ತವೆ.
ಇದನ್ನೂ ಓದಿ: ಬೆಂಗಳೂರು ಸಮೀಪ NSure ಗಿಗಾಫ್ಯಾಕ್ಟರಿ ನಿರ್ಮಾಣ; ಬ್ಯಾಟರಿ ಉತ್ಪಾದನಾ ಹಬ್ ಆಗುತ್ತಿದೆ ಕರ್ನಾಟಕ
ಕಣ್ಣೂರಿನ ಮರ್ಯನ್ ಗಾರ್ಮೆಂಟ್ಸ್ ಘಟಕದಲ್ಲಿ 1,500 ಮಂದಿ ಉದ್ಯೋಗಿಗಳಿದ್ದಾರೆ. ಇವರಲ್ಲಿ 1,300 ಮಂದಿ ಮಹಿಳೆಯರೇ ಆಗಿರುವುದು ವಿಶೇಷ. ಮುಂಬೈನಲ್ಲಿ ಇದು ಮುಖ್ಯ ಕಚೇರಿ ಹೊಂದಿರುವುದಾದರೂ ಮಾಲೀಕ ಥಾಮಸ್ ಓಲಿಕಲ್ ಅವರು ಮಲಯಾಳಿ ಉದ್ಯಮಿಯೇ ಆಗಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Wed, 18 October 23