ಬೆಂಗಳೂರು ಸಮೀಪ NSure ಗಿಗಾಫ್ಯಾಕ್ಟರಿ ನಿರ್ಮಾಣ; ಬ್ಯಾಟರಿ ಉತ್ಪಾದನಾ ಹಬ್ ಆಗುತ್ತಿದೆ ಕರ್ನಾಟಕ
NSure Gigafactory in Malur: ಎನ್‌ಶ್ಯೂರ್ ರಿಲಯೇಬಲ್ ಪವರ್ ಸೊಲ್ಯೂಶನ್ ಲಿಮಿಟೆಡ್ನ ಲಿಥಿಯಂ-ಅಯಾನ್ ಸೆಲ್ ಉತ್ಪಾದನಾ ಘಟಕವು ಬೆಂಗಳೂರು ಸಮೀಪದ ಮಾಲೂರಿನಲ್ಲಿ ನಿರ್ಮಾಣವಾಗುತ್ತಿದ್ದು, ಶೀಘ್ರದಲ್ಲೇ ಪ್ರಾಯೋಗಿಕ ಉತ್ಪಾದನೆ ಪ್ರಾರಂಭಿಸಲಿದೆ. ಈ ಬ್ಯಾಟರಿಗಳನ್ನು ಎಲೆಕ್ಟ್ರಿಕ್ ವಾಹನಗಳಲ್ಲಿ ಸೇರಿದಂತೆ ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಇದರೊಂದಿಗೆ ಕರ್ನಾಟಕ ರಾಜ್ಯವು ಭಾರತದ ಬ್ಯಾಟರಿ ಉತ್ಪಾದನಾ ಹಬ್ ಆಗಿ ರೂಪುಗೊಳ್ಳುವ ದಾರಿ ಬೆಳೆಯುತ್ತಿದೆ.
ಬೆಂಗಳೂರು, ಅಕ್ಟೋಬರ್ 17: ಪೆಟ್ರೋಲ್ ಮತ್ತು ಡೀಸೆಲ್ ಅವಲಂಬನೆ ತಗ್ಗಿಸಲು ಸರ್ಕಾರ ಎಲೆಕ್ಟ್ರಿಕ್ ಕಾರುಗಳಿಗೆ ಉತ್ತೇಜನ ನೀಡುತ್ತಿದೆ. ಈ ಕಾರುಗಳಿಗೆ ಲಿಥಿಯಮ್ ಅಯಾನ್ ಸೆಲ್‌ಗಳು ಅವಶ್ಯಕ ಇವೆ. ಈ ಬ್ಯಾಟರಿಗಳನ್ನು ಭಾರತದಲ್ಲಿ ತಯಾರಿಸುವ ನಿಟ್ಟಿನಲ್ಲಿ ಸರ್ಕಾರ ಪ್ರೋತ್ಸಾಹ ಒದಗಿಸುತ್ತಿದೆ. ಇದೇ ವೇಳೆ, ಕರ್ನಾಟಕವು ಬ್ಯಾಟರಿ ಉತ್ಪಾದನಾ ಹಬ್ ಆಗಿ ಹೊರಹೊಮ್ಮುತ್ತಿದೆ. ಬೆಂಗಳೂರು ಮೂಲದ ಎನ್‌ಶ್ಯೂರ್ ರಿಲಯೇಬಲ್ ಪವರ್ ಸೊಲ್ಯೂಶನ್ ಲಿಮಿಟೆಡ್ (NSure) ಸಂಸ್ಥೆ ಲಿಥಿಯಂ-ಅಯಾನ್ ಸೆಲ್ ತಯಾರಕರ ಸಾಲಿಗೆ ಸೇರಲಿದೆ. ಬೆಂಗಳೂರಿನ ಸಮೀಪದ ಮಾಲೂರು ಘಟಕದಲ್ಲಿ ಶೀಘ್ರದಲ್ಲೇ ಪ್ರಾಯೋಗಿಕ ಉತ್ಪಾದನೆ ಪ್ರಾರಂಭಿಸಲಿದೆ. ಎನ್ಶ್ಯೂರ್ನ ಸ್ಥಾಪಕ ಮತ್ತು ಸಿಇಒ ಚಂದ್ರಕಾಂತ್ ರಾಮಲಿಂಗಂ ಈ ಘಟಕಕ್ಕಾಗಿ 1,050 ಕೋಟಿ ರೂ. ಹೂಡಿಕೆ ಮಾಡುತ್ತಿದ್ದು, 80 ಎಕರೆ ಜಾಗದಲ್ಲಿ ಘಟಕ ಸ್ಥಾಪಿಸುತ್ತಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿರುವ ಮತ್ತು ಇವಿ ಹಬ್ ಆಗಲಿರುವ ಮಾಲೂರಿನಲ್ಲಿ ಪೂರ್ಣ ಪ್ರಮಾಣದ ಉತ್ಪಾದನಾ ಘಟಕ ಆರಂಭವಾಗಲಿದೆ.
ಈ ಘಟಕವು ಎಲ್ಎಫ್ಪಿ (ಲಿಥಿಯಮ್ ಐರನ್ ಫಾಸ್ಫೇಟ್) ಸೆಲ್‌ಗಳನ್ನು ತಯಾರಿಸುತ್ತದೆ. ಒಂದು GWh ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಮುಂದಿನ ಹಂತದಲ್ಲಿ ಈ ಗಿಗಾಫ್ಯಾಕ್ಟರಿಯನ್ನು 5 GWh ಅಥವಾ ಇದಕ್ಕೂ ಹೆಚ್ಚು ಸಾಮರ್ಥ್ಯಕ್ಕೆ ವಿಸ್ತರಿಸುವ ಅವಕಾಶವೂ ಇದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಪರಿಸರವಾದಿಗಳು ಉತ್ತೇಜನ ನೀಡುತ್ತಿದ್ದರೂ ಎಲೆಕ್ಟ್ರಿಕ್ ವಾಹನಗಳ ಖರೀದಿ ಹಾಗೂ ಬಳಕೆ ನಿರೀಕ್ಷಿತ ಮಟ್ಟದಲ್ಲಿಲ್ಲ. ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸುವ ಬ್ಯಾಟರಿಗಳ ಶಕ್ತಿ, ದೀರ್ಘಾವಧಿಯ ಬಾಳಿಕೆ ಹಾಗೂ ಸುರಕ್ಷತೆ ಕುರಿತು ಜನಸಾಮಾನ್ಯರಲ್ಲಿ ಇನ್ನೂ ಅನುಮಾನ ಇದೆ. ಇದಕ್ಕೆ ಪರಿಹಾರವಾಗಿ ಆಧುನಿಕ ತಂತ್ರಜ್ಞಾನ ಹೊಂದಿರುವ ಹಾಗೂ ಸುರಕ್ಷಿತವಾದ ಲೀಥಿಯಂ ಅಯಾನ್ ಬ್ಯಾಟರಿಗಳನ್ನು ಎನ್‌ಶ್ಯೂರ್ ಪರಿಚಯಿಸಲು ಮುಂದಾಗಿದೆ. ಈ ಬ್ಯಾಟರಿಗಳನ್ನು ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಹಲವಾರು ರೀತಿಯಲ್ಲಿ ಬಳಸಬಹುದು.
ಇದನ್ನೂ ಓದಿ: ಅಭಿಬಸ್ 1 ರೂ ಟಿಕೆಟ್; ಕೆಎಸ್ಸಾರ್ಟಿಸಿ ದಸರಾ ಕೊಡುಗೆ; ಆಂಧ್ರ ಬಸ್ ಡಿಸ್ಕೌಂಟ್; ಏರ್ ಇಂಡಿಯಾ ಫ್ಲೈಟ್ ಆಫರ್
ರಾಜ್ಯ ಉನ್ನತ ಮಟ್ಟದ ಕ್ಲಿಯರೆನ್ಸ್ ಸಮಿತಿಯ ಅನುಮೋದನೆ ಪಡೆದಿರುವ ಕಂಪನಿಗಳಲ್ಲಿ ಎನ್‌ಶ್ಯೂರ್ ಮುಂಚೂಣಿ ಸ್ಥಾನ ಪಡೆದಿದೆ. “ಎನ್‌ಶ್ಯೂರ್ ನ ಪೂರ್ಣ ಪ್ರಮಾಣದ ಲಿ-ಅಯಾನ್ ಸೆಲ್ ಉತ್ಪಾದನಾ ಪ್ರಾಯೋಗಿಕ ಘಟಕವು ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ. ಈ ವರ್ಷದ ಅಕ್ಟೋಬರ್ ಅಂತ್ಯದ ವೇಳೆಗೆ ಕಾರ್ಯಾರಂಭಿಸಲು ಯೋಜಿಸಲಾಗಿದೆ” ಎಂದು ಚಂದ್ರಕಾಂತ್ ರಾಮಲಿಂಗಂ ತಿಳಿಸಿದ್ದಾರೆ.
ಎನ್‌ಶ್ಯೂರ್ ದೇಶೀಯವಾಗಿ ಅಥವಾ ಸ್ಥಳೀಯವಾಗಿ ಉತ್ಪಾದಿಸಲು ಭಾರತ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದಿರುವ ಚಂದ್ರಕಾಂತ್ ರಾಮಲಿಂಗಂ, “ಪ್ರಧಾನಿಯವರ ಆತ್ಮನಿರ್ಭರ ಭಾರತದ ಆಶಯಕ್ಕೆ ಪೂರಕವಾಗಿ, ಎನ್‌ಶ್ಯೂರ್ ಮತ್ತು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಡಿಯ ಎಆರ್ಸಿಐ (ARCI- International Advanced Research Centre for Powder Metallurgy and New Materials) ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಸ್ವದೇಶಿತನವನ್ನು ಬೆಂಬಲಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ವರ್ಗಾವಣೆ ಮತ್ತು ತರಬೇತಿಗಾಗಿ ಈ ಒಪ್ಪಂದ ನಡೆದಿದೆ” ಎಂದು ತಿಳಿಸಿದ್ದಾರೆ.
ಹೆಚ್ಚಿನ ಉಷ್ಣ ಸ್ಥಿರತೆಗೆ ಎಲ್‌ಇಪಿ (LEP) ಕೆಮಿಸ್ಟ್ರಿ ಆಯ್ಕೆ
ಕುತೂಹಲವೆಂದರೆ, ಎನ್‌ಶ್ಯೂರ್ ಕಂಪನಿಯು ಎನ್‌ಎಂಸಿ ಮತ್ತಿತರ ಕೆಮಿಸ್ಟ್ರಿಗಳ ಬದಲು, ಎಲ್‌ಇಪಿ ಕೆಮಿಸ್ಟ್ರಿಯನ್ನು ತನ್ನ ತಂತ್ರಜ್ಞಾನಕ್ಕಾಗಿ ಆಯ್ಕೆ ಮಾಡಿಕೊಂಡಿದೆ. ಇದು ಹೆಚ್ಚು ಉಷ್ಣ ಸ್ಥಿರತೆಯನ್ನು ನೀಡುತ್ತದೆ. ಜೊತೆಗೆ ಹೆಚ್ಚು ಸುರಕ್ಷತೆ, ದೀರ್ಘ ಬಾಳಿಕೆ, ಕೈಗೆಟುಕುವ ದರ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಭಾರತೀಯ ಉಷ್ಣವಲಯದ ಹವಾಮಾನಕ್ಕೆ ಸೂಕ್ತವಾಗಿದೆ.
“ನಮ್ಮ ಉತ್ಪನ್ನದ ಸೆಲ್‌ಗಳು ನಿಕಲ್ ಅಥವಾ ಕೋಬಾಲ್ಟ್‌ನಂತಹ ಅಪರೂಪದ ಲೋಹಗಳನ್ನು ಹೊಂದಿಲ್ಲ. ಇದು ಅಗ್ನಿ ಅವಘಡದ ಅನಾಹುತದ ಸಾಧ್ಯತೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ಪರಿಸರದ ಮೇಲೆ ಹೆಚ್ಚು ದುಷ್ಪರಿಣಾಮ ಬೀರುವುದಿಲ್ಲ. ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡಲು ವಿವಿಧ ರೀತಿಯ ಬಳಕೆಗೆ ಆಗುವಂತೆ ಲಿ-ಅಯಾನ್ ಸೆಲ್‌ಗಳನ್ನು ತಯಾರಿಸಲು ಮತ್ತು ಶಕ್ತಿಯನ್ನು ಹೆಚ್ಚಿಸಲು ಆದ್ಯತೆ ನೀಡಿದ್ದೇವೆ” ಎಂದು ಚಂದ್ರಕಾಂತ್ ರಾಮಲಿಂಗಂ ವಿವರಿಸಿದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ