Indian Economy: ಭಾರತವು ಬಹಳ ಬೇಗ ಚೀನಾವನ್ನು ಮೀರಿಸಿ ಬೆಳೆಯಬಹುದು: ಜಿಮ್ ರೋಜರ್ಸ್ ಭವಿಷ್ಯ
Jim Rogers very positive on Indian economy and market: ವಿಶ್ವದ ಆಕರ್ಷಕ ಹೂಡಿಕೆ ಸ್ಥಳಗಳಲ್ಲಿ ಭಾರತವೂ ಇದೆ ಎಂದು ಅಮೆರಿಕನ್ ಹೂಡಿಕೆದಾರ ಜಿಮ್ ರೋಜರ್ಸ್ ಅಭಿಪ್ರಾಯಪಟ್ಟಿದ್ದಾರೆ. ಆರ್ಥಿಕ ಬೆಳವಣಿಗೆಯಲ್ಲಿ ಭಾರತವು ಬಹಳ ಬೇಗ ಚೀನಾವನ್ನೂ ಮೀರಿಸಬಹುದು ಎನ್ನುವ ವಿಶ್ವಾಸ ಅವರದ್ದು. ಭಾರತ ಜಗತ್ತಿನ ಎಲ್ಲಾ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡರೆ ಊಹೆಗೂ ನಿಲುಕದಷ್ಟು ಬೆಳವಣಿಗೆ ಹೊಂದಬಹುದು ಎಂದಿದ್ದಾರೆ.

ನವದೆಹಲಿ, ಮೇ 12: ವಿಶ್ವದ ಅತ್ಯುತ್ತಮ ಹೂಡಿಕೆ ಸ್ಥಳಗಳಲ್ಲಿ (investment destinations) ಭಾರತವೂ ಸೇರಲು ಅಣಿಗೊಂಡಿದೆ. ಮುಂಬರುವ ವರ್ಷಗಳಲ್ಲಿ ಚೀನಾದ ಆರ್ಥಿಕತೆಯನ್ನೂ ಭಾರತ ಹಿಂದಿಕ್ಕಬಹುದು ಎಂದು ಖ್ಯಾತ ಹೂಡಿಕೆದಾರ ಜಿಮ್ ರೋಜರ್ಸ್ (Jim Rogers) ಹೇಳಿದ್ದಾರೆ. ಐಎಎನ್ಎಸ್ ಜೊತೆ ಮಾತನಾಡುತ್ತಿದ್ದ ಅವರು, ‘ದಶಕಗಳಿಂದ ನಾನು ಹೂಡಿಕೆ ಜಗತ್ತಿನಲ್ಲಿ ಇದ್ದೇನೆ. ಭಾರತದಲ್ಲಿರುವ ಜನರು ಅರ್ಥಶಾಸ್ತ್ರವನ್ನು ಅರ್ಥ ಮಾಡಿಕೊಂಡಿರುವುದನ್ನು ನನ್ನ ಜೀವನದಲ್ಲಿ ಮೊದಲ ಬಾರಿಗೆ ಕಂಡಿದ್ದೇನೆ’ ಎಂದು ಹೇಳಿದ್ದಾರೆ.
‘ಭಾರತ ಮತ್ತೊಮ್ಮೆ ಮೇಲೇರುತ್ತಿದೆ. ದೆಹಲಿಯಲ್ಲಿರುವ ಜನರಿಗೆ (ಸರ್ಕಾರ) ತಾವೇನು ಮಾಡುತ್ತಿದ್ದೇವೆ, ಏನು ಮಾಡಬೇಕು ಎನ್ನುವ ಪರಿವೆ ಇದೆ. ಇದು ಬಹಳ ಒಳ್ಳೆಯ ಸಂಗತಿ. ಭಾರತವು ಮುಕ್ತಗೊಂಡು, ಇಡೀ ವಿಶ್ವದ ಜೊತೆ ವ್ಯಾಪಾರಕ್ಕೆ ತೆರೆದುಕೊಂಡರೆ ದೇಶದ ಭವಿಷ್ಯ ಅದೆಷ್ಟು ಉತ್ತಮವಾದೀತು ಎಂಬುದನ್ನು ನೀವು ಊಹಿಸಲೂ ಸಾಧ್ಯವಿಲ್ಲ’ ಎಂದು ಅಮೆರಿಕದ ಈ ಹೂಡಿಕೆದಾರ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ಪ್ರವಾಹೋಪಾದಿಯಲ್ಲಿ ವಾಪಸ್ ಬರುತ್ತಿರುವ ವಿದೇಶೀ ಬಂಡವಾಳ; ಏನು ಕಾರಣ?
‘ಭಾರತದಲ್ಲಿ ಸದ್ಯಕ್ಕೆ ನನ್ನ ಹೂಡಿಕೆ ಇಲ್ಲ. ಆದರೆ, ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಈ ಆರ್ಥಿಕತೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದೇನೆ. ಭಾರತದ ಮಾರುಕಟ್ಟೆ ಸತತವಾಗಿ ಇಳಿಕೆಯಲ್ಲಿದ್ದಾಗ ನಾನು ಹೆಚ್ಚು ಹೂಡಿಕೆ ಮಾಡಬೇಕೆಂದಿದ್ದೇನೆ’ ಎಂದು ಅವರು ತಮ್ಮ ಪ್ಲಾನ್ ಬಿಚ್ಚಿಟ್ಟಿದ್ದಾರೆ.
ಭಾರತವು ವಿವಿಧ ದೇಶಗಳೊಂದಿಗೆ ಮಾಡಿಕೊಳ್ಳುತ್ತಿರುವ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಅವರು ಸ್ವಾಗತಿಸಿದ್ದಾರೆ. ಇದು ಭಾರತಕ್ಕೆ ಮಾತ್ರವಲ್ಲ, ವಿಶ್ವಕ್ಕೂ ಅನುಕೂಲವಾಗುವ ಕಾರ್ಯ ಎಂಬುದು ಅವರ ಅನಿಸಿಕೆ.
ಭಾರತವು ವಿವಿಧ ದೇಶಗಳ ಜೊತೆ 13 ಎಫ್ಟಿಎಗಳಿಗೆ (ಮುಕ್ತ ವ್ಯಾಪಾರ ಒಪ್ಪಂದ) ಸಹಿ ಹಾಕಿದೆ. ಇದರಲ್ಲಿ ಯೂರೋಪ್, ಓಮನ್, ಪೆರು ಮೊದಲಾದ ದೇಶಗಳ ಜೊತೆ ಎಫ್ಟಿಎ, ಅಸ್ಟ್ರೇಲಿಯಾ ಜೊತೆ ಸಿಇಸಿಎ, ಶ್ರೀಲಂಕಾ ಜೊತೆ ಆರ್ಥಿಕ ಹಾಗೂ ತಾಂತ್ರಿಕ ಸಹಕಾರ ಒಪ್ಪಂದ ಹೀಗೆ ವಿವಿಧ ಒಪ್ಪಂದಗಳನ್ನ ಭಾರತ ಮಾಡಿಕೊಂಡಿದೆ. ಇವುಗಳನ್ನು ಸ್ವಾಗತಿಸಿದ ಜಿಮ್ ರೋಜರ್ಸ್, ಬ್ರಿಟನ್ ಮತ್ತು ಭಾರತದ ನಡುವಿನ ಮುಕ್ತ ವ್ಯಾಪಾರ ಒಪ್ಪಂದವನ್ನು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ.
ಇದನ್ನೂ ಓದಿ: ಅಮೆರಿಕ-ಚೀನಾ ಟ್ಯಾರಿಫ್ ಯುದ್ಧಕ್ಕೆ 90 ದಿನ ವಿರಾಮ; ಆಮದು ಸುಂಕ ಶೇ. 115ರಷ್ಟು ಇಳಿಕೆ; ರಾಜಿ ಮಾಡಿಕೊಂಡ ಬಲಾಢ್ಯ ದೇಶಗಳು
ಇದೇ ವೇಳೆ, ಭಾರತದ ಆರ್ಥಿಕತೆ ಚೀನಾವನ್ನೂ ಬಹಳ ಬೇಗ ಹಿಂದಿಕ್ಕಬಹುದು ಎಂದು ಜಿಮ್ ರೋಜರ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸದ್ಯ ಭಾರತದ ಜಿಡಿಪಿ 4 ಟ್ರಿಲಿಯನ್ ಡಾಲರ್ ಗಡಿ ದಾಟಿದೆ. ಜಪಾನ್ ಅನ್ನು ಬಹಳ ಅಲ್ಪ ಅವಧಿಯಲ್ಲಿ ಹಿಂದಿಕ್ಕಿ ವಿಶ್ವದ ನಂಬರ್ 4ನೇ ದೇಶವಾಗಲಿದೆ. ಅಮೆರಿಕ ಮತ್ತು ಚೀನಾ ದೇಶಗಳು ಜಿಡಿಪಿಯಲ್ಲಿ ಟಾಪ್-2ನಲ್ಲಿ ಇವೆ. ಚೀನಾದ ಜಿಡಿಪಿ 20 ಟ್ರಿಲಿಯನ್ ಡಾಲರ್ ಆಸುಪಾಸಿನಲ್ಲಿ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ